ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

Last Updated 27 ಜುಲೈ 2017, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಟನ್‌ಗಟ್ಟಲೆ ಸರಕು ಸಾಗಿಸುವ ಭಾರಿ ವಾಹನಗಳು ಇಲ್ಲಿ ಓಡಾಡುತ್ತವೆ. ಆದರೆ, ರಸ್ತೆಗಳು ಮಾತ್ರ ಕಚ್ಚಾ ರಸ್ತೆಯಂತಿವೆ. ಗುಂಡಿಗಳನ್ನು ಮುಚ್ಚದ ಪಾಲಿಕೆಯವರು ಒಂದು ಕಡೆಯಾದರೆ, ಮನ ಬಂದಂತೆ ರಸ್ತೆಗಳನ್ನು ಅಗೆಯುವ ಖಾಸಗಿ ಕಂಪೆನಿಗಳು ಮತ್ತೊಂದು ಕಡೆ. ಇವರಿಬ್ಬರಿಂದಾಗಿ ಹದಗೆಟ್ಟಿದ್ದು ರಸ್ತೆಗಳು. ಸಂಕಟ ಅನುಭವಿಸುತ್ತಿರುವವರು ನಾವುಗಳು...’

ಹೀಗೆಂದು ಹಳೇ ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದ ಗುಂಡಿಬಿದ್ದ ರಸ್ತೆಗಳ ಕುರಿತು ಉದ್ಯಮಿ ಸುಭಾಷ್ ದಾನಿ ಅಸಮಾಧಾನ ವ್ಯಕ್ತಪಡಿಸಿದರು. ಕೇಬಲ್, ಪೈಪ್‌ಲೈನ್ ಸೇರಿದಂತೆ ಹಲವು ಕಾರಣಗಳಿಗಳಿಗಾಗಿ ಇಲ್ಲಿ ರಸ್ತೆಗಳನ್ನು ಅಗೆಯುವುದು ಸಾಮಾನ್ಯವಾಗಿದೆ. ಆದರೆ, ಅವುಗಳನ್ನು ಸರಿಯಾಗಿ ಮುಚ್ಚುವ ಹೊಣೆಗಾರಿಕೆಯನ್ನು ಅಗೆದವರು ತೋರುವುದಿಲ್ಲ. ಹಾಗಾಗಿ, ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳ ಬಹುತೇಕ ರಸ್ತೆಗಳ ಪಾಡು ಹೀಗೆಯೇ ಇದೆ.

‘ಮಳೆ ನಿಂತಿರುವುದರಿಂದ ಈಗ ಇಲ್ಲಿ ಓಡಾಡಬಹುದಾಗಿದೆ. ಇಲ್ಲದಿದ್ದರೆ, ಇತ್ತ ಬರಲೂ ಕಷ್ಟಪಡಬೇಕಾಗುತ್ತದೆ. ಮೂರ್ನಾಲ್ಕು ದಿನದ ಹಿಂದೆ ನಮ್ಮ ಕಾರ್ಖಾನೆಗೆ ಬಂದಿದ್ದ ಲಾರಿಯ ಚಕ್ರವೊಂದು ಗುಂಡಿಯಲ್ಲಿ ಹೂತುಕೊಂಡಿತ್ತು. ಈ ರೀತಿಯ ಸಮಸ್ಯೆಗಳು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಇನ್ನಾದರೂ ಈ ಪ್ರದೇಶದ ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಯವರು ಮುಂದಾಗಬೇಕು’ ಎಂದು ಕಾರ್ಖಾನೆಯೊಂದರ ಉದ್ಯೋಗಿ ರಾಕೇಶ್ ಒತ್ತಾಯಿಸಿದರು.

ಕಲ್ಲುಗಳು ಎದ್ದಿವೆ: ಆನಂದನಗರದ ಪಕ್ಕದಲ್ಲಿರುವ ಮಯೂರನಗರದ ಕೆಲ ಪ್ರದೇಶದಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಮಯೂರನಗರ ರಸ್ತೆ ಮಾತ್ರ ಮೂರ್ನಾಲ್ಕು ವರ್ಷದಿಂದ ಹೇಗಿತ್ತೊ, ಈಗಲು ಅದೇ ಸ್ಥಿತಿಯಲ್ಲಿದೆ. ಗುಂಡಿ ಬಿದ್ದಿದ್ದಲ್ಲದೆ, ಕೆಲವು ಕಡೆ ಕಲ್ಲುಗಳು ಮೇಲಕ್ಕೆದ್ದಿವೆ. ಇದರಿಂದಾಗಿ, ವಾಹನಗಳ ಓಡಾಟ ಬಹಳ ಕಷ್ಟವಾಗಿದೆ ಎನ್ನುವ ಸ್ಥಳೀಯ ನಿವಾಸಿಗಳು, ಗುಂಡಿಗಳಿಗೆ ಮಣ್ಣು ಹಾಕುವ ಬದಲು ಕಾಂಕ್ರೀಟ್ ಅಥವಾ ಡಾಂಬರು ಹಾಕಬೇಕು ಎಂದು ಒತ್ತಾಯಿಸುತ್ತಾರೆ.

‘ಕೆಲ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಶಾಲಾ ಮಕ್ಕಳೂ ಆಟೊಗಳಲ್ಲಿ ಇದೇ ಮಾರ್ಗದಲ್ಲಿ ಹೋಗುತ್ತಾರೆ. ಅಲ್ಲಲ್ಲಿ ಸಿಗುವ ಗುಂಡಿಗಳು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತವೆ. ಬಿದ್ದು ಗಾಯವಾದರೆ ಯಾರು ಹೊಣೆ’ ಎಂದು ಸ್ಥಳೀಯ ನಿವಾಸಿ ಹೇಮಂತ್ ಪ್ರಶ್ನಿಸಿದರು.

ನೀರು ನಿಂತು ತೊಂದರೆ
ಬೇರೆ, ಬೇರೆ ಕೆಲಸಕ್ಕೆ ರಸ್ತೆ ಅಗೆದಾಗ ಆ ಮಣ್ಣನ್ನು ಚರಂಡಿಗೆ ಹಾಕಲಾಗುತ್ತದೆ. ಮಳೆ ಬಂದಾಗ ಚರಂಡಿಯಲ್ಲಿ ನೀರು ಹರಿಯದೆ ತುಂಬಿ ರಸ್ತೆಯ ಮೇಲೆ ಹರಿಯುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಅವು ಮತ್ತಷ್ಟು ದೊಡ್ಡದಾಗುತ್ತಿವೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ.
ನಾಗೇಶ, ಉದ್ಯಮಿ

ತೆರಿಗೆ ಬಿಡಲಿ
ರಸ್ತೆಯನ್ನು ದುರಸ್ತಿ ಮಾಡಲು ಹಿಂದೇಟು ಹಾಕುವ ಪಾಲಿಕೆಯವರು, ಸಾರ್ವಜನಿಕರಿಂದ ತೆರಿಗೆಯನ್ನು ಪಾವತಿಸಿಕೊಳ್ಳುವುದನ್ನು ಬಿಡಬೇಕು. ಆಗ ನಾವೇ ನಮ್ಮ ರಸ್ತೆಯ ಗುಂಡಿಗಳನ್ನು ಮುಚ್ಚಿಕೊಂಡು ಅಭಿವೃದ್ಧಿ  ಮಾಡಿಕೊಳ್ಳುತ್ತೇವೆ
ಸಿ.ಎಂ. ಮಾನೆ, ನಿವಾಸಿ

* * 

ಈಗ ಮುಖ್ಯರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗುತ್ತಿದೆ. ನಾಲ್ಕು ದಿನಗಳಲ್ಲಿ ನನ್ನ ವಾರ್ಡ್‌ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು
ದೀಪಾ ಗೌರಿ
ವಾರ್ಡ್‌ 39ರ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT