ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಸ್ವಾಗತಾರ್ಹ

Last Updated 15 ಆಗಸ್ಟ್ 2017, 20:47 IST
ಅಕ್ಷರ ಗಾತ್ರ

ವಾಹನಗಳ ವಿಮೆ ನವೀಕರಣಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಸ್ವಾಗತಾರ್ಹ ಆದೇಶ. ದೇಶದ ಎಲ್ಲ ನಗರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾನಗರಗಳಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ತಲುಪಿದೆ. ಇದಕ್ಕೆ ವಾಹನಗಳು ಉಗುಳುವ ಹೊಗೆ ಪ್ರಮುಖ ಕಾರಣ. ಎಲ್ಲ ವಾಹನಗಳೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಪಡೆಯುವುದನ್ನು ಈಗಾಗಲೇ ಕಡ್ಡಾಯ ಮಾಡಲಾಗದೆ. ಆದರೆ ಅದು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಆದಕಾರಣ, ವಾಹನ ವಿಮೆ ನವೀಕರಣಕ್ಕೆ ಈ ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದೆ. ಇಂತಹ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿತ್ತು. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ದೇಶದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿಯೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವ ಕೇಂದ್ರಗಳನ್ನು ತೆರೆಯಬೇಕು. ಪೆಟ್ರೋಲ್ ಬಂಕ್‌ಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಈ ಕೇಂದ್ರಗಳು ನಿಯಮಾನುಸಾರವಾಗಿ ಕಾರ್ಯನಿರ್ವಹಿಸುತ್ತವೆಯೇ ಎನ್ನುವುದನ್ನು ಪರಿಶೀಲಿಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ. ನಿಯಮಪಾಲನೆಯ ಸೂಚನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು.

ಮಹಾನಗರಗಳಲ್ಲಿ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದ್ದು ಅವುಗಳನ್ನು ನಿಯಂತ್ರಿಸಲೂ ಕ್ರಮ ಕೈಗೊಳ್ಳಬೇಕಿದೆ. ಬೆಂಗಳೂರಿನಲ್ಲಿಯೇ 60 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ದೆಹಲಿಯಲ್ಲಿ 88 ಲಕ್ಷ, ಚೆನ್ನೈಯಲ್ಲಿ 44 ಲಕ್ಷ ವಾಹನಗಳು ಇವೆ ಎಂದು ಹೇಳಲಾಗಿದೆ. ಇಷ್ಟೊಂದು ಸಂಖ್ಯೆಯ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ನೀಡಲು ಭಾರೀ ಸಂಖ್ಯೆಯಲ್ಲಿ ಮಾಲಿನ್ಯ ತಪಾಸಣಾ ಕೇಂದ್ರಗಳು ಬೇಕಾಗುತ್ತವೆ. ವಿಮೆ ನವೀಕರಣಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಕಡ್ಡಾಯವಾದರೂ ಅದರ ಆಶಯ ಈಡೇರಿಕೆಗೆ ವಿರುದ್ಧವಾಗಿ ಪ್ರಮಾಣಪತ್ರ ನೀಡಿಕೆಯಲ್ಲೇ ಅಕ್ರಮಗಳು ನುಸುಳುವ ಸಾಧ್ಯತೆ ಇದೆ. ವಾಹನಗಳನ್ನು ತಪಾಸಣೆಗೆ ಒಳಪಡಿಸದೆ, ಹಣ ಪಡೆದು ಬೇಕಾಬಿಟ್ಟಿ ಪ್ರಮಾಣಪತ್ರ ನೀಡುವ ದಂಧೆಯೂ ಶುರುವಾಗಬಹುದು. ಈ ಸಾಧ್ಯತೆ ಮನಗಂಡಿರುವ ಸುಪ್ರೀಂ ಕೋರ್ಟ್, ಪ್ರಮಾಣಪತ್ರ ನೀಡುವ ಕೇಂದ್ರಗಳ ಬಗ್ಗೆ ನಿಗಾ ಇಡಲು ಸೂಚಿಸಿದೆ. ಮಹಾನಗರಗಳಲ್ಲಿ ಈಗಾಗಲೇ ಇರುವ ಮಾಲಿನ್ಯ ತಪಾಸಣಾ ಕೇಂದ್ರಗಳ ಮೇಲೆ ಯಾವ ನಿಯಂತ್ರಣವೂ ಇಲ್ಲ. ರಾಷ್ಟ್ರದ ರಾಜಧಾನಿ ದೆಹಲಿ ಒಂದರಲ್ಲಿಯೇ ಇಂತಹ 971 ಕೇಂದ್ರಗಳಿವೆ. ಆದರೆ ಈ ಕೇಂದ್ರಗಳ ಮೇಲೆ ನಿಗಾ ಇಡಲು ಸಿಬ್ಬಂದಿ ಕೊರತೆ ಇದೆ ಎಂಬ ವರದಿಗಳಿವೆ. ಇದು ನಿಜಕ್ಕೂ ದುರಂತ. ಯಾವುದೇ ಹೊಸ ನಿರ್ದೇಶನ ಅಥವಾ ಕಾಯ್ದೆ ಜಾರಿಗೆ ಬಂದರೆ ಅದನ್ನು ತಮ್ಮ ‘ಮಾಮೂಲು’ ಸಂಗ್ರಹಕ್ಕೆ ಬಳಸಿಕೊಳ್ಳುವ ಚಾಣಾಕ್ಷತನ ನಮ್ಮ ಸರ್ಕಾರಿ ಸಿಬ್ಬಂದಿಗೆ ಸಿದ್ಧಿಸಿದೆ. ಅದಕ್ಕೆ ಲಗಾಮು ಹಾಕುವುದರ ಕಡೆಗೂ ಸರ್ಕಾರ ಗಮನಹರಿಸಬೇಕು.

ವಿಮೆ ನವೀಕರಣಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಕಡ್ಡಾಯ ಮಾಡಿದ ಮಾತ್ರಕ್ಕೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ಭಾವಿಸಲಾಗದು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಬಸ್, ರೈಲು ಮುಂತಾದ ಸಮೂಹ ಸಾರಿಗೆ ಸೇವೆಗಳನ್ನು ಬಲಪಡಿಸಬೇಕು. ಇವುಗಳ ಸೇವೆ ದುಬಾರಿ ಆಗದಂತೆಯೂ ನೋಡಿಕೊಳ್ಳಬೇಕು. ಸ್ವಂತ ವಾಹನ ಹೊಂದುವುದಕ್ಕಿಂತ ಸಮೂಹ ಸಾರಿಗೆ ವ್ಯವಸ್ಥೆ ಅವಲಂಬಿಸುವುದೇ ಹಿತಕರ ಎಂಬ ವಾತಾವರಣ ಸೃಷ್ಟಿಯಾಗಬೇಕು. ಈ ಬಗ್ಗೆ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಲೋಚಿಸಬೇಕಿದೆ. ನಗರಗಳಲ್ಲಿನ ವಾಯುಮಾಲಿನ್ಯಕ್ಕೆ ವಾಹನಗಳು ಉಗುಳುವ ಹೊಗೆಯ ಕೊಡುಗೆಯೇ ಹೆಚ್ಚು. ವಾಯುಮಾಲಿನ್ಯವು ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಇದನ್ನು ನಿಯಂತ್ರಿಸುವುದು ಅತ್ಯಂತ ತುರ್ತಿನ ಕೆಲಸ. ಮುಂದಿನ ಪೀಳಿಗೆಗೆ ಆರೋಗ್ಯಪೂರ್ಣ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT