ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿಸಿಎಲ್‌ ಷೇರು ವಿಕ್ರಯ ನಿರ್ಧಾರ; ಅಪೂರ್ಣ ಪ್ರಕ್ರಿಯೆ

Last Updated 26 ಜುಲೈ 2017, 19:30 IST
ಅಕ್ಷರ ಗಾತ್ರ

ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ ಇರುವ (ಎಚ್‌ಪಿಸಿಎಲ್‌) ಕೇಂದ್ರ ಸರ್ಕಾರದ ಶೇ 51.11ರಷ್ಟು ಪಾಲು ಬಂಡವಾಳವನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಖರೀದಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಕೇಂದ್ರೋದ್ಯಮಗಳ ಷೇರು ವಿಕ್ರಯ ಕುರಿತ ಇನ್ನೊಂದು ಪ್ರಮುಖ ನಿರ್ಧಾರ ಇದಾಗಿದ್ದರೂ, ಗಮನಾರ್ಹ ಬದಲಾವಣೆಯನ್ನೇನೂ ನಿರೀಕ್ಷಿಸುವಂತಿಲ್ಲ. ಇದೊಂದು ಸ್ವಾಧೀನ ಪ್ರಕ್ರಿಯೆಯೇ ಹೊರತು ವಿಲೀನವಲ್ಲ. ಇಲ್ಲಿ ಎಚ್‌ಪಿಸಿಎಲ್‌ನ ಮಾಲೀಕತ್ವ ವರ್ಗಾವಣೆಯಾಗಿದೆಯಷ್ಟೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 72,500 ಕೋಟಿಗಳಷ್ಟು ಷೇರು ವಿಕ್ರಯ ಮಾಡುವ ಸರ್ಕಾರದ ಗುರಿ ಸಾಧನೆಗೆ ನೆರವಾಗಲಿದೆ.  ಒಎನ್‌ಜಿಸಿಯಲ್ಲಿ ಎಚ್‌ಪಿಸಿಎಲ್‌ ವಿಲೀನದಿಂದ ₹ 28,800 ಕೋಟಿಗಳಷ್ಟು ಮೊತ್ತ ಕೇಂದ್ರದ ಬೊಕ್ಕಸ ಭರ್ತಿ ಮಾಡಲಿದೆ.  

ಷೇರು ವಿಕ್ರಯ ಗುರಿಯ ಶೇ 40ರಷ್ಟು ಸಂಪನ್ಮೂಲವೂ ಸಂಗ್ರಹವಾಗಲಿದೆ. ಇದನ್ನು ಸರ್ಕಾರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದು. ಆದರೆ, ಈ ಹಣ ಮಾರುಕಟ್ಟೆಯಿಂದ ಬರುವುದಿಲ್ಲ.

ಒಎನ್‌ಜಿಸಿಯು, ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಮಾರಾಟ ಸಂಸ್ಥೆಗಳಾದ ಐಒಸಿ ಮತ್ತು ಜಿಎಐಎಲ್‌ನಲ್ಲಿನ ತನ್ನ ಪಾಲು ಬಂಡವಾಳವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬರುವ ಹಣವನ್ನು ಎಚ್‌ಪಿಸಿಎಲ್‌ ಷೇರು ಖರೀದಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಸಾಲ ಮಾಡಿ  ಪಾಲು ಖರೀದಿಸಲು ಮುಂದಾದರೆ ಸಂಸ್ಥೆಯ ಹಣಕಾಸು ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮವೂ ಕಂಡು ಬರಲಿದೆ. ಜತೆಗೆ ಇದು ಷೇರುದಾರರಿಗೂ ಹೊರೆಯಾಗಲಿದೆ.

ಆರ್ಥಿಕ ಸುಧಾರಣಾ ಕ್ರಮದಿಂದ ಕೇಂದ್ರೋದ್ಯಮಗಳಲ್ಲಿನ ಸರ್ಕಾರದ ಹಸ್ತಕ್ಷೇಪಕ್ಕೆ ಕಡಿವಾಣ ಬಿದ್ದರೆ ಮಾತ್ರ ಉದ್ದೇಶ ಈಡೇರುತ್ತದೆ. ಈ ಪ್ರಕರಣದಲ್ಲಿ ಅಂತಹ ಸಾಧ್ಯತೆಯೇ ಕಂಡು ಬರುತ್ತಿಲ್ಲ.  ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಲ್ಲಿನ ಈ ಸ್ವರೂಪದ ಬಂಡವಾಳ ಮಾರಾಟದಿಂದ ಸರ್ಕಾರಕ್ಕೆ ವಾಸ್ತವದಲ್ಲಿ ಹೆಚ್ಚಿನ ಬಂಡವಾಳವೇನೂ ಹರಿದು ಬರುವುದಿಲ್ಲ.

ಇದೊಂದು ಷೇರು ವಿಕ್ರಯ ನಿರ್ಧಾರವಾಗಿರದೆ, ಸರ್ಕಾರಿ ಸ್ವಾಮ್ಯದ ಎರಡು ಉದ್ದಿಮೆಗಳ ವಿಲೀನವಾಗಿರಲಿದೆಯಷ್ಟೆ. ಇದರಿಂದ ಎರಡೂ ಕೇಂದ್ರೋದ್ಯಮಗಳ ಸಾಮರ್ಥ್ಯವೂ ಗಮನಾರ್ಹವಾಗಿ ಹೆಚ್ಚಳಗೊಳ್ಳಲಾರದು.

ತೈಲ ನಿಗಮದ ಸ್ವಾಧೀನಕ್ಕೆ ಒಳಪಟ್ಟರೂ, ಎಚ್‌ಪಿಸಿಎಲ್‌ ಪ್ರತ್ಯೇಕ ಕೇಂದ್ರೋದ್ಯಮವಾಗಿ ಮುಂದುವರೆಯಲಿದೆ. ಪ್ರತ್ಯೇಕ ನಿರ್ದೇಶಕ ಮಂಡಳಿ ಮತ್ತು ಸ್ವತಂತ್ರ ಅಸ್ವಿತ್ವವನ್ನೂ ಉಳಿಸಿಕೊಳ್ಳಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಉದ್ದಿಮೆಗಳನ್ನು ವಿಲೀನಗೊಳಿಸಿ ಅತಿ ದೊಡ್ಡ ಸಂಸ್ಥೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ  ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಳಿತದ ಪರಿಣಾಮಗಳಿಗೆ ಕಡಿವಾಣ ವಿಧಿಸಬಹುದು ಮತ್ತು ಅನಿರೀಕ್ಷಿತ ವಿದ್ಯಮಾನಗಳಿಂದ ರಕ್ಷಣೆ ಪಡೆಯಬಹುದು. ಇದರಲ್ಲಿ ತಪ್ಪೇನೂ ಇಲ್ಲ. ಆದರೆ, ಷೇರು ವಿಕ್ರಯದ ಹೆಸರಿನಲ್ಲಿ ಹೀಗೆ ಮಾಡಲು ಹೊರಟಿರುವುದು ಸಮರ್ಪಕ ಧೋರಣೆಯಂತೂ ಅಲ್ಲ.

‘ಬಿಸಿನೆಸ್‌ನಲ್ಲಿರುವುದು ಸರ್ಕಾರದ ಬಿಸಿನೆಸ್‌ ಅಲ್ಲ’ ಎನ್ನುವ ಎನ್‌ಡಿಎ ಸರ್ಕಾರದ ಧೋರಣೆ ಈ ವಿಷಯದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿ. ತೈಲ ಮಾರಾಟ ವಹಿವಾಟನ್ನು ಸರ್ಕಾರ ಸಂಪೂರ್ಣವಾಗಿ ಖಾಸಗಿ ವಶಕ್ಕೆ ಒಪ್ಪಿಸಿ  ಕೈತೊಳೆದುಕೊಳ್ಳಲಿ.

ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ವಿಲೀನ ನಿರ್ಧಾರದ ದುಷ್ಪರಿಣಾಮಗಳಿಂದ ಸರ್ಕಾರ ಇದುವರೆಗೂ ಪಾಠ ಕಲಿತಿರುವಂತೆ ಕಾಣುತ್ತಿಲ್ಲ. ಲಾಭದಲ್ಲಿ ನಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರೆ ಹೆಚ್ಚು ಪ್ರಯೋಜನವಾಗಲಿದೆ ಎನ್ನುವ ವಾಸ್ತವವನ್ನು ಸರ್ಕಾರ ಈಗಲಾದರೂ ಅರ್ಥೈಸಿಕೊಳ್ಳಬೇಕಾಗಿದೆ.

ಇದರಿಂದ ಬರುವ ಹೆಚ್ಚುವರಿ ಸಂಪನ್ಮೂಲವನ್ನು ಜನಪರ ಕಲ್ಯಾಣ ಕಾರ್ಯಕ್ರಮಕ್ಕೆ ವಿನಿಯೋಗಿಸಿದರೆ ಖಾಸಗೀಕರಣ ಉದ್ದೇಶವೂ ಸಾರ್ಥಕವಾಗಲಿದೆ. ತೈಲ ಮಾರಾಟದ ಮೇಲಿನ ನಿಯಂತ್ರಣವನ್ನು ಖಾಸಗಿಯವರಿಗೆ ಬಿಟ್ಟುಕೊಡುವುದರಿಂದ ಸರ್ಕಾರ ಭಾವಿಸಿದಂತೆ ಭಾರಿ ಅನಾಹುತವೇನೂ ಆಗಲಾರದು.

ಜಾಗತಿಕ ತೈಲ ಮಾರಾಟ ಸಂಸ್ಥೆಗಳು ಖಾಸಗಿ ಒಡೆತನದಲ್ಲಿಯೇ ಇರುವುದು ನಮಗೂ ಆದರ್ಶವಾಗಿರಬೇಕಾಗಿದೆ.  ರಕ್ಷಣಾ ವಲಯದಲ್ಲಿಯೇ ವಿದೇಶಿ ಹೂಡಿಕೆಗೆ ಮುಕ್ತ ಅವಕಾಶ ಕೊಟ್ಟಿರುವ ಸರ್ಕಾರ, ತೈಲ ಮಾರಾಟ ವಿಷಯದಲ್ಲಿ ಗೊಂದಲದಲ್ಲಿಇರುವುದು ಸರಿಯಲ್ಲ.

ತೈಲ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಮತ್ತು ಸ್ವತಂತ್ರ ನಿಯಂತ್ರಣ ವ್ಯವಸ್ಥೆಯೂ ನಮ್ಮಲ್ಲಿ ಇಲ್ಲ. ದೂರಸಂಪರ್ಕ, ಬಂಡವಾಳ ಪೇಟೆಗಳಿಗೆ ಇರುವಂತಹ ನಿಯಂತ್ರಣ ವ್ಯವಸ್ಥೆ ತೈಲ ಮಾರುಕಟ್ಟೆಗೂ ರೂಪಿಸುವ ಅಗತ್ಯ ಇದೆ. ಷೇರು ವಿಕ್ರಯಕ್ಕೆ ಹಣಕಾಸು ಸಂಗ್ರಹದ ಉದ್ದೇಶ ಒಂದೇ ಇರಬಾರದು. ಇಡೀ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ರಾಜಕೀಯ ಇಚ್ಛಾಶಕ್ತಿ ಇದ್ದರೆ ಮಾತ್ರ  ಆರ್ಥಿಕ ಸುಧಾರಣಾ ಕ್ರಮಗಳ ಉದ್ದೇಶ ಈಡೇರೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT