ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿತಿಪ್ಪನಹಳ್ಳಿ ಗ್ರಾಮಸ್ಥರ ದೇಶಭಕ್ತಿ

Last Updated 20 ಆಗಸ್ಟ್ 2017, 7:04 IST
ಅಕ್ಷರ ಗಾತ್ರ

ಹಳೇಬೀಡು: ಈ ಊರಿನಲ್ಲಿ ಗ್ರಾಮ ದೇವತೆ ಜಾತ್ರೆ ನಡೆಯುವುದಿಲ್ಲ. ಯುಗಾದಿ, ದೀಪಾವಳಿ, ಗೌರಿ, ಗಣೇಶ ಮೊದಲಾದ ಹಬ್ಬಗಳಿಗೂ ಪ್ರಾಮುಖ್ಯತೆ ಇಲ್ಲ. ಆದರೆ ಪ್ರತಿವರ್ಷ ಗ್ರಾಮದ ಶಾಲೆ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿನ ಹಬ್ಬವಾಗಿ ಆಚರಿಸುತ್ತಾರೆ. ಇದು ಜೋಡಿತಿಪ್ಪನಹಳ್ಳಿ ಗ್ರಾಮದ ಜನತೆಯ ದೇಶಭಕ್ತಿ.

ಸತತ ಹತ್ತು ವರ್ಷದಿಂದ ಗ್ರಾಮದಲ್ಲಿ ಸ್ವಾತಂತ್ರ್ಯ ದಿನವನ್ನು ವೈಭವದಿಂದ ನಡೆಸಲಾಗುತ್ತಿದೆ. ಕಳೆದ ಮಂಗಳವಾರ ಸಹ ಗ್ರಾಮದ ಜನರು ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಜೊತೆಗೂಡಿ ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸಿದರು.

ಸುಮಾರು 70 ಕುಟುಂಬಗಳು ನೆಲೆಸಿರುವ ಗ್ರಾಮದಲ್ಲಿ ಅರಸು, ಈಡಿಗ ಹಾಗೂ ಕುರುಹೀನಶೆಟ್ಟಿ ಜನಾಂಗದವರು ವಾಸವಾಗಿದ್ದಾರೆ. ಗ್ರಾಮದಲ್ಲಿ ಕೆಲವರು ಮಾತ್ರ ಸಣ್ಣ ಹಿಡುವಳಿಯ ಜಮೀನು ಹೊಂದಿದ್ದಾರೆ. ಬಹುತೇಕ ಜನರಿಗೆ ಜಮೀನು ಇಲ್ಲ. ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚು.

‘ಗ್ರಾಮದ ಬಹುತೇಕ ಜನರು ಬಡವರು. ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಬಡತನ ಇದ್ದರೂ ದೇಶಭಕ್ತಿ ಮಾತ್ರ ಕುಗ್ಗಿಲ್ಲ’ ಎನ್ನುತ್ತಾರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹೇಶ್ವರಪ್ಪ.

ಗ್ರಾಮದ ಯುವಕರು ನಾಲ್ಕು ದಿನ ಮುಂಚಿತವಾಗಿ ಶಾಲೆ ಆವರಣವನ್ನು ಶುಚಿಗೊಳಿಸಿ ಸಿಂಗರಿಸುತ್ತಾರೆ. ಆ. 2ನೇ ವಾರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಯುವಕರು, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹಿರಿಯರಿಗೂ ಕ್ರೀಡಾಕೂಟ ನಡೆಯುತ್ತದೆ.

ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವವರು ಒಂದು ವಾರದಿಂದಲೇ ತಾಲೀಮು ನಡೆಸುತ್ತಾರೆ. ಶಿಕ್ಷಕರು ಮಾತ್ರವಲ್ಲದೆ ಗ್ರಾಮದ ಯುವಕ, ಯುವಕಿಯರು ಶಾಲೆಯ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಗೊಳಿಸುತ್ತಾರೆ.

‘ಮಹೇಶ್ವರಪ್ಪ ಮೇಸ್ಟ್ರು ಊರಿಗೆ ಬಂದ ಮೇಲೆ ಮಕ್ಕಳು ಮಾತ್ರವಲ್ಲದೆ ಜನರನ್ನು ಜಾಗೃತಿಗೊಳಿಸಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದಿದ್ದ ಗ್ರಾಮದಲ್ಲಿ ಈಗ ಸಾಕಷ್ಟು ಮಂದಿ ವಿದ್ಯಾವಂತರಿದ್ದಾರೆ’ ಎಂದು ಗ್ರಾಮಸ್ಥ ಒಬಳೇಶ್‌ ಅಭಿಮಾನದಿಂದ ನುಡಿಯುತ್ತಾರೆ.

ಗ್ರಾಮದ ಕೆಲವು ಯುವಕರು ಹೊಟ್ಟೆಪಾಡಿಗಾಗಿ ಹೊರ ರಾಜ್ಯಗಳಲ್ಲಿ ಬೇಕರಿ ಕೆಲಸಕ್ಕೆ ಸೇರಿದ್ದಾರೆ. ಹಬ್ಬಗಳಿಗೆ ಊರಿಗೆ ಬರದಿದ್ದರೂ ಸ್ವಾತಂತ್ರ್ಯ ದಿನಾಚರಣೆಯಂದು ತಪ್ಪದೆ ಊರಿಗೆ ಬಂದು ಸ್ನೇಹಿತರೊಂದಿಗೆ ಸಂಭ್ರಮಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ 234(ಮಂಗಳೂರು–ತಿರುವಣ್ಣಮಲೈ)ರಸ್ತೆ ಬದಿಯಲ್ಲಿರುವ ಗ್ರಾಮದಲ್ಲಿ ನಡೆಯುವ ಸ್ವಾಂತಂತ್ರ್ಯ ದಿನಾಚರಣೆಯನ್ನು ರಸ್ತೆಯಲ್ಲಿ ಸಂಚರಿಸುವವರು ವಾಹನ ನಿಲ್ಲಿಸಿ ಗ್ರಾಮಸ್ಥರ ದೇಶಭಕ್ತಿಯನ್ನು ಕೊಂಡಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT