ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿನ ಬೃಹತ್ ಕಾಲುವೆ ಕಾಮಗಾರಿ: ಸಮರೋಪಾದಿಯಲ್ಲಿ ಪೂರ್ಣಗೊಳಿಸಿ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನೀರಿನ ಬೃಹತ್‌ ಕಾಲುವೆಗಳ ಪುನಶ್ಚೇತನ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ನೀರಿನಿಂದ ಜಲಾವೃತಗೊಂಡು ಹಾನಿ ಸಂಭವಿಸಿದ್ದ ಪ್ರದೇಶಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಮಳೆ ನೀರಿನ ಬೃಹತ್‌ ಕಾಲುವೆಗಳ ಕಾಮಗಾರಿ ಚುರುಕುಗೊಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಸಿವಿಲ್‌ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಸಂಬಂಧಿಸಿದ ಎಂಜಿನಿಯರ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ಕಲ್ಪಿಸುವಂತೆ ಮತ್ತು ಜಲಾವೃತವಾಗಿದ್ದ ಪ್ರದೇಶಗಳ ನಾಲ್ಕು ಪ್ರಮುಖ ಮಳೆ ನೀರುಗಾಲುವೆಗಳನ್ನು 20 ದಿನಗಳೊಳಗೆ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜೆ.ಸಿ.ರಸ್ತೆಯ ಎಸ್‌.ಜೆ.ಪಿ ಪೊಲೀಸ್‌ ಠಾಣೆ ಹಿಂಭಾಗ ಕುಂಬಾರಗುಂಡಿ ಪ್ರದೇಶದಲ್ಲಿ ಮಳೆ ನೀರು ನಿಂತು, ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆ ನೀರು ಹರಿಯುವ ಬೃಹತ್‌ ಚರಂಡಿ ಮೇಲೆ ಪಿಲ್ಲರ್‌ ಬಳಸಿ, ಬೃಹತ್‌ ಕಟ್ಟಡ ಕಟ್ಟಿರುವುದನ್ನು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಮಳೆ ನೀರು ಸರಾಗವಾಗಿ ಹರಿಯಲು ಕಟ್ಟಡ ಅಡ್ಡಿಯಾಗಿ, ತಗ್ಗುಪ್ರದೇಶಕ್ಕೆ ನೀರು ನುಗ್ಗಿರುವುದನ್ನು ಗಮನಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರಿಗೆ ತಾಕೀತು ಮಾಡಿದರು.

ಶಾಂತಿನಗರದ ಡಬಲ್‌ ರೋಡ್‌ ಸಿಗ್ನಲ್‌ ಜಂಕ್ಷನ್‌ನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಮಳೆನೀರು ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿದಿರುವುದನ್ನು ಪರಿಶೀಲಿಸಿದರು. ಚರಂಡಿಯಲ್ಲಿ ತುಂಬಿರುವ ಹೂಳು ತೆಗೆದು, ಕುಸಿದಿರುವ ರಸ್ತೆಯ ಭಾಗ ತಕ್ಷಣ ಸರಿಪಡಿಸಿ, ಜನರ ಓಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸಿದ್ದೇಗೌಡ ಅವರಿಗೆ ಸೂಚನೆ ನೀಡಿದರು.

ಪಿಡಬ್ಲ್ಯುಡಿ ವಸತಿ ಗೃಹ ರಸ್ತೆಯಲ್ಲಿ ಮಳೆ ಬಂದಾಗ ಮಧ್ಯಮ ಗಾತ್ರದ ಚರಂಡಿಗಳಿಂದ ನೀರು ಸರಾಗವಾಗಿ ಬೃಹತ್‌ ಚರಂಡಿಗಳಿಗೆ ಹರಿದು ಹೋಗದೆ, ವಸತಿ ಗೃಹಗಳಿಗೆ ನುಗ್ಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರಿದರು. ಪ್ರಾಥಮಿಕ ಮತ್ತು ಎರಡನೇ ಹಂತದ ಚರಂಡಿಗಳನ್ನು ದುರಸ್ತಿಪಡಿಸಿ, ಮಳೆನೀರಿನ ಬೃಹತ್‌ ಕಾಲುವೆಯಲ್ಲಿ ಹೂಳೆತ್ತಲು ತಕ್ಷಣ ಕ್ರಮಗೊಳ್ಳುವಂತೆ ಎಂಜಿನಿಯರ್‌ಗಳಿಗೆ ಸಚಿವರು ಸೂಚನೆ ಕೊಟ್ಟರು.

ಶಾಂತಿನಗರದ ಬಿಎಂಟಿಸಿ ಡಿಪೊಗೆ ನೀರು ನುಗ್ಗಿ ಹಾನಿಯಾಗಿರುವುದನ್ನು ಪರಿಶೀಲಿಸಿದಾಗ, ‘ಮಳೆ ಬಂದಾಗ ಇಲ್ಲಿ ಸಿಬ್ಬಂದಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಡಿಪೋ ಒಳಗೆ ನೀರು ತುಂಬಿಕೊಂಡು ಕೆರೆಯಂತಾಗುತ್ತದೆ. ಮೊನ್ನೆ ಸುರಿದ ಮಳೆಗೆ ಇಡೀ ಡಿಪೋ ಜಲಾವೃತಗೊಂಡು ಬಸ್‌ಗಳಿಗೂ ಹಾನಿ ಉಂಟಾಗಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಡಿಪೊ ಒಳಗೆ ಹಾದುಹೋಗುವಂತೆ ಹೊಸದೊಂದು ಬೃಹತ್‌ ಮಳೆ ನೀರು ಗಾಲುವೆ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಎಂಜಿನಿಯರ್‌ಗೆ ಸೂಚಿಸಿದರು.

ಆನೆಪಾಳ್ಯ ಹಾಗೂ ಎನ್‌ಡಿಆರ್‌ಐ ಫಾರಂ ಹತ್ತಿರ ನಿರ್ಮಾಣ ಹಂತದಲ್ಲಿರುವ ಮಳೆನೀರು ಚರಂಡಿ ಮತ್ತು ಸೇತುವೆ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲು ಗಡುವು ನೀಡಿದರು.

ಅವನಿ ಶೃಂಗೇರಿ, ಸರಸ್ವತಿ ಪುರ, ಆರ್‌.ಆರ್‌.ಲೇಔಟ್‌, ಶ್ರೀನಿವಾಸ ರೆಡ್ಡಿ ಲೇಔಟ್‌ನಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿದ್ದ ಸ್ಥಳಗಳನ್ನು ಪರಿಶೀಲಿಸಿದ ಸಚಿವರು, ಮೂರು ತಿಂಗಳೊಳಗೆ ಮಳೆ ನೀರು ಚರಂಡಿ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸಬೇಕೆಂದು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಿರುವ ಅರಕೆರೆಯ ಕೋಡಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮಳೆ ನೀರಿನ ಚರಂಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು.

ಕೋರಮಂಗಲ ಮತ್ತು ಈಜಿಪುರ ರಸ್ತೆಗೆ ಹೊಂದಿಕೊಂಡಿರುವ ಎಸ್‌.ಟಿ. ಬೆಡ್‌ ಪ್ರದೇಶಕ್ಕೆ ಸಚಿವರು ಭೇಟಿ ಕೊಟ್ಟಾಗ, ‘ಎಸ್‌.ಟಿ. ಬೆಡ್‌ ಭಾಗದಲ್ಲಿ ಹಾದುಹೋಗಿರುವ ಮಳೆ ನೀರು ಚರಂಡಿಯ ಹೂಳೆತ್ತಲು ತಡೆಗೋಡೆಗಳನ್ನು ಒಡೆದಿರುವುದರಿಂದ ತಗ್ಗು ಪ್ರದೇಶಕ್ಕೆ ಮಳೆ ನುಗ್ಗಿ ಅಜಾಹುತ ಸಂಭವಿಸಿದೆ. ಪಾಲಿಕೆಯ ತಪ್ಪು ನಿರ್ಧಾರಗಳಿಂದ ಆಗಿರುವ ಹಾನಿಗೆ ಪಾಲಿಕೆಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಮಳೆ ಬಂದಾಗ ಇದೇ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು’ ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.

ಯಡಿಯೂರು ವಾರ್ಡ್‌ನಲ್ಲಿ ಮಳೆಯ ಅಬ್ಬರಕ್ಕೆ ತಡೆಗೋಡೆ ಕುಸಿದ ಸ್ಥಳ ಪರಿಶೀಲಿಸಿ, ₹3 ಕೋಟಿ ವೆಚ್ಚದಲ್ಲಿ ಹೊಸ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

***

ಭಾರಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ತ್ವರಿತವಾಗಿ ಮಳೆನೀರು ಚರಂಡಿ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸಮರೋಪಾದಿಯಲ್ಲಿ ತಡೆಗೋಡೆ ನಿರ್ಮಿಸುವ ಜತೆಗೆ, ಚರಂಡಿಯ ಹೂಳೆತ್ತಲು ಸೂಚನೆ ನೀಡಲಾಗಿದೆ
–ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

***

ಸಂತ್ರಸ್ತರು ಇದುವರೆಗೂ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿಲ್ಲ. ಇಷ್ಟೊಂದು ಹಾನಿಯಾಗಿರುವಾಗ ಸಂತ್ರಸ್ತರಿಗೆ ಪರಿಹಾರ ನೀಡಬೇಕಾದುದು ನಮ್ಮ ಜಬಾಬ್ದಾರಿ.
–ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

***

ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿರುವ ಈ ಅನಾಹುತಕ್ಕೆ ಜನರ ಕ್ಷಮೆಯಾಚಿಸುತ್ತಿದ್ದೇವೆ.
–ಜಿ.ಪದ್ಮಾವತಿ, ಪಾಲಿಕೆ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT