ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆ ಶಾಲೆ ಕಟ್ಟಡಗಳಿಗೆ ಮುಕ್ತಿ ಎಂದು?

Last Updated 15 ಜುಲೈ 2017, 9:53 IST
ಅಕ್ಷರ ಗಾತ್ರ

ಕಾರವಾರ: ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದು, ಇದನ್ನು ಬಗೆಹರಿಸಲು ಸದಸ್ಯರನ್ನೊಳ ಗೊಂಡ ಜಿಲ್ಲಾ ಪಂಚಾಯ್ತಿ ನಿಯೋಗವು ಶಿಕ್ಷಣ ಸಚಿವರ ಬಳಿಗೆ ತೆರಳಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ನನ್ನ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಮಣ್ಣಿನ ಗೋಡೆ ಹಾಗೂ ಶಿಥಿಲ ಶಾಲೆ ಕಟ್ಟಡ ಗಳಿದ್ದು. ಬೀಳುವ ಹಂತಕ್ಕೆ ತಲುಪಿವೆ. ಇವುಗಳ ದುರಸ್ತಿಗೆ ಅಥವಾ ಹೊಸ ಕಟ್ಟಡಗಳ ನಿರ್ಮಾಣಕ್ಕೆ 2 ವರ್ಷಗಳಿಂದ ಸಭೆಯಲ್ಲಿ ವಿಷಯ ಮಂಡಿಸಲಾಗುತ್ತಿದೆ.

ಆದರೆ, ಶಿಕ್ಷಣ ಇಲಾಖೆಯಿಂದ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ಮಳೆಗೆ ಶಾಲೆಯ ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ?. ಅದರ ಜವಾಬ್ದಾರಿಯನ್ನು ಸಿಇಒ ತೆಗೆದುಕೊಳ್ಳ ಬೇಕು. ಇಲ್ಲವೇ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ದೂರು ದಾಖಲಿಸೋಣ. ಆಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬಹುದು’ ಎಂದು ಸದಸ್ಯೆ ಪುಷ್ಪಾ ನಾಯ್ಕ ಕಿಡಿಕಾರಿದರು.

ಅದಕ್ಕೆ ಸದಸ್ಯ ಪ್ರದೀಪ ನಾಯಕ ಧ್ವನಿಗೂಡಿಸಿ, ‘ಕುಮಟಾ ತಾಲ್ಲೂಕಿನ ಬರ್ಗಿಯ ಬಳಿ ಹೆದ್ದಾರಿಯಂಚಿನ ಗುಡ್ಡ ಕುಸಿಯುತ್ತಿದೆ ಎಂದು ಮಾಧ್ಯಮಗಳು ಎಚ್ಚರಿಸಿದರೂ ಯಾರೂ ಕೂಡ ಆ ಬಗ್ಗೆ ಗಮನಹರಿಸಿರಲಿಲ್ಲ.

ಅದು ಕುಸಿದು ಸಾವು– ನೋವು ಉಂಟಾದ ಬಳಿಕ ಆ ಬಗ್ಗೆ ಗುತ್ತಿಗೆದಾರ ಕಂಪೆನಿ ಐಆರ್‌ಬಿ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತು. ಅದರಂತೆಯೇ ಶಾಲಾ ಕಟ್ಟಡಗಳು ಕುಸಿದು ಜೀವಹಾನಿ ಉಂಟಾದ ಬಳಿಕವೇ ಇಲಾಖೆ ಕ್ರಮ ಕೈಗೊಳ್ಳಬಹುದು’ ಎಂದು ಟೀಕಿಸಿದರು.

‘ಇಲಾಖೆ ಸಮೀಕ್ಷೆ ನಡೆಸಿ ಸಂಬಂಧಪಟ್ಟವರಿಗೆ ಜಿಲ್ಲೆಗಳಲ್ಲಿರುವ ಶಿಥಿಲ ಹಾಗೂ ಮಣ್ಣಿನ ಗೋಡೆಗಳ ಶಾಲೆಗಳ ಮಾಹಿತಿಯನ್ನು ರವಾನಿಸಿದೆ. ಆದರೆ, ಇದು ಸರ್ಕಾರ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸವಾಗಿದೆ. ಹೀಗಾಗಿ ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡೋಣ’ ಎಂದು ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಪಾಟೀಲ್ ತಿಳಿಸಿದರು.

ಶಾಲೆಗಳಿಗೆ ಪೂರೈಕೆಯಾಗದ ಬೆಂಚ್: ‘ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ಈವರೆಗೂ ಬೆಂಚುಗಳ ಪೂರೈಕೆಯಾಗಿಲ್ಲ’ ಎಂದು ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ.ಕೆ.ಪ್ರಕಾಶ ತಿಳಿಸಿದರು. ‘ನಮ್ಮಲ್ಲಿ ಟೆಂಡರ್ ಖರೀದಿ ಪ್ರಕ್ರಿಯೆ ಮುಗಿದಿದ್ದು, ಪರಿಶೀಲನಾ ಸಮಿತಿಯಿಂದ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆಯಾದ ಬಳಿಕ ವಿತರಣೆ ಮಾಡಲಾಗುವುದು’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪ್ರಸನ್ನಕುಮಾರ್ ತಿಳಿಸಿದರು.

‘ಶಾಲೆಗಳಿಗೆ ಶೀಘ್ರವೇ ಬೆಂಚುಗಳ ಪೂರೈಕೆಯಾಗಬೇಕು. ಯಾವುದೇ ತಾಂತ್ರಿಕ ಹಾಗೂ ಇನ್ನಿತರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ. ಎರಡೂ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಬಳಿ ಸಭೆ ಮುಗಿದ ಬಳಿಕ ಚರ್ಚೆ ನಡೆಸಿ’ ಎಂದು ಲಕ್ಷ್ಮಣ ಪಾಟೀಲ್ ಸೂಚಿಸಿದರು.
‘ಅಕ್ಷರ ದಾಸೋಹದ ಅಕ್ಕಿ, ಬೇಳೆ ಕಾಳುಗಳು ಕುಮಟಾ ತಾಲ್ಲೂಕಿನ ಕೆಲವು ಶಾಲೆಗಳಿಗೆ ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಸದಸ್ಯ ಗಜಾನನ ಪೈ ಅಕ್ಷರ ದಾಸೋಹ ಅಧಿಕಾರಿಗೆ ತಿಳಿಸಿದರು.

ಪತ್ರಕ್ಕೆ ಉತ್ತರವೇ ಬರುತ್ತಿಲ್ಲ..:  ‘ಜಿಲ್ಲೆಯ ಸಮಸ್ಯೆಗಳ ಕುರಿತು ಇಲಾಖೆಯ ಮೇಲಧಿಕಾರಿಗೆ ಪತ್ರ ಬರೆದರೆ, ಅವರಿಂದ ಯಾವುದೇ ಉತ್ತರ ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಪ್ರಸ್ತಾವ ಮಾಡುವುದಿಲ್ಲ. ಹೀಗಾಗಿ ಅವರು ಕಾರವಾರಕ್ಕೆ ಬಂದಾಗ ನಮಗೆ ಮಾಹಿತಿ ಕೊಡಿ, ನಾವು ಸಮಸ್ಯೆಗಳ ಕುರಿತು ಮನವರಿಕೆ ಮಾಡುತ್ತೇವೆ’ ಎಂದು ಪುಷ್ಪಾ ನಾಯ್ಕ ಹೇಳಿದರು. 

‘ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮೌದ್ಗಿಲ್‌ ಅವರು ಪ್ರಗತಿ ಪರಿಶೀಲನೆ ನಡೆಸುವುದು ನಿಜ. ಆದರೆ ಸಮಸ್ಯೆಗಳು ಇದ್ದಾಗ ಅದನ್ನು ಬಗೆಹರಿಸಲು ನಮಗೆ ಸೂಚಿಸುತ್ತಾರೆ. ಆದರೆ ಅವರು ಬಂದಾಗ ನಿಮ್ಮನ್ನು ಕರೆಯುವ ವ್ಯವಸ್ಥೆ ಮಾಡೋಣ’ ಎಂದು ಚಂದ್ರಶೇಖರ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT