ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕತ್ತಲಲ್ಲಿ ಮುಳುಗಿದ ಮೇದನಿ !

Last Updated 26 ಜುಲೈ 2017, 6:58 IST
ಅಕ್ಷರ ಗಾತ್ರ

]ಕಾರವಾರ: ವಿದ್ಯುತ್‌ ಸಂಪರ್ಕ ದೊರೆತ ಸಂತಸದಲ್ಲಿದ್ದ ಕುಮಟಾ ತಾಲ್ಲೂಕಿನ ಕುಗ್ರಾಮ ಮೇದನಿ ಒಂದೇ ವಾರದಲ್ಲಿ ಮತ್ತೆ ಕತ್ತಲಲ್ಲಿ ಮುಳುಗಿದೆ. ಮುರಿದು ಬಿದ್ದ ವಿದ್ಯುತ್ ಕಂಬ ಮೂರು ತಿಂಗಳು ದುರಸ್ತಿಯಾಗದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಅನಾದಿಕಾಲದಿಂದಲೂ ಇಲ್ಲಿನ ಜನರು  ಬೆಳಕಿಗಾಗಿ ಚಿಮಣಿ ಬುಡ್ಡೆ ಅವಲಂಬಿಸಿದ್ದರು.  ಸರ್ಕಾರವು ವಿದ್ಯುತ್ ಸಂಪರ್ಕ ಕಲ್ಪಿಸಲು ₹ 1.24 ಕೋಟಿ ಅನುದಾನ ಬಿಡುಗಡೆ ಮಾಡಿತು. ಕಳೆದ ನವೆಂಬರ್‌ನಲ್ಲಿ ಕುಮಟಾ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ವಿದ್ಯುತ್‌ ಸಂಪರ್ಕ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಆರಂಭದಲ್ಲಿ ನೆಲದಡಿ ಕೇಬಲ್ ಎಳೆಯುವ ಪ್ರಸ್ತಾಪವಾಗಿತ್ತಾದರೂ ಬಳಿಕ ಕಂಬಗಳ ಮೂಲಕ ಕೋಟಿಂಗ್ ವೈರ್‌ ಬಳಸಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂ ತೀರ್ಮಾನಿಸಿತು. ಅದರಂತೆ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿಯ ಸಾಯಿಮನೆಯಿಂದ ಮೇದನಿ ಗ್ರಾಮಕ್ಕೆ ಸುಮಾರು 13 ಕಿ.ಮೀ. ವರೆಗೆ 300ಕ್ಕೂ ಹೆಚ್ಚು ಕಂಬಗಳನ್ನು ಅರಣ್ಯ ಪ್ರದೇಶದಲ್ಲಿ ಹಾಕಲಾಯಿತು. ಈ ಕಾರ್ಯಕ್ಕೆ ಸುಮಾರು 5 ತಿಂಗಳುಗಳು ಹಿಡಿಯಿತು. ಬಳಿಕ ನಾಲ್ಕೈದು ಮನೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು.

ಗ್ರಾಮಸ್ಥರಿಗೆ ನಿರಾಶೆ: ‘ಸಂಪರ್ಕ ದೊರೆತ ಮೂರೇ ದಿನಕ್ಕೆ ಕಂಬ ಮುರಿದು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಬಳಿಕ ಹೆಸ್ಕಾಂನವರು ಬಂದು ದುರಸ್ತಿಗೊಳಿಸಿದರು. ಆದರೆ ಮಳೆಗಾಲದ ಆರಂಭದಲ್ಲಿ ಗಾಳಿ ಮಳೆಗೆ ರಸ್ತೆಯಂಚಿನ ಮರಗಳು ಬಿದ್ದು, ಸುಮಾರು ನಾಲ್ಕೈದು ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು  ಪರಮೇಶ್ವರ ಗೌಡ  ತಿಳಿಸಿದರು.

‘ ಎಲ್ಲ ಮೂಲ ಸೌಕರ್ಯಗಳಿಂದ ಈ ಗ್ರಾಮ ವಂಚಿತವಾಗಿದೆ. ಚಿಕ್ಕ ವಸ್ತು ಬೇಕು ಎಂದರೂ 8 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ, ಬಳಿಕ ವಾಹನ ಹಿಡಿದು ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇಲ್ಲಿನ ಜನರಿಗಿದೆ. ಹೀಗಿದ್ದರೂ ಸರ್ಕಾರ ನೀಡುವ ಅಲ್ಪ ಸ್ವಲ್ಪ ಸೌಕರ್ಯಗಳು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂವಹನ ಕೊರತೆಯಿಂದಾಗಿ ಕೈತಪ್ಪುತ್ತಿದ್ದು, ಗ್ರಾಮಸ್ಥರನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ದೂರಿದರು.

ಎಪಿಎಲ್‌ ಕಾರ್ಡ್‌ದಾರರಿಗೆ ಸಂಪರ್ಕ ನಿರಾಕರಣೆ
‘ಮೇದನಿ ಗ್ರಾಮದಲ್ಲಿ ಸುಮಾರು 40 ಮನೆಗಳಿವೆ. ನಾಲ್ಕೈದು ಮನೆಗಳನ್ನು ಹೊರತುಪಡಿಸಿ ಬಹುತೇಕ ಬಿಪಿಎಲ್ ಕಾರ್ಡ್‌ದಾರರಾಗಿದ್ದಾರೆ. ಈ ಮನೆಗಳಿಗೆ ಉಚಿತವಾಗಿ ವಿದ್ಯುತ್ ಮೀಟರ್ ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಎಪಿಎಲ್ ಕಾರ್ಡ್‌ದಾರರ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲು ನಿರಾಕರಿಸಲಾಗಿದೆ.

ಈ ಬಗ್ಗೆ ಸ್ಥಳೀಯ ಶಾಸಕಿ ಶಾರದಾ ಶೆಟ್ಟಿ  ಎಲ್ಲ ಮನೆಗಳಿಗೂ ಉಚಿತ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಈವರೆಗೂ ಆಗಿಲ್ಲ’ ಎಂದು ಪರಮೇಶ್ವರ ಗೌಡ ತಿಳಿಸಿದರು.

* * 

ತಂತಿ ಎಳೆಯಲಾಗಿದೆ. ಕಂಬ ಮುರಿದು ಬಿದ್ದು, ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಇದಾಗಿ ಮೂರು ತಿಂಗಳಾದರೂ ಈವರೆಗೆ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ
ಪರಮೇಶ್ವರ ಗೌಡ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT