ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಭಾವೈಕ್ಯ ಮಾದರಿ: ಮಂಡ್ಯ ರಮೇಶ

Last Updated 19 ಜುಲೈ 2017, 6:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸುಶಿಕ್ಷಿತ ಎಂದು ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಬುರ್ಗಿಯ ಭಾವೈಕ್ಯ ಇದ್ದರೆ ಧರ್ಮದ ಹೆಸರಿನಲ್ಲಿ ಗಲಭೆ ಆಗುತ್ತಿರಲಿಲ್ಲ’ ಎಂದು ರಂಗಕರ್ಮಿ ಮಂಡ್ಯ ರಮೇಶ ಹೇಳಿದರು. ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಮಂಗಳವಾರ ರಂಗ ಸಂಗಮ ಕಲಾ ವೇದಿಕೆಯಿಂದ ‘ಎಸ್‌.ಬಿ.ಜಂಗಮಶೆಟ್ಟಿ ಸ್ಮರಣಾರ್ಥ ರಂಗ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಕಲಬುರ್ಗಿ ಜಿಲ್ಲೆಯಲ್ಲಿ ಹಿಂದೂ–ಮುಸ್ಲಿಮರು ಎನ್ನವ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿನ ಭಾವೈಕ್ಯ ಎಲ್ಲ ಜಿಲ್ಲೆಗಳಿಗೂ ಮಾದರಿಯಾಗಬೇಕು’ ಎಂದು ಒತ್ತಿ ಹೇಳಿದರು. ‘ಜಾತೀಯತೆ ಎಲ್ಲೆಡೆ ಹಬ್ಬುತ್ತಿರುವುದು ವಿಷಾದಕರ. ಜಾತಿ ವಿಚಾರಕ್ಕಷ್ಟೇ ಅಲ್ಲ ಮತ್ತಾವುದೇ ಕಾರಣಕ್ಕೂ ಮತ್ತೊಬ್ಬರನ್ನು ಅವಮಾನ ಮಾಡಬಾರದು. ಜಾತಿ ಆಧಾರದ ಮೇಲೆ ಪ್ರತಿಭೆ ಅಳೆಯಬಾರದು’ ಎಂದು ಅಭಿಪ್ರಾಯಪಟ್ಟರು.

‘ಕಲಾವಿದನಿಗೆ ಯಾವುದೇ ಪ್ರಶಸ್ತಿ ಸಂದರೂ ಅದು ಅವನೊಬ್ಬನ ಸಾಧನೆ ಆಗಿರುವುದಿಲ್ಲ. ಕಲಾವಿದ ಆ ಮಟ್ಟಕ್ಕೆ ಬೆಳೆಯಲು ಕಾರಣರಾದವರ ಸಾಧನೆಯಾಗುತ್ತದೆ. ನನಗೆ ಎಸ್‌.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಬಂದಿರುವುದು ಇಡೀ ರಂಗಭೂಮಿಗೆ ಸೇರಿದ್ದು. ಪ್ರಶಸ್ತಿಯಿಂದ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗಿದೆ’ ಎಂದರು.

ಕಲಾ ನಿರ್ದೇಶಕ ಶಶಿಧರ ಅಡಪ ಮಾತನಾಡಿ, ‘ಮಂಡ್ಯ ರಮೇಶ್‌, ನಾನು ಮೂವತ್ತು ವರ್ಷಗಳಿಂದ ಗೆಳೆಯರು. ಇಬ್ಬರಿಗೂ ‘ನಾಗಮಂಡಲ’ ಸಿನಿಮಾದಿಂದ ರಾಜ್ಯ ಪ್ರಶಸ್ತಿ ಬಂದಿತು. ರಮೇಶ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ ಇತರರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗುಣವುಳ್ಳವರು. ಅವರು ಮಾದರಿ ಅಷ್ಟೇ ಅಲ್ಲದೇ ನನ್ನ ಯೋಚನೆಯ ಒಂದು ಭಾಗವೂ ಆಗಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರ್ಗಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ಮಾತನಾಡಿ, ‘ಕಲೆ ಕಲೆಗಾಗಿ ಇರಬಾರದು. ಅದು ಮಾನವನ ಬದುಕಿಗಾಗಿ ಇರಬೇಕು’ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ರಂಗ ವಿಮರ್ಶಕ ಶಶಿಕಾಂತ ಯಡಹಳ್ಳಿ, ‘ಮಂಡ್ಯ ರಮೇಶ್‌ ಅವರು ನಟರಷ್ಟೇ ಅಲ್ಲ. ತಮ್ಮ ಆಸಕ್ತಿ ಮತ್ತು ಪರಿಶ್ರಮದ ಮೂಲಕ ಮೈಸೂರಿನಲ್ಲಿ ‘ನಟನ’ ರಂಗಮಂದಿರವನ್ನು ನಿರ್ಮಿಸಿ ಕಲಾವಿದರನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಚನ್ನಣ್ಣ ವಾಲಿಕಾರ ಮಾತನಾಡಿ, ‘ಮನುಷ್ಯತ್ವ ಕಾಪಾಡುವುದು ನಾಟಕಗಳ ಮೂಲ ಉದ್ದೇಶವಾಗಿದೆ’ ಎಂದರು. ರಂಗಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ತಂದೆಯ ಸ್ಮರಣಾರ್ಥ ನಾಲ್ಕು ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ’ ಎಂದು ತಿಳಿಸಿದರು. ಸಂಜೆ ಶಶಿಕಾಂತ ಯಡಹಳ್ಳಿ ರಚಿತ ವೈ.ಡಿ.ಬದಾಮಿ ನಿರ್ದೇಶನದ ‘ಸೀತಾಂತರಾಳ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ಮಂಜುಳಾ ಬದಾಮಿ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT