ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗೇಳುವ ಬದುಕು!

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

* ಅಶ್ವಿನಿಕುಮಾರ್‌ ಭಟ್‌

ಸ್ಟಿಕ್‌ನಿಂದ ಹೆಣೆದ ಬುಟ್ಟಿಯನ್ನು ಕೊರಳಿಗೆ ಜೋತುಹಾಕಿಕೊಂಡು ಕುಮಟಾ ತಾಲ್ಲೂಕು ದೀವಗಿಯ ಸುಮಿತ್ರಾ, ಸೀದಾ ಹೋಗಿ ಅಘನಾಶಿನಿ ನದಿಯಲ್ಲಿ ಮುಳುಗು ಹಾಕಿದರು. ನಮಗೋ ಗಾಬರಿ. ಏನು ನಡೆಯುತ್ತಿದೆ ಎಂದು ತಲೆ ಕೆರೆದುಕೊಳ್ಳುತ್ತಾ ನಿಂತಿದ್ದಾಗ ಅವರು ನಿಮಿಷಕ್ಕೆ ಒಂದು ಬಾರಿಯಂತೆ ಮೇಲೆದ್ದು ಮತ್ತೆ ಮುಳುಗುತ್ತಿದ್ದರು. ಸುಮಿತ್ರಾ ಹತ್ತಾರು ಬಾರಿ ನದಿಯೊಳಗೆ ಮುಳುಗಿ ಮೇಲೆದ್ದಾಗ ಅವರ ಕೊರಳಿಗೆ ಜೋತುಹಾಕಿಕೊಂಡ ಬುಟ್ಟಿಯಲ್ಲಿ ಸಣ್ಣ–ಸಣ್ಣ ಕಲ್ಲಿನಂತಹ ಕರ್‍ರನೆ ವಸ್ತುಗಳು ತುಂಬಿದ್ದವು.

ನದಿಯಿಂದ ಹೊರಬಂದು ಸರ್‍ರನೆ ಗುಡಿಸಲತ್ತ ಹೊರಟಿದ್ದ ಅವರನ್ನು ತಡೆದು ನಿಲ್ಲಿಸಿದಾಗ, ‘ಒಲೆಯ ಮೇಲೆ ಎಸರಿಗೆ ಇಟ್ಟೀನಿ. ಸಾರು ಮಾಡೋಕೆ ಬಳಚು (ಶೆಲ್‌ಫಿಶ್‌; ಚಿಪ್ಪುಮೀನು) ಆಯ್ಕೊಂಡು ಹೊರಟೀನಿ’ ಎಂದು ಒಂದೇ ಉಸಿರಿಗೆ ಹೇಳಿ ಹೊರಟುಬಿಟ್ಟರು. ನಾವು ಚಿಕ್ಕವರಿದ್ದಾಗ ಅಮ್ಮ ಒಗ್ಗರಣೆಗೆ ಒಲೆಯ ಮೇಲೆ ಎಣ್ಣೆ ಕಾಯಿಸಲು ಇಟ್ಟು ಹಿತ್ತಲಲ್ಲಿ ಕರಿಬೇವು ಕಿತ್ತು ತರಲು ಹೋಗುತ್ತಿದ್ದ ಸನ್ನಿವೇಶ ನೆನಪಿಗೆ ಬಂತು.

ಸುಮಿತ್ರಾ ನದಿಗಿಳಿದ ಕಾಲು ಗಂಟೆಯಲ್ಲಿ ಮನೆ ಕಡೆಗೆ ಧಾವಿಸಿದರೆ, ಇನ್ನೂ ಹತ್ತಾರು ಹೆಂಗಸರು ಅದೇ ನದಿಯಲ್ಲಿ ಮುಳುಗು ಹಾಕುವುದು ನಡೆದೇ ಇತ್ತು. ಈಗ ಬಂದಾರು, ಆಗ ಬಂದಾರು ಅಂದುಕೊಳ್ಳುತ್ತಾ 2–3 ಗಂಟೆ ಕಾಯ್ದರೂ ಅವರು ನದಿಯಿಂದ ಹೊರಬರಲಿಲ್ಲ. ಮಧ್ಯಾಹ್ನದ ಬಳಿಕ ಸೊಂಟದಲ್ಲಿದ್ದ ಚೀಲವನ್ನು ಹೊರಲಾರದೆ ಹೊತ್ತುಕೊಂಡು ಒಬ್ಬೊಬ್ಬರಾಗಿ ಆಚೆ ಬಂದರು. ಅವರಿಂದ ಕೇಳಿದ ಕಥೆಗಳು ಮೈನವಿರೇಳಿಸುವಂತಿದ್ದವು.

ಘಟ್ಟದ ಕೆಳಗಿನ ಪ್ರದೇಶದಲ್ಲಿ ನದಿ ದಂಡೆಯ ಮೇಲೆ ನೆಲೆ ಕಂಡುಕೊಂಡಿರುವ ಸುಮಾರು 25 ಸಾವಿರ ಮನೆಗಳಲ್ಲಿ ಪ್ರತಿದಿನ ಒಲೆ ಉರಿಯಬೇಕೆಂದರೆ ಅಘನಾಶಿನಿ ನೆರವು ಬೇಕೇಬೇಕು. ನಿತ್ಯ ಸುಮಾರು ಎರಡು ಸಾವಿರ ಹೆಂಗಸರಿಗೆ ಈ ನದಿಯಲ್ಲಿಯೇ ಎಂಟು ಗಂಟೆಗಳವರೆಗೆ ನಿಂತು ಬಳಚು ಆಯುವುದೇ ಕಾಯಕ. ಕತ್ತಿನವರೆಗೆ ನೀರಿರುವ ಪ್ರದೇಶದಲ್ಲಿ ನಿಲ್ಲುವ ಇವರು ಮುಳುಗು ಹಾಕಿ, ನದಿ ಪಾತ್ರದ ತಳದಲ್ಲಿರುವ ಬಳಚನ್ನು ಆಯುತ್ತಾರೆ. ಸರಾಸರಿ 80 ಸೆಕೆಂಡ್‌ಗೆ ಒಂದು ಬಾರಿಯಂತೆ ನೀರಿನಿಂದ ಹೊರಗೆ ಕತ್ತು ಚಾಚಿ ಒಮ್ಮೆ ಉಸಿರು ಎಳೆದುಕೊಳ್ಳುತ್ತಾರೆ. ನೋಡನೋಡುತ್ತಿದ್ದಂತೆ ಪುನಃ ಮುಳುಗು ಹಾಕುತ್ತಾರೆ.

ದಂಡೆಯ ಮೇಲೆ ನಿಂತು ನೋಡುತ್ತಿದ್ದ ನಮ್ಮ ಉಸಿರಿನ ವೇಗ ಹೆಚ್ಚಾಗುತ್ತಿತ್ತೇ ಹೊರತು, ಆ ಹೆಂಗಸರು ನಿಶ್ಚಿಂತರಾಗಿ ಒಂದೂವರೆ ನಿಮಿಷ ಉಸಿರು ಬಿಗಿಹಿಡಿದು ನೀರಿನ ಆಳದಲ್ಲಿಯೇ ಇರುತ್ತಿದ್ದರು. ಈ ಪರಿಪಾಠ ನಡೆದಿದ್ದು ಒಂದೆರಡು ಗಂಟೆಗಳಲ್ಲ; ಸತತ ಏಳೆಂಟು ಗಂಟೆಗಳವರೆಗೆ!

ಸಾಮಾನ್ಯ ಮನುಷ್ಯರಿಗಿಂತ (ವ್ಯಕ್ತಿಯೊಬ್ಬ ಪ್ರತಿನಿಮಿಷಕ್ಕೆ ಸರಾಸರಿ 18ರಿಂದ 20 ಬಾರಿ ಉಸಿರಾಡುವುದು ರೂಢಿ) ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಉಸಿರಾಡುವುದರಿಂದ ಈ ‘ಅಘನಾಶಿನಿ ಗಂಗೆ’ಯರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಿದೆ? ಪ್ರಾಯಶಃ ಈ ವಿಷಯವಾಗಿ ಯಾವುದೇ ಅಧ್ಯಯನಗಳು ನಡೆದಂತಿಲ್ಲ. ಮೀನುಗಳಂತೆಯೇ ನೀರಿನಲ್ಲಿ ಸಹಜವಾಗಿ ಬಹುಕಾಲ ಕಳೆಯಲು ಅಲ್ಲಿನ ವಾತಾವರಣ ಅವರನ್ನು ಸನ್ನದ್ಧಗೊಳಿಸಿರುತ್ತದೆ (ಅಕ್ಲೈಮಟೈಸೇಷನ್)ಎನ್ನುತ್ತಾರೆ ಡಾ. ಕಿರಣ್ ಕುಲಕರ್ಣಿ. ನಿಮಿಷದವರೆಗೆ ಉಸಿರಾಡದೇ ನೀರಿನಲ್ಲಿ ಉಳಿಯುವಂತೆ ಅವರ ಶ್ವಾಸಕೋಶ ಸಾಮರ್ಥ್ಯ ಪಡೆದಿರುತ್ತದೆ (VO2 max). ಹರಿಯುವ ನೀರಿನಿಂದ ಚರ್ಮದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಈ ಹೆಂಗಸರೆಲ್ಲ ದಿನದ ಕೆಲಸದ ಅವಧಿ ಮುಗಿಸಿದಾಗ ಪ್ರತಿಯೊಬ್ಬರ ಕೈಗಳಲ್ಲಿರುವ ಬಕೆಟ್‌ಗಳ ತುಂಬಾ ಬಳಚು ತುಂಬಿರುತ್ತದೆ. ಒಂದೊಂದು ಬಕೆಟ್‌ ಬಳಚಿಗೆ 350 ರೂಪಾಯಿಯಷ್ಟು ಬೆಲೆಯಿದೆ. ಪ್ರತಿಯೊಬ್ಬರ ನಿತ್ಯದ ಗಳಿಕೆ ಸರಾಸರಿ 800 ರೂಪಾಯಿ. ಕಪ್ಪು ಬಳಚಿಗಿಂತ ಬಿಳಿ ಬಳಚಿಗೆ ಬೇಡಿಕೆ, ಬೆಲೆ ಎರಡೂ ಜಾಸ್ತಿ. ಆದ್ದರಿಂದಲೇ ಬಿಳಿ ಬಳಚನ್ನೇ ಹುಡುಕಲು ನದಿ ತಳದಲ್ಲಿ ಅವರು ಭಗೀರಥ ಯತ್ನ ಮಾಡುತ್ತಾರೆ. ಒಂದುವೇಳೆ ಬಿಳಿ ಬಳಚು ಸಿಕ್ಕರೆ, ಅದನ್ನು ಮಾರಾಟ ಮಾಡಿ, ಮನೆ ಬಳಕೆಗೆ ಕಪ್ಪು ಬಳಚು ಇಟ್ಟುಕೊಳ್ಳುತ್ತಾರೆ.

ನದಿಪಾತ್ರದ ಮರಳನ್ನು ಎರಡೂ ಕೈಗಳಲ್ಲಿ ಹಿಡಿದು ಜಾಲಾಡುವ ಅವರು, ಅದರಲ್ಲಿ ಸಿಗುವ ಬಳಚನ್ನು ಥಟ್ಟಂತ ಹಿಡಿದುಕೊಳ್ಳುತ್ತಾರೆ. ಅಷ್ಟೇ ವೇಗವಾಗಿ ಸೊಂಟದಲ್ಲಿರುವ ಬುಟ್ಟಿಗೆ ಅದನ್ನು ದಾಟಿಸುತ್ತಾರೆ!

ಬಳಚಿನಲ್ಲಿ ಪೌಷ್ಟಿಕಾಂಶದ ಪ್ರಮಾಣ ಅಧಿಕವಾಗಿದೆ. ರುಚಿಯಲ್ಲೂ ಬೇರೆ ಜಲ ಪದಾರ್ಥಗಳಿಗಿಂತ ಇದು ಒಂದು ಕೈ ಮೇಲಂತೆ. ಹೀಗಾಗಿ ಕರಾವಳಿಯಲ್ಲಿ ಬಳಚು ಬಹುಬೇಡಿಕೆಯ ಆಹಾರ ಪದಾರ್ಥ. ಗೋವಾದ ಜನರಿಗೆ ಬಳಚೆಂದರೆ ಪಂಚಪ್ರಾಣ. ಆದ್ದರಿಂದ ಅಘನಾಶಿನಿ, ದೀವಗಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನದಿ ಜಾಲಾಡಿ ತೆಗೆದ ಬಳಚಿನಲ್ಲಿ ಬಹು ಪ್ರಮಾಣ ಅಲ್ಲಿಗೇ ಹೋಗುತ್ತದೆ. ವರ್ಷದಲ್ಲಿ ಸರಾಸರಿ 22 ಸಾವಿರ ಟನ್‌ ಬಳಚನ್ನು ಅಘನಾಶಿನಿ ಮೊಗೆದು ಕೊಡುತ್ತದೆ.

ಪಶ್ಚಿಮ ಘಟ್ಟದ ಕೂಸಾದ ಈ ಅಘನಾಶಿನಿ ದೇಶದಲ್ಲೇ ವಿರಳ ನದಿಗಳಲ್ಲಿ ಒಂದು. ಏನಪ್ಪ ಇದರ ವಿಶೇಷವೆಂದರೆ ಈ ನದಿಗೆ ಒಂದೂ ಅಣೆಕಟ್ಟೆಯಿಲ್ಲ. ಯಾವುದೇ ಕೈಗಾರಿಕೆಯನ್ನು ಸಹ ಇದರ ದಂಡೆಯ ಮೇಲೆ ನೆಲೆ ಕಂಡುಕೊಳ್ಳಲು ಅವಕಾಶ ನೀಡಿಲ್ಲ. ಸಣ್ಣ–ಪುಟ್ಟ ತೊಂದರೆ ಹೊರತುಪಡಿಸಿದರೆ ನದಿಯ ನೈಸರ್ಗಿಕ ಹರಿವಿಗೆ ಯಾವುದೇ ಅಡಚಣೆ ಇಲ್ಲ. ಪ್ರಾಕೃತಿಕ ಸೊಬಗು ಹಾಗೂ ಫಲವತ್ತತೆಯನ್ನು ಹಾಗೇ ಉಳಿಕೊಂಡಿದ್ದರಿಂದ ಬೇರೆ ಯಾವ ನದಿಯಲ್ಲೂ ಕಾಣದಂತಹ ಜಲವೈವಿಧ್ಯ ಸ್ವಚ್ಛಂದವಾಗಿ ಹರಿಯುವ ಅಘನಾಶಿನಿಯಲ್ಲಿ ತುಂಬಿದೆ. ಆ ಜಲವೈವಿಧ್ಯಕ್ಕೆ ಬೇಕಾದ ಸಾವಯವ ವಾತಾವರಣವನ್ನು ಪಶ್ಚಿಮ ಘಟ್ಟ ನಿರಂತರವಾಗಿ ಕಟ್ಟಿಕೊಡುತ್ತಿದೆ.

ಮಳೆಗಾಲದಲ್ಲಿ ಮೈದುಂಬಿ ಹರಿಯುವ ಅಘನಾಶಿನಿ, ಬೇಸಿಗೆಯಲ್ಲಿ ತನ್ನ ಅಬ್ಬರ ಕಡಿಮೆ ಮಾಡಿದಾಗ, ಅವಳ ಪಾತ್ರದಲ್ಲಿ ಸಮುದ್ರದ ನೀರು ಒಳ ನುಗ್ಗುತ್ತದೆ (ನೆನಪಿಡಿ: ಬೇರೆ ನದಿಗಳಿಗೆ ಅಣೆಕಟ್ಟೆ ಕಟ್ಟಿ ಒಂದೇ ಪ್ರಮಾಣದಲ್ಲಿ ನೀರನ್ನು ಹರಿಬಿಡುವ ಕಾರಣ ಇಂತಹ ಪ್ರಾಕೃತಿಕ ವಿದ್ಯಮಾನ ವಿರಳ). ಸಮುದ್ರದ ನೀರು ಹೀಗೆ ನದಿಪಾತ್ರದ ಒಳ ನುಗ್ಗುವುದರ ಪರಿಣಾಮ ಏನು ಗೊತ್ತೆ? ನದಿ ನೀರಿನಲ್ಲಿ ಲವಣಾಂಶದ ಏರಿಳಿತ. ಭಿನ್ನ ಲವಣಾಂಶದ ವಲಯಗಳು ಈ ನದಿ ನೀರಿನಲ್ಲಿ ಸೃಷ್ಟಿಯಾಗಿದ್ದರಿಂದ ಏಳು ವಿಧದ ಬಳಚುಗಳು ಇಲ್ಲಿ ಸೃಷ್ಟಿಯಾಗುತ್ತಿವೆ.

ಅಘನಾಶಿನಿ ಅಳವೆಯ (ಮುಖಜ ಭೂಮಿ) 229 ಹೆಕ್ಟೇರ್‌ ಪ್ರದೇಶವನ್ನು ಬಳಚುಗಳ ಕಣಜ ಎಂದು ಗುರ್ತಿಸಲಾಗಿದೆ. ಅವುಗಳಲ್ಲಿ ಪಫಿಯಾ ಹಾಗೂ ಮಲ್‌ಬಾರಿಕಾ ವಿಧದ ಬಳಚುಗಳ ಪ್ರಮಾಣವೇ ಅಧಿಕ. ಅಂದಹಾಗೆ, ಬಳಚಿನ ಸೃಷ್ಟಿಯಲ್ಲಿ ಲವಣಾಂಶದ ಪ್ರಭಾವ ಮಹತ್ವದ್ದಾಗಿದೆ.

ಬಳಚನ್ನು ಆಯುವುದರಲ್ಲಿ ಮೂರು ವಿಧ. ಒಂದು, ನದಿಯಲ್ಲಿ ಇಳಿತ ಉಂಟಾದಾಗ ಅದರ ಪಾತ್ರದ ಮರಳಿನಲ್ಲಿ ಹುಡುಕುವುದು; ಎರಡು, ನದಿಯಲ್ಲಿ ಮೊಣಕಾಲುವರೆಗಿನ ನೀರಿನಲ್ಲಿ ಇಳಿದು, ಆಯುವುದು; ಮೂರು, ನದಿ ನೀರಿನಲ್ಲಿ ಕತ್ತಿನವರೆಗೆ ನೀರು ಬರುವ ಪ್ರದೇಶಕ್ಕೆ ಇಳಿದು, ಜಾಲಾಡುವುದು. ಅಘನಾಶಿನಿ ಹಾಗೂ ದೀವಗಿ ಭಾಗದಲ್ಲಿ ಈ ಮೂರನೇ ವಿಧವೇ ಹೆಚ್ಚು ಬಳಕೆಯಲ್ಲಿದೆ.

ಹತ್ತು ವರ್ಷಗಳ ಹಿಂದೆ ಸಿಗುತ್ತಿದ್ದ ಬಳಚಿನ ಪ್ರಮಾಣಕ್ಕೂ ಈಗಿನ ಪ್ರಮಾಣಕ್ಕೂ ಅಜಗಜಾಂತರ. ‘ಈಗ ತುಂಬಾ ಕಮ್ಮಿ ಆಗಿದ್ರಾ...’ ಎನ್ನುವುದು ಬಳಚಿಗೆ ಮುಳುಗು ಹಾಕುವ ಹೆಂಗಸರ ಅನುಭವದ ಮಾತು. ಬಳಚಿನ ಒಳಗಿನ ಮಾಂಸದ ಮುದ್ದೆ ಊಟಕ್ಕಾದರೆ ಹೊರಗಿನ ಆವರಣವನ್ನು ಹಲವು ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ. ಸುಣ್ಣವಾಗಿ, ಸಿಮೆಂಟ್‌ ಆಗಿ, ಗೊಬ್ಬರವಾಗಿ, ಕೋಳಿಗೆ ಆಹಾರವಾಗಿ... ಬಳಚಿನ ಮಾಂಸಕ್ಕೆ ಮುಗಿಬೀಳುವವರು ಇರುವಂತೆ, ಅದರ ಚಿಪ್ಪಿಗೆ ಹಾತೊರೆಯುವ ಉದ್ಯಮಗಳು ಲೆಕ್ಕವಿಲ್ಲದಷ್ಟಿವೆ!

ಅಘನಾಶಿನಿ ಒಡಲೇನು ಬರಿ ಬಳಚು ಪ್ರಿಯರ ಸ್ವರ್ಗವಲ್ಲ. ದೇಶದ ಬೇರೆಲ್ಲೂ ಸಿಗದಂತಹ ವೈವಿಧ್ಯಮಯ ಏಡಿಗಳು ಇಲ್ಲಿ ಸಿಗುತ್ತವೆ. ಅಘನಾಶಿನಿಯಲ್ಲಿ ಸಿಕ್ಕ ಏಡಿಗಳೆಂದರೆ ಅವುಗಳ ಭಕ್ಷ್ಯಪ್ರಿಯರ ಬಾಯಲ್ಲಿ ನೀರೂರುತ್ತದೆ. ಈ ನದಿ ಕಾಂಡ್ಲಾ ಅರಣ್ಯದಲ್ಲಿ ಹರಿದು ಬರುವುದರಿಂದ ಅದರ ಪಾತ್ರ ಏಡಿಗಳ ಪಾಲಿನ ಸ್ವರ್ಗವಾಗಿದೆ.

35 ಪ್ರಭೇದಗಳ ಏಡಿಗಳು ಇಲ್ಲಿ ಸಿಗುತ್ತವೆ. ಏಡಿಗಳನ್ನು ಹಿಡಿಯಲು ಹೋಗುವುದು ಗಂಡಸರ ಕೆಲಸ. ಅವುಗಳನ್ನು ಹಿಡಿಯಲು ಅವರು ಬಲು ವಿಶಿಷ್ಟವಾದ ವಿಧಾನ ಅನುಸರಿಸುತ್ತಾರೆ. ನದಿ ಪಾತ್ರದಲ್ಲಿ ತೆರೆಗಳು ಬರುವ ಪ್ರದೇಶದಲ್ಲಿ ಬಿದಿರಿನ ಬುಟ್ಟಿಯನ್ನು ಬೋರಲಾಗಿ ಹಾಕುತ್ತಾರೆ. ನೀರು ಬಂದು ದಡಕ್ಕೆ ಅಪ್ಪಳಿಸಿ ವಾಪಸ್‌ ಹೋದಾಗ ಆ ಬುಟ್ಟಿಯಲ್ಲಿ ಏಡಿ ಸಿಕ್ಕಿ ಹಾಕಿಕೊಂಡಿರುತ್ತದೆ! ವಿರಳವಾದ ಪ್ರಭೇದದ ಒಂದೊಂದು ಏಡಿ ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತದೆ, ಗೊತ್ತೆ?

ಇನ್ನು ಮೀನುಗಳೇನು ಕಡಿಮೆಯೇ? ಸರಿಸುಮಾರು 150 ಪ್ರಭೇದದ ಮೀನುಗಳು ಮರಿ ಮಾಡಲು ಇದೇ ನದಿಯ ಪಾತ್ರವನ್ನು ಬಳಕೆ ಮಾಡುತ್ತವೆ. ನದಿಯಲ್ಲಿನ ಲವಣಾಂಶದ ಆಧಾರದ ಮೇಲೆ ಒಂದೊಂದು ಪ್ರಭೇದದ ಮೀನೂ ಒಂದೊಂದು ಪ್ರದೇಶದಲ್ಲಿ ನೆಲೆ ಕಂಡುಕೊಳ್ಳುತ್ತದೆ. ಮುಖಜ ಭೂಮಿಯಲ್ಲಿ ಒಂದು ವಿಧದ ಪ್ರಭೇದ ಮರಿ ಮಾಡಲು ಜಾಗ ಆಕ್ರಮಿಸಿಕೊಂಡರೆ, ತುಸು ಹಿಂದೆ ಮತ್ತೊಂದು, ಅದರ ಹಿಂದೆ ಮಗದೊಂದು. ಅಂತೂ ಬೇಸ್ತರು ಬೀಸಿದ ಬಲೆಗೆ ಥರಾವರಿ ಮೀನುಗಳು.

ಘಟ್ಟದ ಕೆಳಗೆ ನದಿ ಹರಿದಷ್ಟೂ ದೂರದವರೆಗೆ ಅದರ ಸುತ್ತ ನೆಲೆ ಕಂಡುಕೊಂಡಿರುವ ಹಳ್ಳಿಗಳ ಬಹುತೇಕರ ಪಾಲಿಗೆ ಅಘನಾಶಿನಿಯೇ ಬದುಕು. ಸಾವಿರಾರು ಕುಟುಂಬಗಳಿಗೆ ಅಂಗೈ ಅಗಲದಷ್ಟೂ ಹೊಲ–ಗದ್ದೆಗಳಿಲ್ಲ, ಹೇಳಿಕೊಳ್ಳಲು ಒಂದು ಉದ್ಯೋಗವಿಲ್ಲ, ನಿತ್ಯ ಬೆಳಗಾದರೆ ಅವರೆಲ್ಲ ನದಿಗೆ ಇಳಿಯುತ್ತಾರೆ. ಅವರ ಹಾಗೂ ಅವರ ಮಕ್ಕಳ ಹೊಟ್ಟೆ ತುಂಬಿಸುವ ಹೊಣೆಯನ್ನು ಆ ನದಿಯೇ ಹೊರುತ್ತದೆ. ಆದ್ದರಿಂದಲೇ ಅಲ್ಲವೆ, ಇಲ್ಲಿ ಅಷ್ಟೊಂದು ಪ್ರಭೇದಗಳ ಬಳಚುಗಳು, ಏಡಿಗಳು, ಮೀನುಗಳು ಇರುವುದು!

ಸೆರೆಸಿಕ್ಕ ನೀರಿನೊಳಗಿನ ನೋಟಗಳು

‘ಅನ್‌ಸೀನ್‌ ಲ್ಯಾಂಡ್‌ಸ್ಕೇಪ್’ ಪರಿಕಲ್ಪನೆಯೊಂದಿಗೆ ಸುಮಾರು 5–6 ವರ್ಷಗಳಿಂದ ಕ್ಯಾಮೆರಾ ಹೊತ್ತು ಕಾಡು, ಮೇಡು ಸುತ್ತುವುದು ನನ್ನ ಹಾಗೂ ನನ್ನ ಕೆಲವು ಸ್ನೇಹಿತರ ಖಯಾಲಿ. ಶ್ರೀಹರ್ಷ ಗಂಜಾಂ, ಸಹನಾ ಬಾಳ್ಕಲ್, ಶಿವಕುಮಾರ್ ಲಕ್ಷ್ಮೀನಾರಾಯಣ, ಸುನಿಲ್ ಹೆಗಡೆ ತಟ್ಟೀಸರ ಈ ತಂಡದಲ್ಲಿದ್ದಾರೆ.

ಅಘನಾಶಿನಿ ಜನ್ಮ ಸ್ಥಳದಿಂದ ಆ ನದಿಗೆ ಈ ಹೆಸರು ಬರಲು ಕಾರಣವಾದ ಅಘನಾಶಿನಿ ಹಳ್ಳಿಯ ಬಳಿ ಸಮುದ್ರ ಸೇರುವವರೆಗೆ ಆ ನದಿ, ಅಲ್ಲಿನ ಜೀವವೈವಿಧ್ಯ, ಅದರೊಂದಿಗೆ ಬೆಸೆದುಕೊಂಡ ಜನರ ಬದುಕು, ಸಂಸ್ಕೃತಿಯನ್ನು ದಾಖಲಿಸುವುದು ನಮ್ಮ ಉದ್ದೇಶ. ಅದಕ್ಕಾಗಿ ಕ್ಯಾಮೆರಾ ಹೊತ್ತು ಪಶ್ಚಿಮ ಘಟ್ಟದ ಕಾಡು–ಮೇಡು ಸುತ್ತಿದೆವು. ಡ್ರೋಣ್‌ ಬಳಸಿಯೂ ನದಿಪಾತ್ರದ ದೃಶ್ಯಗಳನ್ನು ಸೆರೆ ಹಿಡಿದೆವು.

ಅಂಡರ್‌ವಾಟರ್‌ ಹೌಸಿಂಗ್‌ ತಂತ್ರದ ಮೂಲಕ ನಾವು ನದಿಯ ನೀರಿನೊಳಗಿನ ನೋಟಗಳನ್ನು ಸೆರೆ ಹಿಡಿದೆವು. ವಾಟರ್‌ ಪ್ರೂಫ್‌ ಕ್ಯಾಮೆರಾವನ್ನು ನಾವು ಈ ಉದ್ದೇಶಕ್ಕಾಗಿ ಬಳಕೆ ಮಾಡಿದ್ದೆವು. ಅಘನಾಶಿನಿ ಗಂಗೆಯರ ಜತೆಗೆ ನಾವೂ ನೀರಿಗೆ ಇಳಿದು ಮುಳುಗಿ ನೋಡಿದೆವು. ಆದರೆ, ಅರೆಕ್ಷಣದಲ್ಲೇ ಉಸಿರು ಕಟ್ಟಿದಂತಾಗಿ ಮೇಲೆದ್ದು ದಂಡೆಯತ್ತ ಪಾದ ಬೆಳೆಸಿದೆವು. ಫೋಟೊಗಳು ಅಷ್ಟೊಂದು ಸೊಗಸಾಗಿ ಬಂದಿರಲಿಕ್ಕಿಲ್ಲ ಎಂದುಕೊಂಡಿದ್ದೆವು. ಆದರೆ, ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಮಾಡಿದಾಗ ನಮ್ಮ ಹರ್ಷಕ್ಕೆ ಪಾರವೇ ಇರಲಿಲ್ಲ. ಸ್ಟಿಲ್‌ಗಳು ಮಾತ್ರವಲ್ಲದೆ, ವಿಡಿಯೊ ಸಹ ನಮ್ಮ ಕಲ್ಪನೆಗೆ ತಕ್ಕಂತೆ ಬಂದಿದ್ದವು.

ಅಘನಾಶಿನಿ ನದಿ ತನ್ನ ಕಥೆಯನ್ನು ತಾನೇ ಹೇಳುವ ಈ ಸಾಕ್ಷ್ಯಚಿತ್ರ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ನಮ್ಮ ತಂಡ ಕೈಗೆತ್ತಿಕೊಂಡಿತ್ತು.

ಅಘನಾಶಿನಿ ಆತ್ಮಕಥೆಯ ಟ್ರೇಲರ್‌ ನೋಡಲು: http://bit.ly/2uwjenk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT