ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ನಡುವೆ ಒಂದಿಷ್ಟು ಮಾತು...

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಚೆಸ್‌ ಕ್ರೀಡೆಯಲ್ಲಿ ಮೈಸೂರು ನಗರಿಯು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತದೆ. ಇಲ್ಲಿನ ಆಟಗಾರರು ಪ್ರಶಸ್ತಿ ಜೊತೆಗೆ ಅನುಭವದ ಬುತ್ತಿ ಹೊತ್ತು ಬರುತ್ತಿರುತ್ತಾರೆ. ಪ್ರಮುಖ ಟೂರ್ನಿಗಳಿಗೆ ವೇದಿಕೆ ಒದಗಿಸುತ್ತಿರುವ ಈ ನಗರಿಯು ಚೆಸ್‌ ಪ್ರತಿಭೆಗಳ ಕಣಜ. ಆಟಗಾರರ ಪಾಲಿಗೆ ಸ್ಫೂರ್ತಿಯ ತಾಣ. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಈ ಕ್ರೀಡೆಯನ್ನು ಪೋಷಿಸುವವರು ಹಾಗೂ ಆಡುವವರ ಸಂಖ್ಯೆ ಇಲ್ಲಿಯೇ ಅಧಿಕ.

ಕಳೆದ ವಾರ ದೇಶದ ಪ್ರಮುಖ ಆಟಗಾರ್ತಿಯರು ಸಾಂಸ್ಕೃತಿಕ ನಗರಿಗೆ ಬಂದು ಹಲವು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಸ್ಥಳೀಯ ಆಟಗಾರ್ತಿಯರಿಗೆ ಅನುಭವದ ಬುತ್ತಿ ಕಟ್ಟಿಕೊಟ್ಟು ಹೋಗಿದ್ದಾರೆ.

ಅದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಫಿಡೆ ರೇಟೆಡ್‌ ರಾಷ್ಟ್ರೀಯ ಮಹಿಳಾ ಚಾಲೆಂಜರ್ಸ್‌ ಟೂರ್ನಿ. ಮೈಸೂರು ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಮೈಸೂರು ಚೆಸ್‌ ಸೆಂಟರ್‌ ಆಯೋಜಿಸಿದ್ದ ಈ ಟೂರ್ನಿಯಲ್ಲಿ 20 ರಾಜ್ಯಗಳ 130 ಆಟಗಾರ್ತಿಯರು ಭಾಗವಹಿಸಿದ್ದರು. ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ಗಳು, ಅಂತರರಾಷ್ಟ್ರೀಯ ಮಾಸ್ಟರ್‌ಗಳು, ಕೆಡೆಟ್‌ ಮಾಸ್ಟರ್‌ಗಳು ಪೈಪೋಟಿ ನಡೆಸಿದರು. ಅವರೊಂದಿಗೆ ಕರ್ನಾಟಕದ ಪ್ರತಿಭಾವಂತ ಆಟಗಾರ್ತಿಯರು ಸ್ಪರ್ಧಿಸಿದರು.

ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಭಕ್ತಿ ಕುಲಕರ್ಣಿ. 11 ಸುತ್ತುಗಳ ಪೈಪೋಟಿಯಲ್ಲಿ 9.5 ಪಾಯಿಂಟ್‌ ಪಡೆದರು. ಕೋಲ್ಕತ್ತದ ಮೇರಿ ಆ್ಯನ್‌ ಗೋಮ್ಸ್‌ (9) ಹಾಗೂ ವಿಶ್ವ ಜೂನಿಯರ್‌ ಚಾಂಪಿಯನ್‌ ಸೌಮ್ಯಾ ಸ್ವಾಮಿನಾಥನ್‌ (8.5) ನಂತರದ ಸ್ಥಾನ ತಮ್ಮದಾಗಿಸಿಕೊಂಡರು.

ಮಹಾರಾಷ್ಟ್ರದ ಸ್ವಾತಿ ಘಾಟೆ, ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌ನ ನಿಶಾ ಮೊಹತಾ, ತಮಿಳುನಾಡಿನ ಮೀನಾಕ್ಷಿ ಸುಬ್ರಮಣಿಯನ್‌, ಆರತಿ ರಾಮಸ್ವಾಮಿ ಸೇರಿದಂತೆ ಪ್ರಮುಖರು ಪ್ರಬಲ ಪೈಪೋಟಿ ನೀಡಿದರು. ಟೂರ್ನಿಯಲ್ಲಿ ಭಾಗವಹಿಸಿದ್ದ ರಾಜ್ಯದ ಇಶಾ ಶರ್ಮ, ಆ್ಯಂಡ್ರಿಯಾ ಡಿಸೋಜಾ, ಕೆ.ಮಾನಸಾ, ಎಚ್‌.ಆರ್‌.ಮಾನಸಾ, ಪ್ರಸಿದ್ಧಿ ಭಟ್‌ ಸೇರಿದಂತೆ ಹಲವು ಆಟಗಾರ್ತಿಯರ ಪಾಲಿಗೆ ಇದೊಂದು ವಿಶೇಷ ಅನುಭವ.

ಪ್ರಮುಖ ಆಟಗಾರ್ತಿಯರೊಂದಿಗೆ ಒಡನಾಡುವ ಅವಕಾಶ ಇವರಿಗೆ ಲಭಿಸಿತು. ಅಷ್ಟೇ ಅಲ್ಲ; 1,300 ಫಿಡೆ ರೇಟಿಂಗ್‌ಗಿಂತ ಕೆಳಗಿನವರ ವಿಭಾಗದಲ್ಲಿ ಪ್ರಸಿದ್ಧಿ ಭಟ್‌ ಮೊದಲ ಸ್ಥಾನ ಪಡೆದರು. ಗುಜರಾತ್‌ನಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ‘ಎ’ ಚೆಸ್‌ ಚಾಂಪಿಯನ್‌ಷಿಪ್‌ಗೆ ಎಂಟು ಆಟಗಾರ್ತಿಯರನ್ನು ಇಲ್ಲಿ ಆಯ್ಕೆ ಕೂಡ ಮಾಡಲಾಯಿತು.

ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ ಸೌಮ್ಯಾ ಸ್ವಾಮಿನಾಥನ್‌ ಅವರು ‘ಪ್ರಜಾವಾಣಿ’ ಜೊತೆ ಮಾತಿಗೆ ಸಿಕ್ಕರು. ತಮಿಳುನಾಡು ಮೂಲದ ಸೌಮ್ಯಾ ಸದ್ಯ ಪುಣೆಯಲ್ಲಿ ನೆಲೆಸಿದ್ದಾರೆ. 28 ವರ್ಷದ ಅವರು ಕಾಮನ್‌ವೆಲ್ತ್‌ ಮಹಿಳಾ ಚೆಸ್‌ ಚಾಂಪಿಯನ್‌, ರಾಷ್ಟ್ರೀಯ ಚಾಂಪಿಯನ್‌ ಪಟ್ಟಕ್ಕೇರಿದವರು. ಅವರೀಗ ಗ್ರ್ಯಾಂಡ್‌ಮಾಸ್ಟರ್‌ ಪಟ್ಟದ ಕನಸು ಕಾಣುತ್ತಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

ಹೇಗಿದೆ ಇದುವರೆಗಿನ ಕ್ರೀಡಾ ಪಯಣ?

ಇದುವರೆಗಿನ ನನ್ನ ಚೆಸ್‌ ಪಯಣದ ಬಗ್ಗೆ ಹೆಮ್ಮೆ ಇದೆ. ಜೂನಿಯರ್‌ ವಿಭಾಗದ ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದೇನೆ. ಲಭಿಸಿದ ಅವಕಾಶಗಳನ್ನು ಇನ್ನೂ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದಿತ್ತು ಅನಿಸುತ್ತದೆ. ತಪ್ಪುಗಳಿಂದ ಪಾಠ ಕಲಿತಿದ್ದೇನೆ.

ನಿತ್ಯದ ತಯಾರಿ ಬಗ್ಗೆ ಹೇಳಿ

ಆಟಕ್ಕಿಂತ ಹೆಚ್ಚಾಗಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ನಾನು ಒತ್ತು ನೀಡುತ್ತೇನೆ. ಬೆಳಿಗ್ಗೆ ಫಿಟ್‌ನೆಸ್‌ನತ್ತ ಚಿತ್ತ ಹರಿಸುತ್ತೇನೆ. ಯೋಗ ಮಾಡುತ್ತೇನೆ. ಸಂಜೆ ಟೇಬಲ್‌ ಟೆನಿಸ್‌ ಆಡುತ್ತೇನೆ. ಯಾವುದೇ ಕ್ರೀಡೆ ಆಡಲು ಮೊದಲು ದೈಹಿಕವಾಗಿ ಸಮರ್ಥವಾಗಿರಬೇಕು. ಚೆಸ್‌ ಆಟಗಾರರಿಗೂ ಫಿಟ್‌ನೆಸ್‌ ಅಗತ್ಯ. ಇದರಿಂದ ಒತ್ತಡ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಉಳಿದ ಸಮಯದಲ್ಲಿ ಚೆಸ್‌ ಅಭ್ಯಾಸ ನಡೆಸುತ್ತೇನೆ. ಚೆಸ್‌ಗೆ ಸಂಬಂಧಿಸಿದ ಪುಸ್ತಕ ಓದುತ್ತೇನೆ. ಕಂಪ್ಯೂಟರ್‌ನಲ್ಲಿ ಚೆಸ್‌ ಆಡುತ್ತೇನೆ.

ದೇಶದಲ್ಲಿ ಮಹಿಳಾ ಚೆಸ್‌ ಸ್ಥಿತಿಗತಿ ಹೇಗಿದೆ?

ದೇಶದಲ್ಲಿ ಅತ್ಯುತ್ತಮ ಆಟಗಾರ್ತಿಯರು ಹೊರಹೊಮ್ಮುತ್ತಿದ್ದಾರೆ. ಆದರೆ, ಮಹಿಳಾ ತಂಡಕ್ಕೆ ಪರಿಣತ ಕೋಚ್‌ನ ಅಗತ್ಯವಿದೆ. ಒಲಿಂಪಿಯಾಡ್‌ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ಮಾರ್ಗದರ್ಶಕರು ಅಗತ್ಯ. ಆಟದಲ್ಲಿ ಸುಧಾರಣೆ ಕಾಣಬಹುದು. ಪದಕ ಗೆಲ್ಲಲು ಸಾಧ್ಯವಾಗುತ್ತದೆ.

* ಮಹಿಳಾ ಚಾಲೆಂಜರ್ಸ್‌ ಟೂರ್ನಿಯ ಅನುಭವ ಹೇಗಿತ್ತು?

ಪ್ರವಾಸಿ ನಗರ ಮೈಸೂರಿಗೆ ಬಂದು ಚೆಸ್‌ ಆಡಲು ಅವಕಾಶ ಲಭಿಸಿದ್ದು ಖುಷಿ ನೀಡಿದೆ. ಈ ಟೂರ್ನಿ ತುಂಬಾ ಕಠಿಣವಾಗಿತ್ತು. ಪ್ರಬಲ ಸ್ಪರ್ಧಿಗಳಿದ್ದರು. ಇದೊಂದು ನನ್ನ ಪಾಲಿಗೆ ವಿಶೇಷ ಅನುಭವ.

ಯಾವ ಗುರಿ ಇಟ್ಟುಕೊಂಡು ಚೆಸ್‌ ಆಡುತ್ತಿದ್ದೀರಿ?

ಗ್ರ್ಯಾಂಡ್‌ಮಾಸ್ಟರ್‌ ಆಗಬೇಕೆಂಬ ಕನಸಿದೆ. ಅದಕ್ಕೆ 180 ಪಾಯಿಂಟ್‌ಗಳ ಅಗತ್ಯವಿದೆ. ಹೆಚ್ಚು ಟೂರ್ನಿಗಳಲ್ಲಿ ಆಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT