ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲೇ ಮನೆಯ ಮಾಡಿ...

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಆಗಸಕ್ಕೆ ಕೈಚಾಚುವುದು ಮನುಷ್ಯನ ಸಹಜ ಗುಣ. ಅದು ಮಹತ್ವಾಕಾಂಕ್ಷೆಯ ಪ್ರತೀಕವೂ ಹೌದು. ಈಗ ಮನೆಯ ಕಲ್ಪನೆ ಹೇಗೆಲ್ಲ ಬದಲಾಗಿದೆ ನೋಡಿ! ನೆಲದಿಂದ ನೂರಾರು ಅಡಿಗಳವರೆಗೆ ಪೇರಿಸಿಟ್ಟಂತಿರುವ ಮನೆಗಳು. ಐವತ್ತು–ನೂರು ಮಹಡಿಗಳ ಅಪಾರ್ಟ್‌ಮೆಂಟ್‌ಗಳು ಬಂದ ನಂತರ ಮನೆಯೆಂಬ ಜಗತ್ತು ನೆಲದಿಂದ ಬಹು ಎತ್ತರಕ್ಕೆ ಏರಿದೆ. ಆಧುನಿಕ ಮನೆಯೊಳಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಸೃಷ್ಟಿಸಲಾಗಿದೆ.

ಮನೆ ಚಿಕ್ಕದೇ ಇರಲಿ, ಅರಮನೆಯಂಥ ಐಷಾರಾಮಿ ಮನೆಗಳೇ ಇರಲಿ, ಶಬ್ದಮಾಲಿನ್ಯದಿಂದ ತಪ್ಪಿಸಿಕೊಳ್ಳುವಂತಿಲ್ಲ. ಹೊಗೆ, ದೂಳು ಮಿಶ್ರಿತ ಗಾಳಿಯ ಸೇವನೆ ಅನಿವಾರ್ಯ. ಬೇಕೋ ಬೇಡವೋ ಅವುಗಳ ಜೊತೆಗೇ ಬದುಕುತ್ತಿದ್ದೇವೆ. ಇವೆಲ್ಲವುಗಳಿಂದ ಮುಕ್ತಿ ‍ಪಡೆಯಲು ನಮ್ಮ ಈ ಮಹಾನಗರದಲ್ಲಿಯೂ ಸಿದ್ಧವಾಗುತ್ತಿದೆ ‘ಸ್ಕೈ ಹೋಮ್ಸ್‌’ ಎಂಬ ಆಕಾಶದೆತ್ತರದಲ್ಲಿನ ಮನೆಯ ಪರಿಕಲ್ಪನೆ.

((ಬನಶಂಕರಿಯ ಟಾಟಾ ಹೌಸಿಂಗ್‌ನ ‘ದಿ ಪ್ರೊಮೊಂಟ್’ 21ನೇ ಟೆರೇಸ್‌ ಮೇಲಿರುವ ಈಜುಕೊಳ, ಹಿನ್ನೆಲೆಯಲ್ಲಿ ನಗರದ ನೋಟ))

ಸ್ಕೈ ಹೋಮ್ಸ್‌ ಬಹುತೇಕ ಗಾಜಿನಿಂದಲೇ ನಿರ್ಮಾಣವಾಗಿರುತ್ತದೆ. ಪ್ರಶಾಂತ ವಾತಾವರಣ, ಆಗಸಕ್ಕೆ ಹತ್ತಿರವಿದ್ದಂತೆ, ಮೋಡಗಳ ನಡುವೆ ಇರುವ ಅನುಭವ ಕೊಡುತ್ತದೆ. ಇಡೀ ನಗರದ ಸೌಂದರ್ಯವನ್ನು ಸವಿಯುವ ಅವಕಾಶ ಇದು ಕಲ್ಪಿಸುತ್ತದೆ ಎಂಬುದು ವಿಶೇಷ. ದಣಿದ ದೇಹ ನಿರಾಳವಾಗಿ ವಿಶ್ರಮಿಸಲು ಅನುಕೂಲವಾಗುವಂತೆ ಮನೆಯ ವಿನ್ಯಾಸವಿರುತ್ತದೆ. ನೆಲದಿಂದ ಎತ್ತರದಲ್ಲಿರುವ ಕಾರಣ ಗೌಜು ಗದ್ದಲಗಳಿರುವುದಿಲ್ಲ. ಶುದ್ಧ ಗಾಳಿ ಯಥೇಚ್ಛವಾಗಿ ಸಿಗುತ್ತದೆ. ನೆಲ ಮಟ್ಟದಿಂದ ಕನಿಷ್ಠ 2 ಡಿಗ್ರಿ ಉಷ್ಣಾಂಶ ಕಡಿಮೆ ಇರುತ್ತದೆ. ಸ್ಕೈಹೋಮ್ಸ್‌ನಲ್ಲಿ ಸುಂದರ ಹೂ ಕುಂಡಗಳು, ಈಜುಕೊಳ, ಹೋಂ ಥಿಯೇಟರ್‌, ಮಿನಿ ಜಿಮ್‌, ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ, ಸಂಪರ್ಕ ವ್ಯವಸ್ಥೆ, ಪ್ರತ್ಯೇಕ ಲಿಫ್ಟ್‌ ಕೂಡಾ ಇರುತ್ತದೆ.

ಹೀಗಿರುತ್ತವೆ ಸ್ಕೈ ಹೋಮ್ಸ್‌: ಸ್ಕೈ ಹೋಮ್ಸ್‌ ಪರಿಕಲ್ಪನೆ ಹೊಸದೇನಲ್ಲ. ಮುಂದುವರಿದ ದೇಶಗಳಲ್ಲಿ, ದುಬೈನಂತಹ ಐಷಾರಾಮಿ ನಗರಗಳಲ್ಲಿ ಸ್ಕೈ ಹೋಮ್ಸ್‌ ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ಈಗಷ್ಟೇ ಪರಿಚಯವಾಗುತ್ತಿದೆ. ಬಹುಮಹಡಿ ವಸತಿ ಸಮುಚ್ಛಯದ ಕೊನೆಯ ಅಂತಸ್ತುಗಳನ್ನು ಸ್ಕೈ ಹೋಮ್ಸ್‌ ಆಗಿ ಪರಿವರ್ತಿಸುವುದು ಒಂದು ಬಗೆಯಾದರೆ, ಎತ್ತರದ ಜಾಗಗಳಲ್ಲಿ ಸ್ಕೈಹೋಮ್ಸ್‌ ಸಮುಚ್ಛಯ ನಿರ್ಮಾಣ ಮಾಡುವುದು ಇನ್ನೊಂದು ಬಗೆ.

ಬನಶಂಕರಿಯಲ್ಲಿ ಟಾಟಾ ಹೌಸಿಂಗ್‌ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ಟಾಟಾ ಪ್ರೊಮೊಂಟ್‌’ ವಸತಿ ಸಮುಚ್ಛಯ ರಾಜ್ಯದ ಮೊದಲ ಸ್ಕೈ ಹೋಮ್ಸ್‌ ಯೋಜನೆ ಎನಿಸಿದೆ. ಸುಮಾರು 2000 ಚದರ ಅಡಿಯ 300 ಮನೆಗಳಿರುವ ಈ ಸಮುಚ್ಛಯ ಬನಶಂಕರಿ ಬಳಿ ನಿರ್ಮಾಣವಾಗಿದೆ. ಸಿಂಗಪುರದ ವಾಸ್ತುಶಿಲ್ಪಿಯೊಬ್ಬರು ಇದನ್ನು ವಿನ್ಯಾಸ ಮಾಡಿದ್ದಾರೆ. ಸುಮಾರು 14 ಎಕರೆ ಪ್ರದೇಶದಲ್ಲಿರುವ ಈ ಸ್ಕೈ ಹೋಮ್ಸ್‌ ಸಮುಚ್ಛಯದಿಂದ ಇಡೀ ಬೆಂಗಳೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯೋದಯ, ಸೂರ್ಯಾಸ್ತದ ರಮಣೀಯ ದೃಶ್ಯಗಳನ್ನು ಕುಳಿತಲ್ಲಿಯೇ ಸವಿಯಬಹುದಾಗಿದೆ. ವಿಶಾಲ ಮನೆ, ಸುತ್ತಲೂ ಗಾಜಿನ ಗೋಡೆ, ತೆರೆದ ಬಾಲ್ಕನಿ, ಹಜಾರ, ಊಟದ ಕೊಠಡಿ, ಅಡುಗೆ ಮನೆ, ಮಲಗುವ ಕೋಣೆ ಹೀಗೆ ಎಲ್ಲೆಲ್ಲೂ ಗಾಳಿ, ಬೆಳಕಿನ ರಾಶಿ.

ಬೆಂಗಳೂರಿನಲ್ಲಿ ಸ್ಕೈ ಹೋಮ್‌ಗಳಿಗೆ ಬೇಡಿಕೆ ಹೇಗಿದೆ ಎಂಬ ಬಗ್ಗೆ ಟಾಟಾ ಹೌಸಿಂಗ್‌ನ ಮಾರುಕಟ್ಟೆ ಮುಖ್ಯಸ್ಥ ರಜೀಬ್‌ ದಾಸ್‌ ಹೇಳುವುದು ಹೀಗೆ...

ಐಷಾರಾಮಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯ ಬೆಳವಣಿಗೆಯನ್ನು ಗಮನಿಸಿದರೆ ಬೆಂಗಳೂರು ಅತ್ಯಂತ ವೇಗದಿಂದ ಬೆಳೆಯುತ್ತಿರುವ ನಗರ. ಮೂಲ ಸೌಕರ್ಯಗಳು ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಇಲ್ಲಿನ ಜನರು ದೇಶ ವಿದೇಶಗಳಿಗೆ ಸುತ್ತಿ ಬಂದು ಅಲ್ಲಿನ ಐಷಾರಾಮಿ ಮನೆಗಳ ಬಗ್ಗೆ ತಿಳಿದಿರುತ್ತಾರೆ. ನಗರದ ಜನ ಜಾಗತಿಕ ಜೀವನಶೈಲಿಯನ್ನು ಇಷ್ಟಪಡುವ ಕಾರಣ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ದಶಕಗಳ ಕಾಲ ವಿದೇಶದಲ್ಲಿ ನೆಲೆಸಿ ತವರು ನೆಲದಲ್ಲಿ ವಿಶ್ರಾಂತಿಯ ಜೀವನ ನಡೆಸಲು ಬಯಸುವ ಗ್ರಾಹಕರು ಇಂತಹ ಮನೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇಲ್ಲಿನ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಿಕೊಡಲಾಗುವುದು.

ದಿ ಪ್ರೊಮೊಂಟ್‌ನಲ್ಲಿ ಜಿಮ್‌, ಯೋಗ ಕೇಂದ್ರ, ಸ್ಕ್ವಾಷ್‌ ಕೋರ್ಟ್‌, ಈಜುಕೊಳ, ಟೇಬಲ್‌ ಟೆನಿಸ್‌ ಕೋರ್ಟ್, ಆಟದ ಜಾಗ, ಕಾರ್ಡ್ ರೂಂ, ಗಾಲ್ಫ್‌ ಸಿಮ್ಯುಲೇಟರ್‌, ಗ್ರಂಥಾಲಯ, ಮಿನಿ ಥಿಯೇಟರ್‌ ಎಲ್ಲವೂ ಇದೆ. ಗಾಜಿನಿಂದ ನಿರ್ಮಾಣವಾದ ಬಿಸಿನೀರಿನ ಈಜುಕೊಳ ಅಪಾರ್ಟ್‌ಮೆಂಟ್‌ನ ಮಧ್ಯಭಾಗದಲ್ಲಿದೆ. ರೆಸ್ಟೊರೆಂಟ್‌, ಬಾರ್‌, ರಿಟೈಲ್‌ ಸ್ಟೋರ್‌ಗಳು, ಶಾಪಿಂಗ್‌ ಮಳಿಗೆಗಳು ಹತ್ತಿರದಲ್ಲಿಯೇ ಇವೆ. ಮನೆಗಳ ಬೆಲೆ ₹2.80 ಕೋಟಿಯಿಂದ ಆರು ಕೋಟಿಯವರೆಗೂ ಇದೆ.

**

ದಿ ಪ್ರೊಮೊಂಟ್‌ ಅತ್ಯಂತ ಎತ್ತರದ ಕಟ್ಟಡ. ಬೆಂಗಳೂರಿನಲ್ಲಿಯೇ ಇದು ಎತ್ತರದ ಕಟ್ಟಡ. ‘ನ್ಯೂ ಹೆವನ್‌’ ನಮ್ಮ ಮುಂದಿನ ಟೌನ್‌ಷಿಪ್‌ ಯೋಜನೆ ತುಮಕೂರು ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
–ರಜೀಬ್‌ ದಾಸ್, ಟಾಟಾ ಹೌಸಿಂಗ್‌ ಮಾರುಕಟ್ಟೆ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT