ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿಗಳ ಆಂತರಿಕ ಕೊಂಡಿ ‘ಮೈಕ್ರೊಸಾಫ್ಟ್ ಕೈಝಲಾ’

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮೈಕ್ರೊಸಾಫ್ಟ್‌ ಇಂಡಿಯಾ ‘ಮೈಕ್ರೊಸಾಫ್ಟ್ ಕೈಝಲಾ’ (Microsoft Kaizala) ಹೆಸರಿನ ಹೊಸ ಆ್ಯಪ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಕಂಪೆನಿಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಯಾವುದೇ ಬಗೆಯ ಸಂಘಟನೆಗಳು ಈ ಆ್ಯಪ್‌ ಮೂಲಕ ತಮ್ಮ ಉದ್ಯೋಗಿಗಳೊಂದಿಗೆ ಸದಾ ಸಂಪರ್ಕದಲ್ಲಿರಬಹುದು ಎಂದು ಮೈಕ್ರೊಸಾಫ್ಟ್ ಹೇಳಿದೆ. ಸಂಘಟನೆಯೊಂದರ ಎಲ್ಲರನ್ನೂ ಒಂದು ಸಂವಹನ ವ್ಯವಸ್ಥೆಯೊಳಗೆ ತರುವ ಆ್ಯಪ್‌ ಇದಾಗಿದೆ.

ಉದ್ಯೋಗಿಗಳು ಕಚೇರಿಯ ಒಳಗಿರಲಿ ಅಥವಾ ಕಚೇರಿಯ ಹೊರಗಿರಲಿ ಎಲ್ಲರೊಂದಿಗೆ ಸದಾ ಸಂಪರ್ಕದಲ್ಲಿರಲು ಸಾಧ್ಯವಾಗುವಂಥ ಆ್ಯಪ್‌ ಇದಾಗಿದೆ. ‘ಕೈಝಲಾ’ ಉಚಿತ ಆ್ಯಪ್‌ ಜತೆಗೆ ಕಂಪೆನಿಗಳು ಪರ್ಸನಲೈಸ್‌ ಮಾಡಿಕೊಳ್ಳಬಹುದಾದಂಥ ‘ಕೈಝಲಾ ಪ್ರೊ’ (Kaizala Pro) ಆ್ಯಪ್‌ ಅನ್ನೂ ಮೈಕ್ರೊಸಾಫ್ಟ್‌ ಬಿಡುಗಡೆ ಮಾಡಿದೆ. ನಿಗದಿತ ಹಣಕೊಟ್ಟು ‘ಕೈಝಲಾ ಪ್ರೊ’ ಆ್ಯಪ್‌ನ ಸೇವೆ ಪಡೆಯುವ ಕಂಪೆನಿಗಳು ಆ್ಯಪ್‌ ಬಳಕೆ ಹಾಗೂ ಗ್ರೂಪ್‌ಗಳ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತವೆ. ‘ಪ್ರೊ’ ವರ್ಷನ್‌ನಲ್ಲಿ ಸಾಮಾನ್ಯ ಆ್ಯಪ್‌ಗಿಂತ ಹೆಚ್ಚಿನ ಬಳಕೆಯ ಆಯ್ಕೆಗಳಿವೆ.

ಭಾರತದಲ್ಲಿರುವ ಬಹುತೇಕ ಕಂಪೆನಿಗಳು ದೇಶದ ಬೇರೆ ಬೇರೆ ಕಡೆ ತಮ್ಮ ಶಾಖೆಗಳನ್ನು ಹೊಂದಿರುತ್ತವೆ. ಇದರಿಂದಾಗಿ ಕಂಪೆನಿಯ ಎಲ್ಲ ಉದ್ಯೋಗಿಗಳನ್ನೂ ಒಂದು ಸಂವಹನ ವ್ಯವಸ್ಥೆಯಡಿ ತರುವುದೂ ಕೂಡಾ ಮುಖ್ಯವಾಗುತ್ತದೆ.

ಕೈಗಾರಿಕೆಗಳು, ನಿರ್ಮಾಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ವಿಮಾ ಕಂಪೆನಿಗಳು, ಆರೋಗ್ಯ ಸೇವಾ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಒಂದೇ ಸಂವಹನ ವ್ಯವಸ್ಥೆಯಡಿ ಅದರಲ್ಲೂ ಮೊಬೈಲ್‌ ಆಧಾರಿತ ಸಂವಹನ ವ್ಯವಸ್ಥೆಯಡಿ ತರಲು ಈ ಆ್ಯಪ್‌ ನೆರವಾಗುತ್ತದೆ ಎಂದು ಮೈಕ್ರೊಸಾಫ್ಟ್‌ ಹೇಳಿದೆ.

ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ, ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿ/ಸಂಸ್ಥೆಗಳಿಗೆ ಈ ಆ್ಯಪ್‌ ಹೆಚ್ಚು ಅನುಕೂಲಕರ. ಉದ್ಯೋಗಿಗಳ, ತಂಡದ ಸದಸ್ಯರ ಅಭಿಪ್ರಾಯ ಸಂಗ್ರಹ, ಸಂದೇಶ ರವಾನೆ, ಕೆಲಸದ ಮಾಹಿತಿಗಳ ವಿನಿಮಯಕ್ಕೆ ಸಹಕಾರಿಯಾಗುವಂತೆ ಈ ಆ್ಯಪ್‌ ರೂಪಿಸಲಾಗಿದೆ.

ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನೇ ಈ ಆ್ಯಪ್‌ನ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಬಳಸಬಹುದು. ಈ ಆ್ಯಪ್‌ ಮೈಕ್ರೊಸಾಫ್ಟ್‌ನ ಕ್ಲೌಡ್‌ ಕಂಪ್ಯೂಟಿಂಗ್‌ ಮೈಕ್ರೊಸಾಫ್ಟ್‌ ಅಝರ್‌ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತದೆ.

‘ಭಾರತದ ಕಂಪೆನಿಗಳ ಆಂತರಿಕ ಕಾರ್ಯನಿರ್ವಹಣೆ, ಮಾನವ ಸಂಪನ್ಮೂಲ ಬಳಕೆ, ಉದ್ಯೋಗಿಗಳೊಂದಿಗೆ ನಿರಂತರ ಸಂಪರ್ಕದ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಆ್ಯಪ್‌ ರೂಪಿಸಲಾಗಿದೆ. ಕಚೇರಿಯ ಒಳಗೆ ಹಾಗೂ ಹೊರಗೆ ಕೆಲಸ ಮಾಡುವ ಉದ್ಯೋಗಿಗಳು ಕಂಪೆನಿಯೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಈ ಆ್ಯಪ್‌ ಸಹಕಾರಿ. ಈ ಆ್ಯಪ್‌ 2ಜಿ ಸಂಪರ್ಕದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ದೇಶದ ಯಾವ ಮೂಲೆಯಲ್ಲಿದ್ದರೂ ಸಂವಹನ ಸುಲಭ ಸಾಧ್ಯ. ಅಲ್ಲದೆ, ಈ ಆ್ಯಪ್‌ನಲ್ಲಿ ಆಫ್‌ಲೈನ್‌ ಕಾರ್ಯನಿರ್ವಹಣಾ ವ್ಯವಸ್ಥೆಯೂ ಇದೆ’ ಎನ್ನುತ್ತಾರೆ ಮೈಕ್ರೊಸಾಫ್ಟ್‌ ಇಂಡಿಯಾ ಮುಖ್ಯಸ್ಥರಾದ ಅನಂತ್‌ ಮಹೇಶ್ವರಿ.

‘ಸಂಸ್ಥೆಯ ಸದಸ್ಯರ ಮಧ್ಯೆ ಉತ್ತಮ ಕೊಂಡಿಯಾಗಿ ಮೈಕ್ರೊಸಾಫ್ಟ್‌ ಕೈಝಲಾ ಆ್ಯಪ್‌ ಕೆಲಸ ಮಾಡುತ್ತದೆ. ಕಂಪೆನಿಗಳ ಕಾರ್ಯನಿರ್ವಹಣೆಯ ಸಮೀಕ್ಷೆ, ಅಭಿಪ್ರಾಯ ಸಂಗ್ರಹ, ಉದ್ಯೋಗ ಮಾಹಿತಿ ಜತೆಗೆ ಆನ್‌ಲೈನ್‌ ಸಭೆ ನಡೆಸಲು, ಗ್ರೂಪ್‌ ಚಾಟ್‌ ನಡೆಸಲು ಕೂಡಾ ಈ ಆ್ಯಪ್‌ ಮೂಲಕ ಸಾಧ್ಯ. ಖಾಸಗಿ ಹಾಗೂ ಸರ್ಕಾರಿ ಎರಡೂ ವಲಯಗಳಿಗೆ ಅನುಕೂಲವಾಗುವಂತೆ ಈ ಆ್ಯಪ್ ರೂಪಿಸಿದ್ದೇವೆ. ಸಂಸ್ಥೆಗಳ ಬೆಳವಣಿಗೆಯ ಮೇಲೆ ಈ ಆ್ಯಪ್‌ ಪ್ರಭಾವ ಬೀರುತ್ತದೆ’ ಎಂಬುದು ಮೈಕ್ರೊಸಾಫ್ಟ್‌ನ ಆಫೀಸ್ ಪ್ರಾಡಕ್ಟ್‌ ಗ್ರೂಪ್‌ನ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಅವರ ಅಭಿಪ್ರಾಯ.

ಭಾರತದಲ್ಲಿ ಯೆಸ್‌ ಬ್ಯಾಂಕ್‌, ಅಪೊಲೊ ಟೆಲಿಮೆಡಿಸಿನ್‌, ರಿಪಬ್ಲಿಕ್‌ ಟಿವಿ, ಯುಪಿಎಲ್‌, ಕೇಂದ್ರೀಯ ವಿದ್ಯಾಲಯ ಸಂಘಟನೆಗಳು ಈ ಆ್ಯಪ್‌ನ ಪ್ರಾಯೋಗಿಕ ಹಂತದ ಸೇವೆ ಪಡೆದಿವೆ. ಅಲ್ಲದೆ ಆಂಧ್ರಪ್ರದೇಶ ಸರ್ಕಾರ ತನ್ನ 30 ಇಲಾಖೆಗಳಲ್ಲಿ ಈ ಆ್ಯಪ್‌ ಸೇವೆ ಬಳಸಿಕೊಳ್ಳುತ್ತಿದೆ. ಆಂಧ್ರಪ್ರದೇಶ ಸರ್ಕಾರದ 70 ಸಾವಿರಕ್ಕೂ ಹೆಚ್ಚು ನೌಕರರು ಈಗ ಕೈಝಲಾ ಆ್ಯಪ್‌ನಿಂದಲೂ ನಿತ್ಯದ ಕೆಲಸ ನಿರ್ವಹಿಸುತ್ತಿದ್ದಾರೆ.

ಐಒಎಸ್‌ ಮತ್ತು ಆಡ್ರಾಯ್ಡ್‌ ಫೋನ್‌ಗಳಿಗೆ ಕೈಝಲಾ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕೈಝಲಾ ಪ್ರೊ ಆ್ಯಪ್‌ಗಾಗಿ ಪ್ರತಿ ತಿಂಗಳಿಗೆ, ಪ್ರತಿ ಬಳಕೆದಾರರಿಗೆ ₹ 130 ಶುಲ್ಕ ನೀಡಬೇಕಾಗುತ್ತದೆ. ಈಗಾಗಲೇ ಮೈಕ್ರೊಸಾಫ್ಟ್‌ ಆಫೀಸ್‌ 365 ಸೇವೆ ಪಡೆಯುತ್ತಿರುವ ಗ್ರಾಹಕರು ಮೈಕ್ರೊಸಾಫ್ಟ್‌ ಪ್ರತಿನಿಧಿಯನ್ನು ಸಂಪರ್ಕಿಸಿ ಆ್ಯಪ್‌ ಬಳಕೆಯ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT