ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ; ಚುನಾವಣಾ ಅಕ್ರಮ– ಆರೋಪ

Last Updated 18 ಜುಲೈ 2017, 6:56 IST
ಅಕ್ಷರ ಗಾತ್ರ

ಬೆಳಗಾವಿ: ಗೋಕಾಕದಲ್ಲಿ ಸಾಕಷ್ಟು ಚುನಾವಣಾ ಅಕ್ರಮಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ದೂರು ನೀಡಲು ಸದ್ಯದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಲೂ ಇಂತಹ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದೆ. ಈಗಲೂ ಆ ಕೆಲಸವನ್ನು ಮುಂದುವರಿಸಿದ್ದೇನೆ’ ಎಂದರು.

‘ಗೋಕಾಕದಲ್ಲಿ ನಡೆಯುತ್ತಿರುವ ತೋಳ್ಬಲ, ಹಣಬಲದ ರಾಜಕೀಯ ಯಮಕನಮರಡಿಗೆ ಬರುವುದು ಬೇಡ’ವೆಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಗೋಕಾಕದಲ್ಲಿ ತೋಳ್ಬಲ ಹಾಗೂ ಹಣಬಲದಿಂದ ಚುನಾವಣೆಯನ್ನು ಗೆಲ್ಲಲಾಗುತ್ತಿದೆ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ ಎಂದು ಹೇಳಿದರು.

ಗೋಕಾಕ ತಾಲ್ಲೂಕು ಮತದಾರರ ವೇದಿಕೆಯ ಅಧ್ಯಕ್ಷ ಎ.ವೈ. ಪಂಗಣ್ಣವರ ಮಾತನಾಡಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಬೇಕಾದರೆ ಮತದಾರರ ಚೀಟಿಯ ಜೊತೆ ಆಧಾರ್‌ ಕಾರ್ಡ್‌ ಜೋಡಿಸಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ಬೂತ್‌ ಮಟ್ಟದ ಮತಗಳಿಕೆ ವಿವರವನ್ನು ಬಹಿರಂಗಪಡಿಸಬಾರದು, ಪ್ರತಿಯೊಂದು ಮತದಾನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಮತದಾರರನ್ನು ಕರೆತರಲು ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ತಿಂಗಳ 20ರಂದು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ಕೆಲಹೊತ್ತು ಸಾಂಕೇತಿಕವಾಗಿ ಧರಣಿ ಮಾಡಲಾಗುವುದು’ ಎಂದರು.

ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕಾದರೆ ಉತ್ತಮ ಜನಪ್ರತಿನಿಧಿಗಳನ್ನು ಜನರು ಆರಿಸಬೇಕು. ಆದರೆ, ಇತ್ತೀಚೆಗೆ ಅಪರಾಧ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಆರಿಸಿಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಗೆ ಧಕ್ಕೆ ತರುವಂತಹದ್ದು. ಇದನ್ನು ತಡೆಗಟ್ಟಬೇಕಾದರೆ  ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಹಿರಿಯ ಮುಖಂಡ ಈರಣ್ಣಾ ಕಡಾಡಿ ಮಾತನಾಡಿ, ‘ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮತದಾರರ ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆಗೊಳಿಸುವುದನ್ನು ತಡೆಯಬೇಕು. ಇದು ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಡುತ್ತದೆ’ ಎಂದು ಆರೋಪಿದರು.

ಜೆಡಿಯು ಮುಖಂಡ ಅರವಿಂದ ದಳವಾಯಿ ಮಾತನಾಡಿ, ಜಿಲ್ಲೆಯ ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ ಇದೆ. ಇದು ಕೊನೆಯಾಗಬೇಕಾದರೆ ಚುನಾವಣಾ ಕ್ರಮಗಳು ಸುಧಾರಣೆಯಾಗಬೇಕು. ಉತ್ತಮ ನಾಯಕರನ್ನು ಜನರು ಆರಿಸಿಕಳುಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT