ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಇಎಫ್‌ ಬಳಕೆ: ಸರ್ಕಾರಕ್ಕೆ ನಿರ್ದೇಶನ

Last Updated 22 ಜುಲೈ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯೂ ಗೌರ್ನಮೆಂಟ್‌ ಎಲೆಕ್ಟ್ರಾನಿಕ್‌ ಫ್ಯಾಕ್ಟರಿಯನ್ನು (ಎನ್‌ಜಿಇಎಫ್‌)  ಸಾರ್ವಜನಿಕ ಉಪಯೋಗಕ್ಕಾಗಿ ಬಳಸುವ ಮುನ್ನ ಯೋಜನೆಯ ವಿವರವನ್ನು ನಮ್ಮ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಕಾರ್ಖಾನೆ ಮುಚ್ಚಲು ನೀಡಿದ್ದ ಆದೇಶವನ್ನು ಇತ್ತೀಚೆಗೆ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಹಿಂಪಡೆದ ವೇಳೆ ಈ ತಾಕೀತು ಮಾಡಲಾಗಿದೆ.

‘ಸುಮಾರು 120 ಎಕರೆಯ ಈ ಪ್ರದೇಶದಲ್ಲಿ ತಲೆ ಎತ್ತುವ ಯಾವುದೇ ಯೋಜನೆಗಳು ಪರಿಸರ ಸ್ನೇಹಿ ಆಗಿರಬೇಕು. ಸಾರ್ವಜನಿಕ ಬಳಕೆ ಉದ್ದೇಶ ಹೊಂದಿರಬೇಕು. ಒಂದು ವೇಳೆ ಸರ್ಕಾರ ತನ್ನ ಮಾತಿಗೆ ವಿರುದ್ಧವಾಗಿ ನಡೆದಲ್ಲಿ ಕೋರ್ಟ್ ಆದೇಶ ಹಿಂಪಡೆಯಲಾಗುತ್ತದೆ’ ಎಂದು ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಸಿದೆ.

‘ಪ್ರತಿ ಮೂರು ತಿಂಗಳಿಗೆ ಒಮ್ಮೆ ಸರ್ಕಾರ ಯೋಜನಾ ಪ್ರಗತಿಯ ವರದಿ ಸಲ್ಲಿಸಬೇಕು. ಇದಕ್ಕಾಗಿ ಪ್ರಧಾನ ಕಾರ್ಯದರ್ಶಿ ದರ್ಜೆಯವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಬೇಕು. ಅಂತೆಯೇ ಮೊದಲ ವರದಿಯನ್ನು ಮುಂಬರುವ ಸೆಪ್ಟೆಂಬರ್‌ನಲ್ಲಿ ಸಲ್ಲಿಸಬೇಕು’ ಎಂದು ಕೋರ್ಟ್ ಹೇಳಿದೆ.

‘ಎನ್‌ಜಿಇಎಫ್‌ನ ಪ್ರದೇಶದಲ್ಲಿ ಎಷ್ಟು ಮರಗಳಿವೆ, ಯಾವ ವಿಧದ ಮರಗಳಿವೆ, ಇಡೀ ಪ್ರದೇಶದ ಛಾಯಾಚಿತ್ರಗಳು ಹಾಗೂ ಹಂತಹಂತವಾಗಿ ಕೈಗೊಳ್ಳುವ ಯೋಜನೆಗಳ ವಿವರವನ್ನು ನೀಡಿ’ ಎಂದು ನ್ಯಾಯಪೀಠ ಸೂಚಿಸಿದೆ.

ಕೋರ್ಟ್‌ಗೆ ಸರ್ಕಾರದ ವಾಗ್ದಾನ
‘ನಷ್ಟದಲ್ಲಿರುವ ಎನ್‌ಜಿಇಎಫ್‌, ನೌಕರರಿಗೆ ಬಾಕಿ ಹಣ ನೀಡುವಲ್ಲಿ  ಹಾಗೂ ಬ್ಯಾಂಕ್ ಸಾಲ ತೀರಿಸುವಲ್ಲಿ ವಿಫಲವಾಗಿರುವ ಕಾರಣಕ್ಕೆ ಇದನ್ನು ಮುಚ್ಚಬೇಕು ಮತ್ತು ಅಧಿಕೃತ ಸಮಾಪನಕಾರರನ್ನು ನಿಯೋಜಿಸಬೇಕು’ ಎಂದು ಹೈಕೋರ್ಟ್‌ ಈ ಮೊದಲು ಆದೇಶಿಸಿತ್ತು. ಆದರೆ, ಇತ್ತಿಚೆಗಷ್ಟೇ ಕೋರ್ಟ್‌ಗೆ ವಾಗ್ದಾನ ನೀಡಿದ ಸರ್ಕಾರ, ‘ಸಾರ್ವಜನಿಕ ಉಪಯೋಗಕ್ಕಾಗಿ ಎನ್‌ಜಿಇಎಫ್‌ ಉಳಿಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ’ ಎಂದು ತಿಳಿಸಿತ್ತು. ಈ ಕಾರಣಕ್ಕಾಗಿ ಕೋರ್ಟ್ ತನ್ನ ಮೊದಲಿನ  ಆದೇಶವನ್ನು  ಹಿಂಪಡೆದು ಯೋಜನಾ ವಿವರ ಸಲ್ಲಿಸಲು ನಿರ್ದೇಶನ ನೀಡಿದೆ.

*


ನಗರದ ಸಸ್ಯ ಸಂರಕ್ಷಣೆಗೆ ಆದ್ಯತೆ ನೀಡಿ. ಇಲ್ಲದಿದ್ದರೆ ಉದ್ಯಾನ ನಗರಿ  ಎಂಬ ಖ್ಯಾತಿಯ ಬೆಂಗಳೂರು ಸತ್ತು ಹೋದೀತು...
-ವಿನೀತ್ ಕೊಠಾರಿ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT