ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣಗಳ ಹಿಂದಿ ಫಲಕಕ್ಕೆ ಮಸಿ

ಪ್ರತಿಭಟನೆ ನಡೆಸಿದ 12 ಕರವೇ ಕಾರ್ಯಕರ್ತರ ಬಂಧನ
Last Updated 20 ಜುಲೈ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೆಟ್ರೊ ನಿಲ್ದಾಣಗಳಲ್ಲಿ ಗುರುವಾರ ನಸುಕಿನ ಜಾವ ಪ್ರತಿಭಟನೆ ನಡೆಸಿದ ‘ಕರ್ನಾಟಕ ರಕ್ಷಣಾ ವೇದಿಕೆ’ (ನಾರಾಯಣಗೌಡ ಬಣ) ಕಾರ್ಯಕರ್ತರು, ಅಲ್ಲಿದ್ದ ಹಿಂದಿ ಫಲಕಗಳಿಗೆ ಮಸಿ ಬಳಿದರು.

ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನಗರದ 40 ಮೆಟ್ರೊ ನಿಲ್ದಾಣಗಳ ಬಳಿ ಪ್ರತ್ಯೇಕ ತಂಡಗಳಲ್ಲಿ ಬಂದಿದ್ದ ಕಾರ್ಯಕರ್ತರು, ಹಿಂದಿ ಹೇರಿಕೆಯ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ, ನಿಲ್ದಾಣದ ಹೊರಗೆ ಅಳವಡಿಸಿದ್ದ ಫಲಕಗಳಲ್ಲಿದ್ದ ಹಿಂದಿ ಅಕ್ಷರಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಅದನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿ ಜತೆ  ಮಾತಿನ ಚಕಮಕಿಯನ್ನೂ ನಡೆಸಿದರು.

12 ಕಾರ್ಯಕರ್ತರ ಬಂಧನ: ಕೆ.ಆರ್‌. ಮಾರುಕಟ್ಟೆ ನಿಲ್ದಾಣದ ಫಲಕಕ್ಕೆ ಮಸಿ ಬಳಿದಿದ್ದ ಕಾರ್ಯಕರ್ತರು, ನಿಲ್ದಾಣದ ಎದುರು ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಬಂದ ಕಲಾಸಿಪಾಳ್ಯ ಹಾಗೂ ಸಿಟಿ ಮಾರುಕಟ್ಟೆ ಠಾಣೆಯ ಪೊಲೀಸರು, 12 ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.

ಅವರೆಲ್ಲರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು, ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸಂಜೆ ವೇಳೆಗೆ ಜಾಮೀನಿನ ಮೇಲೆ  ಕಾರ್ಯಕರ್ತರು ಬಿಡುಗಡೆಗೊಂಡರು.

ಕರವೇ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ನಗರದ ಎಲ್ಲ ನಿಲ್ದಾಣಗಳಲ್ಲಿ ಗುರುವಾರ ರಾತ್ರಿಯವರೆಗೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಹೋರಾಟ ನಿರಂತರ: ಪ್ರತಿಭಟನೆ ಬಗ್ಗೆ ಮಾತನಾಡಿದ ಕರವೇ ಪ್ರಧಾನ ಕಾರ್ಯದರ್ಶಿ ಸಣ್ಣೆರಪ್ಪ, ‘ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮೆಟ್ರೊ ಸಂಚಾರ ಆರಂಭವಾಗುವ ಮುನ್ನವೇ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಯಲಿದೆ’ ಎಂದರು.

‘ಮೆಟ್ರೊ ರಾಜ್ಯ ಸರ್ಕಾರದ ಯೋಜನೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಅಷ್ಟಾದರೂ ಮೆಟ್ರೊದಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವುದು ಖಂಡನೀಯ’ ಎಂದು ಹೇಳಿದರು.

‘ಕೇಂದ್ರ ನಗರಾಭಿವೃದ್ಧಿ ಇಲಾಖೆಯ ನಿಯಮಾವಳಿ ಇರುವುದರಿಂದ ಹಿಂದಿ ಅಕ್ಷರ ಬರೆಸಿರುವುದಾಗಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ   ಹೇಳುತ್ತಿರುವುದಕ್ಕೆ ವಿರೋಧವಿದೆ.  ಅವರು ಕೂಡಲೇ ಎಚ್ಚೆತ್ತು ನಿಲ್ದಾಣಗಳಲ್ಲಿರುವ ಹಿಂದಿ ಫಲಕಗಳನ್ನು ತೆಗೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT