ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಬೆಳವಣಿಗೆ: ದೇಶದ ಪ್ರಗತಿ

Last Updated 22 ಜುಲೈ 2017, 10:56 IST
ಅಕ್ಷರ ಗಾತ್ರ

ವಿಜಯಪುರ: ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ, ವಿದ್ಯಾರ್ಥಿಗಳ ಬೆಳವಣಿಗೆಯ ಮೇಲೆ ಅಡಕವಾಗಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೃಷ್ಣಪ್ಪ ಹೇಳಿದರು.
ಇಲ್ಲಿನ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ದೇಶದ ಮಹನೀಯರು ಕಂಡಿದ್ದ ಆದರ್ಶ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಕಾರ್ಯ ಯುವಜನತೆಯ ಮೇಲಿದೆ.  ಯುವಜನತೆ ಲಭ್ಯವಿರುವ ಅಗಾಧ ಅವಕಾಶಗಳನ್ನು ಬಳಸಿಕೊಂಡು ದೇಶ ಕಟ್ಟುವ ಕಾರ್ಯ  ಮಾಡಬೇಕು ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಸಿಗುವಂತಹ ಎಲ್ಲಾ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು. ಕಲಿಯಬೇಕೆನ್ನುವ ಹಂಬಲ. ಸಮರ್ಪಣಾ ಮನೋಭಾವನೆ, ಏಕಾಗ್ರತೆ, ನಿರ್ದಿಷ್ಟ ಗುರಿಯನ್ನು ಹೊಂದಿರದಿದ್ದರೆ ರಾಷ್ಟ್ರದ ಪ್ರಗತಿ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕವಾದ ಚಿಂತನೆಗಳನ್ನು ಹೊಂದಿದ್ದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಹೊಸ ವಿಚಾರಗಳ ಕುರಿತು ಚಿಂತನೆ ನಡೆಸುವಂತಹವರಾಗಬೇಕು ಎಂದರು.

ಸಮಾಜದಲ್ಲಿ ಸಾಧನೆ ಮಾಡಿರುವ ಮಹನೀಯರ ಜೀವನ ಶೈಲಿ, ಅವರಿಗೆ ಸಮಾಜದ ಬಗ್ಗೆ ಇದ್ದ ಸಮರ್ಪಣೆ ಮಾದರಿಯಾಗಬೇಕು.  ಇವೆಲ್ಲವನ್ನು ಬಿಟ್ಟು, ಯುವಜನರು ದುಶ್ಚಟಗಳಿಗೆ ಒಳಗಾಗಿ, ಮಾದಕ ವ್ಯಸನಿಗಳಾಗಿ ತಮ್ಮ ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದರು.

2016–17ನೇ ಸಾಲಿನ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಲ್ಲಿ ಪಾಲ್ಗೊಂಡರು. ಪ್ರಾಂಶುಪಾಲ ಪ್ರದೀಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT