ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಮತ್ತು ಕುಮಾರಪ್ಪ ಅರ್ಥಶಾಸ್ತ್ರ

Last Updated 30 ಜುಲೈ 2017, 19:55 IST
ಅಕ್ಷರ ಗಾತ್ರ

ಜಿಎಸ್‌ಟಿ ಹೆಸರಿನಲ್ಲಿ ದೇಶದಾದ್ಯಂತ ಹೊಸ ತೆರಿಗೆ ಪದ್ಧತಿ ಜಾರಿಗೆ ಬಂದಿದೆ. ಈ ಏಕರೂಪ ತೆರಿಗೆ ಪದ್ಧತಿಯ ಅನುಷ್ಠಾನವನ್ನು ಕೇಂದ್ರ ಸರ್ಕಾರ ‘ಐತಿಹಾಸಿಕ’ ಎಂದು ಬಣ್ಣಿಸಿದೆ. ಆ ತೆರಿಗೆಗೆ ಸಂಬಂಧಿಸಿದ ಶಾಸನ, ಜೂನ್ 30ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ 1947ರ ಆಗಸ್ಟ್ 14ರ ಮಧ್ಯರಾತ್ರಿ ಹೇಗೆ ದೊರೆಯಿತೋ ಅದೇ ರೀತಿಯ ಐತಿಹಾಸಿಕ ಕ್ಷಣವನ್ನು, ಈ ಏಕರೂಪ ತೆರಿಗೆ ವ್ಯವಸ್ಥೆಯ ಜಾರಿಯನ್ನು ಘೋಷಿಸಲು ಸರ್ಕಾರ ಸೃಷ್ಟಿಸಿತು.

ಆದರೆ, ದೇಶದ ಮುಖ್ಯ ವಿರೋಧ ಪಕ್ಷಗಳು ಲೋಕಸಭೆಯ ವಿಶೇಷ ಅಧಿವೇಶನವನ್ನು ಬಹಿಷ್ಕರಿಸಿದವು. ಏಕರೂಪ ತೆರಿಗೆ ಪದ್ಧತಿಯ ಬಗ್ಗೆ ಅವುಗಳಿಗೆ ತಮ್ಮದೇ ಆದ ಕೆಲವು ಆಕ್ಷೇಪಗಳಿವೆ. ಆ ಆಕ್ಷೇಪಗಳಿಗೆ ಸಮಾಧಾನ ನೀಡುವ ಪ್ರಯತ್ನವನ್ನು ಸರ್ಕಾರ ಮಾಡಲಿಲ್ಲ. ಆದ್ದರಿಂದ ವಿರೋಧ ಪಕ್ಷಗಳ ನೈತಿಕ ಬೆಂಬಲವಿಲ್ಲದೆ ಜಾರಿಗೆ ಬಂದಿರುವ ಹೊಸ ತೆರಿಗೆ ಪದ್ಧತಿಗೆ ಇದು ಒಂದು ಕಪ್ಪು ಚುಕ್ಕೆ ಎಂದು ಹೇಳಬಹುದು. ದೇಶದಲ್ಲಿ ಇದುವರೆಗೆ ಜಾರಿಯಲ್ಲಿದ್ದ ವಿವಿಧ ಪ್ರಕಾರದ ಮತ್ತು ವಿವಿಧ ಹಂತಗಳ ತೆರಿಗೆಗಳನ್ನು ಕ್ರೋಡೀಕರಿಸಿ ಈ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ರಾಜಕೀಯವಾಗಿ ಮತ್ತು ಭಾವನಾತ್ಮಕವಾಗಿ ಒಂದು ದೇಶವಾಗಿರುವ ಭಾರತ ಈಗ ಜಿಎಸ್‌ಟಿ ಅನುಷ್ಠಾನದಿಂದಾಗಿ ತೆರಿಗೆ ದೃಷ್ಟಿಯಿಂದಲೂ ಒಂದೇ ದೇಶ ಆದಂತಾಗಿದೆ.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ದೇಶದ ಎಲ್ಲ ರಾಜ್ಯಗಳು ಸಮಭಾಗಿಗಳಾಗಿವೆ. ಕ್ರೋಡೀಕೃತವಾಗುವ ವರಮಾನದಲ್ಲಿ ಕೂಡ ಪಾಲುದಾರ ಆಗಿವೆ. ಗಣರಾಜ್ಯ ವ್ಯವಸ್ಥೆಗೆ ನಿಜ ಅರ್ಥ ಬಂದಂತಾಗಿದೆ. ಆದರೆ, ದೇಶದ ಅಭಿವೃದ್ಧಿ, ಆರ್ಥಿಕ, ಶೈಕ್ಷಣಿಕ, ವ್ಯವಸಾಯ ಮುಂತಾದ ಎಲ್ಲ ನೀತಿಗಳು ಪಾಶ್ಚಿಮಾತ್ಯ ದೇಶಗಳ ಅನುಕರಣೆಯಾಗಿರುವಂತೆಯೇ ಈ ಏಕರೂಪ ತೆರಿಗೆ ಪದ್ಧತಿಯೂ ವಿದೇಶಗಳಲ್ಲಿನ ತೆರಿಗೆ ಪದ್ಧತಿಯ ಅನುಕರಣೆಯೇ ಆಗಿದೆ.

ರಾಜ್ಯಗಳ ಸಹಕಾರ ಮತ್ತು ಸಹಾಯದೊಂದಿಗೆ ಜಿಎಸ್‌ಟಿ ಜಾರಿಗೆ ಬಂದಿದೆಯಾದರೂ ಗಣರಾಜ್ಯದ ವಿಕೇಂದ್ರೀಕರಣದ ಆಶಯಕ್ಕೆ ವ್ಯತಿರಿಕ್ತವಾಗಿ ಇದೊಂದು ಕೇಂದ್ರೀಕೃತ ಅರ್ಥವ್ಯವಸ್ಥೆ ಆಗಿದೆ. ದೇಶಕ್ಕೆಲ್ಲಾ ಅನ್ವಯ ಆಗುವಂತೆ ಏಕರೂಪ ತೆರಿಗೆ ಪದ್ಧತಿ ಜಾರಿಗೆ ಬಂದಿರುವುದರಿಂದ ಮತ್ತು ದೇಶವೆಲ್ಲಾ ಒಂದೇ ಮಾರುಕಟ್ಟೆಯಾಗಿರುವುದರಿಂದ ಜೀವನಾವಶ್ಯಕವಾದ ಎಲ್ಲ ವಸ್ತುಗಳು ತೆರಿಗೆಯ ಜಾಲಕ್ಕೆ ಬಂದಿವೆ. ವಸ್ತುಗಳನ್ನು ಉಪಯೋಗಿಸುವವರು, ತಯಾರಿಸುವವರು ಮತ್ತು ಸೇವಾ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಹೊಸ ತೆರಿಗೆ ಕಕ್ಷೆಯೊಳಗೆ ಬರುತ್ತಾರೆ. ಅಂದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ತೆರಿಗೆ ಕೊಡುವ ವ್ಯಕ್ತಿಯಾಗಿರುವುದರಿಂದ ಪ್ರತಿಯೊಬ್ಬ ಪ್ರಜೆಯೂ ಒಬ್ಬ ಸಾಮಾನ್ಯ ನಾಗರಿಕನಾಗಿ ಮಾತ್ರ ಉಳಿದಿಲ್ಲ. ಈಗ ಅವನು ಆರ್ಥಿಕ ಘಟಕ ಕೂಡ ಆಗಿದ್ದಾನೆ. ಇಲ್ಲಿ ಸಮಾಧಾನಕರ ವಿಷಯವೇನೆಂದರೆ 1930ರಲ್ಲಿ ಗಾಂಧೀಜಿ ನಡೆಸಿದ್ದ ಹೋರಾಟದ ಕಾರಣದಿಂದಾಗಿ ಸರ್ಕಾರಕ್ಕೆ ಉಪ್ಪಿನ ಮೇಲೆ ತೆರಿಗೆಯನ್ನು ಹಾಕುವುದು ಬಹುಶಃ ಸರಿಯಲ್ಲ ಎಂದು ಅನ್ನಿಸಿ ಅದನ್ನು ಜಿಎಸ್‌ಟಿಯಿಂದ ಹೊರಗಿಟ್ಟಿರಬಹುದು.

ಕೇಂದ್ರೀಕೃತಗೊಳ್ಳುತ್ತಿರುವ ಅರ್ಥವ್ಯವಸ್ಥೆಯಿಂದಾಗಿ ಜೀವನದ ಎಲ್ಲ ಚಟುವಟಿಕೆಗಳು- ಅವು ಸಾಂಸ್ಕೃತಿಕವಾಗಿರಲೀ ಅಥವಾ ಕ್ರೀಡೆಗಳಾಗಿರಲೀ ಅವು ಕೇಂದ್ರೀಕೃತವೇ ಆಗುವವು. ಕೇಂದ್ರೀಕರಣದಿಂದ ರಾಜಕೀಯ ಕ್ಷೇತ್ರವೂ ಹೊರತಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರ ಕೂಡ ಕಾಲಕಳೆದಂತೆ ಇನ್ನಷ್ಟು ಕೇಂದ್ರೀಕೃತವಾಗುತ್ತಾ ಹೋಗುವುದು. ವಿವಿಧ ಪ್ರದೇಶಗಳಲ್ಲಿನ ಎಸ್‌ಬಿಐನ ಸಹವರ್ತಿ ಬ್ಯಾಂಕುಗಳನ್ನು ಒಗ್ಗೂಡಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಬ್ಯಾಂಕಿಂಗ್‌ ವ್ಯವಹಾರಗಳನ್ನು ಕೇಂದ್ರೀಕರಣ ಮಾಡಲಾಗಿದೆ.

ಶಿಕ್ಷಣ, ವ್ಯವಸಾಯದಂಥ ವಿಷಯಗಳು ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರದ ಪರಿಧಿಗೆ ಒಳಪಡುವ ಕ್ಷೇತ್ರಗಳಾಗಿದ್ದರೂ ಅಲ್ಲಿ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳೇ ಪ್ರಮುಖವಾಗುತ್ತವೆ. ಕೇಂದ್ರ ಸರ್ಕಾರದ ಅನುದಾನವನ್ನೇ ರಾಜ್ಯ ಸರ್ಕಾರಗಳು ಹೆಚ್ಚಾಗಿ ಅವಲಂಬಿಸಿರುವುದರಿಂದ ರಾಜ್ಯ ಸರ್ಕಾರಗಳ ಅಧಿಕಾರದ ಪ್ರಭಾವ ಕಡಿಮೆಯಾಗಿ, ಕೇಂದ್ರ ಸರ್ಕಾರದ ಮಾತೇ ತೀಕ್ಷ್ಣವಾಗುತ್ತದೆ. ವಿಕೇಂದ್ರೀಕೃತ ಆಡಳಿತ ಪದ್ಧತಿ ಎಂದು ಭಾವಿಸಲಾಗಿರುವ ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿಯೂ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳ ಪ್ರಭಾವವನ್ನು ಕಾಣುತ್ತೇವೆ.

ದೇಶಕ್ಕೆ ಒಂದೇ ಆಡಳಿತ ಭಾಷೆ ಇರಬೇಕೆಂಬ ಉದ್ದೇಶದಿಂದ ಹಿಂದಿಯನ್ನು, ಹಿಂದಿಯೇತರ ಪ್ರಜೆಗಳ ಮೇಲೆ ಹೇರಲಾಗುತ್ತಿದೆ. ಅಭಿವೃದ್ಧಿ ಮತ್ತು ಯೋಜನೆಗಳ ಹೆಸರಿನಲ್ಲಿಯೂ ದೇಶದ ಆಡಳಿತವು ಕೇಂದ್ರೀಕರಣದತ್ತ ದಾಪುಗಾಲು ಹಾಕುತ್ತಿದೆ. ಪ್ರಜೆಗಳಿಗಾಗಿ ಸರ್ಕಾರವೇ ಅಥವಾ ಸರ್ಕಾರಕ್ಕಾಗಿ ಪ್ರಜೆಗಳೇ ಎಂದು ಪ್ರಶ್ನೆ ಕೇಳುವ ಕಾಲ ಬಂದಿದೆ.

ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕ, ಶಾಶ್ವತ ಅರ್ಥಶಾಸ್ತ್ರದಂಥ ವಿಚಾರದ ಪ್ರವರ್ತಕ ಜೆ.ಸಿ. ಕುಮಾರಪ್ಪನವರ 125ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಜಿಎಸ್‌ಟಿಯ ಸಾಧಕ-ಬಾಧಕ ಕುರಿತು ಗಂಭೀರ ಚರ್ಚೆ ನಡೆಯಬೇಕಿದೆ.

ಜಿಎಸ್‌ಟಿ ಅನುಷ್ಠಾನ ಸರಾಗವಾಗಲು ಇನ್ನೂ ಮೂರು ವರ್ಷಗಳಾದರೂ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಮಧ್ಯೆ ಯಾವುದಾದರೂ ಸಮಸ್ಯೆ ಉಂಟಾದರೆ ಅದು ತನ್ನ ಸ್ವರೂಪವನ್ನೇ ಬದಲಾಯಿಸಿಕೊಳ್ಳಬಹುದು. ಜಿಎಸ್‌ಟಿಯಲ್ಲಿ ಗ್ರಾಮೋದ್ಯೋಗಗಳ ಮತ್ತು ಸುಸ್ಥಿರ ಜೀವನದ ಬಗ್ಗೆ ಯಾವ ರೀತಿ ಉತ್ತೇಜಕಾರಕ ಸಂಗತಿಗಳಿವೆ ಎಂಬುದು ಗೊತ್ತಾಗುತ್ತಿಲ್ಲ. ಆರ್ಥಿಕವಾಗಿ ಮುಂದಿರುವವರ ಮತ್ತು ಕೈಗಾರಿಕೋದ್ಯಮಿಗಳಿಗೆ ಸಂಬಂಧಿಸಿದ ವಿವರಣೆಗಳೇ ಹೆಚ್ಚಾಗಿ ಕೇಳಿಬರುತ್ತಿವೆ.

ಜಿಎಸ್‌ಟಿಯ ಮೂಲ ಉದ್ದೇಶ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸುವುದೇ ಆಗಿದೆ. ಸಂಪನ್ಮೂಲ ಅಗತ್ಯವಾಗಿರುವುದು ದೇಶದ ಅಭಿವೃದ್ಧಿಗಾಗಿ ಎಂದು ಹೇಳಲಾಗುತ್ತದೆ. ದೇಶದ ಅಭಿವೃದ್ಧಿಯ ಚಿಂತನೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯೂ ಸೇರಿಕೊಳ್ಳುತ್ತದೆ. ರಕ್ಷಣಾ ವ್ಯವಸ್ಥೆಗೆ ತೆಗೆದಿರಿಸುವ ಸಂಪನ್ಮೂಲದಲ್ಲಿ ಹೆಚ್ಚಿನ ಪಾಲು ಶಸ್ತ್ರಾಸ್ತ್ರ ಖರೀದಿಗೆ ಖರ್ಚಾಗುತ್ತದೆ.

ದೇಶದ ಆರ್ಥಿಕ ಬದಲಾವಣೆಯ ಈ ಸಂಕ್ರಮಣ ಕಾಲದಲ್ಲಿ ಕುಮಾರಪ್ಪ ಪ್ರತಿಪಾದಿಸಿದ್ದ ವಿಕೇಂದ್ರೀಕೃತ, ಅಹಿಂಸಕ ರಾಜಕೀಯ– ಆರ್ಥಿಕ ಚಿಂತನೆಯನ್ನು ಜ್ಞಾಪಿಸಿಕೊಳ್ಳುವುದು ಅಗತ್ಯ. ವಿಶ್ವವಿದ್ಯಾಲಯಗಳಲ್ಲಿ ಕುಮಾರಪ್ಪನವರ ಆರ್ಥಿಕ ವಿಚಾರಗಳ ಬಗ್ಗೆ ಅಧ್ಯಯನ, ವಿಚಾರ ಸಂಕಿರಣ ನಡೆಯಬೇಕಿದೆ. ನಮ್ಮ ಗಣ್ಯ ಚಿಂತಕರಲ್ಲಿ ಒಬ್ಬರಾದ ಮತ್ತು ಗಾಂಧೀಜಿ ಸ್ವರಾಜ್ಯದ ವಿಚಾರಗಳಿಗೆ ಅರ್ಥಶಾಸ್ತ್ರದ ಸ್ವರೂಪ ಕೊಟ್ಟ ಕುಮಾರಪ್ಪನವರನ್ನು ಮರೆತು ತಪ್ಪು ಮಾಡಿದ್ದೇವೆ. ಅವರ 125ನೇ ಜನ್ಮ ವರ್ಷಾಚರಣೆಯ ನಿಮಿತ್ತದಲ್ಲಾದರೂ ಅವರ ಆರ್ಥಿಕ ಸಿದ್ಧಾಂತಗಳ ಬಗ್ಗೆ ವಿಚಾರಮಂಥನ ನಡೆಯುವಂತಾ ಗಲಿ. ದೇಶಕ್ಕೆ ಹೊಸ ಬೆಳಕು ಮತ್ತು ಪರ್ಯಾಯ ಆರ್ಥಿಕ ವ್ಯವಸ್ಥೆ ಸಿಗುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT