ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನ ಮೂಲಭೂತವಲ್ಲದಿದ್ದರೆ ಆಧಾರ್‌ ಕಾಯ್ದೆಯಲ್ಲಿ ಅಧ್ಯಾಯ ಏಕೆ

ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಕೇಳಿದ ಸುಪ್ರೀಂ ಕೋರ್ಟ್‌
Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಜನರ ವೈಯಕ್ತಿಕ ವಿವರಗಳು ಮತ್ತು ದತ್ತಾಂಶಗಳನ್ನು ರಕ್ಷಿಸುವುದಕ್ಕಾಗಿ 2016ರ ಆಧಾರ್‌ ಕಾಯ್ದೆಯಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಡಲಾಗಿದೆ. ಖಾಸಗಿತನವು ಮೂಲಭೂತ ಹಕ್ಕು ಎಂದು ಶಾಸನಬದ್ಧವಾಗಿ ಪರಿಗಣಿಸಲಾಗಿದೆ ಎಂಬುದು ಇದರರ್ಥ ಅಲ್ಲವೇ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಆದರೆ, ಖಾಸಗಿತನವು ಹಲವು ಅಂಶಗಳನ್ನು ಹೊಂದಿರುವುದರಿಂದ ಅದನ್ನು ಮೂಲಭೂತ ಹಕ್ಕು ಎಂದು ಕರೆಯಲು ಸಾಧ್ಯವಿಲ್ಲ ಎಂಬ ತಮ್ಮ ಹಿಂದಿನ ವಾದಕ್ಕೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಬದ್ಧರಾದರು.

‘ಖಾಸಗಿತನದ ರಕ್ಷಣೆಗಾಗಿ ಕಾನೂನಿನಲ್ಲಿ ನಿರ್ದಿಷ್ಟ ಪ್ರಸ್ತಾಪಗಳಿರಬಹುದು. ಹಾಗೆಂದ ಮಾತ್ರಕ್ಕೆ ಅದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು  ವೇಣುಗೋಪಾಲ್‌ ಅವರು ಮುಖ್ಯ ನ್ಯಾಯಮೂರ್ತಿ ಎಸ್‌.ಜೆ. ಖೇಹರ್‌ ನೇತೃತ್ವದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ವಾದಿಸಿದರು.

ನಾಗರಿಕರಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಈಗಾಗಲೇ ಸಾರ್ವಜನಿಕ ವಾಗಿ ಲಭ್ಯವಿರುವುದರಿಂದ, ಮಾಹಿತಿಗೆ ಸಂಬಂಧಿಸಿದ ದತ್ತಾಂಶಗಳ ಖಾಸಗಿತನ ಅತ್ಯಂದ ಮಹತ್ವದ್ದು ಎಂದು ನ್ಯಾಯಪೀಠ ಪ್ರತಿಪಾದಿಸಿತು.

ಜನರಿಗೆ ಸಂಬಂಧಿಸಿದ ಕೆಲವು ದತ್ತಾಂಶಗಳು  ಸಂವಿಧಾನಾತ್ಮಕವಾಗಿ ರಕ್ಷಣೆಗೊಳಗಾದ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ವೇಣುಗೋಪಾಲ್‌ ಒಪ್ಪಿಕೊಂಡರು. ಆದರೆ, ಮಾಹಿತಿಗಳ ಖಾಸಗಿತನ ಯಾವತ್ತೂ ಮೂಲಭೂತ ಹಕ್ಕುಗಳ ಭಾಗವಾಗದು ಎಂದರು.


‘ದೇಶದ ಹಿತಾಸಕ್ತಿ ಮತ್ತು ಜನರ ಹಿತಕ್ಕಾಗಿ ಕೇಳುವ ಮಾಹಿತಿಗಳಿಗೆ ಖಾಸಗಿತನ ಇಲ್ಲ. ದೇಶದ ಹಿತ, ಜನರ ಅನುಕೂಲಕ್ಕಾಗಿ ಸರ್ಕಾರವು ಜನರ ಬೆರಳಚ್ಚು, ಪಾಪೆ ಪೊರೆಯ ಸ್ಕ್ಯಾನ್‌ ಮಾಡಲು ಸೂಚಿಸಬಹುದು’ ಎಂದು ಅಟಾರ್ನಿ ಜನರಲ್‌ ಹೇಳಿದರು.

‘ಹಾಗಿದ್ದರೂ, ಕೇಳಿದ ಮಾಹಿತಿಯು ಅಪ್ರಸ್ತುತವಾಗಿದ್ದರೆ ಜನರು ಮಾಹಿತಿ ನೀಡಲು ನಿರಾಕರಿಸಬಹುದು. ಉದಾಹರಣೆಗೆ, ಆಧಾರ್‌ ನೋಂದಣಿ ಸಂದರ್ಭದಲ್ಲಿ ವ್ಯಕ್ತಿಗೆ ವಿವಾಹೇತರ ಸಂಬಂಧ ಇದೆಯೇ ಎಂಬಂತಹ ಪ್ರಶ್ನೆ ಕೇಳಿದರೆ, ಆತ ಅದಕ್ಕೆ ಉತ್ತರಿಸಬೇಕೆಂದಿಲ್ಲ. ಹಾಗಾಗಿ, ಮಾಹಿತಿಯ ಖಾಸಗಿತನ ವಿಚಾರವನ್ನು ಪ್ರಕರಣ ಆಧರಿತವಾಗಿ ನಿರ್ಧರಿಸಬೇಕು’ ಎಂದು ಹೇಳಿದರು.

ಜನರ ವೈಯಕ್ತಿಕ ಮಾಹಿತಿಗಳನ್ನು  ಸುರಕ್ಷಿತವಾಗಿಡಲು ಸರ್ಕಾರ ಶಾಸನಬದ್ಧ ಆಸಕ್ತಿ ಹೊಂದಿದೆ ಎಂದು ವೇಣುಗೋಪಾಲ್‌ ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT