ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಕೆಆರ್‌ಡಿಬಿ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ

Last Updated 16 ಆಗಸ್ಟ್ 2017, 7:02 IST
ಅಕ್ಷರ ಗಾತ್ರ

ರಾಯಚೂರು: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಮೂಲಕ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನೆಲ್ಲ ಬೇಗನೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಟ್‌ ಹೇಳಿದರು. ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಮಂಗಳವಾರ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

2016-17ನೇ ಸಾಲಿನಲ್ಲಿ 382 ಕಾಮಗಾರಿಗಳಿಗೆ ಕ್ರಿಯಾಯೋಜನೆ ಮಾಡಲಾಗಿದೆ. ಅದರಲ್ಲಿ 51 ಕಾಮಗಾರಿಗಳು ಪೂರ್ಣಗೊಂಡಿದ್ದು, 265 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. 66 ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ. ಕಾಮಗಾರಿಗೆ ₹83.92 ಕೋಟಿ ನಿಗದಿಪಡಿಸಲಾಗಿದ್ದು ₹13.62 ಕೋಟಿ ವೆಚ್ಚವಾಗಿದೆ.

2017-18ನೇ ಸಾಲಿನಲ್ಲಿ 382 ಕಾಮಗಾರಿಗಳಿಗೆ ₹91.93 ಕೋಟಿ ಕ್ರಿಯಾ ಯೋಜನೆ ಅನುಮೋದನೆ ದೊರೆತಿದೆ. ಎಚ್‌ಕೆಆರ್‌ಡಿಬಿಯಿಂದ ರಾಯಚೂರು ಜಿಲ್ಲೆಗೆ ಐದು ವರ್ಷಗಳಲ್ಲಿ ₹413.25 ಕೋಟಿ ಅನುದಾನ ಬಂದಿದೆ ಎಂದು ಹೇಳಿದರು.

ರೈತಾಪಿ ವರ್ಗ ಹಾಗೂ ಗ್ರಾಮಗಳ ಅಭ್ಯುದಯಕ್ಕೆ ಸರ್ಕಾರ ಮಹತ್ವ ನೀಡಿದೆ. ಜೀವನಾಧಾರಕ್ಕೆ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ನೆರವು ನೀಡಲು ಹಾಗೂ ಕೃಷಿಯನ್ನು ಉತ್ತೇಜಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಮುಖವಾಗಿ ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ನೀರಾವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳ ಶೈಕ್ಷಣಿಕ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು 2017-18ನೇ ಸಾಲಿನಲ್ಲಿ ‘ದಾಖಲಾತಿ ಆಂದೋಲನ’ ಮಾಡಲಾಗಿದೆ. ಜೂನ್‌್ ಆರಂಭದಲ್ಲೆ ಎಲ್ಲ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್, ಶೂ ಮತ್ತು ಸಾಕ್ಸ್‌ಗಳನ್ನು ರಾಜ್ಯದೆಲ್ಲೆಡೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 5,617 ಮಕ್ಕಳಿಗೆ ಶಾಲಾ ಪ್ರವೇಶ ಸಿಕ್ಕಿದೆ. ಈ ಯೋಜನೆಗಾಗಿ ಜಿಲ್ಲೆಯ ವಿವಿಧ ಶಾಲೆಗಳಿಗೆ ₹5 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರಿಗೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಡಿಆರ್‌ ಡಿವೈಎಸ್ಪಿ ವೈ.ಕೆ.ಕಾಶಪ್ಪನವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶನ ಮಾಡಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT