ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಾಂತರಿ ಸಾಸಿವೆಗೆ ವಿರೋಧ: ಪ್ರಧಾನಿಗೆ ಪತ್ರ

Last Updated 16 ಜುಲೈ 2017, 7:04 IST
ಅಕ್ಷರ ಗಾತ್ರ

ಮೈಸೂರು: ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಗೆ ಅನುಮತಿ ನೀಡ­ಬಾರದು ಎಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಶನಿವಾರ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ಸಮಾಜವಾದಿ ಮುಖಂಡ ಪ.ಮಲ್ಲೇಶ್ ಹಾಗೂ ಕುಲಾಂತರಿ ಮುಕ್ತ ಕರ್ನಾಟಕದ ಪ್ರತಿನಿಧಿಗಳ ನಿಯೋಗದ ಜತೆ ಚರ್ಚೆ ನಡೆಸಿದ ಬಳಿಕ ಅವರು ಈ ಭರವಸೆ ನೀಡಿದರು.

‘ಪ್ರಸ್ತುತ ಕೃಷಿ ಬಿಕ್ಕಟ್ಟು ಲಕ್ಷಾಂತರ ಕುಟುಂಬಗಳನ್ನು ಬಾಧಿಸುತ್ತಿದೆ. ಈ ಸಮಯದಲ್ಲಿ ಅಪಾಯಕಾರಿ ತಂತ್ರಜ್ಞಾ­ನ­ವನ್ನು ರೈತರ ಮೇಲೆ ಅನಗತ್ಯವಾಗಿ ಹೇರಿದರೆ ಇನ್ನಷ್ಟು ಸಂಕಟಕ್ಕೆ ದೂಡಲಿದೆ. ಜಗತ್ತಿನ ಹಲವು ದೇಶಗಳಲ್ಲಿ ತಿರಸ್ಕೃತಗೊಂಡ ಕುಲಾಂತರಿ ತಂತ್ರಜ್ಞಾನವನ್ನು ಕಾರ್ಪೊ­ರೇಟ್ ಕಂಪೆನಿಗಳ ಹಿತಾಸಕ್ತಿಗಾಗಿ ನಮ್ಮಲ್ಲಿ ತರುವ ಸಂಚು ನಡೆಯುತ್ತಿದೆ.

ತೆರಿಗೆದಾರರ ಹಣವನ್ನು ಅಸುರಕ್ಷಿತ ಉತ್ಪನ್ನ ಅಭಿವೃದ್ಧಿಪಡಿಸಲು ದೆಹಲಿ ವಿಶ್ವವಿದ್ಯಾಲಯ ಬಳಸಿಕೊಂಡಿರುವುದು ದುರಂತದ ಸಂಗತಿ. ಕಳೆನಾಶಕ ಸಹಿಷ್ಣು ಸ್ವಭಾವದ ಕುಲಾಂತರಿ ತಳಿಗಳು ಪರಿಸರ ಹಾಗೂ ಗ್ರಾಹಕರ ಆರೋಗ್ಯಕ್ಕೆ ಧಕ್ಕೆ ತರಲಿವೆ’ ಎಂದು ಮಲ್ಲೇಶ್ ಆತಂಕ ವ್ಯಕ್ತಪಡಿಸಿದರು.ನಿವೃತ್ತ ಮೇಜರ್‌ ಜನರಲ್ ಸುಧೀರ್‌ ಒಂಬತ್ಕೆರೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಪುಷ್ಪಾ ಅಮರನಾಥ್, ಸಹಜ ಸಮೃದ್ಧ ಬಳಗದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಹಾಜರಿದ್ದರು.

ಹಿಂದೂತ್ವಕ್ಕೆ ವಿಸ್ತಾರಕರು: ‘ರಾಜ್ಯದಲ್ಲಿ ಹಿಂದೂತ್ವ ವಿಸ್ತಾರ ಮಾಡಲು ಬಿಜೆಪಿ­ಯವರು ವಿಸ್ತಾರಕನ್ನು ನೇಮಿಸಿದ್ದಾರೆ. ಇದು ರಾಜ್ಯದಲ್ಲಿ ಸಾಧ್ಯ­ವಾಗುವುದಿಲ್ಲ. ಇದು ಬಸವಣ್ಣನವರ ನಾಡು ಎಂಬುದನ್ನು ಮರೆಯಬಾರದು’ ಎಂದು ಸುದ್ದಿಗಾರರಿಗೆ ತಿಳಿಸಿದರು. ‘ಹಿಂದೂತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಈ ಪ್ರಯೋಗ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿರಬಹುದು. ರಾಜ್ಯದಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದರು.

ಬಿಜೆಪಿಯವರು ಮಾತ್ರ ಹಿಂದೂವಲ್ಲ. ನಾನೂ ಶೇ 100ರಷ್ಟು ಹಿಂದೂ. ಮತಗಳನ್ನು ಧ್ರುವೀಕರಿಸಲು ಬಿಜೆಪಿಯವರು ತಂತ್ರ ರೂಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ರಾಜಕಾರಣಿಗಳು ಹಾಗೂ ಮಾಧ್ಯಮದವರು ಸುಮ್ಮನಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಕಿವಿಮಾತು ಹೇಳಿದರು.

27 ಸಾವಿರ ವಿದ್ಯಾರ್ಥಿಗಳಿಗೆ ಕಿಟ್‌: ಜಾಗತಿಕ ಯುವ ಕೌಶಲ ದಿನಾಚರಣೆ ಅಂಗವಾಗಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಐಟಿಐ ವಿದ್ಯಾರ್ಥಿಗಳಿಗೆ ‘ಟೂಲ್‌ ಕಿಟ್‌’ ವಿತರಿಸಿದರು. ರಾಜ್ಯದಾದ್ಯಂತ 27 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೂಲ್‌ ಕಿಟ್‌ ವಿತರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಮೈಸೂರು ಜಿಲ್ಲೆಯಲ್ಲಿ 1,200 ವಿದ್ಯಾರ್ಥಿಗಳಿಗೆ ಕಿಟ್‌ ನೀಡಲಾಯಿತು. ಕಿಟ್‌ನಲ್ಲಿ ಸಮವಸ್ತ್ರ, ಪುಸ್ತಕ, ಸ್ಪ್ಯಾನರ್‌, ಡ್ರಿಲ್ಲಿಂಗ್‌ ಮಷಿನ್‌ ಸೇರಿದಂತೆ ವಿವಿಧ ಸಾಮಗ್ರಿಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT