ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಏಕಲವ್ಯ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನನ್ನದೇ  ಉದ್ಯಮ ಸ್ಥಾಪಿಸಬೇಕು ಎಂದು ನೆಟ್‌ನಲ್ಲಿ ಹುಡುಕಾಡಿದಾಗ ಕಂಡಿದ್ದು ಈ ಅಣಬೆ. ಕೆಲವು ನಿಮಿಷಗಳ ಯು ಟ್ಯೂಬ್‌ ವಿಡಿಯೊದಲ್ಲಿ ಅಣಬೆ ಬೆಳೆಯುವ ವಿಧಾನದ ಕುರಿತು ಕಂಡ ವಿವರಣೆ ಕುತೂಹಲ ಮೂಡಿಸಿತ್ತು. ಒಮ್ಮೆ ನೋಡಿದವನು ಮತ್ತೆ ಮತ್ತೆ ನೋಡಿದೆ. ಥ್ರಿಲ್ಲಿಂಗ್ ಅನ್ನಿಸಿತು. ಲಾಭ ಮಾಡಬಹುದು ಎಂಬ ಆಸೆಯೂ ಮೂಡಿತು. ನಾನೇ ಏಕೆ ಅಣಬೆ ಬೆಳೆಯಬಾರದು ಅಂದುಕೊಂಡೆ. ಫಲಿತಾಂಶ ನಿಮ್ಮ ಮುಂದೆಯೇ ಇದೆ ನೋಡಿ...

–ಇಪ್ಪತ್ತಾರರ ಪಿ.ಪ್ರವೀಣ್‌ ನನ್ನ ಮುಂದೆ ಮೋಹಕವಾದ ತಾಜಾ ಹಾಲುಬಣ್ಣದ ಅಣಬೆಗಳನ್ನು ಮುಂದಿಟ್ಟರು.

ಒಂದಕ್ಕಿಂತ ಒಂದು ಗಾತ್ರದಲ್ಲಿ ದೊಡ್ಡದು. ಬಾಗಿದ, ಬಳುಕಿದ ಅಣಬೆ ಆಕಾರದಲ್ಲಿ ಆಕರ್ಷಕ. ಅದರಿಂದ ಪದಾರ್ಥವನ್ನು ತಯಾರಿಸಿ ತಿನ್ನಬೇಕು ಎಂಬುದಕ್ಕಿಂತಲೂ ಸುಮ್ಮನೇ ನೋಡುತ್ತಾ ಕಣ್ತುಂಬಿಕೊಳ್ಳಬೇಕು ಎಂಬ ಬಯಕೆಯದ್ದೇ ಮೇಲುಗೈ. ಹಸಿವನ್ನು ನಿವಾರಿಸುವ ಪದಾರ್ಥದ ಮೂಲವೊಂದು ಹೀಗೆ ಕಲಾಕೃತಿಯಾಗಿ ನೋಡುಗನನ್ನು ತನ್ಮಯಗೊಳಿಸುವುದು ಲೋಕದ ವಿಸ್ಮಯ ಎನ್ನಿಸಿತು.

ಈ ವಿಸ್ಮಯದ ಕುರಿತು ಪ್ರವೀಣ್‌ ಒಳಗೆ ಏನೋ ಇರಬಹುದು. ಆದರೆ ಹೊರನೋಟಕ್ಕೆ ಮಾತ್ರ ಅವರು ಆ ಬಗ್ಗೆ ನಿರ್ಲಿಪ್ತ. ವ್ಯವಹಾರಕ್ಕೆ ಬಂದರೆ ಪಕ್ಕಾ ಲೆಕ್ಕಾಚಾರ. ಜಗತ್ತಿನ ಯಶಸ್ವಿ ಉದ್ಯಮಿಗಳ ಪ್ರಮುಖ ಗುಣ ಅದೇ ತಾನೇ?

ಬಳ್ಳಾರಿಯ ಗುಗ್ಗರಹಟ್ಟಿ ಎಂಬ ಅತ್ತ ಹಳ್ಳಿಯೂ ಅಲ್ಲದ, ನಗರವೂ ಅಲ್ಲದ, ಆದರೆ ಮಹಾನಗರ ಪಾಲಿಕೆಗೆ ಸೇರಿದ ಪ್ರದೇಶದ ಮೂಲೆಯಲ್ಲಿ ಅವರದೊಂದು ಬಾಡಿಗೆಗೆ ಪಡೆದ ಶೆಡ್‌ ಇದೆ. ಅಲ್ಲಿ ಅವರು ಎರಡು ವರ್ಷದಿಂದ ಸದ್ದಿಲ್ಲದೆ ಅಣಬೆ ಕೃಷಿ ನಡೆಸುತ್ತಿದ್ದಾರೆ. ಬಳ್ಳಾರಿಯ ಎಲ್ಲ ಸೂಪರ್‌ ಮಾರ್ಕೆಟ್‌ಗಳ ಹೊಟ್ಟೆ ತುಂಬಿಸುವ ಅಣಬೆ ಅಲ್ಲಿಂದ ಬೆಂಗಳೂರನ್ನೂ ತಲುಪುತ್ತದೆ!

ಸದಾಕಾಲ ತಂಪು ಹವೆಯನ್ನು ಬಯಸುವ ಬೆಳೆ ಅಣಬೆ. ಬಿಸಿಲನಾಡಲ್ಲಿ ಅದನ್ನು ಬೆಳೆಯುವುದು ಕಷ್ಟ ಮತ್ತು ಅಸಾಧ್ಯ ಎಂದು ಕೈಬಿಟ್ಟ ರೈತರೇ ಹೆಚ್ಚು. ಆದರೆ ಪ್ರವೀಣ್‌ ಅದನ್ನೇ ಸಹಜ ಸವಾಲಿನಂತೆ ಸ್ವೀಕರಿಸಿದರು ಎಂಬುದೇ ವಿಶೇಷ.

ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಗೊಡಸಲಪಲ್ಲಿ ಮೂಲದವರಾದ ಪ್ರವೀಣ್‌ ಓದಿದ್ದು ಬಿ.ಬಿ.ಎಂ. ಅದಕ್ಕೆ ತಕ್ಕಂತೆ ಅವರು ಎಚ್‌ಡಿಎಫ್‌ಸಿ ಬ್ಯಾಂಕಿನ ಸಾಲ ವಿಭಾಗದಲ್ಲಿ ನಾಲ್ಕು ವರ್ಷ ಕೆಲಸವನ್ನೂ ಮಾಡಿದ್ದರು. ಅವರ ಒಳಗಿನ ಉದ್ಯಮಿ ಸ್ವಂತದ್ದೊಂದು ಉದ್ಯಮದ ಕನಸು ಕಾಣುತ್ತಿದ್ದ. ಆದರೆ ದಾರಿ ತೋರಿಸುವವರು ಇರಲಿಲ್ಲ. ಯಾರನ್ನು ಕೇಳಬೇಕು? ಹೇಗೆ ಕೇಳಬೇಕು? ಎಂಬುದೂ ಗೊತ್ತಿಲ್ಲದ ಪರಿಸ್ಥಿತಿ.

ಪದವಿ ಶಿಕ್ಷಣ ನೀಡಿದ ಜಗತ್ತು, ಅದನ್ನು ಬಳಸಿ ಮತ್ತು ಅದರಿಂದ ದೂರ ಸಿಡಿದು ತನ್ನದೇ ವ್ಯಕ್ತಿತ್ವ ಮತ್ತು ಬದುಕನ್ನು ರೂಪಿಸಿಕೊಳ್ಳುವ ಕೌಶಲವನ್ನು ಹೇಳಿಕೊಟ್ಟಿರಲಿಲ್ಲ. ಅವರಿಗೆ ದಾರಿ ತೋರಿಸಿದ್ದು ಇಂಟರ್‌ನೆಟ್‌ ಮತ್ತು ಯು ಟ್ಯೂಬ್‌!

ಇದ್ದ ಹಣ ಮತ್ತು ನೆರವಿಗೆ ಬಂದವರ ಹಣವನ್ನು ಸೇರಿಸಿ ಒಂದು ಲಕ್ಷ ಬಂಡವಾಳ ಹಾಕಿ ಅವರು ಹಳ್ಳಿಯಲ್ಲೇ ಅಣಬೆಯನ್ನು ಬೆಳೆದರು. ನಂದ್ಯಾಲ ಮತ್ತು ಬೆಂಗಳೂರಿನ ಸೂಪರ್‌ ಮಾರ್ಕೆಟ್‌ಗಳಲ್ಲಿ ಮಾರಿದರು. ಅಲ್ಲೀವರೆಗೂ ಅಣಬೆಗೆ ಇರುವ ಭರ್ಜರಿ ಬೇಡಿಕೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲ.

ಮುಂದಿನದ್ದೆಲ್ಲ ನಿರಂತರ ಪರಿಶ್ರಮ ಮತ್ತು ಲಾಭದ ಬಾಬತ್ತು ಅಷ್ಟೇ. ಅದಕ್ಕೆ ಭದ್ರ ನೆಲೆ ಒದಗಿಸಿದ್ದು ಬಳ್ಳಾರಿ ನಗರ. ಮೊದಲು ಚಿಕ್ಕ ಶೆಡ್‌ನಲ್ಲಿ ಚಿಕ್ಕದಾಗಿ ಅಣಬೆ ಕೃಷಿ ಆರಂಭಿಸಿದ ಅವರು, ನಂತರ ಪಕ್ಕದ ಕಟ್ಟಡಕ್ಕೂ ವಿಸ್ತರಿಸಿದರು. ಈಗ ಅವರ ಹಸಿರು ಮನೆಯಲ್ಲಿ ಅಣಬೆಗಳ ಲೋಕವೊಂದು ಅರಳುತ್ತಲೇ ಇರುತ್ತದೆ.

ಅಣಬೆ ಕೃಷಿ ಹೇಗೆ?

ಅಣಬೆಯನ್ನು ಹೇಗೆ ಬೆಳೆಯುತ್ತೀರಿ ಎಂದು ಕೇಳಿದರೆ ಪ್ರವೀಣ್‌ ವಿಜ್ಞಾನ, ತಂತ್ರಜ್ಞಾನದ ತಂತ್ರಗಳನ್ನೆಲ್ಲ ಸೇರಿಸಿ ವಿವರಣೆಯನ್ನು ಆರಂಭಿಸುತ್ತಾರೆ, ಅವರೊಳಗೊಬ್ಬ ಅಪ್ಪಟ ರೈತನಿರುವಂತೆ, ಪ್ರಯೋಗಶಾಲೆಯ ಖಚಿತ ತಿಳಿವಳಿಕೆಯುಳ್ಳ ವಿಜ್ಞಾನಿಯೂ ಇರುವುದರಿಂದ ಅದು ಸಾಧ್ಯವಾಗಿದೆ.

ಎಲ್ಲಿಯೂ ಗೊಂದಲಕ್ಕೆ ಆಸ್ಪದವಿಲ್ಲ. ಯಾವುದೇ ವಿಷಯದಲ್ಲಿ ಪದವಿ ಪಡೆದರೂ, ಉದ್ಯಮ ಸ್ಥಾಪನೆಗೆ ಬೇಕಾದ ಎಲ್ಲ ಮಾಹಿತಿ–ತಂತ್ರಜ್ಞಾನಗಳ ತಿಳಿವಳಿಕೆ ಯುವಜನರಿಗೆ ಅಗತ್ಯ ಮತ್ತು ಕಡ್ಡಾಯ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ. ಈ ತಿಳಿವಳಿಕೆಯನ್ನು ಪಡೆಯಲು ಅವರು ಸುಲಭದ ಅಡ್ಡ ದಾರಿಗಳಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ತಮ್ಮನ್ನೇ ಸ್ವತಃ ಪರೀಕ್ಷೆಗೆ ಒಳಪಡಿಸಿಕೊಂಡೇ ಅವರು ಈಗ ಗಟ್ಟಿ ಹೆಜ್ಜೆ ಊರಿದ್ದಾರೆ.

ಅಣಬೆ ಬೆಳೆಯಲು ಬೇಕಾಗಿದ್ದು ಭತ್ತದ ಹುಲ್ಲು, ಕಪ್ಪು ಅಥವಾ ಕೆಂಪು ಮಣ್ಣು, ನೀರು, ಅಣಬೆ ಬೀಜ, ಪ್ಲಾಸ್ಟಿಕ್‌ ಚೀಲ ಅಷ್ಟೇ ಎಂದ ಅವರು, ಆ ಕೃಷಿಯ ಪ್ರತಿ ವಿವರಗಳನ್ನೂ ಬಿಡಿಸಿಟ್ಟರು. ಕೆಲವೆಡೆ, ಅರ್ಥವಾಗಲಿಲ್ಲ ಎಂದೆ, ಅದೇನು ಮಹಾ ಎಂಬಂತೆ ಮತ್ತೆ ಬಿಡಿಸಿಟ್ಟರು!

ಹುಲ್ಲನ್ನು ನಾಲ್ಕು ಗಂಟೆ ಕಾಲ ನೆನಸಿಡಬೇಕು. ನಂತರ ನೀರಿನಿಂದ ತೆಗೆದು ಮತ್ತೆ 80ರಿಂದ 90ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶದಲ್ಲಿ ಕುದಿಸಬೇಕು. ನಂತರ ಶೇ 50ರಷ್ಟು ತೇವಾಂಶವಿರುವಂತೆ ಒಣಗಿಸಬೇಕು, 16*14 ಅಳತೆಯ ಪ್ಲಾಸ್ಟಿಕ್‌ ಚೀಲದಲ್ಲಿ ಮೂರು ಇಂಚಿಗೆ ಒಂದರಂತೆ ಹುಲ್ಲಿನ ಆರೇಳು ಪದರಗಳನ್ನು ಅಳವಡಿಸಬೇಕು. ಅದರೊಳಗೆ 50ರಿಂದ 70ಗ್ರಾಂನಷ್ಟು ಬೀಜಗಳನ್ನು ಹಾಕಬೇಕು. 21ರಿಂದ 25 ದಿನ ಕಾಲ ಕತ್ತಲ ಕೊಠಡಿಯಲ್ಲಿಡಬೇಕು. ಆರ್ದ್ರತೆ (ಹ್ಯುಮಿಡಿಟಿ) ಪ್ರಮಾಣ 60ರಿಂದ 70ರಷ್ಟಿರಬೇಕು.

ಹಂತ 2: ಪ್ಲಾಸ್ಟಿಕ್‌ ಚೀಲವನ್ನು ಅರ್ಧಕ್ಕೆ ಕತ್ತರಿಸಬೇಕು. ಮಣ್ಣು ಮತ್ತು ತೆಂಗಿನ ಚಿಪ್ಪಿನ ಪುಡಿಯ ಮಿಶ್ರಣವನ್ನು ಸೇರಿಸಬೇಕು. ಅದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬ ಕಾರಣಕ್ಕೆ. 1*2 ದಪ್ಪವಿರುವ ಪ್ಲಾಸ್ಟಿಕ್‌ ಹಾಳೆಯಲ್ಲಿ ಹಾಕಿ ಲೈಟಿಂಗ್‌ ರೂಂಗೆ (ಬೆಳಕಿನ ಕೊಠಡಿ) ಸ್ಥಳಾಂತರಿಸಬೇಕು. ನಂತರ ದಿನವೂ ನೀರನ್ನು ಸಿಂಪಡಿಸಬೇಕು. ಅದಾದ 12ರಿಂದ 14ನೇ ದಿನಕ್ಕೆ ಅಣಬೆಗಳು ಕಾಣಿಸಿಕೊಳ್ಳುತ್ತವೆ. ನಂತರ ನಾಲ್ಕೈದು ದಿನಕ್ಕೆ ಕಟಾವು ಮಾಡಬಹುದು. ಹಾಗೆ 20 ದಿನಗಳರೆಗೂ ಕಟಾವು ಸಾಧ್ಯ... ವಿವರಣೆ ನೀಡುವುದರಲ್ಲೂ ಪ್ರವೀಣ್‌ ನಿಜವಾದ ಪ್ರವೀಣರು. ಅವರ ಅಣಬೆ ಕೃಷಿ ಶೆಡ್‌ ಒಂದು ಪ್ರಯೋಗಾಲಯದಂತೆಯೇ ಕಾಣುತ್ತದೆ.

ಲಾಭದ ದಾರಿ...

ಒಂದು ಕೆ.ಜಿ. ಅಣಬೆ ಬೆಳೆಯಲು ಅವರಿಗೆ ತಗುಲುವ ಖರ್ಚು ನೂರ ಅರವತ್ತು ರೂಪಾಯಿ. ಆದರೆ ಮಾರುಕಟ್ಟೆಯಲ್ಲಿ ಅಣಬೆಯನ್ನು ಅವರು ಮಾರುವುದು ಇನ್ನೂರರಿಂದ ಇನ್ನೂರೈವತ್ತು ರೂಪಾಯಿಗೆ. ಏನಿಲ್ಲವೆಂದರೂ ಶೇ 60ರಷ್ಟು ಬಂಡವಾಳ ವಾಪಸು ಬರುತ್ತದೆ. ಈಗ ಅವರು ದಿನಕ್ಕೆ ಇಪ್ಪತ್ತು ಕೆ.ಜಿ. ಅಣಬೆ ಬೆಳೆಯುತ್ತಿದ್ದಾರೆ. ಲಾಭ ಅವರ ಕೈ ತುಂಬುತ್ತಿದೆ. ಬಿಡುವಿಲ್ಲದೆ ಅವರು ದುಡಿಮೆಯಲ್ಲಿದ್ದಾರೆ. ಸ್ವಂತ ಉದ್ಯಮವೊಂದನ್ನು ನಡೆಸುವ ಅವರ ಖುಷಿಯಲ್ಲಿ ಮೂವರು ಸಹಾಯಕರೂ ಜೊತೆ ಸೇರಿದ್ದಾರೆ, ಹಳ್ಳಿ ಮೂಲದ ಬಿಬಿಎಂ ಪದವೀಧರ ನಗರಕ್ಕೆ ಬಂದು, ತಾನು ಓದಿರುವುದಕ್ಕೆ ಸಂಬಂಧಿಸಿರದ ಕ್ಷೇತ್ರದಲ್ಲಿ ಕೇವಲ ಆಸಕ್ತಿ ಮತ್ತು ಬದ್ಧತೆಯಿಂದಲೇ ಮೇಲೆ ಬರಬಹುದು. ಕೆಲವರಿಗೆ ಕೆಲಸವನ್ನೂ ಕೊಡಬಹುದು ಎಂಬುದಕ್ಕೆ ಪ್ರವೀಣ್‌ ಸಾಕ್ಷಿಯಾಗಿದ್ದಾರೆ.
ಸಂಪರ್ಕಕ್ಕೆ: 9844097792.

***

ಮಧುಮೇಹಕ್ಕೂ ಒಳ್ಳೇ ಔಷಧಿ ಸಾರ್‌..!

ಸಹಜ ಸಿದ್ಧವಾಗಿ ಪ್ರಕೃತಿದತ್ತವಾಗಿ ದೊರಕುತ್ತಿದ್ದ ಅಣಬೆಯು ಮಹತ್ವದ ಆದರೆ ನಿರ್ಲಕ್ಷ್ಯಿಸಲ್ಪಟ್ಟ ಆಹಾರ. ಆದರೆ ಚೀನಾ ಮತ್ತು ಯೂರೋಪಿನ ಜನ ನಾಲ್ಕು ನೂರು ವರ್ಷಗಳಿಂದಲೂ ಬೆಳೆದು ಬಳಸುತ್ತಿದ್ದಾರೆ. ಆದರೆ ನಮ್ಮಲ್ಲಿ ಅಂಥ ಗಟ್ಟಿ ಪ್ರಯತ್ನಗಳು ಇನ್ನೂ ಆರಂಭವಾಗಬೇಕಿವೆ ಎನ್ನುತ್ತಾರೆ ಪ್ರವೀಣ್‌. ಅವರು ಅಣಬೆ ಬೆಳೆಯುವುದರ ಜೊತೆಗೆ, ಇಡೀ ವಿಶ್ವದಲ್ಲಿ ಅಣಬೆ ಕೃಷಿಯ ಆಗುಹೋಗುಗಳ ಮೇಲೂ ಕಣ್ಣಾಡಿಸುತ್ತಿರುತ್ತಾರೆ.

‘ಅಣಬೆಯು ಮಧುಮೇಹಿಗಳಿಗೆ ಒಳ್ಳೇ ಔಷಧಿ ಎಂಬುದನ್ನು ಒತ್ತಿ ಹೇಳಿ ಸಾರ್‌’ ಎಂದು ಅವರು ಮಂಡಿಸಿದ ಏಕೈಕ ಕೋರಿಕೆ.

ಆಧುನಿಕ ಜೀವನಶೈಲಿಯ ಪರಿಣಾಮಗಳಾದ ಹೃದ್ರೋಗ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌, ಕ್ಷಯ, ಸ್ಥೂಲಕಾಯ, ಮಲಬದ್ಧತೆಯಂಥ ಕಾಯಿಲೆಗಳನ್ನು ತಡೆಗಟ್ಟಲು ಅಣಬೆ ಸೇವನೆ ಸಹಕಾರಿ. ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡುವ ಅಣಬೆಯಲ್ಲಿ ವಿಟಮಿನ್‌ ಬಿ 2 ಮತ್ತು ಬಿ3 ಹೇರಳವಾಗಿ ದೊರಕುತ್ತದೆ. ಕೊಬ್ಬಿನಾಂಶವನ್ನು ಕರಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್‌ ಡಿ ಉಳ್ಳ ಏಕೈಕ ತರಕಾರಿ ಅಣಬೆ. ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಶಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ, ರಕ್ತದೊತ್ತಡ ಕಡಿಮೆ ಮಾಡುವ ಪೊಟ್ಯಾಶಿಯಂ ಅಂಶಗಳಿವೆ... ತನ್ಮಯರಾಗಿ ಹೇಳುತ್ತಿದ್ದ ಪ್ರವೀಣ್‌ ಅವರ ಮಾತುಗಳಲ್ಲಿ ವೈದ್ಯರ ಖಚಿತತೆ ಇತ್ತು.

ಚಿತ್ರಗಳು: ಟಿ.ರಾಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT