ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಶೌಚಾಲಯದ ಪೋಡು ‘ಈರಣ್ಣನ ಕಟ್ಟೆ’!

ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಇರುವ ಪೋಡು
Last Updated 17 ಜುಲೈ 2017, 6:55 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಬಳಿ ಇರುವ ಈರಣ್ಣಕಟ್ಟೆ ಪೋಡಿನಲ್ಲಿ 30ಕ್ಕೂ ಹೆಚ್ಚು ಜನರಿದ್ದಾರೆ. ಆದರೆ, ಇಲ್ಲಿ ಖಾಸಗಿಯಾಗಿ ರಾಮನಾಯಕರು ಕಟ್ಟಿಸಿಕೊಂಡಿರುವ ಶೌಚಾಲಯ ಹೊರತುಪಡಿಸಿ ಶೌಚಾಲಯವೇ ಇಲ್ಲ!

ಸರ್ಕಾರ ಗಿರಿಜನರಿಗೆ ಮೂಲಸೌಲಭ್ಯ ಕಲ್ಪಿಸಿಕೊಡಲು ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೂ, ಅವು ಇಲ್ಲಿನ ಪೋಡಿಗೆ ತಲುಪಿಲ್ಲ. ಬಿಳಿಗಿರಿರಂಗನಬೆಟ್ಟ ಗ್ರಾ.ಪಂ ವ್ಯಾಪ್ತಿಯ ಇಲ್ಲಿ ಅಭಿವೃದ್ಧಿ ಶೂನ್ಯ.

ಇಲ್ಲಿ ಬುಡಕಟ್ಟು ಸೋಲಿಗ ಜನರು ವಾಸಿಸುತ್ತಾರೆ. ಹಾಡಿ ಮನೆಗಳಿಗೆ ₹ 60 ಸಾವಿರ ವೆಚ್ಚದಲ್ಲಿ ದುರಸ್ತಿ ಆಗಿದ್ದರೂ, ಕಾಮಗಾರಿ ಕಳಪೆಯಾಗಿದೆ. ಗೋಡೆಗಳಲ್ಲಿ ಬಿರುಕು ಕಂಡಿದೆ.

ಬದುಕು ಸಾಗಿಸಲು ಕುರಿ, ಮೇಕೆ, ಕೋಳಿಗಳನ್ನೇ ಸಾಕಿ  ದಿನ ಸವೆಸುತ್ತಿರುವ ಈ ಜನರು ದುರಸ್ತಿ ಪಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಲ್ಲ.

ಕಾಡಂಚಿನ ಬಯಲೇ ಶೌಚವಾಗಿದೆ. ಜನರು ವಾಸಿಸುವ ಸ್ಥಳ ಕೊಟ್ಟಿಗೆಯಾಗಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು,  ಅನೇಕರು ಅನಾರೋಗ್ಯದಿಂದ ಆಗಾಗ ಆಸ್ಪತ್ರೆ ಸೇರಿದ ಉದಾಹರಣೆಗಳು ಇವೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೌಲಭ್ಯ ಕಲ್ಪಿಸಲು ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯ ಮಾದೇಗೌಡ, ಜಡೇಗೌಡ ದೂರುತ್ತಾರೆ.

‘ಈರಣ್ಣನ ಕಟ್ಟೆ ಪೋಡಿನ ಸಮಸ್ಯೆಯ ಮಾಹಿತಿ ಇಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಶೌಚಾಲಯ, ಮನೆ ನಿರ್ಮಾಣಕ್ಕೆ ನೆರವು ಒದಗಿಸಲಾಗುವುದು’ ಎನ್ನುತ್ತಾರೆ ಜಿ.ಪಂ ಸದಸ್ಯ ಜೆ. ಯೋಗೇಶ್.

ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಬಗ್ಗೆ ಆಸಕ್ತಿ ವಹಿಸಲಿ ಎಂಬ ಮನವಿ ನಿವಾಸಿಗಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT