ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರ ಸಂಹಿತೆ: ಅಲರ್ಜಿ ಏಕೆ?

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಎಚ್.ಕೆ. ಶರತ್ ಅವರು ವಸ್ತ್ರಸಂಹಿತೆಯನ್ನು ‘ಸಂಕುಚಿತ ಮನಸ್ಥಿತಿಯ ಸಂಹಿತೆ’ ಎಂದು ಜರೆದಿದ್ದಾರೆ (ಸಂಗತ, ಆ. 3). ತಮ್ಮ ವಾದಕ್ಕೆ ಕೆಲವು ವಿಶಿಷ್ಟ ವ್ಯಕ್ತಿಗಳು ಮತ್ತು ಸನ್ನಿವೇಶಗಳನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ‘ಶಾಲಾ ಶಿಕ್ಷಕರು ಸಭ್ಯ ಉಡುಗೆ ಧರಿಸಬೇಕು’ ಎಂಬ ಸುತ್ತೋಲೆಯನ್ನು ಹೊರಡಿಸಿ (ಪ್ರ.ವಾ., ಆ. 4) , ‘ಸಭ್ಯ’ ಎಂದರೆ ಯಾವ ಬಗೆಯ ಉಡುಗೆ ಎಂದು ಹೇಳುವ ಗೋಜಿಗೆ ಹೋಗಿಲ್ಲ.

ಸೀರೆ ಎಂದರೆ ‘ಸಂಸ್ಕೃತಿ ಹೇರಿಕೆ’, ಸಲ್ವಾರ್ ಎಂದರೆ ‘ಅದು ನಮ್ಮದಲ್ಲ’ ಎಂಬ ಟೀಕೆ. ಶಾಲಾ–ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಒಪ್ಪದ ಎಲ್ಲರೂ ಇದು ವಿದ್ಯಾರ್ಥಿಗಳ, ಅಧ್ಯಾಪಕರ, ಅದರಲ್ಲೂ ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರ ವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತದೆ ಎಂಬಂತೆ ವಾದಿಸುತ್ತಾರೆ.

‘ನಾವು ಯಾವ ಉಡುಗೆಯನ್ನು ತೊಡಬೇಕು ಎಂದು ಹೇಳಲು ನೀವು ಯಾರು’ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ನಾನು ಈ ವಿಷಯದ ಇನ್ನೊಂದು ಮುಖವನ್ನು ನಿಮ್ಮ ಮುಂದಿಡುತ್ತೇನೆ, ನೀವು ವಸ್ತ್ರಸಂಹಿತೆಯ ವಿರೋಧಿಯಾಗಿದ್ದರೂ ಸಮಾಧಾನದಿಂದ ಪರಿಶೀಲಿಸಿ.

ಮೊದಲನೆಯದಾಗಿ ಬಟ್ಟೆ ತೊಡುವುದು ಮೂಲಭೂತವಾಗಿ ನಮಗಾಗಿ ಅಲ್ಲ, ಇತರರಿಗಾಗಿ. ಏಕಾಂತದಲ್ಲಿ ನಮಗೆ ನಾವೇ ಇದ್ದಾಗ ಯಾವ ಬಗೆಯ ಬಟ್ಟೆ ತೊಟ್ಟರೂ, ತೊಡದೇ ಇದ್ದರೂ ಯಾರೂ ಏನೂ ಕೇಳುವುದಿಲ್ಲ. ಇನ್ನೊಬ್ಬರ ಸಂಪರ್ಕಕ್ಕೆ ಬರುವ ಸಂದರ್ಭದಲ್ಲಿಯೇ ಈ ಪ್ರಶ್ನೆ ಹುಟ್ಟುವುದಲ್ಲವೇ?

ಬಟ್ಟೆಯನ್ನು ತೊಡುವ ಏಕೈಕ ಪ್ರಾಣಿಯೆಂದರೆ ಮನುಷ್ಯ ಮಾತ್ರ. ವಿಕಾಸದ ಹಾದಿಯಲ್ಲಿ ಯಾವತ್ತು ನಗ್ನತೆಯ ಕುರಿತು ಸಂಕೋಚ, ನಾಚಿಕೆಯನ್ನು ಬೆಳೆಸಿಕೊಂಡನೋ ಅಂದಿನಿಂದಲೇ ‘ಮರ್ಯಾದೆ’ಯನ್ನು ಮುಚ್ಚಿಕೊಳ್ಳಲು ಬಟ್ಟೆಯನ್ನು ತೊಡತೊಡಗಿದನು. ಸಾವಿರಾರು ವರ್ಷಗಳಲ್ಲಿ ಈ ಮೂಲಭೂತ ಅಗತ್ಯವು ಅನೇಕ ರೂಪ, ವಿನ್ಯಾಸ ಪಡೆದು ಸಂಸ್ಕೃತಿ, ಸಭ್ಯತೆಯ ಭಾಗವಾಗಿಬಿಟ್ಟಿದೆ.

ಗಂಡು ಮತ್ತು ಹೆಣ್ಣು ದೇಹದಲ್ಲಿ ಕೆಲವು ‘ಕಾಮೋತ್ತೇಜನಕಾರಿ’ ಅಂಗಗಳು ಇವೆ. ಇವುಗಳನ್ನು ಕಂಡಾಗ ವಿರುದ್ಧ ಲಿಂಗದ ವ್ಯಕ್ತಿಯಲ್ಲಿ ಮಾದಕ ಭಾವನೆ ಹುಟ್ಟುವುದು ಅತ್ಯಂತ ಸಹಜ. ಇದರಲ್ಲಿ ನಾಚಿಕೆ ಪಟ್ಟುಕೊಳ್ಳುವಂತಹದೇನೂ ಇಲ್ಲ.

ಈ ಕಾರಣಕ್ಕಾಗಿಯೇ ನಾಗರಿಕತೆ ಬೆಳೆದ ಹಾಗೆ ‘ಸಾರ್ವಜನಿಕ’ ಎನಿಸಿಕೊಳ್ಳುವ ಸ್ಥಳಗಳಲ್ಲಿ ಪುರುಷರು, ಸ್ತ್ರೀಯರು ಇಂಥ ಮಾದಕ ಅಂಗಾಂಗಗಳನ್ನು ಮರೆ ಮಾಡುವ ರೀತಿಯ ಉಡುಪುಗಳನ್ನು ತೊಡುವುದು ಸಭ್ಯ ಎಂದು ಭಾವಿಸಲಾಗುತ್ತದೆ. ಇದನ್ನು ಅಲ್ಲಗಳೆದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ಉಡುಗೆ ಮೌಲ್ಯರಹಿತವಲ್ಲ. ಅದಕ್ಕೆ ನಿರ್ದಿಷ್ಟ ಅಭಿವ್ಯಕ್ತಿ ಇದೆ.

ಅದು ವ್ಯಕ್ತಿತ್ವ, ಮನಸ್ಥಿತಿ ಸೂಚಿಸುತ್ತದೆ. ಅಸಭ್ಯ, ಸಭ್ಯ, ಖಾಸಗಿ, ಸಾರ್ವಜನಿಕ, ಅನೌಪಚಾರಿಕ, ಔಪಚಾರಿಕ, ಮೈಮುಚ್ಚುವ, ಮೈತೋರುವ ಈ ಎಲ್ಲಾ ಸ್ವಭಾವ ಉಡುಗೆಗೆ ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದಲೇ ತೀರಾ ಖಾಸಗಿಯಲ್ಲದ ಸ್ಥಳಗಳಲ್ಲಿ ಜನ ತಮ್ಮ ಉಡುಗೆ ಕುರಿತು ವಿಶೇಷ ಗಮನ ಕೊಡುತ್ತಾರೆ, ತಮ್ಮ ಉದ್ದೇಶಕ್ಕೆ ತಕ್ಕ ಹಾಗೆ.

ಇನ್ನು ಶಾಲಾ ಕಾಲೇಜುಗಳ ಉದ್ದೇಶ ವಿದ್ಯಾರ್ಜನೆ. ಈ ಹಂತ ವ್ಯಕ್ತಿಯ ಬದುಕಿನಲ್ಲಿ ಮಹತ್ವದ್ದಾಗಿರುತ್ತದೆ. ಅಷ್ಟೇ ಸಂಕೀರ್ಣತೆಯಿಂದ ಕೂಡಿರುತ್ತದೆ. ಯುವಮನಸ್ಸುಗಳು ಮಾರಕ ಪ್ರಭಾವಗಳಿಗೆ ಸುಲಭವಾಗಿ ಒಳಗಾಗುವುದು ಸಹಜ. ಕೊನೆಯ ಪಕ್ಷ ವಿದ್ಯಾವರಣಗಳಲ್ಲಾದರೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಜನೆಯ ಕುರಿತು ತದೇಕ ಲಕ್ಷ್ಯವನ್ನು ಕೊಡಬೇಕಾಗುತ್ತದೆ.

ಇದಕ್ಕೆ ಪೂರಕವಾದ ವಾತಾವರಣ ವಿದ್ಯಾಸಂಸ್ಥೆಗಳಲ್ಲಿ ಇರಬೇಕಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ತೊಡುವ ಉಡುಪು, ಅಲಂಕಾರ, ವರ್ತನೆ ಇತ್ಯಾದಿಯೂ ಇದಕ್ಕೆ ಪೂರಕವಾಗಿರಬೇಕು. ಸಿನಿಮಾ, ಫ್ಯಾಷನ್ ಶೈಲಿಯ ಬಟ್ಟೆಬರೆ, ಹೀರೊ ಹೀರೊಯಿನ್‌ಗಳ ಹೇರ್ ಸ್ಟೈಲ್, ಹಾವಭಾವ, ಮಾತಿನ ಶೈಲಿ, ಮನೋಭಾವ, ವರ್ತನೆ ಇವು ವಿದ್ಯಾರ್ಜನೆಗೆ ಅಡ್ಡಿ ಉಂಟುಮಾಡುತ್ತವೆ.

ಆದರೆ ಇಂದು ಸಿನಿಮಾ, ಟಿವಿ, ಫ್ಯಾಷನ್ ಮಾರುಕಟ್ಟೆಯ ಪ್ರಭಾವಕ್ಕೆ ಅನಾಯಾಸ ಒಳಗಾದ ನಮ್ಮ ಯುವಜನ ಮತ್ತು ಶಿಕ್ಷಕ-ಶಿಕ್ಷಕಿಯರೂ ಕೂಡ ವಿದ್ಯಾರ್ಜನೆಯ ಆವರಣದಲ್ಲಿಯೂ ಇಂಥ ಲಘುವಾದ ವಾತಾವರಣದ ಸೃಷ್ಟಿಗೆ ಕಾರಣರಾಗುತ್ತಾರೆ. ಇದನ್ನು ಗಮನಿಸಿ ಶಾಲಾಕಾಲೇಜುಗಳಲ್ಲಿ ವಸ್ತ್ರಸಂಹಿತೆ, ಸಮವಸ್ತ್ರ ಇತ್ಯಾದಿಗಳ ಅಭ್ಯಾಸವನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಬೇರೆ ಕಡೆ ನೀವು ಯಾವ ಬಗೆಯ ಉಡುಗೆ ತೊಡುತ್ತೀರಿ ಎಂಬುದರ ಕುರಿತು ಏನನ್ನಾದರೂ ಹೇಳಲಾಗಿದೆಯೇ? ಇಲ್ಲ.

ಇನ್ನು ಸಮವಸ್ತ್ರದ ವಿಚಾರ. ಸಮವಸ್ತ್ರ ಧರಿಸಿ ಎಂದ ಕೂಡಲೇ ಅದೇನೋ ಶಾಲಾ ಆಡಳಿತದವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಸಾಂಪ್ರದಾಯಿಕ ಸಂಸ್ಕೃತಿಯನ್ನು ಹೇರುತ್ತಿದ್ದಾರೆ ಎಂಬಂತೆ ಚಿತ್ರಿಸಲಾಗುತ್ತದೆ. ಈ ಮಕ್ಕಳು ಶಾಲಾ ಕಾಲೇಜುಗಳನ್ನು ಮುಗಿಸಿ ಪ್ರವೇಶಿಸಬೇಕಾಗಿರುವ ಹೊರ ಜಗತ್ತನ್ನು ಒಮ್ಮೆ ನೋಡಿ. ಪೊಲೀಸ್, ಮಿಲಿಟರಿ, ಸಾರಿಗೆ ಸಂಸ್ಥೆ, ಫ್ಯಾಕ್ಟರಿ... ಇಲ್ಲೆಲ್ಲ ನಿರ್ದಿಷ್ಟ ಸಮವಸ್ತ್ರ ಧರಿಸುವುದು ಪುರುಷರು, ಸ್ತ್ರೀಯರು ಇಬ್ಬರಿಗೂ ಕಡ್ಡಾಯ.

ಉಡುಗೆತೊಡುಗೆ ವಿಶಿಷ್ಟವಾದ ಗುರುತನ್ನು, ಅಧಿಕಾರವನ್ನು ಸೂಚಿಸುತ್ತದೆ. ತೊಡುವ ಉಡುಪು ವ್ಯಕ್ತಿಯ ವರ್ತನೆ ಮತ್ತು ಮನೋವೃತ್ತಿಯ ಮೇಲೆ ಪ್ರಭಾವವನ್ನೂ ಬೀರುತ್ತದೆ. ಸಾಮಾನ್ಯ ಕಾಲೇಜುಗಳಲ್ಲಿಯೇ ಬಿ.ಬಿ.ಎಂ., ಎಂ.ಬಿ.ಎ., ಎಂ.ಬಿ.ಬಿ.ಎಸ್, ನರ್ಸಿಂಗ್, ತಾಂತ್ರಿಕ ಡಿಪ್ಲೊಮಾ ಇತ್ಯಾದಿ ಓದುವ ವಿದ್ಯಾರ್ಥಿಗಳು ನಿರ್ದಿಷ್ಟ ಉಡುಪನ್ನು ಹಾಕಿಕೊಂಡು ತರಗತಿಗೆ ಬರುತ್ತಾರೆ. ಏಕೆಂದರೆ, ಮುಂದೆ ಅವರು ಅನುಸರಿಸಲಿರುವ ಹುದ್ದೆಗಳು ಈ ಶಿಸ್ತನ್ನು ಬಯಸುತ್ತವೆ.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಒಗ್ಗಿಕೊಳ್ಳುವ ಅಭ್ಯಾಸವನ್ನು, ಭಾಷೆ, ವರ್ತನೆಯಲ್ಲಿ ಹೆಚ್ಚು ಔಪಚಾರಿಕತೆಯನ್ನು ರೂಢಿಸುವ ಪ್ರಯತ್ನ ಮಾಡಿದರೆ ತಪ್ಪೇ?

ಯಾವುದೇ ಉಡುಪು ನಮ್ಮ ಕೆಲಸ ಕಾರ್ಯಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಇರಬೇಕು ಎಂಬುದು ಒಂದು ವಿವೇಚನೆ. ಅಡುಗೆ ಮಾಡುವಾಗ, ಕೃಷಿ ಮಾಡುವಾಗ, ವರ್ಕ್ ಶಾಪಿನಲ್ಲಿ ಯಂತ್ರಗಳೊಂದಿಗೆ ಕೆಲಸ ಮಾಡುವಾಗ... ಈ ರೀತಿ ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ಉಡುಗೆ ಇರಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಸ್ತ್ರೀಯರು ಉಡಬೇಕು ಎನ್ನುವ ಸೀರೆ ಅವರ ಆಧುನಿಕ ಓಡಾಟ ಮತ್ತು ಕೆಲಸಕಾರ್ಯಗಳಲ್ಲಿ ಸೌಲಭ್ಯವನ್ನು ಕಸಿದುಕೊಳ್ಳುತ್ತದೆ ಎಂಬ ವಿಚಾರವೂ ಇದೆ. ಅದಕ್ಕೇ ಕೆಲವರು ಸಲ್ವಾರ್ ಕಮೀಜ್, ಪ್ಯಾಂಟು, ಟಿ–ಷರ್ಟು ಇತ್ಯಾದಿಗಳನ್ನು ತೊಡುತ್ತಾರೆ.

ಅದೇ ಸರಿ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ‘ಸಭ್ಯ’ತೆಯ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿಕೊಳ್ಳುವುದಾದರೆ ಇದೇ ಸೀರೆ, ಸಲ್ವಾರ್ ಕಮೀಜ್, ಜೀನ್ಸುಗಳ ವಿನ್ಯಾಸ ಮತ್ತು ತೊಡುವ ವಿಧಾನವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಇಂದು ಸೀರೆಯನ್ನೇ ಅತ್ಯಂತ ಮಾದಕವಾಗಿ ತೊಡಬಹುದು. ಸಲ್ವಾರ್ ಕಮೀಜುಗಳ ಮೈಗಂಟುವ ವಿನ್ಯಾಸವನ್ನು ಗಮನಿಸಿದ್ದೀರಾ?

ನನಗೆ ಅರ್ಥವಾಗದೇ ಇರುವ ಇನ್ನೊಂದು ವಿಚಾರವೆಂದರೆ, ಸ್ತ್ರೀಯರ ಯಾವುದೇ ಬಗೆಯ ಉಡುಪು, ಪುರುಷರ ಸಾಮಾನ್ಯವಾದ ಉಡುಪಿಗಿಂತ ಬಿಗಿಯಾಗಿ ಏಕೆ ಇರುತ್ತದೆ ಎನ್ನುವುದು. ಮನೋವಿಜ್ಞಾನದಲ್ಲಿ ‘ಮೇಲ್ ಗೇಜ್ ಥಿಯರಿ’ (ಪುರುಷ ದೃಷ್ಟಿ ಸಿದ್ಧಾಂತ) ಎಂಬುದಿದೆ. ಅಂದರೆ ಸಾಮಾನ್ಯವಾಗಿ ಯಾವುದು ಪುರುಷರ ಮೆಚ್ಚುಗೆಗೆ ಪಾತ್ರವೋ ಅದನ್ನು ಅನುಸರಿಸುವಂತೆ ಸ್ತ್ರೀಯರನ್ನು ಸಜ್ಜುಗೊಳಿಸುವುದು.

ಮುಖ್ಯವಾಗಿ ಅವರ ವೇಷಭೂಷಣ, ಅಲಂಕಾರ ಇತ್ಯಾದಿ ಪುರುಷರಿಗೆ ಖುಷಿ ಕೊಡುವ ರೀತಿಯಲ್ಲಿರುವಂತೆ ಅನೂಚಾನವಾಗಿ ಮಾಡುತ್ತಾ ಬರಲಾಗಿದೆ. ಅದನ್ನೇ ಸಂಸ್ಕೃತಿ, ಸಭ್ಯತೆ ಎಂದು ಬಿಂಬಿಸಲಾಗಿದೆ. ಇದೂ ಕೂಡ ಸಮಾಜದ ಪುರುಷಪ್ರಾಧಾನ್ಯದ ಒಂದು ಲಕ್ಷಣ. ಬರಬರುತ್ತಾ ಈ ಪುರುಷ ದೃಷ್ಟಿಯನ್ನೇ ಸ್ತ್ರೀಯರೂ ಅಳವಡಿಸಿಕೊಂಡು ಅದೇ ಸರಿಯೆಂದು ಭಾವಿಸುವ ಸ್ಥಿತಿ ತಲುಪುತ್ತಾರೆ ಎನ್ನುತ್ತದೆ ಈ ಸಿದ್ಧಾಂತ.

‘ನಮಗೆ ಇಷ್ಟವಾದ ಬಟ್ಟೆಯನ್ನು ಹಾಕುತ್ತೇವೆ, ಕೇಳಲು ನೀವು ಯಾರು’ ಎಂದು ಹೇಳುವ ಸಹೋದರಿಯರು, ಅವರು ನಿಜವಾಗಿಯೂ ಯಾರಿಗೆ ‘ಇಷ್ಟ’ವಾದ ಬಟ್ಟೆಯನ್ನು ತೊಡುತ್ತಿದ್ದಾರೆ ಎಂಬುದನ್ನು ಒಮ್ಮೆ ಆಲೋಚಿಸಿದರೆ ಒಳ್ಳೆಯದು. ಇದು ಅರ್ಥವಾಗಿದ್ದರೆ ಖಂಡಿತವಾಗಿ ಅದು ಅವರವರ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT