ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವತ್ತಾದ ವ್ಯಂಗ್ಯವ ಕೆಡಿಸಿದಾಗ...

Last Updated 11 ಆಗಸ್ಟ್ 2017, 19:06 IST
ಅಕ್ಷರ ಗಾತ್ರ

ಚಿತ್ರ: ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಹಿಂದಿ)
ನಿರ್ಮಾಣ: ಅರುಣಾ ಭಾಟಿಯಾ, ಶೀತಲ್ ಭಾಟಿಯಾ, ಪ್ರೇರಣಾ ಅರೋರಾ, ಅರ್ಜುನ್ ಎನ್. ಕಪೂರ್
ನಿರ್ದೇಶನ: ಶ್ರೀ ನಾರಾಯಣ್ ಸಿಂಗ್
ತಾರಾಗಣ: ಅಕ್ಷಯ್ ಕುಮರ್, ಭೂಮಿ ಪೆಡ್ನೇಕರ್, ಅನುಪಮ್ ಖೇರ್, ಸುಧೀರ್ ಪಾಂಡೆ, ದಿವ್ಯೇಂದು ಶರ್ಮ

ಇದು ನಿಸ್ಸಂಶಯವಾಗಿ ಸರ್ಕಾರಿ ಚಿತ್ರ. ‘ಸ್ವಚ್ಛ ಭಾರತ’ ಅಭಿಯಾನದ ಕಹಳೆ. ಒಂದು ಡಜನ್‌ಗೂ ಹೆಚ್ಚು ಚಲನಚಿತ್ರಗಳಿಗೆ ಸಂಕಲನಕಾರನಾಗಿ ಕೆಲಸ ಮಾಡಿರುವ ಶ್ರೀ ನಾರಾಯಣ ಸಿಂಗ್ ವ್ಯಂಗ್ಯದ ಧಾಟಿಯ ಆಸಕ್ತಿಕರ ಚಿತ್ರವನ್ನು ಕೊನೆಯಲ್ಲಿ ಕೆಡಿಸಿದ್ದಾರೆ. ಇದಕ್ಕೆ ಕಾರಣ ಅದು ಸರ್ಕಾರದ ದನಿಯಾಗಲೇಬೇಕು ಎಂಬ ಈ ನಿರ್ದೇಶಕರ ಹಟ. ನವಿರಾದ ಪ್ರೇಮಕಥೆಯೊಂದು ಆಸಕ್ತಿಕರ ದಾಂಪತ್ಯ ಕಥನವಾಗಿ ರೂಪುತಳೆಯುವ ಹೊತ್ತಿಗೆ ಸರ್ಕಾರಿ ಸಾಕ್ಷ್ಯಚಿತ್ರವಾಗಿಸುವ ಧಾವಂತದಿಂದ ಕುಸಿದಿದೆ.

ಪ್ರಿಯಾಂಕಾ ಭಾರತಿ ಎಂಬ 19 ವಯಸ್ಸಿನ ವನಿತೆ ಶೌಚಾಲಯ ನಿರ್ಮಾಣಕ್ಕಾಗಿ ಗಂಡನ ಮನೆಯವರನ್ನೆಲ್ಲ ನ್ಯಾಯಾಲಯಕ್ಕೆ ತಂದು ನಿಲ್ಲಿಸಿದ್ದ ನಿಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’. ‘ಗೋಲಿಯೋಂ ಕಿ ರಾಸಲೀಲಾ–ರಾಮ್‌ಲೀಲಾ’ ತರಹದ ಹಸಿ ಚಿತ್ರಕಥೆ ಬರೆದಿದ್ದ ಸಿದ್ಧಾರ್ಥ್ ಸಿಂಗ್ ಹಾಗೂ ಗರಿಮಾ ವಹಲ್, ಈ ಸಿನಿಮಾಗೆ ನವಿರಾಗಿ ದೃಶ್ಯಗಳನ್ನು ಕಟ್ಟಿದ್ದಾರೆ. ಚಿತ್ರದ ಮೊದಲಾರ್ಧವಂತೂ ಅರ್ಥವತ್ತಾದ ವ್ಯಂಗ್ಯ, ಧರ್ಮಸಂಕಟಗಳ ದರ್ಶನದಿಂದ ಗಮನಸೆಳೆಯುತ್ತದೆ.

ಸೈಕಲ್ ಮಾರುವ ಅಂಗಡಿಯ ಮಾಲೀಕ ನಾಯಕ. ಅವನು ಇಷ್ಟಪಟ್ಟು ಮದುವೆಯಾಗುವ ಹುಡುಗಿ ಚೆನ್ನಾಗಿ ಓದಿಕೊಂಡವಳು. ಗಂಡನ ಮನೆತುಂಬುವ ಹುಡುಗಿಗೆ ಮರುದಿನವೇ ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ಪೀಕಲಾಟ ಶುರುವಾಗುತ್ತದೆ. ತಮ್ಮವರನ್ನೆಲ್ಲ ಬಿಟ್ಟುಕೊಡದೆ, ಸಂಪ್ರದಾಯದ ಸಂಕೋಲೆಗಳನ್ನೂ ಕಳಚಿ ಶೌಚಾಲಯ ಕಟ್ಟಿಸಲೇಬೇಕಾದ ಅನಿವಾರ್ಯ ಹೋರಾಟ ಚಿತ್ರಕಥನದ ಭಿತ್ತಿ.

ನಾಯಕಿ ಶೌಚಕ್ಕೆ ಹೋಗಲು ಅನುಭವಿಸುವ ಪಡಿಪಾಟಲು, ಅದಕ್ಕೆ ಅವಳ ಗಂಡ ಸಾಥ್‌ ನೀಡುವ ರೀತಿ, ಅವರಿಬ್ಬರ ಅನೂಹ್ಯ ಮೈತ್ರಿ, ಸಂಪ್ರದಾಯ–ಸಂಸ್ಕೃತಿಯ ಮುಖಾಮುಖಿ, ಕೊನೆಗೆ ಆಂದೋಲನ– ಹೀಗೆ ಎರಡೂವರೆ ತಾಸಿಗೂ ಹೆಚ್ಚು ಅವಧಿಗೆ ಸಿನಿಮಾ ಹರಡಿಕೊಂಡಿದೆ. ಉತ್ತರ ಪ್ರದೇಶದ ಹಳ್ಳಿಯ ಮಣ್ಣಿನ ವಾಸನೆ, ಅಲ್ಲಿನದ್ದೇ ಭಾಷೆ ಚಿತ್ರದ ಗಮನಾರ್ಹ ಅಂಶಗಳು.

ಸಣ್ಣ ಸಣ್ಣ ವಿವರಗಳಲ್ಲಿಯೇ ಹಿಡಿದಿಟ್ಟುಕೊಳ್ಳುವ ಸಿನಿಮಾ, ಎರಡನೇ ಅರ್ಧದಲ್ಲಿ ಭಾಷಣ, ಮೆಲೋಡ್ರಾಮಾ ಹಾಗೂ ಸಾಕ್ಷ್ಯಚಿತ್ರದ ಅಂಶಗಳನ್ನು ತುಳುಕಿಸುತ್ತಾ ಹಿಡಿತ ತಪ್ಪುತ್ತದೆ. ಹೋರಾಟದ ದನಿ ಅತಿವಾಚ್ಯವಾಗಿ, ಪವಾಡ ಸದೃಶ ಎನ್ನುವ ಹಳೆಯ ಸೂತ್ರದ ಅದೇ ಶುಭಂ.

ಸಿನಿಮಾ ಅತಿ ಆಪ್ತವೆನ್ನಿಸುವುದು ಭೂಮಿ ಪೆಡ್ನೇಕರ್ ಮುಗುಳುನಗೆಯಿಂದ. ಅವರ ತಣ್ಣಗಿನ ಅಭಿನಯ ದೀರ್ಘ ಕಾಲ ಕಾಡುತ್ತದೆ. ಅವರನ್ನು ಮುಂದೆ ಬಿಟ್ಟು, ಅಕ್ಷಯ್ ಕುಮಾರ್ ತಾವು ಹಿಂದೆ ನಿಂತು ಅಭಿನಯಿಸಿದ್ದಾರೆ. ನಾಯಕನ ತಂದೆಯಾಗಿ ಸುಧೀರ್ ಪಾಂಡೆ ನಟನೆಗೂ ಹೆಚ್ಚು ಅಂಕ ಸಲ್ಲಬೇಕು. ಸಂಗೀತ ಕೂಡ ಚಿತ್ರದ ಚೌಕಟ್ಟಿಗೆ ಪೂರಕವಾಗಿದೆ.

ಬಹುತೇಕ ದೃಶ್ಯಗಳಲ್ಲಿನ ಸಾವಧಾನವನ್ನು ಅಂತ್ಯದಲ್ಲಿಯೂ ಉಳಿಸಿಕೊಂಡಿದ್ದರೆ ಈ ಚಿತ್ರ ಇನ್ನೂ ಒಂದು ಹಂತ ಮೇಲಕ್ಕೆ ಜಿಗಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT