ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪಾಠ ಕಲಿಸುವ ಸರ್ಕಾರಿ ಶಾಲೆ

Last Updated 20 ಆಗಸ್ಟ್ 2017, 8:49 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮರಬಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯು ಮಕ್ಕಳಿಗೆ ಗುಣಮಟ್ಟದ ಕಲಿಕೆ, ಆಟ ಪಾಠಗಳ ಜತೆಗೆ ಪರಿಸರ ಪ್ರೇಮದ ಪಾಠವನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಂಚಾರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದ ಒಂದು ಪುಟ್ಟ ಗ್ರಾಮ ಮರಬಹಳ್ಳಿ. ಆಂಧ್ರಪ್ರದೇಶದ ಗಡಿಭಾಗ ಹಾಗೂ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಶಾಲೆ ಇದೆ.

ಚಿಂತಾಮಣಿ– ಚೇಳೂರು ರಸ್ತೆಯಲ್ಲಿರುವ ಮರಗಳಹಳ್ಳಿ, ಮರಹಳ್ಳಿ, ಮರಬಹಳ್ಳಿ ಎಂದೇ ಹೆಸರಾಗಿರುವ ವೈಶಿಷ್ಟ್ಯಪೂರ್ಣ ಹಸಿರಿನ ಇತಿಹಾಸವು ಕಾಲಗರ್ಭದ ಮಡಿಲಲ್ಲಿದೆ. ಸರ್ಕಾರಿ ಶಾಲೆಯು ಸುಂದರ ‘ಹಸಿರು ಶಾಲೆ’ ಎಂದೇ ಮನ್ನಣೆ ಗಳಿಸಿದೆ.

ದೂರದಿಂದ ನೋಡಿದರೆ ಯಾವುದೋ ಉದ್ಯಾನವನದಂತೆ ಕಾಣುತ್ತದೆ. ಹತ್ತಿರ ಹೋದಾಗ ಮಕ್ಕಳ ಕಲರವ ಕೇಳಿಸುತ್ತದೆ. ಶಾಲೆಯ ಬಿಡುವಿನ ವೇಳೆ ಗಿಡಗಳಿಗೆ ನೀರು ಹಾಕುವುದು, ಕಸಕಡ್ಡಿ ತೆಗೆದು ಸ್ವಚ್ಛಗೊಳಿಸುವುದು, ಶೋ ಕಟಿಂಗ್ಸ್‌ ಇರುವ ಗಿಡಗಳಿಗೆ ಅಚ್ಚನೆಯ ಒಪ್ಪವಾಗಿ ಕತ್ತರಿಸುವುದು, ಹೀಗೆ ಸದಾ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ದಂಡು ಕಾಣುತ್ತದೆ.

ಶಾಲೆಯು ಅರ್ಧ ಎಕರೆ ವಿಸ್ತೀರ್ಣ ಉಳ್ಳದ್ದಾಗಿದೆ. ಒಳಗೆ ಸುಂದರ ಹಸಿರು ವಾತಾವರಣ ರೂಪುಗೊಂಡಿದೆ. ಸುಸಜ್ಜಿತ ಕಟ್ಟಡ, ಆಟದ ಮೈದಾನ ಇದೆ. ಶಾಲೆಯ ಆವರಣದಲ್ಲಿ 530 ಸಸಿಗಳನ್ನು ಬೆಳೆಸಲಾಗಿದೆ. ನೇರಳೆ, ಪೇರಲ, ಸೀತಾಫಲ, ಬಾಳೆ, ತೆಂಗು, ಸಪೋಟ, ಪಪ್ಪಾಯಿ, ನೆಲ್ಲಿಕಾಯಿ, ಹಲಸು, ಸಿಲ್ವರ್‌ ಓಕ್‌, ದಾಳಿಂಬೆಯ ಜತೆಗೆ ವಿವಿಧ ಬಗೆಯ ಹೂ ಗಿಡಗಳನ್ನು ಬೆಳೆಸಲಾಗಿದೆ. ಇದನ್ನು ಸಸ್ಯೋದ್ಯಾನ ಎಂದರೂ ತಪ್ಪಾಗದು.

‘ನೀರಿನ ಅಪವ್ಯಯ ಮಾಡಬೇಡಿ’ ಎನ್ನುವ ಪರಿಸರ ಸಂದೇಶವನ್ನು ಸಾರುವ ವಾಕ್ಯ ಕಣ್ಸೆಳೆಯುತ್ತದೆ. ಊಟ ಮಾಡಿ ಕೈ ತೊಳೆಯಲು ಪ್ರತ್ಯೇಕ ನಲ್ಲಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಸಿದ ನೀರು ಗಿಡಗಳತ್ತ ಹರಿಯುವಂತೆ ದಾರಿ ಮಾಡಲಾಗಿದೆ. ಸಸ್ಯಕಾಶಿಯ ಜತೆಗೆ ಶಾಲೆಯ ಮೂಲ ಸೌಲಭ್ಯಗಳಾದ ಶಾಲಾ ಕೊಠಡಿಗಳು, ಕಾಂಪೌಂಡ್‌, ಗಂಡು ಮತ್ತು ಹೆಣ್ಣು ಮಕ್ಕಳ ಶೌಚಾಲಯ, ಸುಸಜ್ಜಿತ ಅಡುಗೆ ಕೋಣೆ, ಶಾಲಾ ಗೋಡೆ ಬರಹ, ಕುಡಿಯುವ ನೀರಿನ ವ್ಯವಸ್ಥೆ ಇದೆ.

1995ರಲ್ಲಿ ಶಾಲೆಗೆ ಮುಖ್ಯ ಶಿಕ್ಷಕರಾಗಿ ನೇಮಕಗೊಂಡ ಎನ್‌.ರಮೇಶ್‌ ಅವರ ಮಾರ್ಗದರ್ಶನದಲ್ಲಿ, ಸಹ ಶಿಕ್ಷಕರ ಸಹಕಾರದೊಂದಿಗೆ ಉತ್ತಮವಾಗಿ ನಡೆಯುತ್ತಿದೆ. ಮುಖ್ಯ ಶಿಕ್ಷಕರಿಗೆ 2007ರಲ್ಲೇ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2017ರಲ್ಲಿ ರಾಜ್ಯ ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಶಾಲೆ ಭೇಟಿ ನೀಡಿ ಪರಿಶೀಲಿಸಿ ‘ಪರಿಸರ ಮಿತ್ರ ಹಸಿರು ಶಾಲೆ’ ಎಂಬ ಪ್ರಶಸ್ತಿ ನೀಡಿದ್ದಾರೆ.

ಪ್ರತಿ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪೋಷಕರು, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಭಾಗವಹಿಸಿ 10 ಸಸಿಗಳನ್ನು ನೆಡುವರು. ಶಿಕ್ಷಕರು ಸಂಘಟಿತರಾಗಿ ಮಕ್ಕಳನ್ನು ಪ್ರತಿಭಾ ಕಾರಂಜಿ, ಕಲಿಕೋತ್ಸವ ಕ್ಲಸ್ಟರ್‌ ಹಾಗೂ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುವರು.

ಗ್ರಾಮದಲ್ಲಿ ಸ್ವಚ್ಛ ಭಾರತ, ಶಾಲೆಗಾಗಿ ನಾವು–ನೀವು, ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವರು. ಶಾಲೆಯ ಬೆಳವಣಿಗೆ ಹಾಗೂ ವಾತಾವರಣ ಗಮನಿಸಿ ‘ಎಲ್‌ ಅಂಡ್‌ ಟಿ’ ಕಂಪೆನಿ ಶಾಲೆಯನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿಗೆ ತೀರ್ಮಾನಿಸಿದೆ. ಮಕ್ಕಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ. 2018ರ ಸಾಲಿನಲ್ಲೂ ‘ಪರಿಸರ ಮಿತ್ರ ಶಾಲಾ’ ಪ್ರಶಸ್ತಿಯನ್ನು ಪಡೆಯಲು ಶಿಕ್ಷಕರು ಮತ್ತು ಮಕ್ಕಳು ಸಿದ್ಧತೆ ಮಾಡುತ್ತಿದ್ದಾರೆ.

‘ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲೆಗೆ ಭೂದಾನ ಮಾಡಿರುವ ಪಿ.ಎನ್‌. ಸುಬ್ಬರಾಯಪ್ಪ ಅವರ ಸಹೋದರರಾದ ಪೆದ್ದಾಯಪ್ಪ, ವೆಂಕಟರಾಯಪ್ಪ ಸಹಕಾರದಿಂದ ಉತ್ತಮ ಶಾಲೆಯಾಗಿ ರೂಪುಗೊಂಡು ಪ್ರಶಸ್ತಿ ಗಳಿಸಿದೆ’ ಎಂದು ಮುಖ್ಯ ಶಿಕ್ಷಕ ಎನ್‌.ರಮೇಶ್‌ ಸ್ಮರಿಸುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT