ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಏಕೆ ಈ ಉಸಾಬರಿ?

ಅಕ್ಷರ ಗಾತ್ರ

ವೀರಶೈವ ಲಿಂಗಾಯತ ಧರ್ಮದ ಪ್ರತ್ಯೇಕತೆಯ ಚರ್ಚೆಗೆ ಈಗ ಮತ್ತೆ ಚಾಲನೆ ದೊರೆತಿರುವುದು ನಿಜಕ್ಕೂ ಸಂತೋಷದ ವಿಷಯ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವವರೆಲ್ಲರೂ ಯಾವುದೇ ಧರ್ಮದ ಪ್ರತ್ಯೇಕತೆ, ಸ್ವಾಯತ್ತತೆಗಳನ್ನು ಸ್ವಾಗತಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಭಾರತದಲ್ಲಿ ನೂರಾರು ಜಾತಿ-ಪಂಥಗಳಿವೆ. ಆದರೆ ಅವೆಲ್ಲವನ್ನೂ ಹಿಂದೂ ಧರ್ಮ ಎಂಬ ಒಂದೇ ಲಾಂಛನದಡಿ ಕಟ್ಟಿಹಾಕುವುದು ಸಾಧುವಲ್ಲ. ‘ಹಿಂದೂ ಧರ್ಮದ ಹೆಸರಿನಲ್ಲಿ ವೈದಿಕಧರ್ಮದ ಕಂದಾಚಾರ, ಶ್ರೇಣೀಕರಣಗಳೇ ಭಾರತದ ಎಲ್ಲ ಜಾತಿ-ಸಂಪ್ರದಾಯಗಳೊಳಗೆ ಹಾಸುಹೊಕ್ಕಾಗಿವೆ’ ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಇದಕ್ಕೆ ಪೂರಕವೆಂಬಂತೆ ಎಸ್.ಎಂ. ಜಾಮದಾರ ಅವರು ‘ವಿಜಯನಗರದ ಅರಸರ ಕಾಲದಲ್ಲಿ ಲಿಂಗಾಯತಕ್ಕೆ ಬಂದ ಆಂಧ್ರಪ್ರದೇಶದ ಕೆಲ ಆರಾಧ್ಯ ಬ್ರಾಹ್ಮಣರು ತಮ್ಮ ಮೂಲಬ್ರಾಹ್ಮಣ್ಯವನ್ನು ಬಿಡದೆ, ಲಿಂಗಾಯತವನ್ನೂ ಸಂಪೂರ್ಣವಾಗಿ ಪಾಲಿಸದೆ ಹಿಂದೂ ಧರ್ಮದೊಂದಿಗಿನ ತಿಕ್ಕಾಟ ಬದಿಗಿಟ್ಟು ಅದರೊಂದಿಗೆ ಕೆಲವು ಸಂಧಾನಗಳನ್ನು ಮಾಡಿಕೊಂಡರು’ ಎಂದಿದ್ದಾರೆ (ಪ್ರ.ವಾ., ಜೂನ್‌ 30).

ಬಸವಾದಿ ಶರಣರು ವೇದ ಪ್ರಾಮಾಣ್ಯವನ್ನು ಒಪ್ಪದೆ ಪ್ರಭುತ್ವ ಮತ್ತು ಪುರೋಹಿತಶಾಹಿಗಳ ವಿರುದ್ಧ ಬಂಡಾಯವೆದ್ದವರು. ಆದರೆ ನಂತರದ ತಲೆಮಾರಿನಲ್ಲಿ ಈ ಬಂಡಾಯ ಪೈಪೋಟಿಯಾಗಿ ಪರಿವರ್ತನೆಯಾದುದು ದುರಂತ. ಬಂಡಾಯದಲ್ಲಿ ತೀವ್ರ ಜುಗುಪ್ಸೆ ಮತ್ತು ಸಾತ್ವಿಕ ಅಸಹನೆಗಳಿದ್ದರೆ ಪೈಪೋಟಿಯಲ್ಲಿ ಗುಪ್ತ ಆಕರ್ಷಣೆ ಮತ್ತು ಅನುಕರಣೆಯ ತುಡಿತಗಳು ಹುದುಗಿರುತ್ತವೆ. ಶೂನ್ಯಸಂಪಾದನೆಗಳು ರಚನೆಯಾಗುವ ವೇಳೆಗೆ ಅಂದಿನ ವೀರಶೈವ ಪಂಡಿತರು ವೀರಶೈವ ಧರ್ಮವನ್ನು ವೈದಿಕ ಧರ್ಮಕ್ಕಿಂತ ಅನನ್ಯವಾಗಿ ರೂಪಿಸುವುದನ್ನು ಬಿಟ್ಟು ವೈದಿಕ ಧರ್ಮಕ್ಕೆ ಪರ್ಯಾಯವಾಗಿ, ಪೈಪೋಟಿಯಾಗಿ ರೂಪಿಸತೊಡಗಿದರು. ತತ್ಪರಿಣಾಮವಾಗಿ ಸಹಜವಾಗಿಯೇ ವೀರಶೈವ ಧರ್ಮದೊಳಗೆ ಪುರೋಹಿತಶಾಹಿಯ ಎಲ್ಲ ಅನಿಷ್ಟಗಳೂ ಬಂದು ಸೇರಿಕೊಂಡವು.

ಈ ಅನಿಷ್ಟಗಳನ್ನು ತೊಲಗಿಸುವ ಹೊಣೆಗಾರಿಕೆ ಇಂದು ಪ್ರತ್ಯೇಕತೆಗಾಗಿ ಆಗ್ರಹಿಸುತ್ತಿರುವ ವೀರಶೈವರ ಮೇಲಿದೆ. ಉದಾಹರಣೆಗೆ, ವೈದಿಕಶಾಹಿಯ ಶುದ್ಧ ಅಂಧಾನುಕರಣೆಯಾದ ಮಠಾಧಿಪತ್ಯ, ಪಾದಪೂಜೆ, ಅಡ್ಡಪಲ್ಲಕ್ಕಿ, ಪೌರೋಹಿತ್ಯ ಮುಂತಾದ ಆಚರಣೆಗಳನ್ನು ಹೊಸ ಕಾಲದ ಶರಣರು ಸಾರಾಸಗಟಾಗಿ ತಿರಸ್ಕರಿಸುವ ಛಲ ತೋರಿಸಬಲ್ಲರೇ? ಇದೆಲ್ಲ ಸರ್ಕಾರದಿಂದ ನೆರವೇರುವ ಕೆಲಸವಲ್ಲ. ಈ ಸ್ವಚ್ಛತೆಯ ಕಾರ್ಯಕ್ಕೆ ಇಚ್ಛಾಶಕ್ತಿ ಮತ್ತು ಬಸವಾದಿ ಶರಣರು ತೋರಿಸಿಕೊಟ್ಟಿರುವ ವಿವೇಕದ ಬೆಳಕು ಇವೆರಡಿದ್ದರೆ ಸಾಕು. ಅದು ಬಿಟ್ಟು ಪ್ರತಿಯೊಂದನ್ನೂ ಮತ ಗಳಿಕೆಗೆ ಬಳಸಿಕೊಳ್ಳಲು ನೋಡುವ ರಾಜಕಾರಣಿಗಳನ್ನು ನಂಬಿ ಮೊರೆಯಿಡುವುದೇ? ಬಸವಾದಿ ಶರಣರ ವಚನಗಳ ಬೆಂಬಲವಿರುವ ಒಂದು ಪಂಥಕ್ಕೆ ರಾಜಕಾರಣಿಗಳ ಸಹಾಯಹಸ್ತವೇಕೆ ಬೇಕು? ಶರಣರ ಸೂಳ್ನುಡಿಯನ್ನು ನಿಷ್ಠೆಯಿಂದ ಅನುಷ್ಠಾನಕ್ಕೆ ತಂದರೆ ಸಾಲದೇ? ಹಾಗೆ ಅನುಷ್ಠಾನಕ್ಕೆ ತರದಿರುವುದೇ ಅವರ ಈ ದಯನೀಯ ಸ್ಥಿತಿಗೆ ಕಾರಣವಾಗಿದೆ.

ಲೋಕದಲ್ಲಿ ಎಲ್ಲಾದರೂ ಸರ್ಕಾರದಿಂದಲೇ ಹುಟ್ಟು ಪಡೆದ ಧರ್ಮವೊಂದುಂಟೇ? ಜಗತ್ತಿನಲ್ಲಿ ಹುಟ್ಟಿರುವ ಎಲ್ಲ ಧರ್ಮಗಳೂ ಪ್ರಭುತ್ವವನ್ನು ಪ್ರಶ್ನಿಸುತ್ತಲೇ ತಮ್ಮ ಅನನ್ಯತೆಯನ್ನು ಸ್ಥಾಪಿಸಿಕೊಂಡವೆಯೇ ವಿನಾ ಪ್ರಭುತ್ವದ ಮುಲಾಜಿಗೆ ಬಿದ್ದು ಹುಟ್ಟು ಪಡೆದ ಒಂದೇ ಒಂದು ಧರ್ಮದ ಉದಾಹರಣೆಯೂ ಇತಿಹಾಸದಲ್ಲಿ ನಮಗೆ ಕಾಣಸಿಗದು. ಹಾಗೆ ಪ್ರಭುತ್ವದ ಬೆಂಬಲ ಪಡೆದ ಧರ್ಮಗಳೆಲ್ಲವೂ ದಯೆಯನ್ನು ತನ್ನ ತಳಹದಿಯನ್ನಾಗಿಸಿಕೊಳ್ಳದೆ ಕ್ರೌರ್ಯವನ್ನೇ ಮೆರೆಯುತ್ತ ಬಂದಿವೆ. ತಮ್ಮ ಸ್ವಾಯತ್ತತೆಗೆ ಆಗ್ರಹಿಸುತ್ತಿರುವವರು ಮೊದಲು ತಮ್ಮ ಸಂಪ್ರದಾಯದೊಳಗಿನ ಕೊಳಕುಗಳನ್ನು ನೀಗಿಸಿಕೊಂಡರೆ ಆಗ ವೀರಶೈವ ಧರ್ಮ ತಾನಾಗೇ ಮರುಹುಟ್ಟು ಪಡೆಯುತ್ತದೆ. ಅದನ್ನು ಸರ್ಕಾರ, ಸಂವಿಧಾನಗಳು ಅಧಿಕೃತವಾಗಿ ಸಾರಿ ಹೇಳಬೇಕಾದ ಅಗತ್ಯವಿರುವುದಿಲ್ಲ.

ಹಾಗಲ್ಲದೆ ಸರ್ಕಾರವೇ ನಮ್ಮನ್ನು ಪ್ರತ್ಯೇಕವೆಂದು ಅಧಿಕೃತವಾಗಿ ಘೋಷಿಸಲಿ ಎಂದು ಆಗ್ರಹಿಸಿದಲ್ಲಿ ರಾಜಕಾರಣಿಗಳಿಂದ ನ್ಯಾಯ ಸಿಗುವುದು ಹಾಗಿರಲಿ ಸಾರ್ವಜನಿಕ ಸಹಾನುಭೂತಿಯಿಂದಲೇ ಅವರು ವಂಚಿತರಾಗಿಬಿಡುವರು. ಏಕೆಂದರೆ ಇದು ಇಂದು ಗುರುಮಠ ವಿರಕ್ತಮಠಗಳ ಬಿಕ್ಕಟ್ಟು ಎದುರಿಸುತ್ತಿರುವ ವೀರಶೈವ ಧರ್ಮವೊಂದರ ಸಮಸ್ಯೆಯಲ್ಲ. ಬ್ರಾಹ್ಮಣರನ್ನೂ ಒಳಗೊಂಡಂತೆ ಭಾರತದ ಪ್ರತಿಯೊಂದು ಜಾತಿಯಲ್ಲೂ ಈ ಬಗೆಯ ವೈಮನಸ್ಯ ಮತ್ತು ಶ್ರೇಣೀಕರಣಗಳುಂಟು.

ಕೇರಳದ ನಂಬೂದರಿ ಬ್ರಾಹ್ಮಣರು, ತುಳುನಾಡಿನ ಕೂಟ ಬ್ರಾಹ್ಮಣರು ಮಠದಿಂದ ಮತ್ತು ಕೆಲವು ನಿರ್ದಿಷ್ಟ ಆಚರಣೆಗಳಿಂದ ಈಗಲೂ ಬಹಿಷ್ಕೃತರಾಗಿದ್ದಾರೆ, ಹಲವು ಶತಮಾನಗಳ ಹಿಂದೆ ಕರ್ನಾಟಕಕ್ಕೆ ವಲಸೆ ಬಂದಿದ್ದ ಗೌಡ ಸಾರಸ್ವತ ಬ್ರಾಹ್ಮಣರ ಮೇಲೆ ಸ್ಥಳೀಯರು ಮತ್ತು ಪೋರ್ಚುಗೀಸರು ನಡೆಸಿದ ಹಲ್ಲೆ ಹಿಂಸಾಚಾರಗಳು ಬ್ರಾಹ್ಮಣ ಇತಿಹಾಸದಲ್ಲೇ ಅತ್ಯಂತ ದಾರುಣವಾದ ಕತೆಯಾಗಿದೆ. ಕೆಲವು ಶ್ರೀವೈಷ್ಣವ ಬ್ರಾಹ್ಮಣರನ್ನು ಸಂಪ್ರದಾಯಸ್ಥರು ಬ್ರಾಹ್ಮಣರೆಂದೇ ಒಪ್ಪುವುದಿಲ್ಲ. ಅವರು ಭಗವದ್ರಾಮಾನುಜರಿಂದ ದೀಕ್ಷೆ ಪಡೆದ ದಲಿತರು ಎಂಬ ಕಾರಣಕ್ಕೆ ಅವರೊಂದಿಗೆ ಈಗಲೂ ಮದುವೆ ಮುಂತಾದ ಸಾಮಾಜಿಕ ಸಂಬಂಧ, ನಂಟಸ್ತಿಕೆ ಬೆಳೆಸುವುದಿಲ್ಲ.

ಇನ್ನು ಮುಸ್ಲಿಮರು, ಒಕ್ಕಲಿಗರು, ದಲಿತರು ಹೀಗೆ ಎಲ್ಲ ಜಾತಿ ಜನಾಂಗಗಳಲ್ಲೂ ಈ ಬಗೆಯ ಶ್ರೇಣೀಕರಣ, ತಾರತಮ್ಯಗಳನ್ನು ಕಾಣಬಹುದು. ಇಂದು ವೀರಶೈವರಿಗೆ ಪ್ರತ್ಯೇಕತೆ ಕರುಣಿಸಲು ಹೊರಟಿರುವ ಸರ್ಕಾರ, ನಾಳೆ ದಿವಸ ಇತರ ಜಾತಿ ಜನಾಂಗಗಳ ಶೋಷಿತ ವರ್ಗಗಳ ಬೇಡಿಕೆಗಳಿಗೂ ಸ್ಪಂದಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬಿ ಆಡಳಿತ ನಡೆಸುವ ಒಂದು ಸರ್ಕಾರಕ್ಕೆ ಈ ತರಹದ ಜಾತಿ-ಧರ್ಮ ಸಂಬಂಧಿ ಉಪದ್ವ್ಯಾಪಗಳು ಬೇಕೇ?

ಇಲ್ಲಿನ ಜಾತಿ– ಜನಾಂಗಗಳು ಇತಿಹಾಸದ ಕೆಲವು ಪುಣ್ಯಪುರುಷರನ್ನು ತಮ್ಮ ಸಾಂಸ್ಕೃತಿಕ ನಾಯಕನೆಂದು ಹೇಳಿಕೊಳ್ಳಬಹುದು. ಆದರೆ ಸರ್ಕಾರವೂ ಇಂಥದಕ್ಕೆಲ್ಲ ಅನುಮೋದನೆ ನೀಡತೊಡಗಿದರೆ ಹೇಗೆ? ವೀರಶೈವರು ತಮ್ಮೊಳಗೇ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಆಸ್ಪದ ನೀಡದೆ, ಈ ಸಮುದಾಯದ ಐವರು ಸಚಿವರು ಅಭಿಪ್ರಾಯ ಸಂಗ್ರಹಕ್ಕೆ ಹೊರಟಿರುವುದು ದುರದೃಷ್ಟಕರ (ಪ್ರ.ವಾ., ಜುಲೈ 25). ಈ ಬೆಳವಣಿಗೆ, ಸಮಸ್ತ ಕನ್ನಡಿಗರ ವಿವೇಕವನ್ನು ಪ್ರತಿನಿಧಿಸುವ ಬಸವಣ್ಣನ ಭಾವಚಿತ್ರವನ್ನು ಒಂದು ನಿರ್ದಿಷ್ಟ ಜನಸಮುದಾಯದ ಓಲೈಕೆಗೆಂದೇ ನಮ್ಮ ಮುಖ್ಯಮಂತ್ರಿ ತಮ್ಮ ಕಚೇರಿಯಲ್ಲಿ ಹಾಕಿಸಿಕೊಂಡರೇ ಎಂಬ ಅನುಮಾನ ಮೂಡಿಸುತ್ತದೆ. ವೀರಶೈವ ಧರ್ಮದ ಪ್ರತ್ಯೇಕತೆಗಾಗಿ ಹೀಗೆ ಪಾರುಪತ್ಯೆ ಮಾಡುವುದು ತನಗೆ ಶೋಭೆ ತರುವ ಕೆಲಸವಲ್ಲ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಮತ್ತು ಇಂದು ಪ್ರತ್ಯೇಕತೆಗಾಗಿ ಎಲ್ಲ ಬಿಟ್ಟು ರಾಜಕಾರಣಿಗಳ ಮೊರೆ ಹೋಗಿರುವವರು ತಮ್ಮ ದೈನ್ಯಸ್ಥಿತಿಗೆ ಬಸವಾದಿ ಶರಣರು ಸಾರಿದ ಸಮಾನತೆಯ ತತ್ವವನ್ನು ಸಾಕಾರಗೊಳಿಸುವಲ್ಲಿ ತಾವು ವಿಫಲರಾಗಿರುವೆವೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT