ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗಿಲ್ಲ ಪಠ್ಯಪುಸ್ತಕ ಭಾಗ್ಯ

Last Updated 13 ಆಗಸ್ಟ್ 2017, 5:52 IST
ಅಕ್ಷರ ಗಾತ್ರ

ಕೋಲಾರ: ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಭಾಗ್ಯವಿಲ್ಲ. ಪಠ್ಯಪುಸ್ತಕವಿಲ್ಲದೆ ಒಂದೆಡೆ ಶಿಕ್ಷಕರ ಬೋಧನೆಗೆ ಸಮಸ್ಯೆಯಾಗಿದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಆರು ಶೈಕ್ಷಣಿಕ ವಲಯಗಳಿದ್ದು, ಎಲ್ಲೆಡೆ ಜೂನ್‌ 1ರಿಂದ ಶಾಲೆ ಆರಂಭವಾಗಿವೆ. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಒಟ್ಟಾರೆ 382 ನಮೂನೆಯ ಪಠ್ಯಪುಸ್ತಕಗಳಿವೆ. ಈ ಪೈಕಿ ಕೆಲ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದ್ದರೆ ಮತ್ತೆ ಕೆಲ ಪುಸ್ತಕಗಳು ಈವರೆಗೂ ಬಂದಿಲ್ಲ.

ಪಠ್ಯಪುಸ್ತಕಗಳನ್ನು ‘ಪಾರ್ಟ್‌ 1’ ಮತ್ತು ‘ಪಾರ್ಟ್‌ 2’ ಎಂದು ವಿಂಗಡಿಸಲಾಗಿದೆ. ಇದರಲ್ಲಿ ಪಾರ್ಟ್‌ 1ರ ಪುಸ್ತಕಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ಬೇಕಿದ್ದು, ಇವುಗಳನ್ನು ಬೇಗನೆ ವಿದ್ಯಾರ್ಥಿಗಳಿಗೆ ತಲುಪಿಸಬೇಕು. 260 ಪುಟಗಳಿಗಿಂತ ಹೆಚ್ಚಿನ ಪಠ್ಯವಿರುವ ಪುಸ್ತಕಗಳನ್ನು ಪಾರ್ಟ್‌ 2ರಲ್ಲಿ ಸೇರಿಸಲಾಗಿದ್ದು, ಇವುಗಳನ್ನು ಶೈಕ್ಷಣಿಕ ವರ್ಷ ಆರಂಭವಾಗಿ ಕೆಲ ತಿಂಗಳು ಕಳೆದ ನಂತರ ವಿತರಣೆ ಮಾಡಬೇಕು.

ಕೆಟಿಬಿಎಸ್ ಹೊಣೆ: ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಕೊಡಲಾಗುತ್ತದೆ. ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿಯಿಂದ ಹಣ ಪಡೆದು ಪಠ್ಯಪುಸ್ತಕ ಒದಗಿಸಲಾಗುತ್ತದೆ.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವ ಹೊಣೆ ಹೊತ್ತಿರುವ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ (ಕೆಟಿಬಿಎಸ್) ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಜಿಲ್ಲೆಯಿಂದ ಪಠ್ಯಪುಸ್ತಕಗಳ ಬೇಡಿಕೆಯ ಪ್ರಸ್ತಾವ ಸಲ್ಲಿಸಲಾಗಿದೆ. ಕೆಟಿಬಿಎಸ್‌ ಖಾಸಗಿ ಮುದ್ರಣಾಲಯಗಳಿಗೆ ಪಠ್ಯಪುಸ್ತಕ ಮುದ್ರಿಸುವ ಟೆಂಡರ್‌ ನೀಡಿದ್ದು, ಮುದ್ರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಕೆಲ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಹಾಗೂ ಕಾಗದ ಕೊರತೆಯಿಂದಾಗಿ ಪಠ್ಯಪುಸ್ತಕ ಮುದ್ರಣ ಕಾರ್ಯವು ಆಮೆ ಗತಿಯಲ್ಲಿ ಸಾಗಿದೆ. ಇದರಿಂದ ಶಾಲೆಗಳಲ್ಲಿ ಪಾಠ ಪ್ರವಚನ ಶೈಕ್ಷಣಿಕ ವೇಳಾಪಟ್ಟಿಯಂತೆ ನಡೆಯುತ್ತಿಲ್ಲ. ಬಹುಪಾಲು ಶಿಕ್ಷಕರು ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ನೆರವಿನಿಂದ ಪಠ್ಯ ಬೋಧನೆ ಮಾಡುತ್ತಿದ್ದಾರೆ.

ಪಠ್ಯಪುಸ್ತಕ ಬೇಡಿಕೆ: ಜಿಲ್ಲೆಯಲ್ಲಿ 1,280 ಕಿರಿಯ ಪ್ರಾಥಮಿಕ ಶಾಲೆ, 943 ಹಿರಿಯ ಪ್ರಾಥಮಿಕ ಶಾಲೆ ಹಾಗೂ 358 ಪ್ರೌಢ ಶಾಲೆ ಸೇರಿದಂತೆ ಒಟ್ಟಾರೆ 2,581 ಶಾಲೆಗಳಿವೆ. ಜಿಲ್ಲೆಯ ಪಠ್ಯಪುಸ್ತಕ ಬೇಡಿಕೆ 15,29,254 ಇದ್ದು, ಈ ಪೈಕಿ 13,45,927 ಪುಸ್ತಕಗಳು ಪೂರೈಕೆಯಾಗಿವೆ.

ಇದರಲ್ಲಿ 12,91,772 ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. ಉಳಿದ 69,305 ಪುಸ್ತಕಗಳನ್ನು ಬಿಇಒ ಕಚೇರಿಗಳ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ. ಕೆಟಿಬಿಎಸ್‌ನಿಂದ ಪುಸ್ತಕಗಳು ಪೂರೈಕೆಯಾದಂತೆ ಅವುಗಳನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ. ಈ ಪ್ರಕ್ರಿಯೆ ಎರಡು ತಿಂಗಳಿನಿಂದ ನಡೆಯುತ್ತಲೇ ಇದೆ.

ಪುಸ್ತಕಗಳಿಗೆ ಅಲೆದಾಟ: ಕೆಲ ಖಾಸಗಿ ಶಾಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ. ಮತ್ತೆ ಕೆಲ ಖಾಸಗಿ ಶಾಲೆಗಳು ಪಠ್ಯಪುಸ್ತಕಗಳು ಬರುವುದನ್ನೇ ಎದುರು ನೋಡುತ್ತಿವೆ. ಪಠ್ಯಪುಸ್ತಕಗಳಿಗೆ ಹಣ ಪಾವತಿಸಿರುವ ವಿದ್ಯಾರ್ಥಿಗಳು ಪುಸ್ತಕ ಕೇಳುತ್ತಿದ್ದು, ಅವರಿಗೆ ಉತ್ತರಿಸುವುದು ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿದೆ.

ಇನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರತಿನಿತ್ಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಬಳಿ ಬಂದು ಪಠ್ಯಪುಸ್ತಕ ವಿಚಾರಿಸುವುದೇ ಕೆಲಸವಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಟಿಬಿಎಸ್‌ನಿಂದ ಪೂರೈಕೆಯಾಗದ ಪಠ್ಯಪುಸ್ತಕಗಳನ್ನು ಹುಡುಕಿಕೊಂಡು ಪುಸ್ತಕ ಮಾರಾಟ ಮಳಿಗೆಗಳಿಗೆ ಅಲೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT