ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸುರಿದ ಉತ್ತಮ ಮಳೆ

Last Updated 19 ಜುಲೈ 2017, 7:28 IST
ಅಕ್ಷರ ಗಾತ್ರ

ಬೆಳಗಾವಿ: ಬಹುತೇಕ ಜಿಲ್ಲೆಯಾದ್ಯಂತ ಮಂಗಳವಾರ ಮಳೆಯಾಗಿದೆ. ಕೆಲವೆಡೆ ದಿನವಿಡೀ ಜಿಟಿಜಿಟಿಯಾಗಿದ್ದರೆ, ಇನ್ನುಳಿದ ಪ್ರದೇಶಗಳಲ್ಲಿ ಆಗಾಗ ಮಳೆಯಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ರಾಜಾಪುರ ಬ್ಯಾರೇಜ್‌ ಮೂಲಕ 30,000 ಕ್ಯೂಸೆಕ್‌ ನೀರನ್ನು ಹರಿಯಬಿಡಲಾಗಿದೆ.

ರಾಜಾಪುರ ಬ್ಯಾರೇಜ್‌ ಮೂಲಕ ಹರಿಬಿಡಲಾದ ನೀರು ಕೃಷ್ಣಾ ನದಿಗೆ ಸೇರಿಕೊಳ್ಳಲಿದೆ. ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ಮೂಲಕ ಹರಿಯುವ ಕೃಷ್ಣಾ ನದಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ.

ಬೆಳಗಾವಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆಯಿಂದಲೇ ಮಳೆ ಸುರಿಯಿತು. ಮಳೆಯ ಜೊತೆ ತಣ್ಣನೆ ಗಾಳಿ ಬೀಸಿದ್ದರಿಂದ ಚಳಿಯ ಅನುಭವವಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿ ಹೊಂದಿರುವ ಖಾನಾಪುರದಲ್ಲೂ ಉತ್ತಮವಾಗಿ ಮಳೆಯಾಗಿದೆ. ಬೈಲಹೊಂಗಲದಲ್ಲಿ ದಿನವಿಡೀ ಜಿಟಿಜಿಟಿ ಮಳೆ ಸುರಿದಿದೆ.

ಇನ್ನುಳಿದಂತೆ ಹಿರೇಬಾಗೇವಾಡಿ, ಹಾರೂಗೇರಿ, ರಾಯಬಾಗ, ಎಂ.ಕೆ. ಹುಬ್ಬಳ್ಳಿ, ಗೋಕಾಕ, ಅಥಣಿ, ಚಿಕ್ಕೋಡಿ, ಸವದತ್ತಿ ಹಾಗೂ ಕಿತ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಬಹುತೇಕ ಜಿಲ್ಲೆಯಾದ್ಯಂತ  ಮಳೆಯಾಗಿದೆ.

ಮೈ ನಡುಗುವ ಚಳಿ: ಬೆಳಗಾವಿಯಲ್ಲಿ ಮಳೆಯ ಜೊತೆ ಚಳಿಗಾಳಿ ಬೀಸುತ್ತಿತ್ತು. ದಿನದ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. ಜನರು ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ಉಡುಪುಗಳನ್ನು ಧರಿಸಿದರು. ಮಳೆಯಿಂದ ರಕ್ಷಣೆ ಪಡೆಯಲು ಜರ್ಕಿನ್‌ ಹಾಕಿಕೊಂಡು ಹಾಗೂ ಕೊಡೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಲಾಶಯಕ್ಕೆ ನೀರು: ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಲಪ್ರಭಾ ಹಾಗೂ ಘಟಪ್ರಭಾ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಘಟಪ್ರಭಾ ಜಲಾಶಯಕ್ಕೆ 7,547 ಕ್ಯೂಸೆಕ್‌ ಹಾಗೂ ಮಲಪ್ರಭಾ ಜಲಾಶಯಕ್ಕೆ 2,903 ಕ್ಯೂಸೆಕ್‌ ನೀರು ಹರಿದುಬಂದಿದೆ. ಬೆಳಗಾವಿಗೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯಕ್ಕೂ ಹೆಚ್ಚಿನ ನೀರು ಹರಿದುಬಂದಿದೆ. 2,468 ಅಡಿಯವರೆಗೆ (ಗರಿಷ್ಠ 2,476.50 ಅಡಿ)  ನೀರು ತುಂಬಿದೆ.

ಬಿತ್ತನೆ ಶೇ 60ರಷ್ಟು:  ಹವಾಮಾನ ಇಲಾಖೆ ನಿರೀಕ್ಷಿಸಿದಂತೆ ಮುಂಗಾರು ಜೂನ್‌ನಲ್ಲಿ ಆರ್ಭಟಿಸಲಿಲ್ಲ. ಜುಲೈ ಆರಂಭವಾಗಿ ಎರಡು ವಾರ ಕಳೆದಿದ್ದು, ಈಗ ಮಳೆ ಜೋರು ಹಿಡಿದಿದೆ. ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.

ಮುಖ್ಯವಾಗಿ ಭತ್ತ, ಕಬ್ಬು, ಕಡಲೆ, ಸೋಯಾ, ಸೂರ್ಯಕಾಂತಿಯ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಕಳೆದ ವರ್ಷ ಈ ವೇಳೆಗೆ ಶೇ 80ರಿಂದ 90ರಷ್ಟು ಬಿತ್ತನೆಯಾಗಿತ್ತು. ಆದರೆ, ಈಗ ಮಳೆ ವಿಳಂಬವಾಗಿರುವುದರಿಂದ ಕೇವಲ ಶೇ 60ರಷ್ಟು ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ದಿನವಿಡೀ ಸುರಿದ ಮಳೆಯಿಂದಾಗಿ ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರಗೊಳ್ಳುವ ಲಕ್ಷಣಗಳಿವೆ. ಮಳೆಯು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT