ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆಗೆ ಅಂಚೆ ಸೇವಕರ ಆಗ್ರಹ

Last Updated 20 ಜುಲೈ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮೀಣ ಅಂಚೆ ಸೇವಕರ ವೇತನ ಪರಿಷ್ಕರಣೆಗಾಗಿ ರಚಿಸಿದ್ದ ಸಮಿತಿ ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ವೇತನ ಪರಿಷ್ಕರಣೆ ಬಗ್ಗೆ ಅಧ್ಯಯನ ನಡೆಸಿದ್ದ ಕಮಲೇಶ್‌ ಚಂದ್ರ ನೇತೃತ್ವದ ಸಮಿತಿಯು ನ. 24ರಂದೇ ಕೇಂದ್ರಕ್ಕೆ ಸಲ್ಲಿಸಿದ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೇಟುಹಾಕುತ್ತಿರುವುದಕ್ಕೆ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ವಲಯ ಕಾರ್ಯದರ್ಶಿ ಕೆ.ಎಸ್‌.ರುದ್ರೇಶ್‌  ಮಾತನಾಡಿ, ‘ರಾಜ್ಯದಲ್ಲಿ 16,800  ಗ್ರಾಮೀಣ ಅಂಚೆ ಸೇವಕರು ಕೆಲಸ ಮಾಡುತ್ತಿದ್ದಾರೆ. 3–4 ಗಂಟೆಗಳ ಕೆಲಸಕ್ಕೆಂದು ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಪ್ರತಿದಿನ 8 ಗಂಟೆಗಳವರೆಗೆ ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ, ಅವರನ್ನು ಪೂರ್ಣಾವಧಿ ನೌಕರರು ಎಂದು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಮದ್ರಾಸ್ ಹಾಗೂ ದೆಹಲಿಯ ಕೇಂದ್ರ ಆಡಳಿತ ನ್ಯಾಯಾಧಿಕರಣವು ನೀಡಿರುವ ಆದೇಶದಂತೆ ಕೇಂದ್ರ ಸರ್ಕಾರದ ನೌಕರರಿಗೆ ಸಿಗುತ್ತಿರುವ ಸ್ಥಾನಮಾನವನ್ನು ಗ್ರಾಮೀಣ ಅಂಚೆ ಸೇವಕರಿಗೂ ನೀಡಬೇಕು’ ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರದಿದ್ದರೆ ಧರಣಿ: ಬೇಡಿಕೆಗಳನ್ನು ಆಗಸ್ಟ್ 15ರ ಒಳಗೆ ಕೇಂದ್ರ ಸರ್ಕಾರ ಈಡೇರಿಸದಿದ್ದರೆ ಮರುದಿನ ಜಿಲ್ಲಾ ಮಟ್ಟದಲ್ಲಿ ಹಾಗೂ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ಸಂಘದ ಮುಖಂಡರು ತೀರ್ಮಾನಿಸಿದರು.

ಇದಕ್ಕೂ ಮೊದಲು ಪೋಸ್ಟ್ ಮಾಸ್ಟರ್ ಜನರಲ್ (ದಕ್ಷಿಣ ಕರ್ನಾಟಕ) ಚಾರ್ಲ್ಸ್ ಲೋಬೊ ಅವರಿಗೆ ಧರಣಿನಿರತರು ಮನವಿ ಪತ್ರ ಸಲ್ಲಿಸಿದರು.

* 7ನೇ ವೇತನ ಆಯೋಗದಅನ್ವಯ ಕೇಂದ್ರ ಸರ್ಕಾರ ಗ್ರಾಮೀಣ ಅಂಚೆ ಸೇವಕರನ್ನು ಹೊರತುಪಡಿಸಿ ಉಳಿದೆಲ್ಲ ನೌಕರರ ಸಂಬಳ ಏರಿಕೆ ಮಾಡಿದೆ.  ಇದು ಸರಿಯಲ್ಲ.

-ಜಿ.ಶಂಕ್ರೇಗೌಡ, ಅಧ್ಯಕ್ಷ , ರಾಜ್ಯ   ಅಂಚೆ ಸೇವಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT