ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶ್ನೆಯಾಗಿರುವ ಒಳ್ಳೆಯ ಶಿಕ್ಷಣದ ವ್ಯಾಖ್ಯಾನ’

Last Updated 19 ಜುಲೈ 2017, 10:43 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಮಸ್ಯೆಗಳನ್ನು ಎದುರಿಸಲು ಒಳ್ಳೆಯ ಶಿಕ್ಷಣವೇ ಪರಿಹಾರ ಎನ್ನಲಾಗುತ್ತದೆ. ಆದರೆ, ಒಳ್ಳೆಯ ಶಿಕ್ಷಣ ಎಂದರೆ ಯಾವುದು ಎನ್ನುವುದೇ ಪ್ರಶ್ನೆಯಾಗಿಯೇ ಉಳಿದಿದೆ’ ಎಂದು ಪ್ರಭಾರ ಜಿಲ್ಲಾಧಿಕಾರಿ ಕೆ. ಹರೀಶ್‌ ಕುಮಾರ್ ಹೇಳಿದರು.ನಗರದ ದೀನಬಂಧು ಶಾಲೆಯಲ್ಲಿ ಸೋಮವಾರ ನಡೆದ ಒನ್ ಪೀಪಲ್‌ ಅಂತರರಾಷ್ಟ್ರೀಯ ಕಿರು ಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ನಮಗೆ ಒಳ್ಳೆಯ ಶಿಕ್ಷಣ ಎನಿಸುವುದು ಬೇರೆಯವರಿಗೆ ಅನಿಸುವುದಿಲ್ಲ. ಪೋಷಕರು, ಶಿಕ್ಷಕರು ಮತ್ತು ಮಕ್ಕಳು ಒಳ್ಳೆಯದು ಎಂದು ಒಪ್ಪಿಕೊಂಡಿದ್ದನ್ನು ಸಮಾಜ ಒಪ್ಪದೆ ಇರಬಹುದು. ಶಿಕ್ಷಣ ನಮ್ಮ ವ್ಯಕ್ತಿತ್ವವನ್ನು ರೂಪಿಸಬೇಕು. ನಮ್ಮ ಮಾತು, ನಡತೆ, ಘನತೆ, ಆಚಾರ ವಿಚಾರಗಳು ಶಿಕ್ಷಣದಿಂದ ರೂಪುಗೊಳ್ಳುವಂತೆ ಇರಬೇಕು’ ಎಂದರು.

ಕಿರುಚಿತ್ರಗಳು ಸಾಮಾಜಿಕ ಸಮಸ್ಯೆ ಮತ್ತು ಆಂತರಿಕ ಸೌಂದರ್ಯದ ಮಹತ್ವಗಳನ್ನು ಸೂಚ್ಯವಾಗಿ ಬಿಂಬಿಸಿವೆ. ಮಕ್ಕಳನ್ನು ಕ್ರಿಯಾಶೀಲ ರನ್ನಾಗಿರುವ ಈ ರೀತಿಯ ಪ್ರಯತ್ನಗಳು ಶಾಲೆಗಳಲ್ಲಿ ಹೆಚ್ಚಾಗಿ ನಡೆಯಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಇಂದಿನ ಶಿಕ್ಷಣ ಅಂಕ ಪಡೆದುಕೊಳ್ಳುವುದಕ್ಕೆ ಸೀಮಿತವಾಗುತ್ತಿದೆ. ಪೋಷಕರಲ್ಲಿ ಮಕ್ಕಳ ಅಂಕಗಳ ಬಗ್ಗೆ ತೃಪ್ತಿ ಇರುವುದಿಲ್ಲ. ಆದರೆ, ಸಾಮಾಜಿಕ ಬದುಕಿನ ಬದ್ಧತೆ, ಜವಾಬ್ದಾರಿ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ನೀಡಬೇಕಾದ ಮಾರ್ಗದರ್ಶನದ ಕುರಿತು ಯಾರೂ ಚಿಂತಿಸುತ್ತಿಲ್ಲ ಎಂದು ವಿಷಾದಿಸಿದರು.

ಮಕ್ಕಳನ್ನು ಈ ಬಗೆಯ ಕ್ರಿಯಾಶೀಲ ಶಿಕ್ಷಣದಲ್ಲಿ ತೊಡಗಿಸುವುದರಿಂದ ಜೀವನದಲ್ಲಿ ಎಂತಹ ಕಷ್ಟ ಬಂದರೂ ಎದುರಿಸುವ ಸಾಮರ್ಥ್ಯ ಬರುತ್ತದೆ. ಶಿಸ್ತುಬದ್ಧ ಜೀವನ, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಅರಿವಾಗುತ್ತದೆ ಎಂದರು.

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌. ಜಯದೇವ ಮಾತನಾಡಿ, ಪ್ರವಚನ ನೀಡಿದರೆ ಜನ ಬದಲಾಗುತ್ತಾರೆ ಎಂಬ ನಂಬಿಕೆ ನಮ್ಮ ದೇಶದಲ್ಲಿದೆ. ಹೀಗಾಗಿ, ತುಂಬಾ ಜನ ಪ್ರವಚನಕಾರರು ಹುಟ್ಟಿಕೊಂಡಿದ್ದಾರೆ. ವಿವಿಧ ದೇಶಗಳಲ್ಲಿ ಬುದ್ಧಿಮಾತು ಹೇಳಿ ಓಡಾಡುತ್ತಿದ್ದಾರೆ. ಪ್ರವಚನದಿಂದ ಯಾವುದೂ ಬದಲಾಗುವುದಿಲ್ಲ. ಮೊದಲು ಸಮಸ್ಯೆಗಳಿಗೆ ಎದುರಾಗಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ದೀನಬಂಧು ಸಂಸ್ಥೆಯ ಪ್ರಜ್ಞಾ, ನಟೇಶ್‌, ಲಿನ್ನೇಯ ಮತ್ತು ಲೀಸಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT