ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನ ರಕ್ಷಣೆಗೆ ಕಟಿಬದ್ಧ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು

Last Updated 21 ಜುಲೈ 2017, 19:47 IST
ಅಕ್ಷರ ಗಾತ್ರ

ನವದೆಹಲಿ: ವ್ಯಕ್ತಿಯ ವೈಯಕ್ತಿಕ ಮಾಹಿತಿ ವ್ಯಕ್ತಿತ್ವದ ಅವಿಭಾಜ್ಯ ಭಾಗವಾಗಿದೆ. ಅದನ್ನು ಉಲ್ಲಂಘಿಸುವ ಯಾವುದೇ ಒಪ್ಪಂದ ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.

‘ಮಾಹಿತಿ ಎಂಬುದು ವ್ಯಕ್ತಿತ್ವದ ವಿಸ್ತರಣೆ. ಅದು ಜೀವನದಲ್ಲಿ ವ್ಯಕ್ತಿಯ ಹೆಜ್ಜೆಗಳನ್ನು ಪ್ರತಿಫಲಿಸುತ್ತದೆ. ವ್ಯಕ್ತಿತ್ವ ಇಲ್ಲದ ವ್ಯಕ್ತಿ ಇರುವುದು ಸಾಧ್ಯವಿಲ್ಲ. ಮಾಹಿತಿಗೆ ಸಂಬಂಧಿಸಿದ ಯಾವುದೇ ಒಪ್ಪಂದ ವ್ಯಕ್ತಿಯ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಾದರೆ ಸರ್ಕಾರ ಮಧ್ಯಪ್ರವೇಶಿಸಲೇಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌. ನರಸಿಂಹ ಅವರು ಹೇಳಿದರು.

ವಾಟ್ಸ್‌ಆ್ಯಪ್‌ ಮಾಹಿತಿಯನ್ನು ಫೇಸ್‌ಬುಕ್‌ ಜತೆ ಹಂಚಿಕೊಳ್ಳುವ ಹೊಸ ಖಾಸಗಿತನ ನೀತಿಗೆ ಸಂಬಂಧಿಸಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಅವರು ಹೇಳಿಕೆ ನೀಡಿದರು.

ಮಾಹಿತಿಯ ರಕ್ಷಣೆಯನ್ನು ಖಚಿತಪಡಿಸಲು ಯಾವುದೇ ವ್ಯವಸ್ಥೆ ಇಲ್ಲ ಎಂದು ನ್ಯಾಯಪೀಠ ಭಾವಿಸುವುದಾದರೆ  ಮಧ್ಯಂತರ ಆದೇಶವನ್ನೂ ಹೊರಡಿಸಬಹುದು ಎಂದು ಸರ್ಕಾರ ತಿಳಿಸಿತು. ಮಾಹಿತಿ ಬಹಿರಂಗವಾಗುವುದನ್ನು ತಡೆಯಲು ನಿಯಂತ್ರಣ ವ್ಯವಸ್ಥೆ ಸ್ಥಾಪಿಸಲು ಸಿದ್ಧ ಎಂದೂ ತಿಳಿಸಿತು.

ಖಾಸಗಿತನ ಮೂಲಭೂತ ಹಕ್ಕೇ ಎಂಬ ಬಗ್ಗೆ ಒಂಬತ್ತು ನ್ಯಾಯಮೂರ್ತಿಗಳ ಬೇರೊಂದು ಪೀಠದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಜನರ ಮಾಹಿತಿಯ ರಕ್ಷಣೆಯ ಬಗ್ಗೆ ಸರ್ಕಾರ ನಿಸ್ಸಂದಿಗ್ಧ ನಿಲುವು ತಳೆದಿದೆ. ಆಧಾರ್‌ಗೆ ಸಂಬಂಧಿಸಿದ ಪ್ರಶ್ನೆಗಳ ಮೇಲೆ ಖಾಸಗಿತನವನ್ನು ವ್ಯಾಖ್ಯಾನಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ.

* ವಾಟ್ಸ್‌ಆ್ಯಪ್‌ನಲ್ಲಿ ಸಂವಹನವಾಗುವ ಮಾಹಿತಿಯನ್ನು ಫೇಸ್‌ಬುಕ್‌ ಜತೆಗೆ ಹಂಚಿಕೊಳ್ಳುವ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ

ನ್ಯಾಯಪೀಠದ ಅಭಿಮತ

* ಜನರ ಮಾಹಿತಿ ರಕ್ಷಣೆಗೆ ಯಾವ ರೀತಿಯ ನಿಯಂತ್ರಣ ವ್ಯವಸ್ಥೆ ಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು

* ಸಾರ್ವಜನಿಕ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಯು ಬಳಕೆದಾರರ ಜತೆ ಒಪ್ಪಂದ ಮಾಡಿಕೊಂಡು ಸಾಂವಿಧಾನಿಕ ರಕ್ಷಣೆ ಇರುವ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡಬಾರದು

ವಾಟ್ಸ್‌ಆ್ಯಪ್‌ ವಾದ

* ವಿವಿಧ ವಾಣಿಜ್ಯ ಉದ್ದೇಶಗಳಿಗಾಗಿ ಇಂದು ಮಾಹಿತಿ ಹಂಚಿಕೆ ಕಡ್ಡಾಯ. ಒಬ್ಬ ವ್ಯಕ್ತಿ ಇಟಲಿಗೆ ಟಿಕೆಟ್‌ ಕಾದಿರಿಸಿದರೆ ಆ ಮಾಹಿತಿ ತಕ್ಷಣವೇ ಹಂಚಿಕೆಯಾಗುತ್ತದೆ. ಅಲ್ಲಿ  ನೋಡಬಹುದಾದ ತಾಣಗಳ ಬಗೆಗಿನ ವಿವರಗಳು ಅವರಿಗೆ ಅಂತರ್ಜಾಲ ಮೂಲ ಬರಲು ಆರಂಭವಾಗುತ್ತದೆ

* ಹಲವು ಅಂತರ್ಜಾಲ ತಾಣಗಳು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿವೆ

ಕೇಂದ್ರದ ಮಾತು

* ಬಳಕೆದಾರರ ಮಾಹಿತಿಯು ಸಂವಿಧಾನವು ಖಾತರಿಪಡಿಸಿದ ಜೀವಿಸುವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಘಟಕ

* ಮಾಹಿತಿ ಬಹಿರಂಗವಾಗುವುದನ್ನು ತಡೆಯಲು ನಿಯಂತ್ರಣ ವ್ಯವಸ್ಥೆ ಸ್ಥಾಪಿಸಲು ಸಿದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT