ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮೋದಿ ಮಂತ್ರ; ಭ್ರಷ್ಟಾಚಾರವೇ ಪ್ರಧಾನ ಅಸ್ತ್ರ

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಘೋಷಿಸಿರುವ ಹೈಕಮಾಂಡ್‌, ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ತನ್ನ ಪ್ರಧಾನ ಆಕರ್ಷಣೆ ಎಂದು ಭಾವಿಸಿ, ಮೋದಿ ಮಂತ್ರವನ್ನೇ ಜಪಿಸಲು ನಿರ್ಧರಿಸಿದೆ.

‘ಜನಪ್ರಿಯ ಯೋಜನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಮನೆಮಾತಾಗಿರುವ ಮೋದಿ ಅವರೇ ಕರ್ನಾಟಕದ ಚುನಾವಣೆಯಲ್ಲಿ ನಮ್ಮ ಟ್ರಂಪ್‌ಕಾರ್ಡ್‌. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ವಿಧಾನಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಮೋದಿ ಹೆಸರಿನ ಮೂಲಕವೇ ಜಯ ದೊರೆತಿದೆ. ಕರ್ನಾಟಕದಲ್ಲೂ ಅವರ ಜನಪ್ರಿಯತೆಯನ್ನೇ ಪ್ರಧಾನವಾಗಿ ಇರಿಸಿಕೊಂಡು ಚುನಾವಣೆ ಎದುರಿಸಬೇಕು’ ಎಂದು ಪಕ್ಷ ನಿರ್ಧರಿಸಿದೆ.

ಮೋದಿ ಕಾರ್ಯವೈಖರಿ, ಜಾರಿಗೆ ತಂದಿರುವ ಯೋಜನೆಗಳ ಕುರಿತು ರಾಜ್ಯದ ಬಹುತೇಕರು ಅರಿತಿದ್ದಾರೆ. ಇತ್ತೀಚೆಗಷ್ಟೇ ಪಕ್ಷವು ವಿಸ್ತಾರಕರ ಮೂಲಕ ಮನೆಮನೆ ಸಮೀಕ್ಷೆ ನಡೆಸಿ ಮೋದಿ ಜನಪ್ರಿಯತೆಯನ್ನು ಮನಗಂಡಿದೆ. ಅದಕ್ಕೆಂದೇ ಕರ್ನಾಟಕದ ಚುನಾವಣೆಯಲ್ಲಿ ಮೋದಿ ಹೆಸರಲ್ಲೇ ಮತ ಯಾಚಿ
ಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಅವಧಿಪೂರ್ಣ ಚುನಾವಣೆಗೂ ಸಿದ್ಧ: ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವಂತಾದರೂ ಸಮರ್ಥವಾಗಿ ಎದುರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಬಿಜೆಪಿ ಹೈಕಮಾಂಡ್‌ ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸನ್ನದ್ಧಗೊಳಿಸಲು ಗಮನ ಕೇಂದ್ರೀಕರಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಇದೇ 12ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಈ ವರ್ಷಾಂತ್ಯದಲ್ಲಿ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಷಾ ಅವರ ಗಮನ ಎಲ್ಲೆಡೆ ಚದುರಿ ಹೋಗುವಂತಾಗಲು ಆ ರಾಜ್ಯಗಳೊಂದಿಗೇ ಚುನಾವಣೆ ಎದುರಿಸಿದರೇ ಒಳಿತು ಎಂಬ ಆಲೋಚನೆ ಕಾಂಗ್ರೆಸ್‌ನ ಚಿಂತಕರ ಚಾವಡಿಯಲ್ಲಿ ಮೂಡಿದೆ. ಒಂದೊಮ್ಮೆ ನವೆಂಬರ್‌ ವೇಳೆಗೆ ಕರ್ನಾಟಕದಲ್ಲೂ ಚುನಾವಣೆ ಘೋಷಣೆಯಾದಲ್ಲಿ ಪಕ್ಷವನ್ನು ಸನ್ನದ್ಧಗೊಳಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲೂ ಅಮಿತ್‌ ಷಾ ಗಮನ ಹರಿಸಲಿದ್ದಾರೆ.

ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಷಾ ಕರ್ನಾಟಕದ ಪ್ರವಾಸ ಆರಂಭಿಸಲಿದ್ದು, ಮೂರು ದಿನಗಳ ಕಾಲ ಪಕ್ಷದ ಮುಖಂಡರು, ಕಾರ್ಯಕರ್ತರು, ಧಾರ್ಮಿಕ ಗುರುಗಳು, ಬುದ್ಧಿಜೀವಿಗಳು ಹಾಗೂ ಆಯ್ದ ಹಿರಿಯ ಪತ್ರಕರ್ತರ ಜತೆ ವ್ಯಾಪಕ ಚರ್ಚೆ ನಡೆಸಲಿದ್ದಾರೆ.

ರಾಜ್ಯಕ್ಕೆ ಭಾರಿ ಮಹತ್ವ: ಕಾಂಗ್ರೆಸ್‌ ಆಡಳಿತದ ಏಕೈಕ ದೊಡ್ಡ ರಾಜ್ಯವಾಗಿರುವ ಕರ್ನಾಟಕದತ್ತಲೇ ಬಿಜೆಪಿ ವರಿಷ್ಠರು ದೃಷ್ಟಿ ನೆಟ್ಟಿದ್ದು, ‘ಕಾಂಗ್ರೆಸ್‌ಮುಕ್ತ ಭಾರತ’ ಸಂಕಲ್ಪ ಈಡೇರಲು ರಾಜ್ಯದಲ್ಲಿ ಪಕ್ಷವನ್ನು ಆಡಳಿತಕ್ಕೆ ತರಲು ಶತಾಯಗತಾಯ ಯತ್ನಿಸುತ್ತಿದೆ. ದೇಶದಾದ್ಯಂತ ಪ್ರವಾಸದಲ್ಲಿ ನಿರತವಾ
ಗಿರುವ ಅಮಿತ್‌ ಷಾ, ಕರ್ನಾಟಕದಲ್ಲಿ ಪಕ್ಷದ ಸರ್ಕಾರ ಸ್ಥಾಪಿಸಲು ‘ದಂಡಯಾತ್ರೆ’ಯ ತೆರದಲ್ಲೇ ದೌಡಾಯಿಸಲಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ, ಜನಮನ್ನಣೆ, ಯಶಸ್ವೀ ಯೋಜನೆಗಳು, ಜನಸ್ಪಂದನೆ ಏನೇ ಇರಲಿ ಅವೆಲ್ಲವೂ ಕಾಂಗ್ರೆಸ್‌ನ ಸಾಧನೆಗಳೇ ಎಂದು ಬಿಂಬಿತವಾಗಲಿವೆ. ದೇಶದೆಲ್ಲೆಡೆ ಅಸ್ತಿತ್ವ ಕಳೆದುಕೊಳ್ಳುತ್ತ ಸಾಗಿರುವ ಕಾಂಗ್ರೆಸ್‌ನ ದೌರ್ಬಲ್ಯಗಳ ಹೊರೆಯನ್ನು ಸಿದ್ದರಾಮಯ್ಯ ಹೊರಲೇಬೇಕಾಗುತ್ತದೆ. ಕಾಂಗ್ರೆಸ್‌ ದೌರ್ಬಲ್ಯವನ್ನೇ ಮುಂದಾಗಿಸಲಿರುವ ನಮಗೆ ಗೆಲುವು ಸುಲಭವಾಗಲಿದೆ’ ಎಂದು ಪಕ್ಷದ ಮುಖಂಡರು ಭಾವಿಸಿದ್ದಾರೆ.

ಗೊಂದಲವಿಲ್ಲ: ವೀರಶೈವ– ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತ ಗೊಂದಲವಾಗಲಿ, ಕನ್ನಡ ಧ್ವಜ ಕುರಿತ ಚರ್ಚೆಯಾಗಲಿ ಜನರ ಮನಸಿನಲ್ಲಿ 15ಕ್ಕಿಂತ ಹೆಚ್ಚು ದಿನ ಉಳಿಯಲಾರದು ಎಂದೇ ನಂಬಿರುವ ಬಿಜೆಪಿ, ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿ
ಸುವ ಗೋಜಿಗೇ ಹೋಗಿಲ್ಲ.

ವೀರಶೈವರಾಗಲಿ, ಲಿಂಗಾಯತರಾಗಲಿ ಪ್ರತ್ಯೇಕ ಧರ್ಮದ ಹೆಸರಲ್ಲಿ ಕಾಂಗ್ರೆಸ್‌ ಮುಖಂಡರು ರಾಜಕಾರಣ ಮಾಡುತ್ತಿರುವುದನ್ನು ಅರಿಯದಂತಹ ಅಮಾಯಕರೇನೂ ಅಲ್ಲ ಎಂಬುದು ಸ್ಪಷ್ಟ. ಅಂತೆಯೇ ಪಕ್ಷವು ಈ ಕುರಿತು ಬಹಿರಂಗ ಚರ್ಚೆ ಮಾಡಬಾರದು ಎಂಬ ಫರಮಾನು ಹೊರಡಿಸಿದೆ.

ಭ್ರಷ್ಟಾಚಾರವೇ ಚುನಾವಣೆಯ ಅಸ್ತ್ರ!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರವನ್ನೇ ಪಕ್ಷದ ಪ್ರಧಾನ ಅಸ್ತ್ರವನ್ನಾಗಿ ಬಳಸಲು ತೀರ್ಮಾನಿಸಿರುವ ಬಿಜೆಪಿ ಹೈಕಮಾಂಡ್‌, ಈ ಮೂಲಕ ರಾಜ್ಯ ಕಾಂಗ್ರೆಸ್‌ನ ಇನ್ನೂ ಕೆಲವು ಮುಖಂಡರ ಮೇಲೆ ಆದಾಯ ತೆರಿಗೆ (ಐ.ಟಿ) ದಾಳಿ ನಡೆಯಲಿದೆ ಎಂಬ ಮುನ್ಸೂಚನೆ ನೀಡಿದೆ.

ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ನಿವಾಸಗಳ ಮೇಲೆ ಸತತ ಮೂರು ದಿನ ನಡೆದ ದಾಳಿಯ ಮಾದರಿಯಲ್ಲೇ ಇನ್ನಷ್ಟು ಸಚಿವರು, ಶಾಸಕರ ಮನೆಗಳ ಮೇಲೆ ದಾಳಿ ನಡೆಯುವ ಸಾದ್ಯತೆಗಳನ್ನು ಅಲ್ಲಗಳೆಯದ ಪಕ್ಷವು, ‘ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ ನಮ್ಮ ಪ್ರಮುಖ ಅಸ್ತ್ರವಾಗಲಿದೆ’ ಎಂಬುದನ್ನು ಘೋಷಿಸಲು ಹೊರಟಿದೆ.

ಡಿ.ಕೆ. ಶಿವಕುಮಾರ್‌ ಮನೆ ಮೇಲೆ ನಡೆದ ಐ.ಟಿ ದಾಳಿಯನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ. ವಿರೋಧ ಪಕ್ಷಗಳ ಮುಖಂಡರನ್ನು ಗುರಿಯಾಗಿರಿಸಿ, ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಜನಸಾಮಾನ್ಯರು ಭಾವಿಸಿಲ್ಲ. ಬದಲಿಗೆ, ಭ್ರಷ್ಟರ ವಿರುದ್ಧದ ದಾಳಿ ಎಂದೇ ತಿಳಿದಿದ್ದಾಗಿ ಪಕ್ಷ ಮನಗಂಡಿದೆ ಎಂಬುದು ಮುಖಂಡರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT