ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಇತರ ಜಿಲ್ಲೆಗೆ ಮಾದರಿಯಾಗಲಿ

Last Updated 17 ಜುಲೈ 2017, 5:05 IST
ಅಕ್ಷರ ಗಾತ್ರ

ಸಿಂಧನೂರು: ಇಲ್ಲಿನ ಸತ್ಯಾ ಗಾರ್ಡನ್‌ನಲ್ಲಿ ಆಗಸ್ಟ್ 5 ರಂದು ನಡೆಯುವ ರಾಯಚೂರು ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕು. ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವೇದಿಕೆ, ಸಾಂಸ್ಕೃತಿಕ, ಪ್ರಚಾರ ಸಮಿತಿ, ಮೆರವಣಿಗೆ, ಆಹಾರ, ನೀರು, ವಸತಿ, ಸ್ವಯಂ ಸೇವಾ ಸಮಿತಿಗಳ ಅಧ್ಯಕ್ಷರು ತಾವು ಕೈಗೊಂಡ ಕೆಲಸಗಳ ಪ್ರಗತಿ ಕುರಿತು ವಿವರಿಸಿ, ಸಮ್ಮೇಳನಕ್ಕೆ ಉಂಟಾಗುವ ಖರ್ಚು, ವೆಚ್ಚದ ಮಾಹಿತಿಯನ್ನು ಮುಂದಿಟ್ಟರು.

ಹೈದರಾಬಾದ್‌ ಕರ್ನಾಟಕದ ಗ್ರಾಮೀಣ ಆಹಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಎಳ್ಳು ಹಚ್ಚಿದ ರೊಟ್ಟಿ, ಪುಂಡಿಪಲ್ಲೆ, ಗುರೆಳ್ಳು ಪುಡಿ, ಗೋಧಿ ಹುಗ್ಗಿ, ಮಾದ್ಲಿ, ಚಪಾತಿ, ಎಣ್ಣೆ ಬದನೆಕಾಯಿ, ಮೊಸರನ್ನ, ಕರಿದ ಬೆಂಡೆ ಮತ್ತಿತರ ರುಚಿಕರ ಆಹಾರವನ್ನು ಸಮ್ಮೇಳನಕ್ಕೆ ಬರುವ ನಾಗರಿಕರಿಗೆ ಉಣಬಡಿಸಬೇಕು ಎಂದು ಸಭೆಯಲ್ಲಿ ಹೇಳಲಾಯಿತು.

ನಾಡಿನ ಪ್ರಸಿದ್ಧ ಕಣಿಹಲಗೆ, ಕಂಸಾಳೆ, ಜಿಂಜರ್ ಮೇಳ, ಕರಡಿ ಮಜ್ಜಲು ವಾದ್ಯಗಳನ್ನು ಮೆರವಣಿಗೆಗೆ ಆಹ್ವಾನಿಸಬೇಕು. ಎನ್ಎಸ್ಎಸ್, ಸೌಟ್ಕ್ ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ಆಯ್ಕೆಮಾಡಿಕೊಂಡು ಸಮ್ಮೇಳನವನ್ನು ಶಿಸ್ತಿನಿಂದ ನಡೆಸಲು ತೀರ್ಮಾನಿಸಲಾಯಿತು. ಗೋಡೆಬರಹ, ಬ್ಯಾನರ್, ಫ್ಲೆಕ್ಸ್, ಚಿತ್ರಮಂದಿರ, ಸ್ಥಳೀಯ ಪತ್ರಿಕೆ, ಮಾಧ್ಯಮಗಳಲ್ಲಿ ಸಮ್ಮೇಳನದ ಕುರಿತು ವ್ಯಾಪಕ ಪ್ರಚಾರ ಮಾಡಬೇಕು.

ಅಲ್ಲದೆ, ವಿವಿಧ ತಾಲ್ಲೂಕುಗಳಿಗೆ ತೆರಳಿ ಶಾಲಾ-ಕಾಲೇಜು ಮುಖ್ಯಸ್ಥರಿಗೆ, ಸಂಘ-ಸಂಸ್ಥೆಗಳ ಮುಖಂಡರಲ್ಲಿ ಮನವಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಬೇಕು. ಬರುವ ಪ್ರತಿನಿಧಿಗಳಿಗೆ ನೆನಪಿನಲ್ಲಿ ಉಳಿಯುವಂತೆ ಕಿಟ್‌ಗಳನ್ನು ವಿತರಿಸಬೇಕು ಎಂದು ಸಭೆಯಲ್ಲಿ ಕೆಲ ಮುಖಂಡರು ನೀಡಿದ ಸಲಹೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರು ಒಪ್ಪಿಕೊಂಡರು.

ಸ್ವಾಗತ ಸಮಿತಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಮಾತನಾಡಿ, ಸಮ್ಮೇಳನಕ್ಕೆ ಒಟ್ಟು ₹ 18.80 ಲಕ್ಷ ಅಂದಾಜು ಖರ್ಚಿನ ನಿರೀಕ್ಷೆಯಿದ್ದು, ಅದರಲ್ಲಿ ಎಂಎಸ್ಐಎಲ್ ₹ 2.40 ಲಕ್ಷ, ಹಟ್ಟಿಚಿನ್ನದಗಣಿ ₹2 ಲಕ್ಷ, ರಾಯಚೂರು ಜಿಲ್ಲೆಯ ಒಟ್ಟು 178 ಗ್ರಾಮ ಪಂಚಾಯಿತಿಗಳಿಂದ ತಲಾ ₹ 5 ಸಾವಿರ ಸಂಗ್ರಹಿಸಲಾಗುವುದು ಎಂದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ತಾಯಿರಾಜ್ ಮರ್ಚಟಾಳ ಮಾತನಾಡಿದರು.

ಸಾಹಿತಿ ನರಸಿಂಹಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್, ರಾಯಚೂರು ತಾಲ್ಲೂಕು ಘಟಕದ ಅಧ್ಯಕ್ಷ ಕೋರೆನಲ್, ಮಾನ್ವಿ ಘಟಕದ ಅಧ್ಯಕ್ಷ ಆರ್.ಕೆ.ಈರಣ್ಣ, ಸಿಂಧನೂರು ಘಟಕದ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಸರಸ್ವತಿ ಪಾಟೀಲ್, ಮುಖಂಡರಾದ ಎಚ್.ಜಿ.ಹಂಪಣ್ಣ, ಯಮನಪ್ಪ ಮಲ್ಲಾಪೂರು, ಎಚ್.ಎನ್.ಬಡಿಗೇರ್, ಕೆ.ಮರಿಯಪ್ಪ, ಸೋಮನಾಥ ಸೂಲಂಗಿ, ಎಸ್.ದೇವೇಂದ್ರಗೌಡ, ಈರಣ್ಣ ಗೋಮರ್ಸಿ, ದುರುಗಪ್ಪ ಹಸಮಕಲ್, ಜಗದೀಶ ವಕೀಲ, ಶರಣಪ್ಪ ಬರಸಿ ಸಭೆಯಲ್ಲಿ ಭಾಗವಹಿಸಿದ್ದರು. ರಾಮಣ್ಣ ಹಿರೇಬೇರಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಹಲಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT