ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರಿನಲ್ಲಿ ಶ್ರೀಕೃಷ್ಣ ಜಯಂತಿ ಅದ್ದೂರಿ ಮೆರವಣಿಗೆ

Last Updated 20 ಆಗಸ್ಟ್ 2017, 8:11 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಶ್ರೀಕೃಷ್ಣ ಯಾದವ ಟ್ರಸ್ಟ್, ತಾಲ್ಲೂಕು ಯಾದವ ಸಂಘ, ಯಾದವ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲ್ಲೂಕು ಯಾದವ ಯುವ ಸಮಿತಿ ನೇತೃತ್ವದಲ್ಲಿ ಶ್ರೀಕೃಷ್ಣನ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಬೆಳ್ಳಿವರ್ಣದ ರಥದಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರದ ವೇದಾವತಿ ಬಡಾವಣೆಯಿಂದ ಹೊರಟ ಮೆರವಣಿಗೆ ಪ್ರವಾಸಿ ಮಂದಿರ ವೃತ್ತ, ತಾಲ್ಲೂಕು ಕಚೇರಿ, ಗಾಂಧಿ ವೃತ್ತ, ನೆಹರೂ ವೃತ್ತದ ಮೂಲಕ ಪ್ರಧಾನ ರಸ್ತೆಯಲ್ಲಿ ಸಾಗಿತು. ಭಜನೆ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ ಹಾಗೂ ಜನಪದ ನೃತ್ಯಗಳು ನೆರೆದಿದ್ದವರನ್ನು ಆಕರ್ಷಿಸಿದವು.

ಮಳೆಗೂ ಜಗ್ಗದ ಯುವಕರು: ಮಧ್ಯಾಹ್ನ ಮೆರವಣಿಗೆ ಆರಂಭವಾದಾಗಿನಿಂದಲೂ ಆಗಿಂದಾಗ್ಗೆ ಮಳೆ ಹನಿಯಲಾರಂಭಿಸಿತು. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯುವಷ್ಟು ಮಳೆ ಬರದೇ ಹೋದರೂ ಮೆರವಣಿಗೆಯಲ್ಲಿದ್ದವರನ್ನು ಸ್ವಲ್ಪ ಕಾಲ ಚಿಂತೆಗೆ ದೂಡುವಂತೆ ಮಾಡಿತ್ತು.

ಸಂಜೆ 5ರ ಸಮಯದಲ್ಲಿ ಮೆರವಣಿಗೆಯು ಆಸ್ಪತ್ರೆ ವೃತ್ತಕ್ಕೆ ಬಂದಾಗ ಮಳೆ ಹನಿ ಜೋರಾಗಿ ಬೀಳಲು ಆರಂಭಿಸಿದ್ದರಿಂದ ಮೆರವಣಿಗೆ ಸ್ಥಗಿತಗೊಂಡಿತ್ತು. ಕೆಲವು ಯುವಕರು ಮಳೆಗೆ ಮೈಯೊಡ್ಡಿ ಕುಣಿಯುವ ಮೂಲಕ ಬೇರೆಯವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದರು.

ಮೆರವಣಿಗೆಯಲ್ಲಿ ಯಾದವ ಸಮುದಾಯದ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ನೌಕರರು, ಶ್ರೀಕೃಷ್ಣನ ಭಕ್ತರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT