ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದಿಂದ ಗಡಿ ಸಮಸ್ಯೆ ನೀಗದು: ಸುಷ್ಮಾ ಸ್ವರಾಜ್

ಭಾರತದ ಒಬ್ಬ ಸೈನಿಕನನ್ನೂ ಸಹಿಸುವುದಿಲ್ಲ: ಚೀನಾ
Last Updated 3 ಆಗಸ್ಟ್ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ‘ಚೀನಾದ ಜತೆಗಿನ ಗಡಿ ಸಮಸ್ಯೆಯನ್ನು ಯುದ್ಧದ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಆದರೆ ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆಯ ಪರಿಹಾರ ಸಾಧ್ಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಯಲ್ಲಿ ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಅವರು, ‘ಗಡಿ ಸಮಸ್ಯೆ ವಿಚಾರದಲ್ಲಿ ನಾವು ಸರ್ಕಾರದ ಜತೆಯಲ್ಲಿ ಇದ್ದೇವೆ. ಆದರೆ ಸರ್ಕಾರ ವಿದೇಶಾಂಗ ನೀತಿಯನ್ನು ಪದೇ ಪದೇ ಬದಲಿಸುತ್ತಿದೆ. ಸರ್ಕಾರ ಈ ನೀತಿಯನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯೆಯಾಗಿ ಸುಷ್ಮಾ ಈ ಮಾತು ಹೇಳಿದರು.

‘ದೋಕಲಾ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಮಾತನ್ನೂ ಹೇಳಿಲ್ಲ. ಅಲ್ಲದೆ ಕಜಾಕಸ್ತಾನ ಮತ್ತು ಜರ್ಮನಿಯಲ್ಲಿ ಚೀನಾದ ಅಧ್ಯಕ್ಷರ ಜತೆ ನಡೆಸಿದ ಮಾತುಕತೆ ಬಗ್ಗೆಯೂ ಮೋದಿ ಮಾತನಾಡುತ್ತಿಲ್ಲ. ಇದೆಲ್ಲವನ್ನೂ ಬಹಿರಂಗಪಡಿಸುವುದು ಪ್ರಧಾನಿಯ ಕೆಲಸ. ಈ ವಿಚಾರದಲ್ಲಿ ಅವರು ಮೌನ ವಹಿಸಬಾರದು’ ಎಂದು ಶರ್ಮಾ ಒತ್ತಾಯಿಸಿದರು.

‘ನೆರೆಹೊರೆಯವರ ಜತೆ ಸಂಬಂಧ ಸರಿಯಾಗಿ ನಿರ್ವಹಿಸದಿದ್ದಲ್ಲಿ ಜಾಗತಿಕ ಜವಾಬ್ದಾರಿ ನಿಭಾಯಿಸುವುದು ಕಷ್ಟ. ನಿಮ್ಮ ವಿದೇಶಾಂಗ ನೀತಿ ಸ್ಥಿರವಾಗಿಲ್ಲ. ಮೊದಲು ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಿರಿ ನಂತರ ಮಾತುಕತೆ ನಿಲ್ಲಿಸಿದ್ದೀರಿ. ನಿಮ್ಮ ಮುಂದಿನ ಯೋಜನೆಗಳೇನು’ ಎಂದು ಅವರು ಹರಿಹಾಯ್ದರು.

**

‘ನನ್ನ ಜತೆ ಚರ್ಚಿಸಿಯೇ ನಿರ್ಧಾರ’

ವಿದೇಶಾಂಗ ನೀತಿ ಸಂಬಂಧ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಪ್ರಧಾನಿ ಮೋದಿ, ತಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ವಿದೇಶಾಂಗ ನೀತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪ್ರಧಾನಿ ನನ್ನ ಜತೆ ಚರ್ಚಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಮೋದಿ ಅವರ ವಿದೇಶ ಪ್ರವಾಸ ನಿಯೋಗದಲ್ಲಿ ಸುಷ್ಮಾ ಅವರಿಗೆ ಆದ್ಯತೆಯೇ ಇಲ್ಲ ಎಂಬ ಆರೋಪಕ್ಕೂ ಸುಷ್ಮಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನೀವು ಪ್ರಧಾನಿಯಾಗಿದ್ದಾಗ ವಿದೇಶಾಂಗ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಮತ್ತು ಎಸ್‌.ಎಂ.ಕೃಷ್ಣ ಅವರನ್ನು ಎಷ್ಟು ಬಾರಿ ವಿದೇಶ ಪ್ರವಾಸಕ್ಕೆ ಕರೆದೊಯ್ದಿದ್ದೀರಿ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದರು.

**

ಭಾರತದ ಒಬ್ಬ ಸೈನಿಕನನ್ನೂ ಸಹಿಸುವುದಿಲ್ಲ: ಚೀನಾ

ನವದೆಹಲಿ: ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ದೋಕಲಾ ಪ್ರದೇಶದಲ್ಲಿ ಭಾರತದ ಒಬ್ಬ ಸೈನಿಕ ಇದ್ದರೂ ಸಹಿಸುವುದಿಲ್ಲ ಎಂದು ಚೀನಾ ಹೇಳಿದೆ.

‘ದೋಕಲಾದಲ್ಲಿ ಚೀನಾದ ಸೈನಿಕರು ರಸ್ತೆ ನಿರ್ಮಾಣ ಮಾಡುತ್ತಿದ್ದು ಅದನ್ನು ತಡೆಯಲು ಸೈನಿಕರನ್ನು ಕಳುಹಿಸಿ ಎಂದು ಭೂತಾನ್‌ ಕೇಳಿತ್ತು’ ಎಂಬ ಭಾರತದ ಹೇಳಿಕೆಯನ್ನು ಚೀನಾ ಅಲ್ಲಗಳೆದಿದೆ.

ದೋಕಲಾದಲ್ಲಿ ಇರುವ ಭಾರತೀಯ ಸೈನಿಕರ ಸಂಖ್ಯೆ 48. ಆದರೆ ಇಲ್ಲಿ ಸಂಖ್ಯೆ ಮುಖ್ಯವಲ್ಲ. ಅವರು ಅತಿಕ್ರಮಣ ಮಾಡಿ ಚೀನಾದ ಭೂಪ್ರದೇಶದಲ್ಲಿ ಇದ್ದಾರೆ. ಅವರು ಅಲ್ಲಿ ಇರುವುದು ಕಾನೂನುಬಾಹಿರ’ ಎಂದು  ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಹೇಳಿದೆ. ಚೀನಾದ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಡೆಯುವುದಕ್ಕಾಗಿ ಭಾರತ ಇಲ್ಲಿ ಆರಂಭದಲ್ಲಿ 400 ಸೈನಿಕರನ್ನು ನಿಯೋಜಿಸಿತ್ತು.

ಆದರೆ, ಭಾರತದ 40 ಸೈನಿಕರು ಚೀನಾದ ಭೂಪ್ರದೇಶದಲ್ಲಿ ಅಕ್ರಮವಾಗಿ ತಂಗಿದ್ದಾರೆ. ಒಂದು ಬುಲ್ಡೋಜರ್‌ ಕೂಡ ಇದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಬುಧವಾರ ಹೇಳಿದೆ.

ಭಾರತದ ರಕ್ಷಣಾ ಸಚಿವಾಲಯ ಇದನ್ನು ನಿರಾಕರಿಸಿದೆ. ದೋಕಲಾದಲ್ಲಿ ಆರಂಭದಲ್ಲಿ ಎಷ್ಟು ಸೈನಿಕರಿದ್ದರೋ ಈಗಲೂ ಅಷ್ಟೇ ಸೈನಿಕರಿದ್ದಾರೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಚೀನಾ ಸೇನೆ ಕೂಡ ದೋಕಲಾದಲ್ಲಿ ಸೈನಿಕರ ಸಂಖ್ಯೆ ಕಡಿಮೆ ಮಾಡಿದೆಯೇ ಎಂಬುದನ್ನು ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿಲ್ಲ.

‘ಇದು ಸೇನಾ ರಹಸ್ಯ. ದೋಕಲಾದಲ್ಲಿ ಚೀನಾದ ಎಷ್ಟು ಸೈನಿಕರಿದ್ದಾರೆ ಎಂಬುದಕ್ಕೆ ಮಹತ್ವ ಇಲ್ಲ. ಯಾಕೆಂದರೆ ಇದು ಚೀನಾದ ಭೂಪ್ರದೇಶ’ ಎಂದು ಭಾರತದಲ್ಲಿರುವ ಚೀನಾದ ರಾಯಭಾರಿ ಲಿಯು ಜಿನ್‌ಸಾಂಗ್‌ ಹೇಳಿದ್ದಾರೆ.

ದೋಕಲಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂತಾನ್‌ ಜತೆ ಚೀನಾಕ್ಕೆ ಯಾವುದೇ ವಿವಾದ ಇಲ್ಲ. ಇಲ್ಲಿ ಗ್ರಹಿಕೆಯ ಸಮಸ್ಯೆ ಮಾತ್ರ ಇದೆ ಎಂದು ಅವರು ಪ್ರತಿಪಾದಿಸಿದರು.

**

ತಾಳ್ಮೆ ಇಲ್ಲದಿರುವುದರಿಂದಲೇ ಅತ್ತಲಿನವರು (ಚೀನಾ) ಪ್ರಚೋದಿಸುತ್ತಿದ್ದಾರೆ. ನಾವು ತಾಳ್ಮೆಯಿಂದಲೇ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ.

-ಸುಷ್ಮಾ ಸ್ವರಾಜ್, ವಿದೇಶಾಂಗ ವ್ಯವಹಾರಗಳ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT