ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ನ ನವ ಮನ್ವಂತರಕ್ಕೆ ನಾಂದಿ

ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಅನಿಸಿಕೆ; ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಆಗಿರುವುದು ಹೆಮ್ಮೆಯ ವಿಷಯ
Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಲಂಡನ್‌: ‘ನಾವು ಲಾರ್ಡ್ಸ್‌ ಅಂಗಳದಲ್ಲಿ ಪ್ರಶಸ್ತಿ ಎತ್ತಿ ಹಿಡಿಯಲು ವಿಫಲವಾಗಿದ್ದೇವೆ. ಇದರಿಂದ ಖಂಡಿತ ವಾಗಿಯೂ ನಿರಾಸೆ ಯಾಗಿದೆ. ವಿಶ್ವಕಪ್‌ ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌  ಆಗಿರು ವುದು ಹೆಮ್ಮೆಯ ವಿಷಯ.  ನಮ್ಮ ಈ ಸಾಧನೆ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗಲಿದೆ’...

ಭಾರತ  ತಂಡದ ನಾಯಕಿ ಮಿಥಾಲಿ ರಾಜ್‌ ಅವರ ಭರವಸೆಯ ನುಡಿಗಳಿವು. ಭಾನುವಾರ ನಡೆದ ವಿಶ್ವಕಪ್‌ ಫೈನಲ್‌ನಲ್ಲಿ ಮಿಥಾಲಿ ಪಡೆ 9 ರನ್‌ ಗಳಿಂದ ಇಂಗ್ಲೆಂಡ್‌ ವಿರುದ್ಧ ಸೋತಿತ್ತು. ಹೀಗಾಗಿ ತಂಡದ ಚೊಚ್ಚಲ  ಪ್ರಶಸ್ತಿಯ ಕನಸೂ ಕಮರಿತ್ತು.

ಪಂದ್ಯದ ಬಳಿಕ ಮಾತನಾಡಿದ ಮಿಥಾಲಿ ‘ ದೇಶವೇ ಹೆಮ್ಮೆ ಪಡು ವಂತಹ ಸಾಧನೆ ನಮ್ಮದು. ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಜನಮನ್ನಣೆ ಸಿಗಬೇಕು. ಹೊಸ ಪೀಳಿಗೆ ದೊಡ್ಡ ಸಂಖ್ಯೆಯಲ್ಲಿ ಕ್ರಿಕೆಟ್‌ ಆಡಬೇ ಕೆಂಬುದು ನಮ್ಮ ಮಹತ್ವಾಕಾಂಕ್ಷೆ. ಇದಕ್ಕೆ ಅಗತ್ಯವಿದ್ದ ವೇದಿಕೆಯನ್ನು ನಾವೀಗ ಸಿದ್ಧಗೊಳಿಸಿದ್ದೇವೆ’ ಎಂದರು.

‘ಫೈನಲ್‌ ಪಂದ್ಯಕ್ಕೂ ಮುನ್ನ ಎಲ್ಲರೂ ತುಂಬಾ ಒತ್ತಡಕ್ಕೆ ಒಳಗಾ ಗಿದ್ದರು. ಇದು ನಮಗೆ ಮುಳುವಾಯಿತು. ಜೊತೆಗೆ ಅನು ಭವದ ಕೊರತೆಯೂ ಎದ್ದು ಕಂಡಿತು. ಸಂದಿಗ್ಧತೆಯಲ್ಲಿ  ಕೆಚ್ಚೆದೆ ಯಿಂದ ಹೋರಾ ಡುವ ಗುಣವನ್ನು  ತಂಡದಲ್ಲಿರುವ ಯುವ ಆಟಗಾರ್ತಿ ಯರು ಮೈಗೂಡಿಸಿಕೊಳ್ಳ ಬೇಕು’ ಎಂದು ಅವರು ಹೇಳಿದರು.

‘ಭಾರತದ ಮಹಿಳಾ ಕ್ರಿಕೆಟ್‌ಗೆ ಉಜ್ವಲ ಭವಿಷ್ಯವಿದೆ. ನಮ್ಮಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರು ಇದ್ದಾರೆ.  ಕ್ರಿಕೆಟ್‌ ಲೋಕದ ದೈತ್ಯರೆಂದೆ ಬಿಂಬಿತವಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳನ್ನು ಸೋಲಿಸುವ ಶಕ್ತಿ ನಮ್ಮಲ್ಲೂ ಇದೆ ಎಂಬುದನ್ನು ಈ ಬಾರಿಯ ಟೂರ್ನಿಯಲ್ಲಿ ಜಗಜ್ಜಾಹೀರು ಮಾಡಿದ್ದೇವೆ. ಹೊಸ ತಲೆಮಾರಿನ ಆಟಗಾರ್ತಿಯರಿಗೆ ಇದು ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಲಿದೆ ಎಂಬ ನಂಬಿಕೆಯೂ ಇದೆ’ ಎಂದು ಬಲಗೈ ಬ್ಯಾಟ್ಸ್‌ವುಮನ್‌ ಮಿಥಾಲಿ ಭರವಸೆ ವ್ಯಕ್ತಪಡಿಸಿದ್ದಾರೆ.

‘ಈ ಬಾರಿ ಪ್ರಶಸ್ತಿ ಗೆಲ್ಲಲು ನಮಗೆ ಉತ್ತಮ ಅವಕಾಶ ಇತ್ತು. 3 ವಿಕೆಟ್‌ಗೆ 191ರನ್‌ ಗಳಿಸಿದ್ದಾಗ ಗೆಲುವು ಸುಲಭ ಎಂದೇ ಭಾವಿಸಿದ್ದೆವು. ಆದರೆ ಕೊನೆ ಯಲ್ಲಿ  28ರನ್‌ ಕಲೆಹಾಕುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿದ್ದರಿಂದ ನಮ್ಮ ಕನಸು ಕಮರಿತು. ಪೂನಂ ಯಾದವ್‌ ಮತ್ತು ಹರ್ಮನ್‌ಪ್ರೀತ್‌ ಅವರು ಮನಮೋಹಕ ಇನಿಂಗ್ಸ್‌ ಕಟ್ಟಿದರು. ಆದರೆ ಕೆಳ ಕ್ರಮಾಂಕದ ಆಟಗಾರ್ತಿಯರ ವೈಫಲ್ಯ ದಿಂದ ಗೆಲುವು ಕೈ ಜಾರಿತು. ಇಂಗ್ಲೆಂಡ್‌ ನಂತಹ ಬಲಿಷ್ಠ ತಂಡದ ಸವಾಲು ಮೆಟ್ಟಿ ನಿಲ್ಲಬೇಕಾದರೆ, ತಂಡದಲ್ಲಿರುವ ಎಲ್ಲರೂ ಬ್ಯಾಟಿಂಗ್‌ನಲ್ಲಿ ಮಿಂಚಲೇಬೇಕಿತ್ತು. ಈ  ವಿಚಾರದಲ್ಲಿ ನಾವು ಹಿಂದೆ ಬಿದ್ದೆವು’ ಎಂದು ಮಿಥಾಲಿ ತಿಳಿಸಿದ್ದಾರೆ.

‘ಲೀಗ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸೋತ ನಂತರ ನಾವು ಫೈನಲ್‌ ಪ್ರವೇಶಿಸು ತ್ತೇವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಾಗ ಮತ್ತೆ ಕನಸುಗಳು ಗರಿಗೆದರಿ ದ್ದವು.  ಇಂಗ್ಲೆಂಡ್‌ ತಂಡವನ್ನು ಅದರದ್ದೆ ನೆಲದಲ್ಲಿ ಮಣಿಸುವುದು ಸುಲಭದ ಮಾತಲ್ಲ. ಫೈನಲ್‌ನಲ್ಲಿ ಸೋತರೂ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದ ತೃಪ್ತಿ   ಇದೆ’ ಎಂದಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಮಹಿಳೆಯ ರಿಗಾಗಿ   ಬಿಗ್‌ಬಾಷ್‌ ಲೀಗ್‌ ನಡೆಸಲಾ ಗುತ್ತಿದೆ. ಅದೇ ಮಾದರಿಯಲ್ಲೇ ನಮ್ಮಲ್ಲೂ ಮಹಿಳಾ ಐಪಿಎಲ್‌ ಆಯೋಜಿಸಬೇಕು. ಇದರಿಂದ ಒತ್ತಡದ ಸನ್ನಿವೇಶದಲ್ಲಿ  ದಿಟ್ಟತನದಿಂದ ಆಡುವ  ಕೌಶಲಗಳನ್ನು ಕಲಿಯಲು ಯುವ ಆಟಗಾರ್ತಿಯರಿಗೆ ಅನುವಾಗುತ್ತದೆ. ಜೊತೆಗೆ ಆಟದ ಗುಣ ಮಟ್ಟ   ಹೆಚ್ಚಿಸಿಕೊಳ್ಳಲು ಸಹಕಾರಿಯಾಗು ತ್ತದೆ’ ಎಂದು 34 ವರ್ಷದ ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಅಭಿನಂದನೆಗಳ ಮಹಾಪೂರ
ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿರುವ ಭಾರತದ ವನಿತೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿ ನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ವಿವಿಎಸ್‌ ಲಕ್ಷ್ಮಣ್‌ ಸೇರಿದಂತೆ ಅನೇಕರು ಮಿಥಾಲಿ ಪಡೆಯ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ದ್ದಾರೆ.

ಹರ್ಮನ್‌ಪ್ರೀತ್‌ಗೆ ಡಿಎಸ್‌ಪಿ ಹುದ್ದೆ
ಚಂಡೀಗಡ (ಪಿಟಿಐ): ಭಾರತ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಡಿಎಸ್‌ಪಿ ಹುದ್ದೆ ನೀಡಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸೋಮವಾರ ಬಹಿರಂಗ ಪಡಿಸಿದ್ದಾರೆ. ಹರ್ಮನ್‌ಪ್ರೀತ್‌ ಅವರು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಶತಕ (171ರನ್‌) ಸಿಡಿಸಿ ಭಾರತ ತಂಡ ವಿಶ್ವಕಪ್‌ ಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಪೊಲೀಸ್‌ ಇಲಾಖೆಯಲ್ಲಿ ಕೆಲಸ ನೀಡುವಂತೆ ಕೆಲ ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಹಿಂದಿನ ಸರ್ಕಾರ ಅವರ ಮನವಿಯನ್ನು ಪುರಸ್ಕರಿಸಿರಲಿಲ್ಲ.

‘ಹರ್ಮನ್‌ಪ್ರೀತ್‌ ಅವರು ಪ್ರತಿಭಾ ನ್ವಿತ ಆಟಗಾರ್ತಿ. ಅವರು ವಿಶ್ವಕಪ್‌ನಲ್ಲಿ ಅಮೋಘ ಆಟ ಆಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆ ನೀಡಲು ತೀರ್ಮಾನಿಸಿದ್ದೇವೆ. ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿದವರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದು ಮುಖ್ಯಮಂತ್ರಿ ಅಮರಿಂದರ್‌ ತಿಳಿಸಿದ್ದಾರೆ.

ಅದ್ದೂರಿ ಸಮಾರಂಭಕ್ಕೆ ಸಿದ್ಧತೆ
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರವೇ ಅದ್ದೂರಿ ಸಮಾರಂಭ ಆಯೋಜಿಸಿ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿರುವ ಭಾರತ ಮಹಿಳಾ ತಂಡದ ಸದಸ್ಯರನ್ನು ಸನ್ಮಾನಿಸಲು    ನಿರ್ಧರಿಸಿದೆ. ಆಟಗಾರ್ತಿಯರು ಮತ್ತು ಸಿಬ್ಬಂದಿ ಗಳು ಬುಧವಾರ ಇಲ್ಲವೇ ಗುರುವಾರ ತವರಿಗೆ ಮರಳಲಿದ್ದು, ಅವರ ಲಭ್ಯತೆ ಯನ್ನು ಖಚಿತಪಡಿಸಿಕೊಂಡ ನಂತರ ಸಮಾರಂಭ ನಡೆಯುವ ಸ್ಥಳ ಮತ್ತು ದಿನಾಂಕವನ್ನು ನಿಗದಿಮಾಡಲಾಗುತ್ತದೆ.

‘12 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತದ ಆಟಗಾರ್ತಿಯರು ಇಂಗ್ಲೆಂಡ್‌ ವಿರುದ್ಧ ಸೋತರೂ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಶೀಘ್ರವೇ ಅದ್ದೂರಿ ಸಮಾ ರಂಭ ಆಯೋಜಿಸಿ ತಂಡದ ಸದಸ್ಯರನ್ನು ಸನ್ಮಾನಿಸಲು ತೀರ್ಮಾನಿಸಿದ್ದೇವೆ. ಕಾರ್ಯಕ್ರಮದಲ್ಲಿ ಆಟಗಾರ್ತಿಯರಿಗೆ ತಲಾ ₹ 50 ಲಕ್ಷದ ಚೆಕ್‌ ಮತ್ತು ಬೆಂಬಲ ಸಿಬ್ಬಂದಿಗಳಿಗೆ ತಲಾ ₹ 25 ಲಕ್ಷದ ಚೆಕ್‌ ನೀಡಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟ್ವೀಟ್‌ಗಳಲ್ಲಿ ಭಾರತ ತಂಡದ ಗುಣಗಾನ
ಇಂಗ್ಲೆಂಡ್‌ ವಿರುದ್ಧ ನೀವು ಶ್ರೇಷ್ಠ ಆಟ ಆಡಿ ಸೋಲಿನಲ್ಲೂ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದೀರಿ. ನಿಮ್ಮ ಸಾಧನೆಯಿಂದ ನಾವೆಲ್ಲಾ ಹೆಮ್ಮೆಯಿಂದ ಬೀಗುವಂತಾಗಿದೆ
ನರೇಂದ್ರ ಮೋದಿ
ಪ್ರಧಾನಿ

ವಿಶ್ವಕಪ್‌ನ ಆರಂಭದಿಂದಲೂ  ನೀವು ಅಮೋಘವಾಗಿ  ಆಡಿದ್ದೀರಿ. ಕೆಲವೊಮ್ಮೆ ಛಲದಿಂದ ಹೋರಾಡಿ ದರೂ ಅದೃಷ್ಟ ಕೈಕೊಡುತ್ತದೆ.  ಈ ಸೋಲಿನಿಂದ ನಿರಾಸೆಗೊಳ್ಳದಿರಿ
ಸಚಿನ್‌ ತೆಂಡೂಲ್ಕರ್‌
ಹಿರಿಯ ಕ್ರಿಕೆಟಿಗ

ನೀವು ನಮ್ಮ ದೇಶದ ಹೆಮ್ಮೆ. ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಆಶಾಕಿರಣ ಮೂಡುವಂತೆ ಮಾಡಿರುವ ನಿಮಗೆ ನನ್ನ ಸಲಾಂ
ವೀರೇಂದ್ರ ಸೆಹ್ವಾಗ್‌
ಹಿರಿಯ ಕ್ರಿಕೆಟಿಗ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ಶಕ್ತಿ ಅನಾವರಣ ಗೊಂಡಿದೆ. ಮಿಥಾಲಿ ಪಡೆಯ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ
ಬಿಷನ್‌ ಸಿಂಗ್‌ ಬೇಡಿ
ಹಿರಿಯ ಕ್ರಿಕೆಟಿಗ

ಮಿಥಾಲಿಗೆ ವಿಶ್ವ ತಂಡದ ಸಾರಥ್ಯ
ಲಂಡನ್‌ (ಪಿಟಿಐ): ಭಾರತದ ಮಿಥಾಲಿ ರಾಜ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌  ಸೋಮವಾರ ಬಿಡುಗಡೆ ಮಾಡಿರುವ ಐಸಿಸಿ ಮಹಿಳಾ ವಿಶ್ವಕಪ್‌ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 34 ವರ್ಷದ ಮಿಥಾಲಿ ಅವರ ಸಾರಥ್ಯದ ಭಾರತ ತಂಡ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿತ್ತು. ಬಲಗೈ ಬ್ಯಾಟ್ಸ್‌ವುಮನ್‌ ಮಿಥಾಲಿ ಅವರು ಟೂರ್ನಿಯಲ್ಲಿ 409ರನ್‌ ಬಾರಿ­ಸಿದ್ದರು.

ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂದಾನ ಅವರೂ ಈ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇಂಗ್ಲೆಂಡ್‌ನ ತಮ್ಸಿನ್‌ ಬ್ಯೂಮಾಂಟ್‌, ಅನ್ಯಾ ಶ್ರಬ್‌ಸೋಲ್‌, ವಿಕೆಟ್‌ ಕೀಪರ್‌ ಸಾರಾ ಟೇಲರ್‌, ಎಡಗೈ ಸ್ಪಿನ್ನರ್‌ ಅಲೆಕ್ಸ್‌ ಹಾರ್ಟ್ಲಿ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲೌರಾ ವೊಲ್ವಾರ್ಡ್ತ್‌, ಮರಿಜಾನೆ ಕಾಪ್‌, ಡೇನ್‌ ವ್ಯಾನ್‌ ನೀಕರ್ಕ್‌ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್‌ ಎಲಸ್ ಪೆರ್ರಿ ಅವರೂ ತಂಡದಲ್ಲಿದ್ದಾರೆ. ಮಿಥಾಲಿ ಮತ್ತು ಟೇಲರ್‌ ಅವರು ವಿಶ್ವಕಪ್‌ ಶ್ರೇಷ್ಠ ತಂಡದಲ್ಲಿ ಸ್ಥಾನ ಗಳಿಸಿದ್ದು ಇದು ಎರಡನೇ ಬಾರಿ. 2009ರಲ್ಲಿ ಐಸಿಸಿ ಪ್ರಕಟಿಸಿದ್ದ ತಂಡ ದಲ್ಲೂ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT