ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಕಟೆಗೆ ಬಂದರೂ ಸೋಲದ ಮೌಢ್ಯ...

Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಂವಿಧಾನದಲ್ಲಿ ಸೂಚಿಸಲಾಗಿರುವ ಮೂಲಭೂತ ಕರ್ತವ್ಯಗಳಲ್ಲಿ ಎಂಟನೆಯದ್ದು ಹೀಗಿದೆ: ‘ವೈಜ್ಞಾನಿಕ ಮನೋಭಾವನೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿ – ಇವುಗಳನ್ನು ಅಭಿವೃದ್ಧಿಗೊಳಿಸುವುದು...’

ಭಾರತದ ಮಟ್ಟಿಗೆ ಈ ಆಶಯ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲೇ ಇಲ್ಲ. ಜನಸಾಮಾನ್ಯರಲ್ಲಿನ ಅತಿಯಾದ ಧಾರ್ಮಿಕ ನಂಬಿಕೆ, ವೈಜ್ಞಾನಿಕವಾಗಿ ವಿಚಾರಮಾಡುವ ಸಾಮರ್ಥ್ಯವನ್ನು ಕಸಿದುಕೊಂಡು, ಮೌಢ್ಯ ಮನೆ ಮಾಡಿದೆ. ಇದಕ್ಕೆ ನಮ್ಮ ಮಾಧ್ಯಮಗಳು, ಉಚ್ಚ ಜಾತಿಗಳವರ ಲಾಬಿ ಇವೆಲ್ಲವೂ ಕಾಣಿಕೆ ನೀಡಿರುವುದು ದುರಂತ. ಬಹಳ ಹಿಂದಿನಿಂದಲೂ ಜ್ಞಾನಿಗಳು, ವಿಚಾರವಂತರು ಈ ಕುರಿತು ಜನರನ್ನು ಎಚ್ಚರಿಸುತ್ತಲೇ ಬಂದಿದ್ದಾರೆ.‘ಜ್ಯೋತಿಷ ಹೇಳಿ ಉದರ ಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಬಾರದು’ ಎಂದು ಗೌತಮ ಬುದ್ಧ ಹೇಳಿದರೆ, ‘ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ, ಇವರನ್ನೆಲಾ ಧಿಕ್ಕರಿಸುವಂತಾಗಬೇಕು’ ಎಂದರು ಕುವೆಂಪು.

ಜನರ ಭಯವನ್ನು ಬಂಡವಾಳ ಮಾಡಿಕೊಂಡು ಬದುಕುವ ಸೋಗಲಾಡಿ ಜ್ಯೋತಿಷಿಗಳ ಮಾತಿಗೆ ಮರುಳಾಗಿ ಮನೆ-ಮಠ, ಬಂಧು-ಬಾಂಧವರನ್ನು ಕಳೆದುಕೊಂಡವರು ಅವೆಷ್ಟೋ ಜನರಿರಬೇಕು. ಇಂಥ ಜ್ಯೋತಿಷಿಗಳನ್ನು ಕಾನೂನಿನ ವಿಮರ್ಶೆಗೆ ಒಳಪಡಿಸಿದರೆ ಇವರ ಬಣ್ಣ ಬಯಲಾಗುವುದರಲ್ಲಿ ಸಂಶಯವಿಲ್ಲ. ಆದರೆ ವಿವಿಧ ಹಂತದ ಲಾಬಿ, ತನಿಖಾ ಇಲಾಖೆಯದ್ದೇ ಆದ ಕೆಲವು ಕಾರಣಗಳಿಂದಾಗಿ ಈ ಖದೀಮರು ಸದಾ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಭಾರತೀಯ ದಂಡಸಂಹಿತೆಯ 508ನೇ ಕಲಮಿನ ಸಾರವನ್ನು ಸರಳವಾಗಿ ಹೇಳುವುದಾದರೆ ‘ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಒಂದು ಕೃತ್ಯ ಮಾಡಲು ಪ್ರೇರೇಪಿಸಿ, ಅದನ್ನು ಮಾಡದಿದ್ದರೆ ನೀನು ದೇವರ ಶಾಪಕ್ಕೋ, ಕೋಪಕ್ಕೋ ಒಳಗಾಗುತ್ತಿ ಎಂದು ನಂಬಿಸಿ ಆ ಕೃತ್ಯವನ್ನು ಅವನಿಂದ ಮಾಡಿಸಿದರೆ ಅವನು ಅಪರಾಧ ಎಸಗಿದವನಾಗುತ್ತಾನೆ.’

ಮೌಢ್ಯವಿರೋಧಿ ಕಾನೂನು ರಚನೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಚರ್ಚೆ ವಿವಿಧ ಆಯಾಮ ಪಡೆಯುತ್ತಿರುವ ಈ ಹೊತ್ತಿನಲ್ಲಿ, ಕೆಲವು ದಶಕಗಳ ಹಿಂದೆ ಕೋರ್ಟಿನಲ್ಲಿ ನಾನು ಮಾಡಿದ ಒಂದು ವಿಫಲ ಪ್ರಯತ್ನದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ವಿಧವೆಯರಾದ ಮಾದಮ್ಮ ಮತ್ತು ಜವನಮ್ಮ ಓರಗಿತ್ತಿಯರು. ತಮ್ಮ ಗಂಡಂದಿರು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಮಾಡುತ್ತಿದ್ದ ತರಕಾರಿ ವ್ಯಾಪಾರವನ್ನು ಇವರು ಮುಂದುವರೆಸಿದ್ದರು. ಮಾದಮ್ಮನಿಗೆ ಸುಂಚಮ್ಮ ಮತ್ತು ಈಶ್ವರಿ ಹಾಗೂ ಜವನಮ್ಮನಿಗೆ ಪಾಣಾರ, ನಲ್ಲಪ್ಪ ಮತ್ತು ಗಿರಿಜಾ ಎಂಬ ಮಕ್ಕಳಿದ್ದರು. ಕಲಾಸಿಪಾಳ್ಯದ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಮನೆಯೊಂದರಲ್ಲಿ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರು. ಸಿಟಿ ಮಾರ್ಕೆಟ್ ಅಂದರೆ ಜಗಳ, ತಂಟೆ ತಕರಾರು ಇದ್ದದ್ದೇ. ಆದರೆ ಈ ಇಬ್ಬರು ಓರಗಿತ್ತಿಯರು ಯಾರ ಗೋಜಿಗೂ ಹೋಗದೆ ಆಗಾಗ್ಗೆ ಮಾರ್ಕೆಟ್‌ಗೆ ಭೇಟಿ ಕೊಡುತ್ತಿದ್ದ ಕಾರ್ಪೊರೇಷನ್‌ ಅಧಿಕಾರಿಗಳಲ್ಲಿಯೂ ಸದಭಿಪ್ರಾಯ ಮೂಡಿಸಿದ್ದರು. ಅಧಿಕಾರಿಗಳ ನೆರವಿನಿಂದ ಸುಂಚಮ್ಮ ಮತ್ತು ಪಾಣಾರಾನಿಗೆ ಕಾರ್ಪೊರೇಷನ್‌ನಲ್ಲಿ ಉದ್ಯೋಗ ಸಿಕ್ಕಿತು. ಉಳಿದ ಮಕ್ಕಳು ಕಾಲೇಜುಗಳಲ್ಲಿ ಓದುತ್ತಿದ್ದುದರಿಂದ ಅವರ ವ್ಯಾಸಂಗಕ್ಕಾಗಿ ದುಡಿಮೆಯ ಬಹುಪಾಲು ವಿನಿಯೋಗಿಸುತ್ತಿದ್ದರು.

ಅದೊಂದು ದಿನ ಮಾದಮ್ಮನ ಮೂರು ವರ್ಷದ ಮೊಮ್ಮಗ ಅನಾರೋಗ್ಯಗೊಂಡು ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ. ಮಗುವಿನ ದಿಢೀರ್ ಸಾವಿಗೆ ವೈದ್ಯರೂ ಕಾರಣ ಕಂಡುಕೊಳ್ಳಲಿಲ್ಲ. ವ್ಯಾಪಾರದ ಸ್ಥಳದಲ್ಲಿ ಮಗು ಯಾಕೆ ಸತ್ತುಹೋಯಿತು ಎಂದು ಕೇಳುವ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಕೆಲವರು ಜ್ಯೋತಿಷಿಗಳನ್ನು ಕಾಣುವಂತೆ ಸೂಚಿಸಿದರೆ ಇನ್ನು ಕೆಲವರು ತಮಗೆ ತಿಳಿದ ಜ್ಯೋತಿಷಿಗಳ ಬಳಿ ಕರೆದುಕೊಂಡು ಹೋಗುವುದಾಗಿ ಮುಂದೆಬಂದರು. ಅವರಲ್ಲೊಬ್ಬರು, ಕಲಾಸಿಪಾಳ್ಯದ ಇನ್ನೊಂದು ಭಾಗದಲ್ಲಿದ್ದ ‘ಅಖಿಲಾಂಡಕೋಟಿ ಬ್ರಹ್ಮಾಂಡ ಜ್ಯೋತಿಷ್ಯಾಲಯ’ದ ಪಂಡಿತ್ ಸತ್ಯಪ್ರಜ್ಞರಿಗೆ ಓರಗಿತ್ತಿಯರನ್ನು ಪರಿಚಯಿಸಿದರು.

ಸತ್ಯಪ್ರಜ್ಞ ಅವರು ಎಲ್ಲರ ಜನ್ಮಕುಂಡಲಿ, ಹುಟ್ಟಿದ ನಕ್ಷತ್ರ ನೋಡಿ ದಶಾಭುಕ್ತಿ ಲೆಕ್ಕಾಚಾರ ಹಾಕಿ, ‘ನೀವು ವಾಸವಿರುವ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟಿಸುವುದೊಂದೇ ಪರಿಹಾರ. ಅಲ್ಲದೆ ಮನೆಯನ್ನು ಕೆಡವುವ ಕೆಲಸ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ಒಳಗೆ ನಡೆಯಬೇಕು, ಇದರಿಂದ ನಿಮಗೆ ಶುಭವಾಗದಿದ್ದರೆ ನಾನು ಹೊಣೆ’ ಎಂಬಂತಹ ಉತ್ತೇಜಕ ಮಾತುಗಳನ್ನಾಡಿ ಹತ್ತು ಸಾವಿರ ಸಂಭಾವನೆ ಪಡೆದರು.

ಮಧ್ಯರಾತ್ರಿ ಮನೆ ಕೆಡವುವ ಕೆಲಸ ನಡೆಯುತ್ತಿರುವುದನ್ನು ಅಕ್ಕಪಕ್ಕದವರು ಪ್ರಶ್ನಿಸಿದರು. ಓರಗಿತ್ತಿಯರು ಸತ್ಯಪ್ರಜ್ಞರು ಹೇಳಿದ ಜ್ಯೋತಿಷ್ಯದ ವಿಚಾರ ತಿಳಿಸಿ ವಿಘ್ನಪಡಿಸದಿರಲು ಕೋರಿಕೊಂಡರು. ವಿಘ್ನಪಡಿಸಿದರೆ ತಮಗೇನು ಕೇಡು ಕಾದಿದೆಯೋ ಎಂದು ಅವರೆಲ್ಲ ತೆಪ್ಪಗಾದರು. ಕೆಲವೇ ತಿಂಗಳಲ್ಲಿ ಸುಂದರವಾದ ಇನ್ನೊಂದು ಮನೆ ಎದ್ದಿತು. ಗೃಹಪ್ರವೇಶವೂ ಆಯಿತು.

ಗೃಹಪ್ರವೇಶವಾದ ಮೂರನೇ ತಿಂಗಳಿನಲ್ಲಿ ಜವನಮ್ಮನ ಎರಡನೆ ಮಗ ಒಂದು ರಾತ್ರಿ ಹೊಟ್ಟೆನೋವು ಎಂದು ಮಲಗಿದವನು ಬೆಳಗ್ಗೆ ಏಳಲೇ ಇಲ್ಲ. ಜ್ಯೋತಿಷಿಯ ವಿರುದ್ಧ ಆಕ್ರೋಶಗೊಂಡ ಪಾರಾಣ, ನೇರವಾಗಿ ಅವರ ಬಳಿ ಹೋಗಿ ಪ್ರಶ್ನಿಸಿದ. ಜ್ಯೋತಿಷಿಯು, ‘ಹಳೆಯ ಮನೆಯಲ್ಲೇ ಇದ್ದಿದ್ದರೆ ಇಷ್ಟರಲ್ಲಿ ನೀವೆಲ್ಲರೂ ಸಾಯುತ್ತಿದ್ದಿರಿ. ಅದನ್ನು ನಾನು ತಪ್ಪಿಸಿದ್ದೇನೆ. ಇದಕ್ಕಿಂತ ಹೆಚ್ಚು ಉತ್ತರಿಸುವ ಅಗತ್ಯ ನನಗಿಲ್ಲ. ಎಲ್ಲಾದರೂ ಹೋಗು, ಏನಾದರೂ ಮಾಡು. ನಾನೇನೂ ಹೆದರೊಲ್ಲ’ ಎಂದು ಸ್ವಲ್ಪವೂ ಪಾಪಪ್ರಜ್ಞೆ ಇಲ್ಲದೆ ಮೂದಲಿಸಿ ಕಳಿಸಿದ.

ಈ ವಿಷಯ ಒಬ್ಬ ಮಾಜಿ ಮೇಯರ್ ಕಿವಿಗೆ ಬಿತ್ತು. ‘ವಕೀಲ ಹನುಮಂತರಾಯರನ್ನು ಕಾಣು’ ಎಂದು ಹೇಳಿ ಕಳಿಸಿದರು. ಪಾಣಾರ ಕೆಲವರ ಜೊತೆ ನನ್ನ ಬಳಿ ಬಂದ. ಅವರೊಂದಿಗೆ ಮಾತಾಡುವಾಗ ಜ್ಯೋತಿಷಿಯು ‘ನನ್ನ ಮಾತನ್ನು ನಂಬಿ’ ಎನ್ನುತ್ತಾ ಓರಗಿತ್ತಿಯರಿಗೆ ಮನೆ ಕೆಡವಲು ಪದೇ ಪದೇ ಪುಸಲಾಯಿಸಿದ ವಿಚಾರ ಗೊತ್ತಾಯಿತು. ಈ ನೆಲೆಯಲ್ಲಿ ಜ್ಯೋತಿಷಿ ವಿರುದ್ಧ ಒಂದು ದೂರನ್ನು ಪೊಲೀಸ್ ಠಾಣೆಗೆ ಕೊಡಿಸುವಷ್ಟು ಅಂಶಗಳಿರುವುದು ಕಂಡು ಬಂತು. ಅದರಂತೆ ಒಂದು ದೂರನ್ನು ಸಿದ್ಧಪಡಿಸಿದೆ.

ಅದರಲ್ಲಿ ನಾನು, ‘ಜ್ಯೋತಿಷಿಯ ಒತ್ತಾಯಕ್ಕೆ ಓರಗಿತ್ತಿಯರು ಮತ್ತು ಅವರ ಮನೆಯವರು ಒಳಗಾಗದಿದ್ದರೆ ಅವರು ಮನೆ ಕೆಡವುತ್ತಿರಲಿಲ್ಲ. ಹಾಗೆ ಮಾಡಲು ಉದ್ದೇಶಪೂರ್ವಕವಾಗಿ ಪ್ರೇರೇಪಿಸಿದವರು ಜ್ಯೋತಿಷಿ. ಜ್ಯೋತಿಷಿಯು ತನ್ನಲ್ಲಿ ವಿಶೇಷ ಶಕ್ತಿ ಇದೆಯೆಂದು ನಂಬಿಸಿರುವುದು ಅಪ್ರಾಮಾಣಿಕ ಪ್ರೇರಣೆಯಾಗುತ್ತದೆ. ದೂರುದಾರನ ಮನೆಯವರಿಗೆ ನಷ್ಟ ಅಥವಾ ಹಾನಿ ಉಂಟಾಗುವ ಸಂಭವವಿದೆಯೆಂದು ತಿಳಿದೂ ಅದನ್ನು ಉಂಟುಮಾಡಿದಾಗ ‘ಕೇಡು' ಮಾಡಿರುವನೆಂದು ತಿಳಿಯಬಹುದು. ಎಲ್ಲಕ್ಕೂ ಮಿಗಿಲಾಗಿ ಯಾವ ವ್ಯಕ್ತಿಯಾಗಲಿ ಯಾವನೇ ವ್ಯಕ್ತಿಯಿಂದ ಒಂದು ಕೃತ್ಯವನ್ನ ಮಾಡಿಸಬೇಕೆಂದು ಉದ್ದೇಶಿಸಿದರೆ ಹಾಗೂ ಅದನ್ನು ಮಾಡದೇ ಹೋಗುವ ವ್ಯಕ್ತಿಯು ದೈವಿಕ ಅಸಂತೋಷಕ್ಕೆ ಗುರಿಯಾಗುವನೆಂದು ಆ ವ್ಯಕ್ತಿಯು ನಂಬುವಂತೆ ಮಾಡುವ, ಇಲ್ಲವೆ ಹಾಗೆ ನಂಬುವಂತೆ ಮಾಡಲು ಪ್ರಯತ್ನಿಸುವ ಮೂಲಕ ಭಾರತ ದಂಡ ಸಂಹಿತೆಯ 508ನೇ ಕಲಮಿನ ಪ್ರಕಾರ ಅಪರಾಧ ಮಾಡಿದವನಾಗುತ್ತಾನೆ.

‘ನಮ್ಮಲ್ಲಿ ಮೌಢ್ಯವನ್ನು ಬಿತ್ತುವ ಪದ್ಧತಿಗಳ ಪಟ್ಟಿಯಲ್ಲಿ ಜ್ಯೋತಿಷ ಎಂಬುದೂ ಒಂದು. ಜ್ಯೋತಿಷಶಾಸ್ತ್ರದ ಮೂಲಭೂತ ತತ್ವಗಳೇ ಕಾಲ್ಪನಿಕ. ಅದರ ಮನಮೋಹಕ ಸಂಕೇತಗಳು, ಪಂಚಾಂಗ, ಲೆಕ್ಕಾಚಾರ ವಿಚಿತ್ರ ರೂಪ ಪಡೆಯುವುದರಿಂದ ಮುಗ್ಧರು ಆಕರ್ಷಿತರಾಗುತ್ತಾರೆ. ಜನರಿಗೆ ಪ್ರಿಯವಾದದ್ದನ್ನು ಹೇಳುವುದರಲ್ಲಿ ಜ್ಯೋತಿಷಿಗಳು ಪರಿಣತರು. ಓರಗಿತ್ತಿಯರ ಕುಟುಂಬದವರು ತಮ್ಮ ನಿಯಂತ್ರಣ ಮೀರಿದ ಘಟನೆ, ವೈಪರೀತ್ಯಗಳ ಬಗ್ಗೆ ತಿಳಿದುಕೊಳ್ಳಲು ಅಪೇಕ್ಷಿಸಿದರು. ಜ್ಯೋತಿಷಿ ಪರಿಹಾರ ಸೂಚಿಸಿದಾಗ ಅವರು ಸಾಂತ್ವನಗೊಂಡರು.

‘ಜ್ಯೋತಿಷಿಯು ವೇದಗಳಲ್ಲಿ ಜ್ಯೋತಿಷಕ್ಕಿರುವ ಸ್ಥಾನವನ್ನು ಕುರಿತು ಇವರ ಬಳಿ ಹೇಳಿದ್ದಾನೆ. ನಿಜದಲ್ಲಿ ವೇದಗಳಲ್ಲಿ ಗ್ರಹಗಳ ಬಗ್ಗೆ ಪ್ರಸ್ತಾಪವಿಲ್ಲ. ಆದರೆ ಜ್ಯೋತಿಷಿಯು ವೇದಗಳಲ್ಲಿ ಇಲ್ಲದ ವಿಚಾರವನ್ನು, ಜ್ಯೋತಿಷವು ವಿಜ್ಞಾನ ಎನ್ನುವಂತೆ ತಿಳಿಸಿದ. ಇದನ್ನು ಅಪಪ್ರಚಾರವೆಂದೂ ಭಾವಿಸಲು ಸಾಧ್ಯ. ಇದು ಮುಂದುವರೆದರೆ ಮೌಢ್ಯ ಹೆಚ್ಚಾಗುತ್ತದೆಂದು ಭಾವಿಸಬಹುದಾಗಿದೆ. ಹೀಗಾಗಿಯೇ ಜ್ಯೋತಿಷ ಶಾಸ್ತ್ರದ ಹೆಸರಿನಲ್ಲಿ ವಂಚನೆ ನಿರಂತರವಾಗಿದೆ.

‘ಓರಗಿತ್ತಿಯರಂಥವರು ಪರಿಹಾರಕ್ಕಾಗಿ ಜ್ಯೋತಿಷಿಗಳ ಮೊರೆಹೋಗುವುದು ವಿಷಾದನೀಯವಾದರೂ ಅವರ ಸಮಸ್ಯೆಗಳಿಗೆ ಅವು ಪರಿಹಾರವಾಗದೆ ಜ್ಯೋತಿಷಿಗಳ ಖಜಾನೆ ತುಂಬುವುದು ಮಾತ್ರ ನಡೆಯುತ್ತದೆ. ಪಂಡಿತ್ ಸತ್ಯಪ್ರಜ್ಞನಂತಹ ಜ್ಯೋತಿಷಿಗಳು ವಿಜ್ಞಾನವನ್ನು ಮೌಢ್ಯಕ್ಕೆ ವಿನಿಮಯ ಮಾಡಿಕೊಂಡಿರುವ, ಶೋಷಿತರನ್ನು ಶೋಷಿಸುವ ರಕ್ತಪಿಪಾಸುಗಳು. ಮೂಢನಂಬಿಕೆಗೆ ವಿರೋಧವನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿರುವ ಭಾರತ ದಂಡ ಸಂಹಿತೆ 508 ‘ಯಾವ ನಂಬಿಕೆಯಲ್ಲಿ ಶೋಷಣೆ ಅಡಗಿದೆಯೋ ಅದನ್ನೇ ಮೂಢನಂಬಿಕೆ’ಯೆಂದು ಪ್ರತಿಪಾದಿಸುತ್ತದೆ.

‘ಪಂಡಿತ್ ಸತ್ಯಪ್ರಜ್ಞನು ಅಮಾಯಕರಲ್ಲಿ ಜ್ಯೋತಿಷ ಕುರಿತು ನಂಬಿಕೆ ಉಂಟುಮಾಡುವುದು ತನ್ನ ಹಕ್ಕು ಎಂದು ಪಾಲಿಸುತ್ತಿರುವುದು ದುರಂತ. ನಂಬಿಕೆಯು ಸತ್ಯದ ತಳಹದಿಯ ಮೇಲಿರಬೇಕೆಂಬುದನ್ನು ಅರಿಯದ ಅವರ ವರ್ತನೆ ಅಪಾಯಕಾರಿ. ಜ್ಯೋತಿಷಿಗೂ ಗೊತ್ತಿರುವಂತೆ ಜ್ಯೋತಿಷದಲ್ಲಿ ನಂಬಿಕೆಯಿರಿಸಲು ಮುಖ್ಯ ಕಾರಣ ‘ಭಯ’. ಭಯ ಮತ್ತು ಅಜ್ಞಾನದಿಂದ ಇಂಥ ಪರಿಸ್ಥಿತಿಗಳು ಏರ್ಪಟ್ಟಾಗ ಅದರ ಲಾಭ ಪಡೆಯುವವರು ಜ್ಯೋತಿಷಿಗಳು.

‘ಮೌಢ್ಯದ ವಿರುದ್ಧ ಈಗ ಸಲ್ಲಿಸುತ್ತಿರುವ ದೂರನ್ನು ಪೊಲೀಸರು ಆಸ್ಥೆಯಿಂದ ತನಿಖೆ ನಡೆಸಿದರೆ ಮೌಢ್ಯದ ವಿರುದ್ಧ ಹೋರಾಡುವವರಿಗೆ ಬಲ ದೊರಕಿದಂತಾಗುತ್ತದೆ ಮತ್ತು ಮುಗ್ಧರು ಮೋಸಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ...’ ಎಂದು ಉಲ್ಲೇಖಿಸಿದೆ.

ಮೌಢ್ಯಾಚರಣೆಗೆ ಇರುವ ಹಲವಾರು ಮುಖಗಳನ್ನು ವಿವರಿಸಿರುವ ಈ ದೂರನ್ನು ಕಲಾಸಿಪಾಳ್ಯದ ಪೊಲೀಸ್‌ ಠಾಣೆಗೆ ನೀಡುತ್ತಿದ್ದಂತೆಯೇ, ಪೊಲೀಸ್‌ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತು. ಈ ದೂರಿಗೆ ಸಂಬಂಧಿಸಿದಂತೆ ಉನ್ನತಾಧಿಕಾರಿಗಳ ಸಭೆಗಳು ನಡೆದವು. ಓರಗಿತ್ತಿಯರನ್ನು ಜ್ಯೋತಿಷಿಯ ಬಳಿ ಕರೆದುಕೊಂಡುಹೋಗಿದ್ದವರನ್ನು ಪ್ರಶ್ನಿಸಿದಾಗ ಅವರೆಲ್ಲ ‘ನಾವು ಕರೆದುಕೊಂಡು ಹೋಗಲೇ ಇಲ್ಲ’ ಎಂದುಬಿಟ್ಟರು. ಆದರೆ ಪೊಲೀಸರು ತನಿಖೆ ಕೈಗೊಂಡಾಗ, ಜ್ಯೋತಿಷಿಗಳಲ್ಲಿಯೇ ಇವರನ್ನು ಕರೆದುಕೊಂಡು ಹೋದವರು, ಜ್ಯೋತಿಷಿಗೆ ಕೊಟ್ಟ ಹಣದಲ್ಲಿ ಒಂದು ಪಾಲನ್ನು ಅವರು ಪಡೆದಿದ್ದರು ಎಂಬ ವಿಷಯ ತಿಳಿಯಿತು.

ಆದರೆ, ತನಿಖೆಯ ಜಾಡು ಬೇರೇನೋ ಪರಿಣಾಮಗಳಿಗೆ ಅವಕಾಶ ಮಾಡಿಕೊಡುತ್ತದೆ ಎನಿಸಿದ್ದಕ್ಕೋ ಏನೋ, ಭಾರತ ದಂಡ ಸಂಹಿತೆಯಲ್ಲಿ ಉಲ್ಲೇಖವಿರುವ ಅಪರಾಧಕ್ಕಿಂತ ಹೆಚ್ಚಾಗಿ ಇದನ್ನು ಮೌಢ್ಯಾಚರಣೆ ಎಂದು ಪರಿಗಣಿಸಿ ‘ಆಸಕ್ತಿವಹಿಸಿ’ ಕೆಲಸ ಮಾಡುವಂತೆ ತನಿಖಾಧಿಕಾರಿಗಳಿಗೆ ಉನ್ನತ ಅಧಿಕಾರಿಗಳು ಸೂಚಿಸಿದರು. ತನಿಖೆ ಕೈಗೊಂಡ ಇಲಾಖೆಯ ಅಧಿಕಾರಿಗಳು, ಕಲಾಸಿಪಾಳ್ಯದ ಪೊಲೀಸ್‌ ಠಾಣೆಯ ಠಾಣಾಧಿಕಾರಿಯ ಮುಖಾಂತರ ಕೋರ್ಟ್‌ಗೆ ಒಂದು ‘ಬಿ ರಿಪೋರ್ಟ್‌’ (ದೂರುದಾರ ಆರೋಪಗಳಲ್ಲಿ ಹುರುಳಿಲ್ಲ ಎನ್ನುವುದು) ವರದಿ ಸಲ್ಲಿಸಿದರು.

‘ದೂರುದಾರರು ಮಾಡಿರುವ ಆರೋಪಗಳು ಭಾರತ ದಂಡ ಸಂಹಿತೆಗೆ ಒಳಪಡುವುದಿಲ್ಲ. ಅದಕ್ಕೆ ಕಾನೂನು ತಿದ್ದುಪಡಿಯ ಅಗತ್ಯವಿದೆ, ಆಗ ಮಾತ್ರ ಜ್ಯೋತಿಷಿಗಳಿಂದ ಮೋಸಕ್ಕೆ ಒಳಗಾದವರು ದೂರು ನೀಡಲು ಸಾಧ್ಯವಾಗುತ್ತದೆ. ಸಮಾಜದ ಸುಧಾರಣೆಗೆ ಮೌಢ್ಯಾಚರಣೆಯನ್ನು ಅಪರಾಧಗೊಳಿಸುವ ಶಾಸನಗಳು ಬೇಕು. ಯಾವ ಆಚರಣೆಗಳಿಂದ ಗುರುತಿಸಬಲ್ಲಂತಹ ಹಾನಿಯಾಗುತ್ತದೋ ಅಂತಹ ಆಚರಣೆಗಳನ್ನು ಮಾತ್ರ ಶಿಕ್ಷಾರ್ಹ ಅಪರಾಧಗಳೆಂದು ಶಾಸನ ಗುರುತಿಸುತ್ತದೆ. ಫಿರ್ಯಾದಿಯ ದೂರಿನಲ್ಲಿ ಶಾಸನ ಗುರುತಿಸುವಂತಹ ಶಿಕ್ಷಾರ್ಹ ಅಪರಾಧ ಕಂಡುಬರುವುದಿಲ್ಲ. ದುರಂತವೆಂದರೆ ಅಂತಹ ಶಾಸನ ಇನ್ನೂ ಹೊರಹೊಮ್ಮಿಲ್ಲ’ ಎಂದು ಬಿ-ರಿಪೋಟ್‌ನಲ್ಲಿ ನಮೂದಿಸಲಾಗಿತ್ತು.

ಪೊಲೀಸರು ಸಲ್ಲಿಸಿದ ಅಂತಿಮ ಬಿ-ರಿಪೋರ್ಟ್‌ ಅನ್ನು ಕೋರ್ಟ್ ಅಂಗೀಕರಿಸಿತು. ನ್ಯಾಯಾಧೀಶರು ನನ್ನತ್ತ ನೋಡುತ್ತಾ ‘ಹನುಮಂತರಾಯರೇ, ನಿಮ್ಮ ಕಕ್ಷಿದಾರನ ದೂರಿನ ಪ್ರಕಾರ ಜ್ಯೋತಿಷಿ ಸತ್ಯಪ್ರಜ್ಞನನ್ನು ಒಬ್ಬ ಆರೋಪಿಯನ್ನಾಗಿಸುವ ಶಾಸನ ಹೊಮ್ಮಬೇಕಾದುದು ವಿಧಾನಸೌಧಕ್ಕಿಂತಲೂ ಮುಂಚೆ ಮಠ, ಚರ್ಚ್, ಮಸೀದಿಗಳಿಂದಲ್ಲವೇ?’ ಎಂದರು. ಅಲ್ಲಿದ್ದ ಹಿರಿಯ ವಕೀಲ ನೂರ್ ಹುಸೇನರು ‘ಹೌದೌದು’ ಎಂದರು. ಅದಕ್ಕೆ ನ್ಯಾಯಾಧೀಶರು, ‘ನೂರ್ ಹುಸೇನರೆ, ನೀವು ಮುಂದಾಳತ್ವ ವಹಿಸಿದರೆ ಆಗಬಹುದಲ್ಲವೇ?’ ಎಂದಾಗ ಎಲ್ಲರೂ ನಕ್ಕರು. ಕಾರಣ ನೂರ್ ಹುಸೇನರು ‘ಹಾಯಲಾರದ, ಒದೆಯಲಾರದ ವ್ಯಕ್ತಿ’ ಎಂದೇ ಪ್ರಸಿದ್ಧವಾಗಿದ್ದರು.

ಸಂತ್ರಸ್ತ ಪಾಣಾರಾನ ವಕೀಲನಾಗಿ ಅವನಿಗೆ ಪರಿಹಾರ ಕೊಡಿಸುವಲ್ಲಿ ನಾನು ವಿಫಲನಾದರೂ ಮೌಢ್ಯವಿರೋಧಿ ಆಂದೋಲನದಲ್ಲಿ ನನ್ನದೊಂದು ಸಣ್ಣ ಪಾಲು ಸೇರಿಸಲು ಅವಕಾಶವಾದುದರ ಸಮಾಧಾನ ನನಗಾಯಿತು.

(ಹೆಸರುಗಳನ್ನು ಬದಲಾಯಿಸಲಾಗಿದೆ)
-ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT