ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯೋಗಿಗೆ ಕಿರುಕುಳ ಭದ್ರತಾ ಸಿಬ್ಬಂದಿ ಬಂಧನ

Last Updated 18 ಆಗಸ್ಟ್ 2017, 19:32 IST
ಅಕ್ಷರ ಗಾತ್ರ

ನವದೆಹಲಿ: ಪಂಚತಾರಾ ಹೋಟೆಲ್‌ನ ಮಹಿಳಾ ಸಿಬ್ಬಂದಿ ಯೊಬ್ಬರು ನೀಡಿದ ದೂರಿನನ್ವಯ ಅದೇ ಹೋಟೆಲಿನ ಭದ್ರತಾ ವ್ಯವಸ್ಥಾಪಕರೊಬ್ಬರನ್ನು ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಮೆಟ್ರೊಪಾಲಿಟನ್‌ ಮ್ಯಾಜಿ ಸ್ಟ್ರೇಟ್‌ ಸ್ನಿಗ್ಧ ಸರ್ವರಿಯಾ ಅವರು ಆರೋಪಿಯಿಂದ ₹25 ಸಾವಿರದ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಿದರು. ಆರೋಪ ಸಾಬೀತಾದಲ್ಲಿ ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ.

ಹೋಟೆಲ್‌ನ ಭದ್ರತಾ ವ್ಯವಸ್ಥಾಪಕರು ಕಿರುಕುಳ ನೀಡಿದ್ದಾರೆ ಎಂದು 33 ವರ್ಷದ ಮಹಿಳಾ ಸಿಬ್ಬಂದಿ ಜುಲೈ 30ರಂದು ದೂರು ನೀಡಿದ್ದರು. ಈ ನಡುವೆ ಆರೋಪಿಯು ಮಹಿಳೆಯ ಸೀರೆ ಎಳೆಯಲು ಪ್ರಯತ್ನಿಸುತ್ತಿರುವ ಸಿಸಿಟಿವಿ ಕ್ಯಾಮೆರಾ  ದೃಶ್ಯಾವಳಿಯನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿತ್ತು.

‘ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವು ಸಾಕ್ಷ್ಯಗಳು ಲಭಿಸಿವೆ’ ಎಂದು  ದೆಹಲಿ ಪೊಲೀಸ್‌ ವಕ್ತಾರ ದೀಪೇಂದ್ರ ಪಾಠಕ್‌ ತಿಳಿಸಿದ್ದಾರೆ.

‘ಈ ಹಿಂದೆ ಅನೇಕ ಬಾರಿ ದೈಹಿಕ ಸಂಬಂಧ ಹೊಂದುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಅದಕ್ಕೆ ನಾನು ಒಪ್ಪಿರಲಿಲ್ಲ. ಜುಲೈ 29ರಂದು ಆತನ  ಹುಟ್ಟುಹಬ್ಬದ ಪಾರ್ಟಿಗೆಂದು ತನ್ನ ಕೊಠಡಿಗೆ ಕರೆದಿದ್ದ. ಅಲ್ಲಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಈ ಬಗ್ಗೆ  ಹೋಟೆಲಿನ ಮಾನವ ಸಂಪನ್ಮೂಲ ಅಧಿಕಾರಿಗೆ ದೂರು ನೀಡಿದರೂ ಅವರು ಪರಿಗಣಿಸಿಲ್ಲ’ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ದೂರು ಸ್ವೀಕರಿಸಿದ ಪೊಲೀಸ್‌ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ನಂತರ ಆರೋಪಿಯನ್ನು ಬಂಧಿಸಿದ್ದರು. ಮಹಿಳೆ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಯ ದಾಖಲೆಯನ್ನು ಒದಗಿಸಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT