ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರ ನಿರೀಕ್ಷೆಯಲ್ಲಿ ವಿಜಯಪುರ

Last Updated 27 ಜುಲೈ 2017, 9:05 IST
ಅಕ್ಷರ ಗಾತ್ರ

ವಿಜಯಪುರ: ಇದೇ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವನಹಳ್ಳಿ ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡುತ್ತಿರುವುದರಿಂದ ತಾಲ್ಲೂಕು ಕೇಂದ್ರ ಹೋರಾಟಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಹೆಬ್ಬಾಳ, ನಾಗವಾರ ಕೆರೆಗಳಲ್ಲಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಬಯಲುಸೀಮೆ ಭಾಗಗಳಾದ ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ಬಜೆಟ್ ಪೂರ್ವದಿಂದಲೂ ವಿಜಯಪುರವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆಗೆ ಒತ್ತಾಯಿಸಲಾಗುತ್ತಿದೆ. ಅನೇಕ ಸಭೆಗಳನ್ನು ನಡೆಸಿದ್ದ ವಿವಿಧ ಸಂಘಟನೆಗಳ ಹೋರಾಟಗಾರರು, ವಿಧಾನಸೌಧಕ್ಕೆ  ಭೇಟಿ ನೀಡಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು, ಶಾಸಕರು, ಜಿಲ್ಲಾಧಿಕಾರಿಗೆ   ಮನವಿ ಸಲ್ಲಿಸಿದ್ದಾರೆ.

ಸರ್ಕಾರದ ನಡೆಯಿಂದ ಬೇಸತ್ತ ಹೋರಾಟಗಾರರು, ಎರಡು ತಿಂಗಳಿಂದ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ಮೂಲಕ ಹಲವು ಹೋರಾಟ ನಡೆಸಿದ್ದಾರೆ. ಜೊತೆಗೆ ಹಲವು ಮನವಿಗಳನ್ನು ಕಚೇರಿಗೆ ನೀಡಿದ್ದಾರೆ.

ಹೋರಾಟ ಸಮಿತಿಯ ಪದಾಧಿಕಾರಿಗಳು ಸಂಸದ ಎಂ. ವೀರಪ್ಪ ಮೊಯಿಲಿ, ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇದೇ 28ರಂದು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ.

ಬೇಡಿಕೆಗಳು: ವಿಜಯಪುರದಿಂದ ದೇವನಹಳ್ಳಿಗೆ ಸಂಚರಿಸುವ ಹೆದ್ದಾರಿಯ ಪಕ್ಕದಲ್ಲಿ ಸಾರಿಗೆ ಇಲಾಖೆ ಡಿಪೋ ನಿರ್ಮಾಣ ಮಾಡಲೆಂದು ನಾಲ್ಕು ಎಕರೆ ಭೂಮಿ ಮಂಜೂರು ಮಾಡಿ ಐದು ವರ್ಷಗಳು ಕಳೆದಿವೆ. ಆದರೆ, ಡಿಪೋ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಕನಿಷ್ಠ ಕಾಂಪೌಂಡ್ ನಿರ್ಮಾಣ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಭೇಟಿಯ ಸಮಯದಲ್ಲಿ ಇದಕ್ಕೆ ಮುಕ್ತಿ ಸಿಗಲಿದೆಯೇ ಎನ್ನುವ ನಿರೀಕ್ಷೆ ಜನರದ್ದು.

50 ಲಕ್ಷ ವೆಚ್ಚದ ಮಹರ್ಷಿ ವಾಲ್ಮೀಕಿ ಭವನಕ್ಕೆ ಸಂಸದ ಎಂ.ವೀರಪ್ಪ ಮೊಯಿಲಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಗುದ್ದಲಿ ಪೂಜೆಗಷ್ಟೆ ಸೀಮಿತವಾಯಿತೇ ವಿನಾ ಕಾಮಗಾರಿ ಪ್ರಾರಂಭವಾಗಿಲ್ಲ.

ವಿಜಯಪುರದಲ್ಲಿ 50 ಸಾವಿರಕ್ಕೂ  ಹೆಚ್ಚಿನ ಜನಸಂಖ್ಯೆ ಇದೆ. ಹೊರಗಡೆಯಿಂದ ಬಂದು ಹೋಗುವ ಜನರ ಸಂಖ್ಯೆ 20 ಸಾವಿರಕ್ಕೂ ಹೆಚ್ಚು.  ಪ್ರತಿನಿತ್ಯ ಟನ್‌ಗಟ್ಟಲೆ ಕಸ ಉತ್ಪತ್ತಿಯಾಗುತ್ತದೆ. ಆದರೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಘಟಕ ಸ್ಥಾಪನೆ ಇದುವರೆಗೂ ಸಾಧ್ಯವಾಗಿಲ್ಲ.

‌‌ದೇವನಹಳ್ಳಿಯಿಂದ ಕೋಲಾರ, ಮುಳಬಾಗಿಲು, ತಿರುಪತಿಯ ಕಡೆಗೆ  ವಿಜಯಪುರದ ಮೂಲಕ ಹಾದು ಹೋಗುವ ಹೆದ್ದಾರಿಯನ್ನು ವಿಸ್ತರಣೆ ಮಾಡಲು ನಾಯಕಿ ಅನುಸೂಯಮ್ಮ ಈ ಹಿಂದೆ ಮನವಿ ಮಾಡಿದ್ದರು. ಅದು ಈಡೇರುತ್ತದೆಯೇ ಎಂಬುದರ ಕುರಿತು ಸ್ಥಳೀಯರಲ್ಲಿ ಕುತೂಹಲ ಇದೆ. ವಿಜಯಪುರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದಕ್ಕೆ 28ರತನಕ ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT