ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮಕ್ಕೆ ಕ್ರೈಸ್ತ ಕುಟುಂಬದ ಮತಾಂತರ

ಗುರುಪುರ ವಜ್ರದೇಹಿ ಮಠದ ಶ್ರೀಗಳ ನೇತೃತ್ವದಲ್ಲಿ ಪ್ರಕ್ರಿಯೆ
Last Updated 25 ಜುಲೈ 2017, 9:31 IST
ಅಕ್ಷರ ಗಾತ್ರ

ಬಜ್ಪೆ: ಕ್ರೈಸ್ತ ಕುಟುಂಬದ ಸುಮಾರು ಐದು ಮಂದಿ, ಗುರುಪುರದ ವಜ್ರದೇಹಿ ಮಠದಲ್ಲಿ ಸೋಮವಾರ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಪದವಿನಂಗಡಿ ಮೂಲದ ಕ್ರೈಸ್ತ ಕುಟುಂಬ ವಜ್ರದೇಹಿ ಮಠದ ರಾಜಶೇ ಖರಾನಂದ ಸ್ವಾಮೀಜಿಯ ನೇತೃತ್ವದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದರು.

ಪದವಿನಂಗಡಿಯ ಅರುಣ್ ಮೊಂ ತೆರೋ ಅವರ ಕುಟುಂಬ, 40 ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡಿತ್ತು. ಬಳಿಕ ಕೆಲವೊಂದು ಸಮಸ್ಯೆಗಳು ಉಂಟಾಗಿತ್ತು. ಅಲ್ಲದೇ ಹಿಂದೂ ಧರ್ಮದ ಮೇಲೆ ಒಲವು ಹೆಚ್ಚಿದ ಕಾರಣ ಮತ್ತೆ ಮಾತೃ ಧರ್ಮಕ್ಕೆ ಮರಳಲು ಮುಂದಾಗಿದ್ದರು. ಮನೆ ಮಂದಿ ಹಿಂದೂ ಧರ್ಮದ ಆಚರಣೆಗಳನ್ನು ಹೆಚ್ಚಾಗಿ ಆಚರಿಸುತ್ತಿದ್ದರು. ಹಿಂದೂ ಧರ್ಮಕ್ಕೆ ಮರಳಲು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಜತೆ ಮಾತನಾಡಿ, ವಿಷಯ ಪ್ರಸ್ತಾಪಿಸಿದ್ದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಶರತ್ ಪದವಿ ನಂಗಡಿ ಅವರು, ಈ ಬಗ್ಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಜತೆ ಚರ್ಚಿಸಿದ್ದರು. ಹೀಗಾಗಿ ಶ್ರೀಗಳ ನೇತೃತ್ವದಲ್ಲಿ ಮೊಂತೆರೊ ಕುಟುಂಬ ಹಿಂದೂ ಧರ್ಮಕ್ಕೆ ಮರಳಿದೆ. ಹಿಂದೂ ಧರ್ಮದ ವಿಧಿವಿಧಾನಗಳನ್ನು ನಡೆಸಿದ ಸ್ವಾಮೀಜಿ, ಕ್ರೈಸ್ತ ಕುಟುಂಬವನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದರು.

ಬದಲಾದ ಹೆಸರು: ವಜ್ರದೇಹಿ ಮಠದಲ್ಲಿ ನಡೆದ ಹಿಂದೂ ಧರ್ಮ ಸ್ವೀಕಾರದ ನಂತರ ಅರುಣ್ ಮೊಂತೊರೊ ಅವರು ತಮ್ಮ ಹೆಸರನ್ನು ‘ಅರುಣ್ ಪೂಜಾರಿ’ ಎಂದು ಬದಲಾಯಿಸಿದ್ದಾರೆ. ಅವರ ಪತ್ನಿ ಸುನೀತಾ ಅವರು ‘ಸಂಗೀತಾ ಪೂಜಾರಿ’ ಆಗಿ ಬದಲಾಯಿಸಿದ್ದಾರೆ. ಅರುಣ್ ತಾಯಿ ಐದಾ ಥೋಮಸ್ ಅವರು, ತಮ್ಮ ಹೆಸರನ್ನು ‘ಗೌರಿ ಪೂಜಾರಿ’ ಎಂದು ಬದಲಾಯಿಸಿದ್ದಾರೆ. ಮಕ್ಕಳು ಅಜಯ್ ಪೂಜಾರಿ ಹಾಗೂ ಅನೀಶ್ ಪೂಜಾರಿ ಎಂದು ಹೆಸರು ಬದಲಾಯಿಸಿದ್ದಾರೆ.

ಮತಾಂತರ ಪ್ರಕ್ರಿಯೆಯ ವೇಳೆ ಹಿಂದೂ ಜಾಗರಣ ವೇದಿಕೆಯ ಹರೀಶ್ ಪೂಜಾರಿ ಮಟ್ಟಿ, ಅರುಣ್ ಗುಂಡಳಿಕೆ, ಸಂದೀಪ್ ಶೆಟ್ಟಿ ಅಂಬ್ಲಮೊಗರು ಇದ್ದರು.

‘ಆಮಿಷ ಒಡ್ಡಿಲ್ಲ’
ಕುಟುಂಬಕ್ಕೆ ಹಿಂದೂ ಧರ್ಮಕ್ಕೆ ಮರಳುವ ಆಸಕ್ತಿ ಇದ್ದು, ತಮ್ಮ ಜತೆ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಕುಟುಂಬ ಸ್ವ ಇಚ್ಛೆಯಿಂದ ಮಾತೃಧರ್ಮಕ್ಕೆ ಮರಳಿದ್ದು, ಯಾವುದೇ ರೀತಿಯ ಒತ್ತಡ, ಆಮಿಷ ಒಡ್ಡಲಾಗಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ್ ತಿಳಿಸಿದ್ದಾರೆ.

ಅಲ್ಲದೆ ಅವರಿಗೆ ಪೂಜಾರಿ ಜಾತಿಯನ್ನು ನೀಡಲಾಗಿದ್ದು, ಹಿಂದೂ ಸಂಪ್ರದಾಯದಂತೆ ದೈವ ಮೂಲ, ನಾಗಮೂಲ ನೀಡಲಾಗಿದೆ. ವಕೀಲರ ಮೂಲಕ ಅಧಿಕೃತವಾಗಿ ಅವರ ಹೆಸರನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.

*
ಹಿಂದೂ ಜಾಗರಣ ವೇದಿಕೆ ಮಾಹಿತಿಯಂತೆ ಕುಟುಂಬವನ್ನು ಮಾತೃಧರ್ಮಕ್ಕೆ ಕರೆತರಲಾಗಿದೆ. ಸ್ವಇಚ್ಛೆಯಂತೆ ಹಿಂದೂ ಧರ್ಮಕ್ಕೆ ಬಂದಿದ್ದು, ಯಾವುದೇ ಒತ್ತಡ ಹೇರಲಿಲ್ಲ.
ರಾಜಶೇಖರಾನಂದ ಸ್ವಾಮೀಜಿ,
ವಜ್ರದೇಹಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT