ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹುತಾತ್ಮ ದಿನ ನಾಳೆ

ಮಹದಾಯಿ ಯೋಜನೆ ಜಾರಿಗೆ ಮತ್ತೆ ಹೋರಾಟ
Last Updated 20 ಜುಲೈ 2017, 10:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವಲಗುಂದ, ನರಗುಂದ ಬಂಡಾಯದ ರೈತ ಹುತಾತ್ಮ ದಿನವನ್ನು ಪಕ್ಷದ ವತಿಯಿಂದ ಜುಲೈ 21ರಂದು ಆಚರಿಸಲು ಜೆ.ಡಿ.ಎಸ್‌. ನಿರ್ಧರಿಸಿದೆ.

‘ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ನರಗುಂದದಲ್ಲಿ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ನಂತರ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಸ್ಮಾರಕಕ್ಕೆ ನವಲಗುಂದದಲ್ಲಿ ಗೌರವ ಸಲ್ಲಿಸಿ ಅಲ್ಲಿಯೇ ಬೃಹತ್‌ ರೈತ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಹದಾಯಿ ಯೋಜನೆ ಜಾರಿಗೆ ನಮ್ಮ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸುತ್ತೇವೆ’ ಎಂದು  ಶಾಸಕ ಎನ್‌.ಎಚ್‌. ಕೋನರಡ್ಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಎಚ್‌. ವಿಶ್ವನಾಥ, ಅಲ್ಕೋಡ ಹನುಮಂತಪ್ಪ, ರಾಜ್ಯ ಜೆ.ಡಿ.ಎಸ್‌.ನ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಶಾಸಕ ಬಿ.ಬಿ. ನಿಂಗಯ್ಯ ಸೇರಿದಂತೆ ಹಲವು ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

‘ಮಹದಾಯಿ ಯೋಜನೆ ಜಾರಿಗೆ ನಿರಂತರವಾಗಿ ಹೋರಾಟ ನಡೆಸಿದರೂ ಸ್ಪಂದಿಸುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಅನೇಕ ಸಂಘಸಂಸ್ಥೆಗಳು ಪ್ರತಿಭಟನೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸುತ್ತಿಲ್ಲ’ ಎಂದು ಅವರು ದೂರಿದರು. ನರಗುಂದದಲ್ಲಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವಿರೇಶ ಸೊಬರದಮಠ ಆರಂಭಿಸಿರುವ ಅಮರಣಾಂತ ಉಪವಾಸಕ್ಕೆ ನಮ್ಮ ಬೆಂಬಲವಿದೆ ಎಂದರು.

ಅಸಮಾಧಾನ: ‘ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ ಎಂದು ನ್ಯಾಯಾಧೀಕರಣ ಹೇಳಿದ್ದರೂ ಗೋವಾ ಅನಗತ್ಯವಾಗಿ ತಕರಾರು ತೆಗೆಯುತ್ತಿದೆ.  ಕರ್ನಾಟಕ ‘ಡಬಲ್‌ ಗೇಮ್‌’ ಆಡುತ್ತಿದೆ ಎಂದು ಗೋವಾ ನೀರಾವರಿ ಸಚಿವ ವಿನೋದ ಪಾಳ್ಯೇಕರ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕ ಮತ್ತು ಮಹಾರಾಷ್ಟ್ರ ಮಾತುಕತೆ ಮೂಲಕ ವಿವಾದ ಪರಿಹರಿಸಿಕೊಳ್ಳಲು ಸಿದ್ಧವಿದ್ದರೂ ಗೋವಾ ಮುಂದೆ ಬರುತ್ತಿಲ್ಲ. ಈ ವಿಷಯದಲ್ಲಿಯೂ ಗೋವಾ ರಾಜಕೀಯ ಮಾಡುತ್ತಿದೆ. ಆದರೂ ರಾಜ್ಯದ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ. ಆ ಪಕ್ಷದ ನಾಯಕರಿಗೆ ರಾಜ್ಯದ ಹಿತಾಸಕ್ತಿ ಬೇಕಾಗಿಯೇ ಇಲ್ಲ’ ಎಂದು ಟೀಕಿಸಿದರು.

23ರಂದು ಕುಮಾರಪಥ: ಹಿಂದೆ ಬೆಂಗಳೂರಿನಲ್ಲಿ ನಡೆದ ಮಾದರಿಯಲ್ಲಿಯೇ ಜುಲೈ 23ರಂದು ಧಾರವಾಡದ ಸನ್ನಿಧಿ ಕಲಾಕ್ಷೇತ್ರದಲ್ಲಿ ಕುಮಾರಪಥ ಕಾರ್ಯಕ್ರಮ ನಡೆಸಲು ಪಕ್ಷ ನಿರ್ಧರಿಸಿದೆ.

‘ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿರುವ ಕುಮಾರಪಥ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು, ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ಮಹದಾಯಿ ವಿಚಾರ, ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಕೋನರಡ್ಡಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT