ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಮೂಲದ ಉದ್ಯಮಿಗೆ ಅಕ್ರಮವಾಗಿ ಭೂಮಿ ಮಂಜೂರು

ಕಂದಾಯ ಇಲಾಖೆ ಅಧಿಕಾರಿಗಳು, ಶಾಸಕ ಸುಧಾಕರ್ ವಿರುದ್ಧ ಆರೋಪ
Last Updated 20 ಜುಲೈ 2017, 6:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಕಲಿ ದಾಖಲೆಗಳನ್ನು ಸೃಷ್ಟಿಸಿದ ತಮಿಳುನಾಡು ಮೂಲದ ರಿಯಲ್‌ ಎಸ್ಟೆಟ್‌ ಉದ್ಯಮಿ ಕನ್ನಯ್ಯ ಬಿನ್‌ ಅಯ್ಯಸ್ವಾಮಿ ಎಂಬುವರಿಗೆ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ಯರ್ರಮಾರೇನಹಳ್ಳಿ ಗ್ರಾಮದ ಸರ್ವೇ ನಂಬರ್‌ 40ರಲ್ಲಿರುವ 4 ಎಕರೆ 7 ಗುಂಟೆ ಜಮೀನನ್ನು ಬಗರ್‌ ಹುಕುಂ ಯೋಜನೆಯಡಿ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಮೇತ ಮಾತನಾಡಿದ ಅವರು, ‘ಕನ್ನಯ್ಯ ಅವರು ಯರ್ರಮಾರೇನಹಳ್ಳಿಯಲ್ಲಿ 2004–05ರಲ್ಲಿ 11 ಎಕರೆ 37 ಗುಂಟೆ ಭೂಮಿ ಖರೀದಿಸಿದ್ದರು. ಅದನ್ನು ಕೆಲ ವರ್ಷಗಳ ಹಿಂದಷ್ಟೇ ಸುಮಾರು ₹ 2.50 ಕೋಟಿಗೆ ಮಾರಾಟ ಮಾಡಿದ್ದರು. ಬಳಿಕ ಆ ಜಮೀನಿಗೆ ಹೊಂದಿಕೊಂಡಿರುವ ಗೋಮಾಳದ ಜಾಗ ಕಬಳಿಸಲು ಸಂಚು ರೂಪಿಸಿ, ಅದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ದೂರಿದರು.

‘ಸರ್ವೇ ನಂಬರ್‌ 40 ರಲ್ಲಿ ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವುದಾಗಿ, ಸಾಗುವಳಿ ಚೀಟಿಗಾಗಿ 1998ರಲ್ಲಿಯೇ ಅರ್ಜಿ ಸಲ್ಲಿಸಿರುವಂತೆ, ವಾರ್ಷಿಕ ₹15 ಸಾವಿರ ಆದಾಯವುಳ್ಳ ಅತಿ ಸಣ್ಣ ರೈತ ಎಂಬುದಾಗಿ ಕನ್ನಯ್ಯ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಅವರು ತಾನು ಯರ್ರಮಾರೇನಹಳ್ಳಿಯ ನಿವಾಸಿ ಎಂದು ಹೇಳಿಕೊಂಡು 2015ರಲ್ಲಿ ಮತದಾರರ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

4 ಮಿಲಿ ಮೀಟರ್‌ ಅಂತರ!
‘ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪಡೆದ ದಾಖಲೆಗಳನ್ನು ಪರಿಶೀಲಿಸಿದಾಗ 1998ರಲ್ಲಿ ಸಾಗುವಳಿ ಹಕ್ಕುಪತ್ರಕ್ಕಾಗಿ ಪಡೆದ ಅರ್ಜಿಗಳ ನೋಂದಣಿ ಪುಸ್ತಕದಲ್ಲಿ ಪ್ರತಿ ಅರ್ಜಿದಾರರ ಹೆಸರಿನ ನಡುವೆ 10 ಮಿಲಿ ಮೀಟರ್‌ ಅಂತರವಿರುವುದು ಕಂಡುಬರುತ್ತದೆ. ಆದರೆ ಕನ್ನಯ್ಯ ಅವರ ಹೆಸರಿನ ಮೇಲೆ, ಕೆಳಗೆ ಕೇವಲ 4 ಮಿಲಿ ಮೀಟರ್‌ ಅಂತರವಿದೆ. ಇತ್ತೀಚೆಗಷ್ಟೇ ಅವರ ಹೆಸರನ್ನು ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

‘1998ರಲ್ಲಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎನ್ನುವ ನಮೂನೆ 53ರ ಅರ್ಜಿಯ ಸ್ವೀಕೃತಿಯ ಪ್ರತಿಯಲ್ಲಿ ಇಲಾಖೆ ಮೊಹರು, ಅರ್ಜಿ ಸ್ವೀಕರಿಸಿದ ಅಧಿಕಾರಿಗಳ ಸಹಿ ಇರುತ್ತದೆ. ಆದರೆ ಕನ್ನಯ್ಯ ಅವರ ಬಳಿ ಇರುವ ಅರ್ಜಿಯಲ್ಲಿ ಮೊಹರಾಗಲಿ, ಸಹಿಯಾಗಲಿ ಇಲ್ಲ. ಜಮೀನು ವಿಲೇವಾರಿ ವಿಚಾರಕ್ಕೆ ಅಭಿಪ್ರಾಯ ಪಡೆದಿದೆ ಎಂದು ದಾಖಲೆಗಳಲ್ಲಿ ತೋರಿಸಲಾದ ಗ್ರಾಮಸ್ಥರ ಸಹಿಗಳು ಕೂಡ ನಕಲಿಯಾಗಿವೆ’ ಎಂದು ಆಪಾದಿಸಿದರು.

‘ಇಷ್ಟೊಂದು ಅಕ್ರಮಗಳು ನಡೆದರೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಕಣ್ಮುಚ್ಚಿಕೊಂಡು ಇದ್ದಾರಾ? ಶಾಸಕರು ಮತ್ತು ಬಗರ್‌ ಹುಕುಂ ಸಮಿತಿ ಸದಸ್ಯರು ಸೇರಿ ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರಿಗೆ ಸರ್ಕಾರಿ ಭೂಮಿ ಮಂಜೂರು ಮಾಡುತ್ತಿದ್ದಾರೆ. ಇನ್ನೂ ಇಂತಹ ಎಷ್ಟು ಪ್ರಕರಣ ನಡೆದಿವೆಯೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ನಗರ ಅಪರಾಧ ವಿಭಾಗ (ಸಿಸಿಬಿ) ಮತ್ತು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ’ ಎಂದು ಹೇಳಿದರು.

**

ಮಂಜೂರಾತಿ ರದ್ದುಪಡಿಸಲು ಎಸಿಗೆ ಪತ್ರ
‘2016ರ ನವೆಂಬರ್‌ 23 ರಂದು ನಡೆದ ಬಗರ್‌ ಹುಕುಂ ಸಾಗುವಳಿ ಸಮಿತಿ ಸಭೆಯಲ್ಲಿ ಕನ್ನಯ್ಯ ಅವರಿಗೆ ಭೂಮಿ ಮಂಜೂರು ಮಾಡಲಾಗಿದೆ. ಆ ವೇಳೆ ನಾನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ’ ಎಂದು ತಹಶೀಲ್ದಾರ್ ನರಸಿಂಹಮೂರ್ತಿ ತಿಳಿಸಿದರು.

‘ಕಳೆದ ಮೇ 27 ರಂದು ಈ ಬಗ್ಗೆ ಸಿ. ಮೋಹನ್‌ ಕುಮಾರ್ ಎಂಬುವರು ದೂರು ನೀಡಿದ್ದರು. ತಕ್ಷಣ ಕಡತ ತರಿಸಿ ಪರಿಶೀಲನೆ ಮಾಡಿ, ಪುನಃ ಸ್ಥಳ ಪರಿಶೀಲನೆ ಮಾಡಬೇಕು ಎಂದು ಉಲ್ಲೇಖಿಸಿ ಆ ಕಡತ ಬಾಕಿ ಇಟ್ಟಿದ್ದೆ’ ಎಂದು ಹೇಳಿದರು.

‘ಕನ್ನಯ್ಯ ಅವರು ನಮ್ಮ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿಲ್ಲ. ಜತೆಗೆ ಅವರ ಬಳಿ ಅರ್ಜಿ ಸ್ವೀಕೃತಿ ಪ್ರತಿ ಇಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಗೊತ್ತಾಗಿದೆ. ಹೀಗಾಗಿ ಅವರ ಭೂಮಂಜೂರಾತಿಯನ್ನು ರದ್ದುಪಡಿಸುವಂತೆ ಉಪವಿಭಾಗಾಧಿಕಾರಿ ಅವರಿಗೆ ಪತ್ರ ಬರೆದಿರುವೆ’ ಎಂದರು.

**

ಬಡ ರೈತರಿಗೆ ಸೇರಬೇಕಾದ ಭೂಮಿಯನ್ನು ಕಾನೂನುಬಾಹಿರವಾಗಿ ಉದ್ಯಮಿಗೆ ನೀಡುವಲ್ಲಿ ಶಾಸಕರ ಕೈವಾಡ, ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರವಿದೆ.
-ಡಾ. ಜಿ.ವಿ. ಮಂಜುನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT