ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನದ ದಾರಿಯಲ್ಲಿ ಹರಿಪ್ರಿಯಾ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಇಷ್ಟು ವರ್ಷಗಳ ಬಣ್ಣದ ಬದುಕಿನಲ್ಲಿ ಯಾವತ್ತಾದ್ರೂ ‘ಈ ಸಿನಿಮಾ ಸಹವಾಸವೇ ಸಾಕಪ್ಪಾ’ ಅನಿಸಿದ್ಯಾ?
ಮೊದಲಿಗೇ ಎದುರಾದ ಈ ಪ್ರಶ್ನೆಗೆ ಕಿಂಚಿತ್ತು ತಡವರಿಸದೆ ‘ತುಂಬ ಸಲ ಹಾಗೆ ಅನಿಸಿದೆ’ ಎಂದರು ಹರಿಪ್ರಿಯಾ. ನಂತರ ಸ್ವಲ್ಪ ತಡೆದು ಧ್ವನಿಯಲ್ಲಿ ಇನ್ನಷ್ಟು ಆರ್ದ್ರಭಾವ ತುಂಬಿಕೊಂಡು ‘ಯಾರ್‍ ಯಾರ ಜತೆಗೋ ಸಂಬಂಧ ಕಲ್ಪಿಸಿ ಗಾಳಿಸುದ್ದಿ ಹಬ್ಬಿಸುತ್ತಾರೆ.

ನನ್ನ ಯೋಚನೆಯ ಅಂಚಿನಲ್ಲಿಯೂ ಹೊಳೆದಿರದ ವ್ಯಕ್ತಿಯೊಂದಿಗೆ ಸಂಬಂಧ ಕಲ್ಪಿಸಿ ಬರೆದ ಏಕಮುಖ ಗಾಸಿಪ್‌ ಸುದ್ದಿಗಳನ್ನು ಕೆಲವು ಪತ್ರಿಕೆಗಳಲ್ಲಿ ಓದಬೇಕಾಗಿ ಬಂದಾಗ ಮನಸ್ಸಿಗೆ ನೋವಾಗಿ ‘ಎಲ್ಲವೂ ಸಾಕು’ ಅನಿಸಿದ್ದಿದೆ. ಹೆಣ್ಣುಮಕ್ಕಳ ಬದುಕಿನಲ್ಲಿ ಇಂಥವೆಲ್ಲ ಜೀವನಪರ್ಯಂತ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತಲ್ವಾ’ ಎಂದು ಮರುಪ್ರಶ್ನಿಸಿ ಸುಮ್ಮನಾದರು.

ಆ ಮೌನದಲ್ಲಿ ಅವರ ಮನಸ್ಸಿಗಾದ ಗಾಯದ ನೋವಿನ ಕಂಪನಗಳಿದ್ದವು. ತಪ್ಪಿಲ್ಲದೇ ಕಿರಿಕಿರಿ ಅನುಭವಿಸಬೇಕಾದ ಪರಿಸ್ಥಿತಿಯ ಬಗ್ಗೆ ಬೇಸರವಿತ್ತು. ಹಿಂದೆ ಮುಂದೆ ಯೋಚಿಸದೆ, ಖಚಿತಪಡಿಸಿಕೊಳ್ಳದೆ ಕಿವಿಗೆ ಬಿದ್ದ ಸುದ್ದಿಗಳನ್ನೆಲ್ಲ ಬಿತ್ತರಿಸುವ ಮಾಧ್ಯಮಗಳ ಬಗ್ಗೆ ಕೊಂಚ ಕೋಪವೂ ಇದ್ದಂತಿತ್ತು.  ‌

ಅರೆಕ್ಷಣದಲ್ಲಿಯೇ ಆ ಮೌನವನ್ನು ಮುರಿದ ಅವರು ‘‘ಈ ಕ್ಷೇತ್ರ ನನಗೆ ಕೊಟ್ಟ ನೋವು ಸಣ್ಣದು. ಖುಷಿಯ ದಿನಗಳೇ ದೊಡ್ಡವು. ಯಾರೋ ಗುರ್ತು ಪರಿಚಯವೇ ಇಲ್ಲದವರು ಸಿಕ್ಕು ಕೈ ಹಿಡಿದುಕೊಂಡು ‘ನೀನು ನನ್ನ ಮಗಳ ಹಾಗೆ’ ಎನ್ನುವಾಗ, ಇನ್ಯಾರೋ ನನ್ನ ನಟನೆಯನ್ನು ಆರಾಧಿಸುವಾಗ, ಮೆಚ್ಚಿಕೊಂಡು ಮಾತಾಡುವಾಗ ನಟನೆಯನ್ನು ಆಯ್ದುಕೊಂಡಿದ್ದಕ್ಕೂ ಸಾರ್ಥಕವಾಯ್ತು ಅನಿಸುತ್ತದೆ’’ ಎನ್ನುತ್ತಾ ಮುಖದಲ್ಲಿ ನಗು ತುಂಬಿಸಿಕೊಂಡು ಮಾತು ಹೊರಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಹುಟ್ಟಿ ಬೆಳೆದ ಹುಡುಗಿ ಹರಿಪ್ರಿಯಾ ತುಂಬ ಚಿಕ್ಕವರಾಗಿದ್ದಾಗಿನಿಂದಲೂ ನೃತ್ಯಪ್ರಿಯೆ. ಭರತನಾಟ್ಯದ ಹೆಜ್ಜೆ–ಗೆಜ್ಜೆಗಳು ಅಂತರಂಗದಲ್ಲಿ ಅನುರಣಿಸುತ್ತಲೇ ಬೆಳೆದ ಅವರಿಗೆ ವೇದಿಕೆ ಎಂದರೆ ಭಯ ಹುಟ್ಟಿಸುವ ಸ್ಥಳ ಆಗಿರಲೇ ಇಲ್ಲ. ಆದರೆ, ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಂತೂ ಅವರಲ್ಲಿ ಇರಲೇ ಇಲ್ಲ.

ಮನೆಯವರೆಲ್ಲರಿಗೂ ಈ ಹುಡುಗಿ ಡಾಕ್ಟರ್‌ ಆಗಬೇಕು ಎಂಬ ಆಸೆ. ಅದು ಅವರ ಆಸೆಯೂ ಆಗಿತ್ತು. ಆದರೆ, ಡಾಕ್ಟರ್‌ ಆಗುವ ಆಸೆಯ ದಾರಿ ಗೊತ್ತಿಲ್ಲದೆಯೇ ಪಡೆದುಕೊಂಡ ತಿರುವು ಅವರನ್ನು ನಟಿಯಾಗಿಸಿದೆ.

‘ಬಡಿ’ ಎಂಬ ತುಳು ಚಿತ್ರಕ್ಕೆ ಬಣ್ಣಹಚ್ಚಿ ಕ್ಯಾಮೆರಾ ಮುಂದೆ ನಿಂತಾಗ ಅವರಿನ್ನೂ ಹದಿನಾರರ ಬಾಲೆ. ಆ ಸಿನಿಮಾ ಒಪ್ಪಿಕೊಂಡಾಗಲೂ ಈ ಕ್ಷೇತ್ರದಲ್ಲಿಯೇ ಮುಂದುವರಿ ಯುವ ಉದ್ದೇಶ ಇರಲಿಲ್ಲ. ಹಾಗೆ ನಿರ್ಧರಿಸುವ ವಯಸ್ಸೂ ಅವರದಾಗಿರಲಿಲ್ಲ. ಆ ತುಳು ಸಿನಿಮಾ ಅವರಿಗೆ ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಲ್ಪಿಸಿತು. ಅವುಗಳನ್ನೂ ತೆರೆಯ ಮೇಲೆ ಕಾಣಿಸಿಕೊಳ್ಳಬಹುದು ಎಂಬ ಸಣ್ಣ ಖುಷಿಯ ಕಾರಣದಿಂದ ಒಪ್ಪಿಕೊಂಡಿದ್ದೇ ವಿನಾ ಅದಕ್ಕಿಂತ ಹೆಚ್ಚಿನ ತಿಳಿವಳಿಕೆ ಅವರಲ್ಲಿ ಇರಲಿಲ್ಲ.

ಸಿನಿಮಾ ತನ್ನ ಬದುಕಿನ ಆಯ್ಕೆ ಆಗಬಲ್ಲದು ಎಂಬುದು ಅವರಿಗೆ ಗಂಭೀರವಾಗಿ ಅನಿಸಿದ್ದು ‘ಕಳ್ಳರ ಸಂತೆ’ ಸಿನಿಮಾದಲ್ಲಿ. ‘ಸುಮನ್‌ ಕಿತ್ತೂರು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ನಟಿಸಿದ ಮೇಲೆ ಒಂದು ಒಳ್ಳೆಯ ಪಾತ್ರ ನಿರ್ವಹಿಸಿದ ಮೇಲೆ ಸಿಗುವ ತೃಪ್ತಿ; ಜನರು ನಮ್ಮನ್ನು ಒಂದು ಪಾತ್ರದ ಮೂಲಕವೇ ಗುರ್ತಿಸುವಾಗ ಸಿಗುವ ಖುಷಿ ಎಲ್ಲವೂ ಅರ್ಥ ಆಗುತ್ತಾ ಹೋಯ್ತು. ನಟನೆಯ ಮೇಲೆ ಗಂಭೀರವಾಗಿ ಆಸಕ್ತಿ ಹುಟ್ಟಲು ಶುರುವಾಗಿದ್ದು ಆಗಿನಿಂದಲೇ. ನಿರಂತರವಾಗಿ ಸಿನಿಮಾಗಳನ್ನು ನೋಡಲು ಶುರುಮಾಡಿದೆ.

ಆ ಸಿನಿಮಾಗಳಲ್ಲಿನ ಪಾತ್ರಗಳನ್ನು ನೋಡಿ ನಾನೂ ಇಂಥ ಪಾತ್ರಗಳಲ್ಲೆಲ್ಲ ನಟಿಸಬೇಕು ಎಂಬ ಆಸೆ ಹುಟ್ಟತೊಡಗಿತು. ಪಾತ್ರಗಳ ಗಟ್ಟಿತನ, ಸಿನಿಮಾಗಳ ಆಯ್ಕೆಗಳ ಬಗ್ಗೆಯೆಲ್ಲ ಆಳವಾಗಿ ಯೋಚಿಸಲು ಶುರುಮಾಡಿದೆ’ ಎಂದು ಅವರು, ಬಣ್ಣದ ಜಗತ್ತಿನ ಮೇಲುಮುಖದ ಆಕರ್ಷಣೆಯನ್ನು ದಾಟಿಕೊಳ್ಳಲು ಪ್ರೇರಕವಾದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಪೂರಕವಾಗಿ ಅವರಿಗೆ ಕನ್ನಡವಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶಗಳು ದೊರಕುತ್ತ ಹೋದವು.

ಪಿಯುಸಿ ದ್ವಿತೀಯ ವರ್ಷದಲ್ಲಿದ್ದಾಗ ಸಿನಿಮಾವೋ ಅಥವಾ ಕಾಲೇಜೋ ಎಂಬ ‘ಆಯ್ಕೆ’ ಎದುರಾದಾಗ ಅವರು ವಾಲಿದ್ದು ಚಿತ್ರಜಗತ್ತಿನ ಕಡೆಗೆ. ಪರಿಣಾಮವಾಗಿ ವಿದ್ಯಾಭ್ಯಾಸಕ್ಕೆ ಎಳ್ಳು ನೀರು ಬಿಟ್ಟು, ಸಿನಿಮಾರಂಗವನ್ನೇ ಪಾಠಶಾಲೆಯನ್ನಾಗಿಸಿಕೊಂಡು ಮುಂದುವರಿದರು.
‘ಮೊದಲೇ ಸಿದ್ಧತೆ ಮಾಡಿಕೊಂಡು ಸಿನಿಮಾ ರಂಗಕ್ಕೆ ಬಂದಿದ್ದರೆ ಅಥವಾ ಯಾರಾದರೂ ಹೇಳಿಕೊಟ್ಟು ನಡೆಸುವವರು ಇದ್ದಿದ್ದರೆ ಬಹುಶಃ ನನಗೆ ಇಷ್ಟು ಚೆನ್ನಾಗಿ ಎಲ್ಲವೂ ಅರ್ಥವಾಗುತ್ತಿರಲಿಲ್ಲ. ನನಗೆ ನಾನೇ ಹೇಳಿಕೊಳ್ಳುತ್ತ, ಅನುಭವವನ್ನೇ ಗುರುವಾಗಿ ಸ್ವೀಕರಿಸಿ ಮುಂದುವರಿಯುತ್ತಿರುವುದರಿಂದಲೇ ನನಗೆ ಹಲವು ಹೊಸ ಪಾಠಗಳು ಮನನವಾಗಿವೆ. ಹೊಸ ಹೊಸ ರೀತಿಯ ಅನುಭವಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿವೆ’ ಎನ್ನುವ ಹರಿಪ್ರಿಯಾ ಅವರ ವೃತ್ತಿಜೀವನದಲ್ಲಿ ಸಿಕ್ಕ ಎಲ್ಲ ಸಿನಿಮಾಗಳೂ ಒಂದೊಂದು ಕಲಿಕೆಯ ಅಧ್ಯಾಯಗಳಂತೆಯೇ ಕಂಡಿವೆ.

ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ಪ್ರತಿಭಾವಂತ ನಟ– ನಿರ್ದೇಶಕರು, ಕನ್ನಡದಲ್ಲಿಯೂ ಶಿವರಾಜ್‌ಕುಮಾರ್‌, ಯಶ್‌, ಸುದೀಪ್‌, ಜಗ್ಗೇಶ್‌ ಅವರಂಥ ಘಟಾನುಘಟಿಗಳ ಜತೆ ನಟಿಸಲು ಅವಕಾಶ ಸಿಕ್ಕಿದ್ದೂ ಅವರೊಳಗಿನ ಅಭಿನೇತ್ರಿಯನ್ನು ತಿದ್ದಿವೆ. ಇಷ್ಟೆಲ್ಲ ಖುಷಿಯ ಅಲೆಯ ಮೊರೆತದಲ್ಲಿಯೂ ಆಗಾಗ ತಾವು ಮಿಸ್‌ ಮಾಡಿಕೊಂಡ ಕಾಲೇಜು ದಿನಗಳ ಮರ್ಮರ ಅವರನ್ನು ಕಾಡುವುದಿದೆ. ಯಾವುದೋ ಕಾಲೇಜು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ಅಲ್ಲಿನ ವಿದ್ಯಾರ್ಥಿಗಳ ಸಂಭ್ರಮವನ್ನು ನೋಡಿ ನಾನೂ ಆ ಗುಂಪಿನಲ್ಲಿ ಒಬ್ಬಳಾಗುವ ಸಾಧ್ಯತೆ ಮುಗಿದುಯೋಯ್ತಲ್ಲ ಎಂದು ಸಣ್ಣ ವಿಷಾದದ ಎಳೆಯೊಂದು ಮನಸ್ಸಲ್ಲಿ ಎದ್ದು ತಣ್ಣಗಾಗುತ್ತದೆ.

ಎಷ್ಟೆಲ್ಲ ಸಿನಿಮಾಗಳನ್ನು ಮಾಡಿದ್ದರೂ, ಅವರ ಅಭಿನಯವನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದರೂ ಹರಿಪ್ರಿಯಾ ಅವರನ್ನು ಪೂರ್ತಿ ಭಿನ್ನವಾಗಿ ತೋರಿಸಿದ ಸಿನಿಮಾ ವಿಜಯ್‌ಪ್ರಸಾದ್‌ ನಿರ್ದೇಶನದ ‘ನೀರ್‌ ದೊಸೆ’. ಈ ಸಿನಿಮಾದ ಕುಮುದಾ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಆದರೆ, ‘ಮತ್ತೆ ಅಂಥದ್ದೊಂದು ಪಾತ್ರದಲ್ಲಿ ನಾನು ನಟಿಸಲು ಬಯಸುವುದಿಲ್ಲ’ ಎಂದು ತುಂಬ ಖಚಿತವಾಗಿ ಹೇಳುತ್ತಾರೆ ಅವರು. ‘ಕಾಲ್‌ ಗರ್ಲ್‌, ನಕ್ಸಲೈಟ್‌ ಇಂಥ ಪಾತ್ರಗಳನ್ನೆಲ್ಲ ಒಬ್ಬ ನಟಿ ಒಮ್ಮೆ ಮಾತ್ರ ಮಾಡಲು ಸಾಧ್ಯ. ಪದೇ ಪದೇ ಅವನ್ನೇ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ’ ಎಂಬುದು ಅವರ ನಿಲುವು.

‘ನೀರ್‌ ದೋಸೆ’ ಈ ಸಿನಿಮಾದಲ್ಲಿ ನಟಿಸುವುದರ ಬಗ್ಗೆ ಅವರಿಗೆ ಹಿಂಜರಿಕೆ ಇತ್ತಂತೆ. ಆದರೆ ಒಬ್ಬ ನಟಿಯಾಗಿ ಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ಅಗತ್ಯ ಎಂಬ ಕಾರಣಕ್ಕೆ ಒಪ್ಪಿಕೊಂಡರು. ಪ್ರತಿದಿನ ಚಿತ್ರೀಕರಣ ಮುಗಿಸಿ ಮನೆಗೆ ಬರುವಾಗಲೂ ‘ಈ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆನಾ’ ಎಂಬ ಕಳವಳವೂ ಅವರನ್ನು ಕಾಡುತ್ತಿತ್ತು.

ಆದರೆ, ಆ ಸಿನಿಮಾ ತೆರೆಕಂಡು ಆ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದನ್ನು ನೋಡಿ ಅವರೆಲ್ಲ ಆತಂಕಗಳು ಕರಗಿವೆ. ಹಾಗಿದ್ದೂ ಇಂದಿಗೂ ಅವರು ತಮ್ಮನ್ನು ತಾವು ಸಾಂಪ್ರದಾಯಿಕ ಪಾತ್ರಗಳಲ್ಲಿಯೇ ನೋಡಲು ಇಷ್ಟಪಡುತ್ತಾರೆ. ಆದರೆ, ಒಂದು ಸಿನಿಮಾ ಹಿಟ್‌ ಆದ ಮೇಲೆ ಅದೇ ರೀತಿಯ ಪಾತ್ರಗಳು ಅರಸಿಕೊಂಡು ಬರುವುದು ಗಾಂಧಿನಗರದಲ್ಲಿ ಸರ್ವೇ ಸಾಮಾನ್ಯ. ಹರಿಪ್ರಿಯಾ ಅವರಿಗೂ ಇದೇ ಸಂದರ್ಭ ಎದುರಾಯಿತು. ಆದ್ದರಿಂದಲೇ ಅವರು ನೀರ್‌ ದೋಸೆ ನಂತರ ಮೂರು ತಿಂಗಳು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ನಂತರ ಭಿನ್ನ ರೀತಿಯ ಅವಕಾಶಗಳು ಅರಸಿಕೊಂಡು ಬಂದ ಮೇಲೆಯೇ ಅವರು ಸಿನಿಮಾ ಒಪ್ಪಿಕೊಂಡಿದ್ದು.

ಈಗ ಅವರು ‘ಭರ್ಜರಿ’, ‘ಕಥಾಸಂಗಮ’, ‘ಕನಕ’, ’ಸಂಹಾರ’ ಹಲವು ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಭಿನ್ನ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಮಹಾಭಾರತ ಕಥೆಯನ್ನು ಆಧರಿಸಿದ ‘ಕುರುಕ್ಷೇತ್ರ’ ಸಿನಿಮಾದಲ್ಲಿಯೂ ಪೌರಾಣಿಕ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸುಮ್ಮನೆ ಎರಡು ಹಾಡು ಮೂರು ದೃಶ್ಯಗಳಲ್ಲಿ ನಟಿಸಿ ಹೋಗುವ ಪಾತ್ರಗಳಲ್ಲಿ ನಟಿಸುವುದು ಅವರಿಗೆ ಸುತಾರಾಂ ಇಷ್ಟವಿಲ್ಲ. ನೋಡುಗರ ಮನಸಲ್ಲಿ ಉಳಿಯುವ ಪಾತ್ರಗಳಾಗಬೇಕು ಎನ್ನುವುದೇ ಅವರು ಸಿನಿಮಾ ಒಪ್ಪಿಕೊಳ್ಳುವಾಗ ಅನುಸರಿಸುವ ಬಹುಮುಖ್ಯ ಮಾನದಂಡ.

ಸಿನಿಮಾಕ್ಕೆ ಬಂದ ಮೇಲೆ ಹರಿಪ್ರಿಯಾ ಅವರ ಗುಣಸ್ವಭಾವಗಳೇನೂ ಬದಲಾಗಿಲ್ಲ. ಹೊಸದನ್ನು ಕಲಿಯುವ ಉತ್ಸಾಹ, ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಬದ್ಧತೆ ಎರಡೂ ಅವರಲ್ಲಿ ಇಂದಿಗೂ ಇದೆ. ‘ಈ ಗುಣಗಳೇ ನನ್ನ ವೃತ್ತಿಜೀವನದ ನಾಳೆಗಳನ್ನು ಹೆಚ್ಚು ಶ್ರೀಮಂತಗೊಳಿಸುತ್ತದೆ’ ಎಂಬ ಅಂತರಂಗದ ದೀಪದ ಬೆಳಕಿನಲ್ಲಿ ಅವರು ಭವಿಷ್ಯದ ಕನಸನ್ನು ನೇಯುತ್ತಿದ್ದಾರೆ.


ಚಿತ್ರ: ಪ್ರಾಣ್‌ ಉದಿಯಾನಾ | ವಸ್ತ್ರ ವಿನ್ಯಾಸ: ಜಯಂತಿ ಬಲ್ಲಾಳ್‌
ಅಲಂಕಾರ: ಸಬಿತ್‌ ಮತ್ತು ಸೋಬರ್‌ | ಸ್ಟೈಲಿಸ್ಟ್‌: ಸ್ನೇಹಾಲ್‌ ಇಗೂರ್‌

***

ನಟನೆ ಎಂಬ ಜಬಾವ್ದಾರಿ

‘ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ ಕೆಲವರು ಮಾತ್ರ ಅದನ್ನು ನೋಡುತ್ತಾರೆ. ಆದರೆ ನಟನೆ ಹಾಗಲ್ಲ. ಅದು ಒಂದು ರೀತಿಯ ತೆರೆದ ಪುಸ್ತಕ. ಅದನ್ನು ಎಲ್ಲರೂ ನೋಡುತ್ತಾರೆ. ನಮ್ಮ ಪ್ರತಿಭೆ ಏನು, ನಾವು ಏನು ಮಾಡಿದ್ದೇವೆ ಎನ್ನುವುದು ಆ ಕ್ಷಣದಲ್ಲಿ ಪರದೆಯ ಮೇಲೆ ಕಾಣುತ್ತದೆ. ಫಲಿತಾಂಶವೂ ಬರುತ್ತಿರುತ್ತದೆ.

ನಮ್ಮದಲ್ಲದ ಇನ್ನೊಂದು ಪಾತ್ರವನ್ನು ನಾವು ಅಭಿನಯಿಸುವುದು ನಿಜಕ್ಕೂ ಜಬಾವ್ದಾರಿಯ ಕೆಲಸ. ಅದಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ನಮ್ಮ ದೇಹ, ಮನಸ್ಸು, ಹೊರನೋಟ ಎಲ್ಲವನ್ನೂ ಅದಕ್ಕೆ ಒಗ್ಗಿಸಿಕೊಳ್ಳಬೇಕು. ನಂತರ ಆ ಪಾತ್ರದ ಮನಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ಜೀವತುಂಬಬೇಕು. ನೋಡಿದವರಿಗೆ ಇದು ಆ್ಯಕ್ಟಿಂಗ್‌ ಅನಿಸಿದರೆ ನಾವು ಸೋತ ಹಾಗೆಯೇ. ಆದ್ದರಿಂದ ನನ್ನ ಪ್ರಕಾರ ಪ್ರಜ್ಞಾಪೂರ್ವಕವಾಗಿ ನಟಿಸದಿರುವುದೇ ಒಳ್ಳೆಯ ನಟನೆ.

ಆರಂಭದಲ್ಲಿ ನಾನು ದೊಡ್ಡ ದೊಡ್ಡ ನಟರ ಎದುರು ನಟಿಸಲುವಾಗ ನರ್ವಸ್‌ ಆಗ್ತಿದ್ದೆ. ಆಗ ಹಿರಿಯರೊಬ್ಬರು ಹೇಳಿದ ಮಾತು; ‘ಅವರು ಎಷ್ಟೇ ದೊಡ್ಡ ಕಲಾವಿದ ಆಗಿರಬಹುದು. ಆದರೆ ಕ್ಯಾಮೆರಾ ಎದುರು ಅವರೊಂದು ಪಾತ್ರ, ನೀನೊಂದು ಪಾತ್ರ ಅಷ್ಟೆ. ನಾನು ಅವರಿಗಿಂತ ಚೆನ್ನಾಗಿ ನಟಿಸುತ್ತೇನೆ. ಅದನ್ನು ಅವರೂ ಮೆಚ್ಚಿಕೊಳ್ಳುತ್ತಾರೆ ಎಂದು ನಂಬಿಕೊಂಡು ನಟಿಸು.’ ಇದು ನನ್ನ ಅಭಿನಯ ಬದುಕನ್ನೇ ಬದಲಿಸಿದ ಮಾತು. ಇಂದಿಗೂ ಆ ಮಾತನ್ನೇ ನೆನಪಿಸಿಕೊಂಡು ನಾನು ಕ್ಯಾಮೆರಾ ಎದುರು ಹೋಗುತ್ತೇನೆ’

***

ನಾನು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಹೋಗುತ್ತಿರುವವಳು. ನನ್ನ ವೃತ್ತಿಬದುಕಿನಲ್ಲಿ ದೊಡ್ಡ ಏರಿಳಿತಗಳು ಇಲ್ಲ. ಆದರೆ ನಿಧಾನಕ್ಕೆ ಎಲ್ಲವನ್ನೂ ಕಲಿಯುತ್ತಾ ಮೇಲೇರುತ್ತಿದ್ದೇನೆ. ಗುರಿ ಇನ್ನೂ ದೂರವಿದೆ. ಸಾಗುತ್ತಿರುವ ಖುಷಿ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT