ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರ ಬೃಹತ್ ರ‍್ಯಾಲಿ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬೀದರ್‌: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಒತ್ತಾಯಿಸಿ ಬೀದರ್‌ ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳಿಂದ ಬಂದಿದ್ದ ಲಿಂಗಾಯತರು ನಗರದಲ್ಲಿ ಬುಧವಾರ ಬೃಹತ್‌ ರ‍್ಯಾಲಿ ನಡೆಸಿದರು.

ನಗರದ ನೆಹರೂ ಕ್ರೀಡಾಂಗಣದಿಂದ ಆರಂಭವಾದ ರ‍್ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಷಟ್‌ಸ್ಥಲ ಧ್ವಜ, ಬಸವೇಶ್ವರ ಚಿತ್ರವಿರುವ ಕೇಸರಿ ಧ್ವಜ, ಪ್ರದರ್ಶನ ಫಲಕಗಳನ್ನು ಹಿಡಿದಿದ್ದರು.

‘ಲಿಂಗಾಯತ ಸ್ವತಂತ್ರ ಧರ್ಮ’ ಎಂದು ಬರೆಯಲಾದ ಟೋಪಿಯನ್ನು ಹಾಕಿಕೊಂಡಿದ್ದ ಯುವಕರು ಮೆರವಣಿಗೆಯಲ್ಲಿ ಸಾಗಿ ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು.

ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮಹಾದೇವ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ ‘ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆಯು ಲಿಂಗಾಯತ ಸಮಾಜದ ಪ್ರಾತಿನಿಧಿಕ ಸಂಸ್ಥೆಯಲ್ಲ. ಅದು ಕೇವಲ ವೀರಶೈವ ಪಂಗಡದ ಸಂಸ್ಥೆಯಾಗಿದ್ದು, ಎಲ್ಲ ಬಸವ ಅನುಯಾಯಿಗಳಿಗೆ ಸಂಬಂಧಪಟ್ಟಿದ್ದಲ್ಲ’ ಎಂದು ಹೇಳಿದರು.

‘ತಹಶೀಲ್ದಾರ್‌ಗಳು ಲಿಂಗಾಯತರಿಗೆ ವೀರಶೈವ–ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡುತ್ತಿದ್ದಾರೆ. ಲಿಂಗಾಯತರಲ್ಲಿ ಹಲವು ಉಪ ಜಾತಿಗಳಿವೆ. ಎಲ್ಲರಿಗೂ ವೀರಶೈವ ಲಿಂಗಾಯತ ಜಾತಿ ಪ್ರಮಾಣಪತ್ರ ಕೊಡುವುದು ಸರಿ ಅಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾತೆ ಮಹಾದೇವಿಗೆ ಪ್ರಚಾರದ ಹುಚ್ಚು’
ಬೆಂಗಳೂರು: ‘ಬಸವಣ್ಣ ಅವರ ಅಂಕಿತನಾಮ ಕೂಡಲ ಸಂಗಮದೇವ ಅಲ್ಲ, ಲಿಂಗದೇವ ಎಂದು ಹೇಳುವ ಮೂಲಕ ಮಾತೆ ಮಹಾದೇವಿ ಅವರು ಅವಿವೇಕದ ನಿಲುವನ್ನು ಮತ್ತೆ ಮುಂದುವರೆಸಿದ್ದಾರೆ’ ಎಂದು ಸಂಶೋಧಕ ಎಂ. ಚಿದಾನಂದ ಮೂರ್ತಿ ಟೀಕಿಸಿದರು.

ಬುಧವಾರ ಮಾತನಾಡಿದ ಅವರು, ‘ಮಾತೆ ಮಹಾದೇವಿ ಅವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅವರಿಗೆ ಪ್ರಚಾರದ ಹುಚ್ಚು ಹಿಡಿದಿದೆ’ ಎಂದರು.

‘ಅಖಿಲ ಭಾರತ ವೀರಶೈವ ಮಹಾಸಭಾದವರು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಒತ್ತಾಯಿಸುತ್ತಿರುವುದು ಸರಿಯಲ್ಲ. ಲಿಂಗಾಯತರು ಹಿಂದೂ ಧರ್ಮದ ಭಾಗ ಎನ್ನುವುದನ್ನು ಅಲಕ್ಷಿಸಿ ಅವರು ಸ್ಥಾನಮಾನ ಕೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಸವಣ್ಣ ಅವರು ವೀರಶೈವ ಪಂಥಕ್ಕೆ ಹೊಸ ಆಯಾಮ ನೀಡಿದವರೇ ಹೊರತು, ಲಿಂಗಾಯತ ಧರ್ಮ ಸ್ಥಾಪಕರಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT