ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಗೆ ಬೀಳಲಿ ಕಡಿವಾಣ

Last Updated 20 ಆಗಸ್ಟ್ 2017, 8:17 IST
ಅಕ್ಷರ ಗಾತ್ರ

ಹರಿಹರ: ನಗರದ ಹಿಂದೂ ರುದ್ರಭೂಮಿಯ ಹಿಂಭಾಗದ ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಹಳ್ಳದ ಸಂಗಮ ಸ್ಥಳದಲ್ಲಿ ರಾಜಕೀಯ ಪ್ರಭಾವ ಉಳ್ಳವರು ನಿರಂತರವಾಗಿ ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ, ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹಾಡಹಗಲೇ ನದಿ ಒಡಲನ್ನು ಬಗೆದು ಮರಳು ಗಣಿಗಾರಿಕೆ ನಡೆಸಿ ಸರ್ಕಾರದ ಖಜಾನೆಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ.

ನದಿಪಾತ್ರದ ಈ ಪ್ರದೇಶದಲ್ಲಿ ಈ ಹಿಂದೆ ಭಾರಿ ಪ್ರಮಾಣದಲ್ಲಿ ಮರಳು ದಂಧೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್‌ ತಂಡ ದಾಳಿ ನಡೆಸಿ ಪ್ರಮುಖ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ನಂತರ ಲೋಕೋಪಯೋಗಿ ಇಲಾಖೆಯು ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಿತ್ತು. ಹೀಗಿದ್ದರೂ ಈ ಪ್ರದೇಶದಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಲವು ಕುರುಹುಗಳು ಕಾಣಸಿಗುತ್ತಿವೆ.

ದಂಧೆಕೋರರು ನದಿ ದಂಡೆಗಳನ್ನು ಬಗೆದು ಸಿಮೆಂಟ್‌ ಚೀಲಗಳಲ್ಲಿ ಮರಳು ತುಂಬಿ ಮಾರಾಟ ಮಾಡುತ್ತಿದ್ದಾರೆ. ಜನರ ಒತ್ತಡಕ್ಕೆ ಮಣಿದು ಪೊಲೀಸರು ಕಾಟಾಚಾರಕ್ಕೆ ಎಂಬಂತೆ ಸ್ವಲ್ಪ ಪ್ರಮಾಣದ ಮರಳನ್ನು ವಶಕ್ಕೆ ಪಡೆಯುತ್ತಾರೆ. ಮರುದಿನದಿಂದಲೇ ಮತ್ತೆ ಮರಳು ಗಣಿಗಾರಿಕೆ ಆರಂಭಗೊಳ್ಳುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮರಳು ಸಾಗಿಸಲು ಆಟೊಗಳನ್ನು ಬಳಸುತ್ತಾರೆ. ಈ ವಾಹನಗಳು ಅತಿ ವೇಗವಾಗಿ ಚಲಿಸುವುದರಿಂದ ವೃದ್ಧರು ಹಾಗೂ ಮಕ್ಕಳು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಈ ಬಗ್ಗೆ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಕೈಲಾಸ ನಗರದ ನಿವಾಸಿಗಳು ಅಳಲು ತೋಡಿಕೊಂಡರು.

ಮರಳು ಗಣಿಗಾರಿಕೆಯಿಂದ ನದಿಯ ದಂಡೆಯಲ್ಲಿ ಆಳದ ಗುಂಡಿಗಳು ನಿರ್ಮಾಣಗೊಂಡಿವೆ. ಇದರಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪಿರುವ ಪ್ರಕರಣವೂ ನಡೆದಿದೆ. ಈ ದಂಧೆಯಿಂದ ಜಲಚರಗಳು ನಾಶವಾಗಿ ಮೀನುಗಾರ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದ್ದಾರೆ.

ನೈಸರ್ಗಿಕ ಸಂಪತ್ತು ರಕ್ಷಿಸುವುದು ಅಧಿಕಾರಿಗಳ ಹೊಣೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ, ಮರಗಳು ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT