ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಾ ನಿಲುವಿಗೆ ಪೈ ವಿರೋಧ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ನಲ್ಲಿ ಸದ್ಯಕ್ಕೆ ಉದ್ಭವಿಸಿರುವ ಬಿಕ್ಕಟ್ಟಿಗೆ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರೇ ಕಾರಣ ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಶಾಲ್‌ ಸಿಕ್ಕಾ ಅವರು ಆರೋಪಿಸಿರುವುದನ್ನು, ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಟಿ. ವಿ. ಮೋಹನ್‌ದಾಸ್‌ ಪೈ ಖಂಡಿಸಿದ್ದಾರೆ.

‘ತಮ್ಮ ಕಳಪೆ ಕಾರ್ಯನಿರ್ವಹಣೆ ಮರೆಮಾಚಲು ಸಿಕ್ಕಾ ಅವರು ಮೂರ್ತಿ ವಿರುದ್ಧ ಆರೋಪ ಹೊರಿಸಿರುವುದು ನಿಜ. ತಮ್ಮದೇ ತಪ್ಪಿಗಾಗಿ ಸಿಕ್ಕಾ ಫೆಬ್ರುವರಿಯಲ್ಲಿಯೇ ಸಂಸ್ಥೆ ತೊರೆಯಲು ನಿರ್ಧರಿಸಿದ್ದರು.  ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮೂರ್ತಿ ಅವರ ಟೀಕೆಗಳಡಿ ರಕ್ಷಣೆ ಪಡೆಯಲು ಹವಣಿಸಿದ್ದಾರೆ’ ಎಂದು ಪೈ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಿಕ್ಕಾ ಅವರನ್ನು  ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಆಡಳಿತಾತ್ಮಕ ವಿಷಯ ವಾಗಿದ್ದರೂ, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಸಂಸ್ಥೆಯಲ್ಲಿ ಈಗಾಗಲೇ ಅಧ್ಯಕ್ಷ (ಆರ್‌. ಶೇಷಸಾಯಿ) ಮತ್ತು ಸಹ ಅಧ್ಯಕ್ಷ (ರವಿ ವೆಂಕಟೇಷನ್‌) ಇದ್ದಾರೆ. ಈಗ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಹಂಗಾಮಿ ಸಿಇಒ ಸೇರ್ಪಡೆಯಾಗಿರುವುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ಪೈ ವಿಶ್ಲೇಷಿಸಿದ್ದಾರೆ.

ನಾರಾಯಣ ಮೂರ್ತಿ ಅವರು  ನಿರ್ದೇಶಕ ಮಂಡಳಿಗೆ ಮರಳಿ ಸೇರ್ಪಡೆಯಾಗುವುದನ್ನು ತಡೆಯುವ ಅಧಿಕಾರವು ಇನ್ಫೊಸಿಸ್‌ನ ಮಂಡಳಿಗೆ ಇದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಪ್ರವರ್ತಕ ಷೇರುದಾರರ ಬಗ್ಗೆ ಇಂತಹ ಅಸಂಬದ್ಧ ಮತ್ತು ಒಪ್ಪಲಾಗದ ಹೇಳಿಕೆಯನ್ನು ವಿಶ್ವದ   ಯಾವುದೇ ಕಾರ್ಪೊರೇಟ್ ಸಂಸ್ಥೆಯು ನೀಡಲಾರದು’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಷೇರುದಾರರು ಸಂಸ್ಥೆಯ ನಿರ್ದೇಶಕರು ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಆಡಳಿತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ. ಈ ವಿಷಯದಲ್ಲಿ ಮಂಡಳಿಯ ನಿರ್ಧಾರವೇ ಅಂತಿಮವೇನಲ್ಲ.

‘ಒಳಗಿನವರು ಇಲ್ಲವೆ ಹೊರಗಿನವರ ಪೈಕಿ ಹೊಸ ಸಿಇಒ ಯಾರಾಗಬಹುದು’ ಎಂದು ಕೇಳಿದ್ದಕ್ಕೆ, ‘ಸ್ವಯಂ ಘೋಷಿತ ಸೊಕ್ಕಿನ ಸುಧಾರಣಾವಾದಿಗಳಲ್ಲದ, ಸಂಸ್ಥೆಯ ಸಂಸ್ಕೃತಿಗೆ ಗೌರವ ನೀಡುವವರು ಈ ಹುದ್ದೆಗೆ ಬರಬಹುದಾಗಿದೆ’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT