ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೇ ನೀನು ಚೆಲುವೆ?

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕೆಲವು ವಾರಗಳ ಹಿಂದೆ ಹೊನ್ನಾವರದ ಕಾಡಿನಲ್ಲಿ ಸುತ್ತಾಡುವಾಗ ಇತ್ತ ಮರವೂ ಅಲ್ಲದ, ಅತ್ತ ಬಳ್ಳಿಯೂ ಅಲ್ಲದ ವಿಶಿಷ್ಟವಾದ ಪೊದೆಯೊಂದು ಕಣ್ಣಿಗೆ ಬಿತ್ತು. ಇದುವರೆಗೆ ಯಾರ ಕಣ್ಣಿಗೂ ಬೀಳದ ಈ ಚೆಲುವೆ ಯಾರು ಎಂದು ಶೋಧಿಸುತ್ತಾ ಹೋದಾಗ ‘ರೆಸಂಟಿಯಾ ಸೆಸಿಲಿಫ್ಲೋರಾ’ ಎಂಬ ವೈಜ್ಞಾನಿಕ ಹೆಸರಿಟ್ಟುಕೊಂಡ ಹೊಸ ಪ್ರಭೇದದ ಸಸ್ಯವೊಂದನ್ನು ನಾವು ಪತ್ತೆ ಮಾಡಿದ್ದು ಗೊತ್ತಾಯಿತು.

ಹೊನ್ನಾವರದ ಕಡೆ ನಮಗೆ ಕಾಣಿಸಿಕೊಂಡ ಈ ಪೊದೆ ನಮ್ಮ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರಾದ ನವೇಂದು ಪಾಗೆ, ಮಾನಸ ಶ್ರೀವಾತ್ಸವ ಅವರಿಗೆ ಭಟ್ಕಳದ ಕಡೆ ಕಣ್ಣಿಗೆ ಬಿದ್ದಿತ್ತು. ನಮ್ಮ ತಂಡ ಎರಡೂ ಕಡೆ ಹೋಗಿ ಆ ಪೊದೆಗಳನ್ನು ಪರೀಕ್ಷಿಸಿತು. ಏನಾಶ್ಚರ್ಯ, ಎರಡೂ ಒಂದೇ ತೆರನಾಗಿದ್ದವು.

ಹಸಿರಿನಿಂದ ತುಂಬಿದ ಉಷ್ಣವಲಯದ ಕಾಡುಗಳು ಅಪರೂಪದ ಸ್ಥಳೀಯ ಪ್ರಭೇದಗಳಿಂದ ಶ್ರೀಮಂತವಾಗಿದ್ದು, ಸಮೃದ್ಧ ಜೀವ ವೈವಿಧ್ಯದ ತಾಣಗಳು ಎಂದು ಹೆಸರಾಗಿವೆ. ಇವುಗಳಲ್ಲಿ ಪಶ್ಚಿಮ ಘಟ್ಟ ಸಹ ಸೇರಿದೆ. ಪಶ್ಚಿಮ ಘಟ್ಟದಲ್ಲಿರುವ ಸಸ್ಯವರ್ಗಗಳಲ್ಲಿ ಶೇಕಡಾ 40ರಷ್ಟು ಅತ್ಯಮೂಲ್ಯ ಸ್ಥಳೀಯ ಪ್ರಭೇದಗಳೇ ತುಂಬಿವೆ.

ಪಶ್ಚಿಮ ಘಟ್ಟದಲ್ಲಿ ವರ್ಷಪೂರ್ತಿ ಸಿಗುವ ಉಷ್ಣಹವೆ, ಹೆಚ್ಚಿನ ಮಳೆ ಹಾಗೂ ಭೌಗೋಳಿಕ ಕಾರಣಗಳಿಂದ ಜೀವವೈವಿಧ್ಯ ಸಂಪತ್ಭರಿತವಾಗಿದೆ. ಅಂತಹ ಘಟ್ಟ ಪ್ರದೇಶದಲ್ಲಿಯೇ ಬರುತ್ತವೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾಡುಗಳು. ಈ ಕಾಡುಗಳಲ್ಲೇ ಪತ್ತೆಯಾಗಿದ್ದು ರೆಸಂಟಿಯಾ ಸೆಸಿಲಿಫ್ಲೋರಾ. ಇದೊಂದು ಪೊದೆ ಜಾತಿಯ ಗಿಡವಾಗಿದ್ದು, ಹೊನ್ನಾವರ ಹಾಗೂ ಭಟ್ಕಳದ ಕಡಲ ತೀರದ ಗುಡ್ಡಜಾರಿನ ಕಾಡುಗಳಲ್ಲಿ ಅಪರೂಪವಾಗಿ ಕಾಣಸಿಗುತ್ತದೆ. ದಪ್ಪಗಾತ್ರದ ಎಲೆ, ಹಳದಿ-ಹಸಿರು ಮಿಶ್ರಿತ ಹೂವು ಹೊಂದಿರುವ ಈ ಗಿಡದಲ್ಲಿ ಚಪ್ಪಟೆಯಾಕಾರದ ಕಾಯಿಗಳಿವೆ.

ಸೆಲಿಸ್ಟ್ರೇಸಿಯಾ ಜಾತಿಗೆ ಸೇರಿದ ಪೊದೆ ಇದಾಗಿದೆ. ಇದೇ ಕುಟುಂಬಕ್ಕೆ ಸೇರಿದ ಏಕನಾಯಕ ಬಳ್ಳಿಯಿಂದ ಕ್ಯಾನ್ಸರ್‌ ರೋಗಕ್ಕೆ ಔಷಧಿ ತಯಾರಿಸುತ್ತಾರೆ. ಹೀಗಾಗಿ ಇದರಲ್ಲೂ ಔಷಧಿ ಗುಣಗಳಿವೆ ಎಂದು ಊಹಿಸಲಾಗಿದ್ದು, ಸಂಶೋಧನೆ ನಡೆಯಬೇಕಿದೆ.

ಇಂತಹ ಅನೇಕ ಸಸ್ಯ ಪ್ರಭೇದಗಳು ಆವಿಷ್ಕಾರವಾಗುವ ಮುನ್ನವೇ ನಶಿಸಿ ಹೋಗುತ್ತವೆ. ಅರಣ್ಯ ಇಲಾಖೆಯಿಂದಲೂ ರಕ್ಷಣೆ ಇಲ್ಲದೆ, ಜನರಿಗೂ ಇದರ ಮಹತ್ವದ ಅರಿವಿಲ್ಲದೆ ಕಳೆದು ಹೋಗುತ್ತಿವೆ. 100 ಚದರ ಕಿ.ಮೀ.ಗಿಂತ ಕಡಿಮೆ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಈ ಸಸ್ಯವರ್ಗವನ್ನು ‘ವಿನಾಶದ ಅಂಚಿನ ಪ್ರಭೇದ’ ಎಂದು ಗುರುತಿಸಿ ವಿಳಂಬರಹಿತವಾಗಿ ರಕ್ಷಣೆ ನೀಡಬೇಕಿದೆ. ಇಂತಹ ಗಿಡಗಳು ನಶಿಸಿಹೋದರೆ, ಅವುಗಳಿಂದ ಮುಂದೆ ಸಿಗಬಹುದಾದ ಔಷಧೀಯ ಪ್ರಯೋಜನಗಳು ಇಲ್ಲವಾಗುತ್ತವೆ. ಈ ಭಾಗದ ಕಾಡುಗಳಲ್ಲಿ ಇವುಗಳು ಇಲ್ಲವಾದರೆ ಜಗತ್ತಿನ ಮತ್ತೆಲ್ಲೂ ನಮಗೆ ಸಿಗಲಾರವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT