ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನೀಗಿಸಲು ಮಳೆ ನೀರು ಸಂಗ್ರಹ ಅವಶ್ಯ

Last Updated 17 ಜುಲೈ 2017, 8:55 IST
ಅಕ್ಷರ ಗಾತ್ರ

ಸಾಗರ: ನೀರಿನ ಬರ ಎದುರಿಸಲು ಮಳೆ ನೀರು ಸಂಗ್ರಹ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಬೆಂಗಳೂರಿನ ಜಲ ಸಂರಕ್ಷಣಾ ತಜ್ಞ ಎ.ಆರ್. ಶಿವಕುಮಾರ್ ಹೇಳಿದರು. ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಭಾನುವಾರ ಕೆ.ವಿ. ಸುಬ್ಬಣ್ಣ ಸ್ಮರಣೆ ಅಂಗವಾಗಿ ನೀನಾಸಂ ಸಂಸ್ಥೆ ಏರ್ಪಡಿಸಿದ್ದ ‘ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಅಂಕಿ–ಅಂಶಗಳ ಪ್ರಕಾರ ಇಂದಿಗೂ ನಮ್ಮಲ್ಲಿ ಮಳೆಯ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಆದರೆ, ಯಾವ ಸಮಯದಲ್ಲಿ, ಎಲ್ಲಿ ಎಷ್ಟು ಮಳೆಯಾಗ ಬೇಕೊ ಅಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಈ ರೀತಿಯ ಮಳೆಯ ಅಸಮಾನ ಹಂಚಿಕೆ ಮತ್ತು ಅಕಾಲಿಕತೆಯೇ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಭೂಮಿಯಲ್ಲಿ ನೀರು ಇಂಗುವಂತೆ ಮಾಡಿದರೆ ನೀರಿನ ಕೊರತೆಯನ್ನು ನಿವಾರಿಸಿಕೊಳ್ಳಲು ಸಾಧ್ಯ. ಮಳೆಯ ನೀರಿಗಿಂತ ಶುದ್ಧ ನೀರು ಮತ್ತೊಂದಿಲ್ಲ. ಆದರೆ, ಅದನ್ನು ಇಂಗಿಸುವ ಕೆಲಸಕ್ಕೆ ನಾವು ಆಸಕ್ತಿ ತೋರುತ್ತಿಲ್ಲ. ಮಳೆ ನೀರು ಸಂಗ್ರಹ ಮೂಲಕ ನೀರು ಇಂಗಿಸುವ ಕೆಲಸ ಸಾಮೂಹಿಕವಾಗಿ ನಡೆಯಬೇಕಿದೆ ಎಂದು ಹೇಳಿದರು.

ಕೆರೆಕಟ್ಟೆ, ಬಾವಿಗಳಲ್ಲಿರುವ ನೀರನ್ನು ಉಳಿತಾಯ ಖಾತೆಗೆ ಹೋಲಿಸ ಬಹುದಾದರೆ ಕೊಳವೆಬಾಯಿಯ ನೀರನ್ನು ನಿಶ್ಚಿತ ಅವಧಿಯ ಠೇವಣಿಗೆ ಹೋಲಿಸಬಹುದು. ನೀರಿಗಾಗಿ ಭೂಮಿಯ ಆಳಕ್ಕೆ ಹೋದಷ್ಟು ನೀರು ಶುದ್ಧವಾಗಿರುತ್ತದೆ ಎಂದು ನಿರೀಕ್ಷಿಸಲಾಗದು. ಈ ಕಾರಣಕ್ಕಾಗಿ ಕೊಳವೆಬಾವಿಯ ನೀರಿನ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಮಳೆ ನೀರು ಸಂಗ್ರಹ ಮಾಡುವ ಕೆಲಸವನ್ನು ನಮ್ಮ ಮನೆಗಳ ಜತೆಗೆ ಸರ್ಕಾರಿ ಕಚೇರಿ, ಶಾಲಾ ಕಟ್ಟಡಗಳ ಕಚೇರಿಗಳಿಗೂ ವಿಸ್ತರಿಸಬಹುದು. ಶಾಲಾ ಕಟ್ಟಡಗಳಿಗೆ ಈ ಯೋಜನೆ ಅಳವಡಿಸುವುದರಿಂದ ಮಕ್ಕಳಲ್ಲಿ ಜಲಜಾಗೃತಿ ಉಂಟಾಗುತ್ತದೆ. ನೀರು ಎಲ್ಲಿ ಬೀಳುತ್ತದೆಯೊ ಅಲ್ಲಿಯೇ ಇಂಗುವಂತಾಗುವುದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅಭಿಪ್ರಾಯಪಟ್ಟರು.

‘ನೀರನ್ನು ಉತ್ಪಾದಿಸುವ ಕಾರ್ಖಾನೆಯನ್ನು ತೆರೆಯಲು ಸಾಧ್ಯವಿಲ್ಲ. ಮಳೆಯ ನೀರೇ ನಮಗೆ ಆಧಾರ. ಇರುವ ನೀರನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡುವ ವಿಧಾನವನ್ನು ಕಂಡುಕೊಳ್ಳದೆ ಬೇರೆ ದಾರಿ ಇಲ್ಲ. ಮಳೆ ನೀರು ಸಂಗ್ರಹ, ಇಂಗುಗುಂಡಿ, ಜಲ ಮರುಪೂರಣ ಇವೇ ಮೊದಲಾದ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಹೇಳಿದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ವಿಮರ್ಶಕ ಟಿ.ಪಿ.ಅಶೋಕ್, ಕೆ.ವಿ.ಅಕ್ಷರ, ಬಿ.ಆರ್.ವೆಂಕಟರಮಣ ಐತಾಳ್, ಜಿ.ಎಸ್.ಚಂದ್ರಶೇಖರ್ ಅವರೂ ಹಾಜರಿದ್ದರು. ಸಂವಾದ ನಡೆಯಿತು. ನಂತರ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಬಳಗದಿಂದ ಮಂಜುನಾಥ ಎಲ್.ಬಡಿಗೇರ ಅವರ ನಿರ್ದೇಶನದಲ್ಲಿ ‘ತಾಟಕೀ ಮರ್ದನ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT