ಲಾಭ ಗಳಿಕೆ

ಹೈಬ್ರಿಡ್ ನೇರಳೆ

ಗಿಡದಿಂದ ಗಿಡಕ್ಕೆ ಇಪ್ಪತ್ತೈದರಿಂದ ಮೂವತ್ತು ಅಡಿ ಅಂತರ ಕಾಯ್ದುಕೊಳ್ಳುವಂತೆ, ಮೂರು ಅಡಿ ವಿಸ್ತೀರ್ಣದಲ್ಲಿ ಮೂರು ಅಡಿ ಆಳವಾದ ಗುಂಡಿ ತೋಡಿ ಅದರಲ್ಲಿ ಜೂನ್ ತಿಂಗಳಲ್ಲಿ ಗಿಡವನ್ನು ನಾಟಿ ಮಾಡಿದ್ದಾರೆ.

ನೇರಳೆಯೊಂದಿಗೆ ದೇವರಾಜ್ ಶೆಟ್ಟಿ

ನೇರಳೆ ಅಪ್ಪಟ ಕಾಡುಹಣ್ಣು. ಆದರೆ ಇತ್ತೀಚಿನ ದಿನಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ನೇರಳೆ ಮರಗಳು ಕಾಣಸಿಗುವುದೂ ಅಪರೂಪ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರದಲ್ಲಿನ ಒಂದು ಕುಟುಂಬ ಹೈಬ್ರಿಡ್ ನೇರಳೆ ಬೆಳೆಯುವ ಮೂಲಕ ಅದರಿಂದ ಆದಾಯ ಗಿಟ್ಟಿಸಿಕೊಳ್ಳುತ್ತಿದೆ.

ದೇವರಾಜ್ ಶೆಟ್ಟರ ಅವರ ಒಂದೂವರೆ ಎಕರೆಯಲ್ಲಿ ಅರವತ್ತು ಮಾವಿನ ಗಿಡಗಳಿವೆ. ಅದರ ಮಧ್ಯೆ ನಲವತ್ತು ನೇರಳೆ ಗಿಡವನ್ನು ಮೂರು ವರ್ಷಗಳ ಹಿಂದೆಯೇ ನಾಟಿ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಂಜನೇಯ ಪ್ರಗತಿಬಂಧು ತಂಡದ ಸದಸ್ಯರಾದ ಇವರು ಗಿಡವೊಂದಕ್ಕೆ 130 ರೂಪಾಯಿಯಂತೆ ನೀಡಿ ನರ್ಸರಿಯೊಂದರಿಂದ ಖರೀದಿಸಿದರು.

ಗಿಡದಿಂದ ಗಿಡಕ್ಕೆ ಇಪ್ಪತ್ತೈದರಿಂದ ಮೂವತ್ತು ಅಡಿ ಅಂತರ ಕಾಯ್ದುಕೊಳ್ಳುವಂತೆ, ಮೂರು ಅಡಿ ವಿಸ್ತೀರ್ಣದಲ್ಲಿ ಮೂರು ಅಡಿ ಆಳವಾದ ಗುಂಡಿ ತೋಡಿ ಅದರಲ್ಲಿ ಜೂನ್ ತಿಂಗಳಲ್ಲಿ ಗಿಡವನ್ನು ನಾಟಿ ಮಾಡಿದ್ದಾರೆ.

ಬೆಳೆಗೆ ಎಲ್ಲಾ ಮಣ್ಣು ಸೂಕ್ತವಾಗಿದ್ದು ನಾಟಿಗಿಂತ ಮುಂಚೆ ಪ್ರತಿ ಗಿಡದ ಬುಡಕ್ಕೆ ಒಂದೊಂದು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ನೀಡಿದ್ದಾರೆ. ಮರಳು ಮಿಶ್ರಿತ ಕೆಂಪು ಮಣ್ಣನ್ನು ಬುಡಗಳಿಗೆ ನೀಡುವ ಮೂಲಕ ಭೂಮಿಯಲ್ಲಿ ತೇವಾಂಶವನ್ನು ಕಾಯ್ದುಕೊಳ್ಳುವುದು ಇದಕ್ಕೆ ಬಹುಮುಖ್ಯ. ಮೂರು ವರ್ಷಗಳ ಹಿಂದೆ ನೆಟ್ಟ ಗಿಡಗಳು ಈ ಬಾರಿ ಕಾಯಿ ನೀಡಿವೆ.

ಹೂವು ಬಿಟ್ಟಾಗ ಕೀಟಬಾಧೆ ತಡೆಯುವ ನಿಟ್ಟಿನಲ್ಲಿ ಔಷಧವನ್ನು ಸಿಂಪಡಿಸಿದ್ದಾರೆ. ಪ್ರತಿ ಕೆ.ಜಿ ಹಣ್ಣಿಗೆ ‌₹200 ದರವಿದ್ದು ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಕಾರಣ ನೇರಳೆ ಬೆಳೆದು ಲಾಭ ಗಳಿಸಬಹುದು ಎಂಬ ಇವರ ಲೆಕ್ಕಾಚಾರ ನಿಜವಾಗುವ ದಿನವೂ ಬಂದಿದೆ. ವಾರ್ಷಿಕ ಬೆಳೆ ಇದಾಗಿದ್ದು ಮೂರು ವರ್ಷದಲ್ಲಿ ಒಂದು ಗಿಡ 50 ಕೆ.ಜಿಯಷ್ಟು ಹಣ್ಣನ್ನು ನೀಡಬಹುದು. ಗಿಡ ಬೆಳೆದಂತೆ ಹಣ್ಣಿನ ಪ್ರಮಾಣವು ಹೆಚ್ಚುತ್ತದೆ.

ದ್ರಾಕ್ಷಿಯಂತೆ ಗೊಂಚಲಾಗಿ ಬೆಳೆಯುವ ನೇರಳೆ, ಹಣ್ಣಾದಂತೆ ಗಾಢ ಬಣ್ಣಕ್ಕೆ ತಿರುಗುತ್ತದೆ. ಮರ ಎತ್ತರಕ್ಕೆ ಬೆಳೆಯುವುದಿಲ್ಲ. ಸುಲಭವಾಗಿ ಕೈಯಿಂದಲೇ ಕೀಳಬಹುದಾಗಿದೆ. ಕಿತ್ತ ನಂತರ ನೀರು ತಾಗದಿದ್ದರೆ ನಾಲ್ಕು ದಿನಗಳ ಕಾಲ ಹಣ್ಣು ಹಾಳಾಗುವುದಿಲ್ಲವಂತೆ. ಆದ್ದರಿಂದ ಅತಿಯಾದ ಕಾಳಜಿಯ ಅಗತ್ಯವೂ ಇಲ್ಲ. ನೇರಳೆ ಮಧ್ಯೆ ಅವರೆ, ತೊಗರಿ, ಜೋಳ, ಶುಂಠಿಯನ್ನು ಬೆಳೆದು ಅವುಗಳಿಂದಲೂ ಆದಾಯವನ್ನು ಪಡೆಯುತ್ತಿದ್ದಾರೆ.

ಇತರ ತರಕಾರಿಗಳಿಗೆ ನೀಡಿದ ನೀರು ಇದಕ್ಕೂ ಸಾಕಾಗುತ್ತದೆ. ಎರಡು ದಿನಕ್ಕೊಮ್ಮೆ ಕಟಾವು ಮಾಡುತ್ತಿದ್ದು ಬೀಜವನ್ನು ಹುಡಿ ಮಾಡಿ ರಸ ತೆಗೆದು ಮುಖಕ್ಕೆ ಹಚ್ಚಿದರೆ ಚರ್ಮ ಮೃದುಗೊಳ್ಳುತ್ತದೆಯಂತೆ. ಇದರ ರಸ ಆಲ್ಕೊಹಾಲ್, ಮಾತ್ರೆ, ಜ್ಯೂಸ್ ತಯಾರಿ ಹೀಗೆ ಬಹೂಪಯೋಗಿ. ಈ ಹಿಂದೆ ರೇಷ್ಮೆ ಬೆಳೆಯುತ್ತಿದ್ದ ಜಾಗದಲ್ಲೀಗ ನೇರಳೆ, ಮಾವು ತೂಗಾಡುತ್ತಿದೆ.

ನೀರಾವರಿಗಾಗಿ ಕೃಷಿಹೊಂಡವನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದ ನೀರನ್ನು ಅದರಲ್ಲಿ ಶೇಖರಿಸಿ ಪಂಪ್ ಮೂಲಕ ತೋಟಕ್ಕೆ ನೀಡಲಾಗುತ್ತಿದೆ. ವರ್ಷದಲ್ಲೊಂದು ಬಾರಿ ಮಾವಿಗೆ ನೀಡುವಾಗ ನೇರಳೆಗೂ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಾರೆ. ಕಳೆ ಕೀಳುವ, ಔಷಧ ಸಿಂಪಡಣೆ ಮುಂತಾದ ಕೆಲಸಗಳು ಇಲ್ಲಿ ಕಡಿಮೆ. ಸಣ್ಣಪುಟ್ಟ ಕೆಲಸಗಳನ್ನು ಇಬ್ಬರು ಮಕ್ಕಳು ಮತ್ತು ಪತ್ನಿಯ ಜೊತೆ ಸೇರಿ ತಾವೇ ಮಾಡಿ ಮುಗಿಸುತ್ತಾರೆ.

ಒಮ್ಮೆ ನೆಟ್ಟ ನಂತರ ತಗಲುವ ಖರ್ಚು ಕಡಿಮೆ. ನೇರಳೆ ಮಾವಿನ ಮಧ್ಯೆ ನಾಟಿಗೂ ಸೂಕ್ತವಾಗಿದ್ದು ಎಲ್ಲೆಡೆಗಳಲ್ಲಿ ಬೆಳೆಯಬಹುದಾಗಿದೆ. ‌ಹೆಚ್ಚಿನ ಮಾಹಿತಿಗೆ ರಾತ್ರಿ 7 ಗಂಟೆಯಿಂದ 8 ಗಂಟೆಯೊಳಗೆ 9945285403.

Comments
ಈ ವಿಭಾಗದಿಂದ ಇನ್ನಷ್ಟು
ಚಾಲಕರಹಿತ ಕಾರ್ ನಿಯಂತ್ರಿಸುವ ಮೊಬೈಲ್

ಕೃತಕ ಬುದ್ಧಿಮತ್ತೆ
ಚಾಲಕರಹಿತ ಕಾರ್ ನಿಯಂತ್ರಿಸುವ ಮೊಬೈಲ್

14 Mar, 2018
ಕೋಳಿಗಳ ರಾಜ ಗಿರಿರಾಜ

ಕೋಳಿ ಸಾಕಣೆ
ಕೋಳಿಗಳ ರಾಜ ಗಿರಿರಾಜ

13 Mar, 2018
ಚಿಕ್ಕಬುದ್ಧಿಯವರ ದೊಡ್ಡ ಕೃಷಿ

ಕುಲಕಸುಬು
ಚಿಕ್ಕಬುದ್ಧಿಯವರ ದೊಡ್ಡ ಕೃಷಿ

13 Mar, 2018
ದೇಸಿ ತಳಿ ಬೀಜಗಳ ರಕ್ಷಕ

ಕೃಷಿ
ದೇಸಿ ತಳಿ ಬೀಜಗಳ ರಕ್ಷಕ

6 Mar, 2018
ಖಿನ್ನತೆ ಕಳೆದ ಕೃಷಿ

ಕೃಷಿ
ಖಿನ್ನತೆ ಕಳೆದ ಕೃಷಿ

6 Mar, 2018