ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಸಂಕ್ಷಿಪ್ತ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

‘ಸರ್ವಸ್ಯ ನಾಟ್ಯಂ’ ಬಹುತೇಕ ಪೂರ್ಣ

ನೃತ್ಯವೇ ಉಸಿರು ಎಂದುಕೊಂಡು ಮಕ್ಕಳಿಗೆ ನೃತ್ಯ ಹೇಳಿಕೊಡುತ್ತ ತನ್ನ ಜೀವನದಲ್ಲಿ ನಡೆದಿರುವ ಕಹಿ ಘಟನೆಯನ್ನು ಮರೆಯಲು ಜೀವನ ಮಾಡುತ್ತಿರುವ ನಾಯಕ ರಾಜ, ತನ್ನ ನೃತ್ಯ ಶಾಲೆಯ ಮಕ್ಕಳನ್ನು ರಾಜ್ಯಮಟ್ಟದ ಡಾನ್ಸ್ ಸ್ಪರ್ಧೆಗೆ ಕರೆದುಕೊಂಡು ಹೋಗುವನು. ಪ್ರತಿಭೆ ಮತ್ತು ಪ್ರದರ್ಶನ ಎಲ್ಲವೂ ಸರಿ ಇದ್ದರು ವಿರೋಧಿ ಜೇಮ್ಸ್‌ನ ಅನ್ಯಾಯಕ್ಕೆ ಬಲಿಯಾಗಿ ರಾಜನ ತಂಡ ಅಂತಿಮ ಹಂತದಲ್ಲಿ ಸೋಲುವುದು.

ಮನಸ್ಸಿಗೆ ಸಮಾಧಾನ ಆಗಲೆಂದು ಅನಾಥ ಮಕ್ಕಳಿಗೆ ಡಾನ್ಸ್ ಹೇಳಿಕೊಡಲು ಶುರು ಮಾಡುವನು. ಅದೇ ಸಂಧರ್ಭದಲ್ಲಿ ಆ ಮಕ್ಕಳನ್ನು ಸಣ್ಣ ಡಾನ್ಸ್ ಸ್ಪರ್ಧೆಗೆ ಕರೆದುಕೊಂಡು ಹೋಗಿ ಮಕ್ಕಳ ಅಶಿಸ್ತಿನಿಂದ ತಂಡ ಸೋತು ಮತ್ತೊಮ್ಮೆ ಜೇಮ್ಸ್‌ನಿಂದ ಅವಮಾನಕ್ಕೊಳಗಾಗುವನು. ಇದು ‘ಸರ್ವಸ್ಯ ನಾಟ್ಯಂ’ ಸಿನಿಮಾದ ಕತೆಯ ತಿರುಳು. ಈ ಚಿತ್ರ ಸದ್ಯ ಶೇ. 80ರಷ್ಟು ಚಿತ್ರೀಕರಣ ಮುಗಿದಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

ಈ ಚಿತ್ರವನ್ನು ಬಿ.ಎನ್. ಮಂಜುನಾಥ್ ನಿರ್ದೇಶಿಸಿದ್ದಾರೆ. ಮನೋಜ್ ವರ್ಮ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಂ.ಬಿ. ಹಳ್ಳಿಕಟ್ಟಿ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತವಿದೆ. ತಾರಾಗಣದಲ್ಲಿ ಋಷಿಕುಮಾರ ಸ್ವಾಮೀಜಿ, ಶಮ್ಯ, ಹರ್ಷ ಚೆಲುವರಾಜ್, ಮನೋಜ್ ವರ್ಮ, ಭಾಗವತರು, ವೆಂಕಟೇಶ್, ಸುಶೀಲ್, ರಾಮ್ ಸಂದೇಶ್, ಅಂಜು ಕಲಾಕೃಷ್ಣ, ಯಶ್ವಂತ್, ಕಿರಣ್, ಬಿಂದು ಚೌಧರಿ, ಯುಕ್ತಾ, ತೇಜಸ್ ಮಂಡಲ್ ಮತ್ತು ಅನ್ವಿತಾ ಇದ್ದಾರೆ.

‘ಡ್ರಾಮಾ ಜೂನಿಯರ್ಸ್-2’ ಶುರು

ಕನ್ನಡದ ಚಿಣ್ಣರನ್ನು ಕಿರುತೆರೆಗೆ ಕರೆದುತಂದ ರಿಯಾಲಿಟಿ ಷೋ ‘ಡ್ರಾಮಾ ಜೂನಿಯರ್ಸ್’ನ ಎರಡನೆಯ ಆವೃತ್ತಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ (ಜುಲೈ 22)ದಿಂದ ಆರಂಭವಾಗಲಿದೆ. ಹಿರಿಯ ನಟಿ ಲಕ್ಷ್ಮೀ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟ ವಿಜಯ್ ರಾಘವೇಂದ್ರ ಹಾಗೂ ಕಾರ್ಯಕ್ರಮದ ನಿರೂಪಕ ಮಾಸ್ಟರ್ ಆನಂದ್ ಅವರೂ ಮತ್ತೆ ‘ಡ್ರಾಮಾ ಜೂನಿಯರ್ಸ್’ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪುಟ್ಟ ಮಕ್ಕಳ ಚುರುಕಿನ ಮಾತುಗಳು, ಅವರ ಮುಗ್ಧ ನೋಟ, ಅವರಲ್ಲಿನ ಪ್ರತಿಭೆ, ದೊಡ್ಡವರನ್ನೂ ನಾಚಿಸುವ ನೆನಪಿನ ಶಕ್ತಿ... ಇವೇ ‘ಡ್ರಾಮಾ ಜೂನಿಯರ್ಸ್’ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದವು ಎನ್ನುತ್ತದೆ ಈ ಕಾರ್ಯಕ್ರಮವನ್ನು ರೂಪಿಸಿದ ತಂಡ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಲ್ಲಿ ಅನೇಕರು ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮೋಘಾ ‘ಕಾಫಿ ತೋಟ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಪುಟಾಣಿ ಚಿತ್ರಾಲಿ ‘ವಾರಸ್ದಾರ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾಳೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹತ್ತು ಜನ ಚಿಣ್ಣರು ‘ಎಳೆಯರು ನಾವು ಗೆಳೆಯರು’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ತಂಡ ಹೇಳಿಕೊಂಡಿದೆ.

ಎರಡನೇ ಆವೃತ್ತಿಗೆ ತಂಡವು ಮಂಗಳೂರು, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ, ರಾಯಚೂರು, ಚಿತ್ರದುರ್ಗ, ಮೈಸೂರು ಮತ್ತು ಬೆಂಗಳೂರಿನಲ್ಲಿ ಆಡಿಶನ್‍ ನಡೆಸಿತ್ತು. ಅದರಲ್ಲಿ ಭಾಗವಹಿಸಿದ್ದ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳ ಪೈಕಿ ಮೂವತ್ತು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ‘ಡ್ರಾಮಾ ಜೂನಿಯರ್ಸ್‌’ನ ಎರಡನೆಯ ಆವೃತ್ತಿಯು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಒಂದಾಯ್ತು ಜಗ್ಗೇಶ್-ವಿಜಯಪ್ರಸಾದ್ ಜೋಡಿ

‘ನೀರ್‌ದೋಸೆ’ ಚಿತ್ರದ ಜಗ್ಗೇಶ್ ಮತ್ತು ವಿಜಯಪ್ರಸಾದ್ ಜೋಡಿ ಮತ್ತೊಂದು ಚಿತ್ರದಲ್ಲಿ ಒಂದಾಗಿದೆ.

ಈ ಚಿತ್ರದ ಹೆಸರು ‘34-34 ಲೇಡೀಸ್ ಟೈಲರ್’. ಇದರ ಚಿತ್ರೀಕರಣ ಜುಲೈ 26ರಿಂದ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರದ ನಿರ್ಮಾಪಕರು ರವಿಚಂದ್ರ ರೆಡ್ಡಿ, ಕೃಷ್ಣಮೂರ್ತಿ ಮತ್ತು ಸನತ್ ಕುಮಾರ್. ಅನೂಪ್ ಸೀಳಿನ್ ಸಂಗೀತ, ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಮತ್ತು ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಮತ್ತು ವಿಜಯಪ್ರಸಾದ್ ಅವರು ಹಾಡುಗಳನ್ನು ಬರೆದಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಜವಾವ್ದಾರಿ ವಿಜಯಪ್ರಸಾದ್ ಅವರದ್ದು.

ಜಗ್ಗೇಶ್ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯ ಶೋಧ ನಡೆಯುತ್ತಿದೆ. ವೀಣಾ ಸುದಂರ್, ವೆಂಕಟರಾವ್ ಸೇರಿದಂತೆ ರಂಗಭೂಮಿಯ ಅನೇಕ ಕಲಾವಿದರು ‘34-34 ಲೇಡೀಸ್ ಟೈಲರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೈಸೂರು ಮತ್ತು ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳಲ್ಲಿ, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಬೇಕು ಎನ್ನುವುದು ಚಿತ್ರತಂಡದ ಉದ್ದೇಶ.

‘ಜಾಲಿ ಬಾರು ಮತ್ತು ಪೋಲಿ ಹುಡುಗರು’ ಟ್ರೇಲರ್ ಬಿಡುಗಡೆ

ಕಾರಂಜಿ ಶ್ರೀಧರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು’ ಎಂಬ ಪಕ್ಕಾ ಕಮರ್ಷಿಯಲ್ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ‘ಪವರ್ ಸ್ಟಾರ್’ ಪುನೀತ್ ರಾಜ್‍ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದರು. ‘ಈ ಸಿನಿಮಾ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡೋಕೆ ಬಹಳ ಖುಷಿಯಾಗುತ್ತಿದೆ. ಈಗಾಗಲೇ ನಾನು ಈ ಸಿನಿಮಾದ ಎರಡು ಹಾಡುಗಳನ್ನು ನೋಡಿದ್ದೇನೆ. ಮೇಕಿಂಗ್ ಕೂಡ ಬಹಳ ಚೆನ್ನಾಗಿ ಬಂದಿದೆ’ ಎಂದು ಶುಭ ಹಾರೈಸಿದರು ಪುನೀತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT